ದೆಹಲಿ: ಪಂಜಾಬ್ ಕಾಂಗ್ರೆಸ್ನ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು (Navjot Singh Sidhu) ಪಟಿಯಾಲ ನ್ಯಾಯಾಲಯದಲ್ಲಿ (Patiala court) ಶುಕ್ರವಾರ ಶರಣಾಗಿದ್ದಾರೆ. 1988ರ ರಸ್ತೆ ಜಗಳ (1988 road rage case) ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸಿಧುಗೆ 1 ವರ್ಷ ಜೈಲು ಶಿಕ್ಷೆ ಪ್ರಕಟಿಸಿತ್ತು. ಮನೆಯ ಸಮೀಪದಲ್ಲೇ ಇರುವ ಜಿಲ್ಲಾ ಕೋರ್ಟ್ ಗೆ ಸಿಧು ಬಂದಿದ್ದು, ನವತೇಜ್ ಸಿಂಗ್ ಚೀಮಾ ಸೇರಿದಂತೆ ಕೆಲವು ಪಕ್ಷದ ನಾಯಕರು ಅವರ ಜತೆ ಇದ್ದರು ಎಂದು ಪಿಟಿಐ ವರದಿ ಮಾಡಿದೆ. ಎಸ್ಯುವಿಯಲ್ಲಿ ಚೀಮಾ ಅವರೇ ಸಿಧುವನ್ನು ಕೋರ್ಟ್‌ಗೆ ಕರೆತಂದಿದ್ದಾರೆ. ಕೆಲವು ಬೆಂಬಲಿಗರು ಶುಕ್ರವಾರ ಬೆಳಗ್ಗೆ ಸಿಧು ನಿವಾಸಕ್ಕೆ ತಲುಪಿದ್ದರು. ಏತನ್ಮಧ್ಯೆ ಸಿಧು ಪತ್ನಿ ನವಜೋತ್ ಕೌರ್ ಸಿಧು ಗುರುವಾರ ರಾತ್ರಿಯೇ ಪಟಿಯಾಲದಲ್ಲಿರುವ ಮನೆಗೆ ಬಂದಿದ್ದಾರೆ. ಕೆಲವೊಂದು ಆರೋಗ್ಯ ಸಮಸ್ಯೆಗಳಿವೆ. ಕೋರ್ಟ್‌ಗೆ ಶರಣಾಗಲು ಕಾಲಾವಕಾಶ ಬೇಕು ಎಂದು ಸಿಧು ಶುಕ್ರವಾರ ಬೆಳಗ್ಗೆ ಹೇಳಿದ್ದರು. ನ್ಯಾಯಮೂರ್ತಿ ಖಾನ್ವಿಲ್ಕರ್ ಅವರು ಮುಖ್ಯನ್ಯಾಯಮೂರ್ತಿ ಎನ್ ವಿ ರಮಣ ಅವರಲ್ಲಿ ಈ ವಿಷಯ ಪ್ರಸ್ತಾಪಿಸಿ ಔಪಚಾರಿಕ ಮನವಿ ಸಲ್ಲಿಸಿ ಎಂದಿದ್ದರು.1988ರ ಡಿ.27ರಂದು ಪಟಿಯಾಲದಲ್ಲಿ ವೃದ್ಧರೊಬ್ಬರ ಮೇಲೆ ಸಿಧು ಹಲ್ಲೆ ನಡೆಸಿದ್ದರು. ಚಿಕಿತ್ಸೆ ಫಲಿಸದ ಕಾರಣ ವೃದ್ಧರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಧುಗೆ ನಿನ್ನೆ (ಮೇ 19) ಸುಪ್ರೀಂಕೋರ್ಟ್ ನಿನ್ನೆ ಶಿಕ್ಷೆ ವಿಧಿಸಿತ್ತು. 34 ವರ್ಷಗಳ ಹಿಂದೆ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸುಪ್ರೀಂಕೋರ್ಟ್ ಗುರುವಾರ ತೀರ್ಪು ನೀಡಿತ್ತು.
ಆಗ 25 ವರ್ಷದವರಾಗಿದ್ದ ಕ್ರಿಕೆಟಿಗನ ಈಗಿನ ದೈಹಿಕ ಆರೋಗ್ಯದಂತಹ ಕೆಲವು ಅಂಶಗಳು ಶಿಕ್ಷೆಯ ಹಂತದಲ್ಲಿ ಬಿಟ್ಟುಹೋಗಿರುವಂತೆ ಕಂಡುಬರುತ್ತವೆ ಎಂದು ಎಎಂ ಖಾನ್ವಿಲ್ಕರ್ ಮತ್ತು ಎಸ್.ಕೆ ಕೌಲ್ ಅವರ ನ್ಯಾಯಪೀಠ ಹೇಳಿತ್ತು.
ಏನಿದು ಪ್ರಕರಣ?
ಡಿಸೆಂಬರ್ 27, 1988 ರಂದು ಸಿಧು ಪಟಿಯಾಲ ನಿವಾಸಿ ಗುರ್ನಾಮ್ ಸಿಂಗ್ ಅವರೊಂದಿಗೆ ಪಾರ್ಕಿಂಗ್ ಸ್ಥಳದ ಬಗ್ಗೆ ಜಗಳವಾಡಿದರು. ಸಿಧು ಮತ್ತು ಅವರ ಸಹವರ್ತಿ ರೂಪಿಂದರ್ ಸಿಂಗ್ ಸಂಧು ಅವರು ಗುರ್ನಾಮ್ ಸಿಂಗ್ ಅವರನ್ನು ಅವರ ಕಾರಿನಿಂದ ಎಳೆದುಕೊಂಡು ಹೊಡೆದಿದ್ದುಗುರ್ನಾಮ್ ಸಾವಿಗೀಡಾಗಿದ್ದರು. 1999 ರಲ್ಲಿ, ಪಟಿಯಾಲದ ಸೆಷನ್ಸ್ ನ್ಯಾಯಾಲಯವು ಸಿಧು ಮತ್ತು ಅವರ ಸಹಚರರನ್ನು ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಖುಲಾಸೆ ಮಾಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ಮೇಲೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ 2006 ರಲ್ಲಿ ಸಿಧುವನ್ನು ತಪ್ಪಿತಸ್ಥ ನರಹತ್ಯೆಯ ಅಪರಾಧಿ ಎಂದು ಘೋಷಿಸಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. 2018 ರಲ್ಲಿ ಸಿಧು ಸುಪ್ರೀಂ ಕೋರ್ಟ್‌ಗೆ ಮೊರೆ ಹೋದರು. ಒಂದೇ ಏಟಿಗೆ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಯಾವುದೇ ಪುರಾವೆಗಳಿಲ್ಲ ಎಂದು ಹೈಕೋರ್ಟ್ ಆದೇಶವನ್ನು ತಳ್ಳಿ ಹಾಕಿದ ಸುಪ್ರೀಂಕೋರ್ಟ್ ಹಿರಿಯ ನಾಗರಿಕರಿಗೆ ನೋವುಂಟು ಮಾಡಿದ ಕಾರಣಕ್ಕೆ ಸಿಧುವನ್ನು ತಪ್ಪಿತಸ್ಥ ಎಂದು ಪರಿಗಣಿಸಿತು. ಸಿಧುಗೆ ಜೈಲು ಶಿಕ್ಷೆ ಮತ್ತು ₹ 1,000 ದಂಡ ವಿಧಿಸಲಾಯಿತು.
ಸಿಧು ಅವರ ಸಹಾಯಕ ರೂಪಿಂದರ್ ಸಂಧು ಅವರು ಸ್ಥಳದಲ್ಲಿ ಹಾಜರಿದ್ದಕ್ಕೆ ಸರಿಯಾದ ಪುರಾವೆಗಳಿಲ್ಲ ಎಂದು ಸುಪ್ರೀಂಕೋರ್ಟ್ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿದೆ.
Published On - 5:44 pm, Fri, 20 May 22