NCP ಶಾಸಕರ ಅನರ್ಹತೆ ಪ್ರಕರಣ: ನಿರ್ಧಾರ ಕೈಗೊಳ್ಳಲು ಮಹಾರಾಷ್ಟ್ರ ಸ್ಪೀಕರ್‌ಗೆ ಫೆ. 15ರವರೆಗೆ ಕಾಲಾವಕಾಶ
NCP MLA Disqualification: ಎನ್‌ಸಿಪಿಯ ಶರದ್ ಪವಾರ್ ಬಣದ ಪರವಾಗಿ ಹಾಜರಾದ ಹಿರಿಯ ವಕೀಲ ಎ ಎಂ ಸಿಂಘ್ವಿ, ಆದೇಶಕ್ಕೆ ಮೂರು ವಾರಗಳು ಬೇಕಾಗುವುದಿಲ್ಲ. ಇದು ಮೂರನೇ ಬಾರಿಗೆ ನಡೆಯುತ್ತಿದೆ. ಹಾಗಾಗಿ ಒಂದು ವಾರಕ್ಕಿಂತ ಹೆಚ್ಚು ಸಮಯ ನೀಡದಂತೆ ನ್ಯಾಯಾಲಯವನ್ನು ಒತ್ತಾಯಿಸಿದರು.

ದೆಹಲಿ ಜನವರಿ 29: ಮಹಾರಾಷ್ಟ್ರ ಎನ್‌ಸಿಪಿ (NCP) ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ (Supreme Court) ಇಂದು (ಸೋಮವಾರ) ಮಹತ್ವದ ತೀರ್ಪು ನೀಡಿದೆ. ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವಂತೆ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ (Rahul Narvekar) ಅವರಿಗೆ ಸುಪ್ರೀಂಕೋರ್ಟ್ ಫೆ.15ರವರೆಗೆ ಗಡುವು ನೀಡಿದೆ. ರಾಹುಲ್ ನಾರ್ವೇಕರ್ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮೂರು ವಾರಗಳ ಕಾಲಾವಕಾಶ ಕೇಳಿದ್ದರು. ಆದರೆ ವಕೀಲ ಅಭಿಷೇಕ್ ಮನು ಸಿಂಘ್ವಿ ಇದನ್ನು ವಿರೋಧಿಸಿದ್ದಾರೆ. ಸಮಯ ವಿಸ್ತರಣೆ ಕೇಳುವುದು ಸದಾ ನಡೆಯುತ್ತಿದ್ದು, ಒಂದು ವಾರದ ಗಡುವು ನೀಡಬೇಕು ಎಂದು ಮನು ಸಿಂಘ್ವಿ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ನಾರ್ವೇಕರ್ ಅವರಿಗೆ ಮೂರು ವಾರಗಳ ಬದಲು ಎರಡು ವಾರಗಳ ವಿಸ್ತರಣೆಯನ್ನು ನೀಡಿತು.
ಎನ್‌ಸಿಪಿಯ ಶರದ್ ಪವಾರ್ ಬಣದ ಪರವಾಗಿ ಹಾಜರಾದ ಹಿರಿಯ ವಕೀಲ ಎ ಎಂ ಸಿಂಘ್ವಿ, ಆದೇಶಕ್ಕೆ ಮೂರು ವಾರಗಳು ಬೇಕಾಗುವುದಿಲ್ಲ. ಇದು ಮೂರನೇ ಬಾರಿಗೆ ನಡೆಯುತ್ತಿದೆ ಎಂದು ಹೇಳಿದ ಅವರು ಒಂದು ವಾರಕ್ಕಿಂತ ಹೆಚ್ಚು ಸಮಯ ನೀಡದಂತೆ ನ್ಯಾಯಾಲಯವನ್ನು ಒತ್ತಾಯಿಸಿದರು.
ಸ್ಪೀಕರ್ ನೀಡಿದ ಟೈಮ್‌ಲೈನ್ ಅನ್ನು ಅವಲೋಕಿಸಿದ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, “ಜನವರಿ 31, 2024 ರಂದು ಅಂತಿಮ ಆದೇಶಗಳಿಗಾಗಿ ಪ್ರಕ್ರಿಯೆಗಳನ್ನು ಮುಚ್ಚಬೇಕು ಎಂದು ಸೂಚಿಸುತ್ತದೆ. ಅಂತಿಮ ಆದೇಶವು ನಂತರ ಪ್ರಕಟಿಸಲು ಮಾತ್ರ ಉಳಿಯುತ್ತದೆ. ಫೆಬ್ರವರಿ 15, 2024 ರವರೆಗೆ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಲು ಮತ್ತು ಅಂತಿಮ ಆದೇಶಗಳನ್ನು ರವಾನಿಸಲು ನಾವು ಸಮಯವನ್ನು ವಿಸ್ತರಿಸುತ್ತೇವೆ ಎಂದಿದ್ದಾರೆ.
ಎನ್‌ಸಿಪಿಯಿಂದ ದೂರ ಸರಿದು ಬಿಜೆಪಿ-ಶಿವಸೇನಾ (ಏಕನಾಥ್ ಶಿಂಧೆ) ಮೈತ್ರಿಕೂಟಕ್ಕೆ ಸೇರ್ಪಡೆಗೊಂಡಿರುವ ಅಜಿತ್ ಪವಾರ್ ಮತ್ತು ಇತರ 8 ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಶರದ್ ಪವಾರ್ ಬಣ ಸ್ಪೀಕರ್‌ಗೆ ಅರ್ಜಿ ಸಲ್ಲಿಸಿತ್ತು.
ಸಮಯಾವಕಾಶ ಕಡಿಮೆ ಅನ್ನಿಸಿದರೂ ಚುನಾವಣಾ ಆಯೋಗದ ಫಲಿತಾಂಶ ಏನಾಗಿದೆ ಎಂಬುದನ್ನು ಕಾದು ನೋಡಬೇಕಿದೆ. ಅದು ಬಂದರೆ ಶಿವಸೇನಾ ತೀರ್ಪಿನಂತೆ ನಾರ್ವೇಕರ್ ಅದರ ಆಧಾರದ ಮೇಲೆ ತೀರ್ಪು ನೀಡಬಹುದು. ಯಾರದ್ದು ನಿಜವಾದ ಎನ್‌ಸಿಪಿ ಪಕ್ಷ? ಯಾರು ಚಿಹ್ನೆಯನ್ನು ಪಡೆಯುತ್ತಾರೆ? ಈ ಸಂಬಂಧ ಚುನಾವಣಾ ಆಯೋಗದ ನಿರ್ಧಾರ ಇಂದು ಅಥವಾ ಈ ವಾರ ಯಾವುದೇ ಸಮಯದಲ್ಲಿ ಬರಬಹುದು ಎಂದು ವಕೀಲ ಸಿದ್ಧಾರ್ಥ್ ಶಿಂಧೆ ಹೇಳಿದ್ದಾರೆ.
ಇದನ್ನೂ ಓದಿ: 2024ರ ಲೋಕಸಭೆ ಚುನಾವಣೆಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸ್ಪರ್ಧಿಸುವುದಿಲ್ಲ: ಮೂಲಗಳು
ಕಳೆದ ವರ್ಷ ಎನ್‌ಸಿಪಿಯಲ್ಲಿ ಎರಡು ಬಣಗಳಾಗಿದ್ದವು. ಅದರಲ್ಲಿ ಒಂದು ಶರದ್ ಪವಾರ್ ಬಣ ಇನ್ನೊಂದು ಅಜಿತ್ ಪವಾರ್ ಬಣ. ಶರದ್ ಪವಾರ್ ವಿರೋಧ ಪಕ್ಷದಲ್ಲಿದ್ದರೆ, ಅಜಿತ್ ಪವಾರ್ ಗುಂಪು ಶಿಂಧೆ-ಫಡ್ನವಿಸ್ ಸರ್ಕಾರದ ಭಾಗವಾಗಿದೆ. ಎನ್‌ಸಿಪಿಯ ಬಹುತೇಕ ಶಾಸಕರು ಅಜಿತ್ ಪವಾರ್ ಗುಂಪನ್ನು ಬೆಂಬಲಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:28 pm, Mon, 29 January 24



