ಟಿಸಿಎಸ್ ಲೈಂಗಿಕ ಕಿರುಕುಳ, ಮತಾಂತರ ಪ್ರಕರಣ: ತನಿಖೆಯಲ್ಲಿ ಮಹತ್ವದ ಬೆಳವಣಿಗೆ, ಮತ್ತಷ್ಟು ಆಘಾತಕಾರಿ ವಿಚಾರ ಬಯಲು

ಟಿಸಿಎಸ್ ನಾಸಿಕ್ ಘಟಕದಲ್ಲಿ ಮಹಿಳಾ ಉದ್ಯೋಗಿಗಳ ಮೇಲೆ ನಡೆದ ಲೈಂಗಿಕ ಕಿರುಕುಳ ಮತ್ತು ಬಲವಂತದ ಮತಾಂತರ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಪ್ರಮುಖ ಆರೋಪಿ ದಾನಿಶ್ ಶೇಖ್ ಮೊಬೈಲ್ ಡೇಟಾವನ್ನು ಫೇಸ್ ಐಡಿ ಮೂಲಕ ಭೇದಿಸಿದ್ದಾರೆ. ಮತ್ತೊಂದೆಡೆ, ಉದ್ಯೋಗಿಯೊಬ್ಬರಿಗೆ ಮತ್ತು ಬರಿಸುವ ಪದಾರ್ಥ ಹಾಕಿದ ‘ಶೀರ್ ಕುರ್ಮಾ’ ನೀಡಿದ್ದಲ್ಲದೆ ಮಾಟ-ಮಂತ್ರದ ನೆಪದಲ್ಲಿ ಬಲೆಗೆ ಕೆಡವಿದ್ದು ಸೇರಿದಂತೆ ಅನೇಕ ಸ್ಫೋಟಕ ವಿಚಾರಗಳು ಬಯಲಾಗಿವೆ.

ಟಿಸಿಎಸ್ ಲೈಂಗಿಕ ಕಿರುಕುಳ, ಮತಾಂತರ ಪ್ರಕರಣ: ತನಿಖೆಯಲ್ಲಿ ಮಹತ್ವದ ಬೆಳವಣಿಗೆ, ಮತ್ತಷ್ಟು ಆಘಾತಕಾರಿ ವಿಚಾರ ಬಯಲು
ಟಿಸಿಎಸ್ (ಸಾಂದರ್ಭಿಕ ಚಿತ್ರ)
Image Credit source: TV9 Network

Updated on: Apr 25, 2026 | 12:43 PM

ಮುಂಬೈ, ಏಪ್ರಿಲ್ 25: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನ ನಾಸಿಕ್ ಘಟಕದಲ್ಲಿ ನಡೆದಿರುವ ಮಹಿಳಾ ಉದ್ಯೋಗಿಗಳ ಮೇಲಿನ ಲೈಂಗಿಕ ಕಿರುಕುಳ ಹಾಗೂ ಬಲವಂತದ ಧಾರ್ಮಿಕ ಮತಾಂತರ ಪ್ರಕರಣ ಸಂಬಂಧ ಮತ್ತಷ್ಟು ಸ್ಫೋಟಕ ಮಾಹಿತಿ ಬಯಲಾಗಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಪ್ರಮುಖ ಆರೋಪಿಯ ಮೊಬೈಲ್ ದತ್ತಾಂಶಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಮುಖ ಆರೋಪಿ ದಾನಿಶ್ ಶೇಖ್ ಮೊಬೈಲ್ ಫೋನ್‌ನ ಪ್ರತಿ ಫೈಲ್ ಮತ್ತು ಅಪ್ಲಿಕೇಶನ್‌ಗೆ ಪ್ರತ್ಯೇಕ ಪಾಸ್‌ವರ್ಡ್ ಹಾಗೂ ಫೇಸ್ ಐಡಿ (Face ID) ಸೆಕ್ಯೂರಿಟಿ ಅಳವಡಿಸಿದ್ದರಿಂದ ಅದರಲ್ಲಿರುವ ಮಾಹಿತಿ ಕಲೆಹಾಕುವುದು ಪೊಲೀಸರಿಗೆ ಬಹಳ ಸವಾಲಿನ ಕೆಲಸವಾಗಿತ್ತು. ಅದನ್ನೀಗ ಪೊಲೀಸರು ಭೇದಿಸಿದ್ದಾರೆ.

ಪೊಲೀಸರ ತಾಂತ್ರಿಕ ಸವಾಲು ಮತ್ತು ಫೇಸ್ ಐಡಿ ಕಾರ್ಯಾಚರಣೆ

ದಾನಿಶ್ ಶೇಖ್ ಮೊಬೈಲ್​ನ ಫೋನ್‌ನ ಪ್ರತಿ ಫೈಲ್ ಮತ್ತು ಅಪ್ಲಿಕೇಶನ್‌ಗೆ ಪ್ರತ್ಯೇಕ ಪಾಸ್‌ವರ್ಡ್ ಹಾಗೂ ಫೇಸ್ ಐಡಿ ಸೆಕ್ಯೂರಿಟಿ ಅಳವಡಿಸಿದ್ದರಿಂದ ಪೊಲೀಸರು ಈ ಸವಾಲನ್ನು ಭೇದಿಸಲು ವಿಶೇಷ ನ್ಯಾಯಾಲಯದ ಅನುಮತಿ ಪಡೆದರು. ನಂತರ ಆರೋಪಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕರೆದೊಯ್ದು, ಆತನ ಮುಖದ ಚಹರೆ (Face ID) ಬಳಸಿ ಫೋನ್ ಅನ್‌ಲಾಕ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಪೊಲೀಸರಿಗೆ ಆ ಮೊಬೈಲ್‌ನಲ್ಲಿರುವ ಎನ್‌ಕ್ರಿಪ್ಟ್ ಆದ ಮಾಹಿತಿಗಳು ಮತ್ತು ಚಾಟ್‌ಗಳು ಮತಾಂತರ ಜಾಲದ ಹಣಕಾಸು ಮೂಲ ಹಾಗೂ ಜಾಲದ ಬಗ್ಗೆ ಮಹತ್ವದ ಮಾಹಿತಿ ದೊರೆಯುವ ನಿರೀಕ್ಷೆಯಿದೆ.

ಮತ್ತು ಬರಿಸುವ ಶೀರ್ ಕುರ್ಮಾ ತಿನ್ನಿಸಿ ಉದ್ಯೋಗಿಯ ಖೆಡ್ಡಾಕ್ಕೆ ಕೆಡವಿದ ಆರೋಪ

ಆರೋಪಿಗಳು ಮತ್ತು ಬರಿಸುವ ಸಿಹಿ ಪದಾರ್ಥ ನೀಡಿ ಉದ್ಯೋಗಿಯೊಬ್ಬರನ್ನು ಬಲೆಗೆ ಬೀಳಿಸಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಸಂತ್ರಸ್ತ ಉದ್ಯೋಗಿ ನೀಡಿರುವ ಹೇಳಿಕೆಯ ಪ್ರಕಾರ, ಆರೋಪಿ ತೌಸಿಫ್ ಬಿಲಾಲ್ ಅತ್ತಾರ್ ಎಂಬಾತ ಸಂತ್ರಸ್ತನನ್ನು ಸ್ನೇಹದ ಜಾಲಕ್ಕೆ ಸೆಳೆದಿದ್ದ. ಈದ್ ಹಬ್ಬದ ದಿನ ತೌಸಿಫ್ ಮನೆಯಲ್ಲಿ ‘ಶೀರ್ ಕುರ್ಮಾ’ ಸೇವಿಸಿದ ಬಳಿಕ ತನಗೆ ಅತಿಯಾದ ಅಮಲೇರಿದಂತಾಗಿ ದಿಕ್ಕುತೋಚದಂತಾಗಿತ್ತು ಎಂದು ಸಂತ್ರಸ್ತ ಉದ್ಯೋಗಿ ಹೇಳಿದ್ದಾರೆ. ಉದ್ಯೋಗಿಯ ಕುಟುಂಬದ ಸಮಸ್ಯೆಗಳು ಮತ್ತು ಮಾನಸಿಕ ಒತ್ತಡವನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು, ಇದಕ್ಕೆ ‘ಮಾಟ-ಮಂತ್ರ’ವೇ ಪರಿಹಾರ ಎಂದು ನಂಬಿಸಿ ಬಲವಂತವಾಗಿ ಮತಾಂತರಕ್ಕೆ ಪ್ರಚೋದನೆ ನೀಡಿದ್ದರು ಎನ್ನಲಾಗಿದೆ.

ಅಷ್ಟೇ ಅಲ್ಲದೆ, ಉದ್ಯೋಗಿಯು ಆರೋಪಿಗಳ ಗುಂಪಿನ ಮೇಲೆ ಅವಲಂಬಿತವಾಗುವಂತೆ ಮಾಡಲು ಆತನ ಕೆಲಸದ ಬಗ್ಗೆ ಕಚೇರಿಯ ಮೇಲಧಿಕಾರಿಗಳಿಗೆ ಸುಳ್ಳು ವರದಿಗಳನ್ನು ಕಳುಹಿಸಿ ವೃತ್ತಿಜೀವನದಲ್ಲಿ ಅಸ್ಥಿರತೆ ಉಂಟುಮಾಡಲಾಗಿತ್ತು ಎಂಬ ಭಯಾನಕ ಸತ್ಯ ಬಯಲಾಗಿದೆ.

ಇದನ್ನೂ ಓದಿ: “ನೀನು ತುಂಬಾ ಸಣ್ಣಗಿದ್ದೀಯ, ಜಿಮ್‌ಗೆ ಹೋದ್ರೆ ಸೆಕ್ಸಿಯಾಗಿ ಕಾಣ್ತೀಯ”: ಟಿಸಿಎಸ್ ಸಹೋದ್ಯೋಗಿ ಬಗ್ಗೆ ಯುವತಿ ಸ್ಫೋಟಕ ಹೇಳಿಕೆ

ಮತಾಂತರದ ಜೊತೆಗೆ, ಟಿಸಿಎಸ್‌ನ ಹಲವಾರು ಮಹಿಳಾ ಉದ್ಯೋಗಿಗಳು ಸಹೋದ್ಯೋಗಿಗಳ ವಿರುದ್ಧ ಲೈಂಗಿಕ ಕಿರುಕುಳದ ದೂರುಗಳನ್ನು ನೀಡಿದ್ದಾರೆ. ಪ್ರಕರಣ ಸಂಬಂಧ ಈವರೆಗೆ ಪೊಲೀಸರು 7 ಮಂದಿಯನ್ನು ಬಂಧಿಸಿ, 9 ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣದ ಗಂಭೀರತೆ ಅರಿತ ಟಿಸಿಎಸ್ ಸಂಸ್ಥೆಯು ಏಳು ಮಂದಿ ಆರೋಪಿಗಳನ್ನೂ ಕೆಲಸದಿಂದ ಅಮಾನತುಗೊಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Follow Us