ವಿಜ್ಞಾನಿಗಳು ರೈತರ ಹೊಲಗಳನ್ನೇ ಪ್ರಯೋಗಾಲಯವಾಗಿ ಪರಿವರ್ತಿಸಬೇಕು; ಕೊಯಮತ್ತೂರಿನಲ್ಲಿ ಪ್ರಧಾನಿ ಮೋದಿ ಕರೆ
ಇಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಸಾವಯವ ಕೃಷಿ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಅವರು ಪ್ರದರ್ಶನಕ್ಕೆ ಭೇಟಿ ನೀಡಿ ಹಲವಾರು ರೈತರೊಂದಿಗೆ ನೇರವಾಗಿ ಸಂವಾದ ನಡೆಸಿ ಅವರ ಅನುಭವಗಳು ಮತ್ತು ಅಭಿಪ್ರಾಯಗಳನ್ನು ಕೇಳಿದರು. ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಪ್ರಧಾನಿ ನರೇಂದ್ರ ಮೋದಿಯವರ ಈ ಭೇಟಿ ಮಹತ್ವ ಪಡೆದಿದೆ. ಈ ವೇಳೆ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ, 'ಬಿಹಾರದ ಗಾಳಿ ತಮಿಳುನಾಡಿಗೆ ಬೀಸಿದೆ' ಎಂದು ಸಂದೇಶ ರವಾನಿಸಿದ್ದಾರೆ.

ಕೊಯಮತ್ತೂರು, ನವೆಂಬರ್ 19: “ಸಾವಯವ ಕೃಷಿ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ವಿಷಯ” ಎಂದು ಹೇಳಿದ ಪ್ರಧಾನಿ ಮೋದಿ (PM Modi), ಭಾರತವು ಸಾವಯವ ಮತ್ತು ನೈಸರ್ಗಿಕ ಕೃಷಿಗೆ ಜಾಗತಿಕ ಕೇಂದ್ರವಾಗುವ ಹಾದಿಯಲ್ಲಿದೆ ಎಂದು ಪ್ರತಿಪಾದಿಸಿದ್ದಾರೆ. “ಎಲ್ಲಾ ವಿಜ್ಞಾನಿಗಳು ಮತ್ತು ಸಂಶೋಧನಾ ಸಂಸ್ಥೆಗಳು ಸಾವಯವ ಕೃಷಿಯನ್ನು ಕೃಷಿ ಪಠ್ಯಕ್ರಮದ ಪ್ರಮುಖ ಭಾಗವನ್ನಾಗಿ ಮಾಡಬೇಕೆಂದು ನಾನು ವಿನಂತಿಸುತ್ತೇನೆ. ಹಳ್ಳಿಗಳಿಗೆ ಹೋಗಿ ರೈತರ ಹೊಲಗಳನ್ನು ನಿಮ್ಮ ಪ್ರಯೋಗಾಲಯಗಳನ್ನಾಗಿ ಪರಿವರ್ತಿಸಿ” ಎಂದು ಮೋದಿ ಕರೆ ನೀಡಿದ್ದಾರೆ.
ನೈಸರ್ಗಿಕ ಕೃಷಿಯು ಸ್ವದೇಶಿ, ಸ್ಥಳೀಯ ಮತ್ತು ಸಾಂಪ್ರದಾಯಿಕ ಕಲ್ಪನೆಯಾಗಿದ್ದು, ಜೀವಾಮೃತದಂತಹ ಪದ್ಧತಿಗಳನ್ನು ಈಗ ದಕ್ಷಿಣ ಭಾರತದ ರೈತರು ವ್ಯಾಪಕವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಮೋದಿ ಒತ್ತಿ ಹೇಳಿದರು. ಕಳೆದ 11 ವರ್ಷಗಳಲ್ಲಿ ನಮ್ಮ ದೇಶದ ಇಡೀ ಕೃಷಿ ವಲಯವು ಒಂದು ಪ್ರಮುಖ ಪರಿವರ್ತನೆಗೆ ಸಾಕ್ಷಿಯಾಗಿದೆ. ಈ ಅವಧಿಯಲ್ಲಿ ನಮ್ಮ ದೇಶದ ಕೃಷಿ ರಫ್ತು ದ್ವಿಗುಣಗೊಂಡಿದೆ. ರೈತರ ಕಠಿಣ ಪರಿಶ್ರಮ ಮತ್ತು ಸರ್ಕಾರದ ವಿವಿಧ ಪ್ರಯತ್ನಗಳಿಂದಾಗಿ ಭಾರತೀಯ ಕೃಷಿ ಪ್ರಗತಿಯ ಹೊಸ ಎತ್ತರವನ್ನು ತಲುಪಿದೆ” ಎಂದು ಪ್ರಧಾನಿ ಹೇಳಿದ್ದಾರೆ. ಈ ಶೃಂಗಸಭೆಯಲ್ಲಿ ಸಾವಯವ, ನೈಸರ್ಗಿಕ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ರೈತರನ್ನು ಅವರು ಸನ್ಮಾನಿಸಿದರು.
ಇದನ್ನೂ ಓದಿ: ಕೊಯಮತ್ತೂರಿನಲ್ಲಿ ಪ್ರಧಾನಿ ಮೋದಿಯಿಂದ ರಾಷ್ಟ್ರೀಯ ನೈಸರ್ಗಿಕ ಕೃಷಿ ಸಮ್ಮೇಳನ ಉದ್ಘಾಟನೆ
ತಮಿಳುನಾಡಿನಲ್ಲಿ ಬಿಹಾರದ ಗಾಳಿ; ಮೋದಿ
ತಮಿಳುನಾಡಿನ ಕೊಯಮತ್ತೂರಿನಲ್ಲಿ ರೈತರು ಮತ್ತು ಜವಳಿ ಕಾರ್ಮಿಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿಯವರಿಗೆ ರೈತರು ತಮ್ಮ ಶಾಲುಗಳನ್ನು ಬೀಸುತ್ತಾ ಸ್ವಾಗತಿಸಿದರು. “ನಾನು ಇಲ್ಲಿ ವೇದಿಕೆಗೆ ಬಂದಾಗ, ಹಲವಾರು ರೈತರು ತಮ್ಮ ಶಾಲುಗಳನ್ನು ಗಾಳಿಯಲ್ಲಿ ಬೀಸುವುದನ್ನು ನೋಡಿದೆ. ಬಿಹಾರದ ತಂಗಾಳಿ ಇಲ್ಲಿಗೆ ತಲುಪಿದಂತೆ ನನಗೆ ಭಾಸವಾಯಿತು” ಎಂದು ಮೋದಿ ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಮುಂದಿನ ಚುನಾವಣೆಯಲ್ಲಿ ಬಿಹಾರದಂತೆಯೇ ತಮಿಳುನಾಡಿನಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂಬ ಬೃಹತ್ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ: ಸತ್ಯಸಾಯಿ ಬಾಬಾ ಎಂದರೆ ಪ್ರೀತಿಯ ಸಾಕಾರ ರೂಪ; ಪ್ರಧಾನಿ ಮೋದಿ ಬಣ್ಣನೆ
ಮುಂದಿನ ವರ್ಷ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯುತ್ತಿರುವುದರಿಂದ ಪ್ರಧಾನಿ ಮೋದಿಯವರ ಈ ಹೇಳಿಕೆ ಮಹತ್ವದ್ದಾಗಿದೆ. ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ದಕ್ಷಿಣ ರಾಜ್ಯದಲ್ಲಿ ಮುನ್ನಡೆ ಸಾಧಿಸಲು ಪ್ರಯತ್ನಿಸುತ್ತಿದೆ. 2024ರಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಒಂದೇ ಒಂದು ಲೋಕಸಭಾ ಸ್ಥಾನವನ್ನು ಕೂಡ ಗೆಲ್ಲಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಮುಂದಿನ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಸವಾಲಾಗಿ ಸ್ವೀಕರಿಸಿದೆ.
“ಕೊಯಮತ್ತೂರಿನ ಜವಳಿ ವಲಯವು ದೇಶದ ಆರ್ಥಿಕತೆಗೆ ಬಹಳ ಹಿಂದಿನಿಂದಲೂ ಪ್ರಮುಖ ಕೊಡುಗೆ ನೀಡುತ್ತಿದೆ. ಈ ಪ್ರದೇಶದವರೇ ಆದ, ಈಗ ಭಾರತದ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸುತ್ತಿರುವ ಸಿ.ಪಿ. ರಾಧಾಕೃಷ್ಣನ್ ಅವರ ಕೊಡುಗೆ ದೇಶಕ್ಕೆ ಮಹತ್ವದ್ದಾಗಿದೆ” ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




