
ನವದೆಹಲಿ, ಆಗಸ್ಟ್ 7: ಉಪರಾಷ್ಟ್ರಪತಿ (Vice President) ಅಭ್ಯರ್ಥಿಯನ್ನು ಆಯ್ಕೆ ಮಾಡಲು ಬಿಜೆಪಿ ನೇತೃತ್ವದ ಎನ್ಡಿಎ ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಅವರಿಗೆ ಅಧಿಕಾರ ನೀಡಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಇದು ಸರ್ವಾನುಮತದ ನಿರ್ಧಾರ ಎಂದು ಸಂಸದೀಯ ವ್ಯವಹಾರಗಳ ಸಚಿವರು ತಿಳಿಸಿದ್ದಾರೆ. ಇಂದು ಸಂಸತ್ತಿನ ಸಂಕೀರ್ಣದಲ್ಲಿ ಪ್ರಮುಖ ಬಿಜೆಪಿ ನಾಯಕರು ಮತ್ತು ಅವರ ಮಿತ್ರಪಕ್ಷಗಳ ಸಭೆ ನಡೆದಿದ್ದು, ಅಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಎನ್ಡಿಎ ಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಜೆ.ಪಿ ನಡ್ಡಾ ಅವರಿಗೆ ಮೈತ್ರಿಕೂಟದ ಉಪರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆ ಮಾಡುವ ಅಧಿಕಾರ ನೀಡಲಾಗಿದೆ. ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರು ಅನಾರೋಗ್ಯ ಕಾರಣಗಳಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ದಿನಗಳ ನಂತರ ಈ ಸಭೆ ನಡೆದಿದೆ. ಮುಂಗಾರು ಅಧಿವೇಶನದ ಮೊದಲ ದಿನದಿಂದ ಉಪರಾಷ್ಟ್ರಪತಿ ಸ್ಥಾನ ತೆರವಾಗಿದೆ.
ಇದನ್ನೂ ಓದಿ: ಉಪರಾಷ್ಟ್ರಪತಿ ಜಗದೀಪ್ ಧನಖರ್ ರಾಜೀನಾಮೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಗೀಕಾರ
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಮುಂಬರುವ ಉಪರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಅಭ್ಯರ್ಥಿಯ ಹೆಸರನ್ನು ಆಗಸ್ಟ್ 12ರಂದು ಘೋಷಿಸುವ ಸಾಧ್ಯತೆಯಿದೆ. ಸಂಸತ್ತಿನ ಕಟ್ಟಡದಲ್ಲಿ ನಡೆದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ನಾಯಕರ ನಿರ್ಣಾಯಕ ಸಭೆಯ ನಂತರ ಅವರ ಈ ಹೇಳಿಕೆಗಳು ಬಂದಿವೆ.
ಇದನ್ನೂ ಓದಿ: Explainer: ಜಗದೀಪ್ ಧನ್ಖರ್ ರಾಜೀನಾಮೆ, ಭಾರತದಲ್ಲಿ ಉಪ ರಾಷ್ಟ್ರಪತಿ ಆಯ್ಕೆ ಹೇಗೆ? ಪ್ರಕ್ರಿಯೆ ಏನು?
ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಶಿವಸೇನಾ ನಾಯಕ ಶ್ರೀಕಾಂತ್ ಶಿಂಧೆ, ಮಿಲಿಂದ್ ದಿಯೋರಾ, ಪ್ರಫುಲ್ ಪಟೇಲ್, ಚಿರಾಗ್ ಪಾಸ್ವಾನ್, ಉಪೇಂದ್ರ ಕುಶ್ವಾಹ, ರಾಮ್ ಮೋಹನ್, ಲಲ್ಲನ್ ಸಿಂಗ್, ಅಪ್ನಾ ದಳ (ಎಸ್) ನಾಯಕಿ ಅನುಪ್ರಿಯಾ ಪಟೇಲ್ ಮತ್ತು ರಾಮದಾಸ್ ಅಠಾವಳೆ ಸೇರಿದಂತೆ ಹಿರಿಯ ನಾಯಕರು ಇಂದಿನ ಸಭೆಯಲ್ಲಿ ಉಪಸ್ಥಿತರಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ