ಶೀಘ್ರದಲ್ಲೇ ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ; ಟ್ರಂಪ್ ಸುಂಕ ಹೆಚ್ಚಳ ಬೆನ್ನಲ್ಲೇ ಅಜಿತ್ ದೋವಲ್ ಮಾಹಿತಿ
ರಷ್ಯಾದ ತೈಲವನ್ನು ಗುರಿಯಾಗಿರಿಸಿಕೊಂಡು ಟ್ರಂಪ್ ಭಾರತದ ಮೇಲಿನ ಸುಂಕವನ್ನು ಹೆಚ್ಚಿಸಿದ್ದಾರೆ. ಇದರ ಬೆನ್ನಲ್ಲೇ ಭಾರತದೊಂದಿಗೆ ಪ್ರಮುಖ ಮಾತುಕತೆಗಾಗಿ ಪುಟಿನ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ವ್ಲಾಡಿಮಿರ್ ಪುಟಿನ್ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅವರ ಭೇಟಿಯ ದಿನಾಂಕವನ್ನು ಸದ್ಯದಲ್ಲೇ ಘೋಷಿಸಲಾಗುವುದು ಎಂದು NSA ಅಜಿತ್ ದೋವಲ್ ದೃಢಪಡಿಸಿದ್ದಾರೆ.

ನವದೆಹಲಿ, ಆಗಸ್ಟ್ 7: ರಷ್ಯಾದಿಂದ ಭಾರತ ತೈಲ (Russian Oil) ಖರೀದಿ ಮಾಡುತ್ತಿದೆ ಎಂಬ ಕಾರಣಕ್ಕೆ ಅಮೆರಿಕ (United States Tariff) ಭಾರತದ ಮೇಲೆ ಶೇ. 25ರಷ್ಟು ಹೆಚ್ಚುವರಿ ಸುಂಕ ವಿಧಿಸಿದೆ. ಇದರ ನಡುವೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russia President Putin) ಭಾರತಕ್ಕೆ ಭೇಟಿ ನೀಡುವುದು ಖಚಿತವಾಗಿದೆ. ರಷ್ಯಾ ಈಗಾಗಲೇ ಪುಟಿನ್ ಭಾರತ ಭೇಟಿಯ ಶೆಡ್ಯೂಲ್ ಅಂತಿಮಗೊಳಿಸಿದ್ದು, ದಿನಾಂಕವನ್ನು ಅಧಿಕೃತವಾಗಿ ಘೋಷಿಸಬೇಕಿದೆ. ಮೂಲಗಳ ಪ್ರಕಾರ ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಪುಟಿನ್ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಹೆಚ್ಚಾಗಿದೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಪುಟಿನ್ ಭೇಟಿಯ ಕಾರಣಕ್ಕೆ ಭಾರತ ಉತ್ಸುಕವಾಗಿದೆ ಮತ್ತು ಸಂತೋಷಪಡುತ್ತಿದೆ ಎಂದು ಹೇಳಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಮಾಸ್ಕೋಗೆ ಭೇಟಿ ನೀಡಿದ ಸಂದರ್ಭದಲ್ಲಿ ಘೋಷಿಸಿದ್ದಾರೆ. ಉಕ್ರೇನ್ ಜೊತೆ ಯುದ್ಧಕ್ಕೆ ಇಳಿದಿರುವ ರಷ್ಯಾದಿಂದ ಭಾರತ ತೈಲ ಖರೀದಿ ಮಾಡುವ ಮೂಲಕ ಯುದ್ಧಕ್ಕೆ ಪರೋಕ್ಷವಾಗಿ ಹಣ ಹೂಡಿಕೆ ಮಾಡುತ್ತಿದೆ ಎಂದು ಆರೋಪಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಆಮದು ವಸ್ತುಗಳ ಮೇಲಿನ ವ್ಯಾಪಾರ ಸುಂಕವನ್ನು ಶೇ. 50ಕ್ಕೆ ಏರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಷ್ಯಾದ ಅಧ್ಯಕ್ಷರ ಭಾರತ ಭೇಟಿ ಮಹತ್ವ ಪಡೆದಿದೆ.
ಇದನ್ನೂ ಓದಿ: ಅನ್ಯಾಯ, ಅಸಮಂಜಸ; ಶೇ. 25ರಷ್ಟು ಹೆಚ್ಚುವರಿ ಸುಂಕ ವಿಧಿಸಿದ ಟ್ರಂಪ್ಗೆ ಭಾರತ ತಿರುಗೇಟು
ರಷ್ಯಾದ ಭದ್ರತಾ ಮಂಡಳಿಯ ಕಾರ್ಯದರ್ಶಿ ಸೆರ್ಗೆಯ್ ಶೋಯಿಗು ಅವರೊಂದಿಗೆ ಮಾತನಾಡುವಾಗ ಎನ್ಎಸ್ಎ ಅಜಿತ್ ದೋವಲ್ ರಷ್ಯಾ ಅಧ್ಯಕ್ಷ ಪುಟಿನ್ ಅವರ ಭಾರತದ ಭೇಟಿಯ ದಿನಾಂಕ ಫಿಕ್ಸ್ ಆಗಿರುವುದನ್ನು ಕೇಳಿ ಸಂತೋಷವಾಗಿದೆ. ನಾವು ಅವರನ್ನು ಬರಮಾಡಿಕೊಳ್ಳಲು ಉತ್ಸುಕರಾಗಿದ್ದೇವೆ ಎಂದಿದ್ದಾರೆ. “ನಮ್ಮ ನಡುವೆ ಬಹಳ ವಿಶೇಷವಾದ ಮತ್ತು ದೀರ್ಘ ಸಂಬಂಧವಿದೆ. ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ನಾವು ಹೆಚ್ಚು ಗೌರವಿಸುತ್ತೇವೆ ಎಂದು ನೀವು ತುಂಬಾ ಸರಿಯಾಗಿಯೇ ಹೇಳಿದ್ದೀರಿ. ನಾವು ಉನ್ನತ ಮಟ್ಟದ ಮಾತುಕತೆಗಳನ್ನು ನಡೆಸಿದ್ದೇವೆ. ಈ ಉನ್ನತ ಮಟ್ಟದ ಮಾತುಕತೆಗಳು ಬಹಳ ಗಣನೀಯವಾಗಿ ಕೊಡುಗೆ ನೀಡಿವೆ. ರಷ್ಯಾ ಅಧ್ಯಕ್ಷ ಪುಟಿನ್ ಅವರ ಭಾರತ ಭೇಟಿಯ ಬಗ್ಗೆ ತಿಳಿದು ನಾವು ತುಂಬಾ ಉತ್ಸುಕರಾಗಿದ್ದೇವೆ” ಎಂದು ಅಜಿತ್ ದೋವಲ್ ಹೇಳಿದ್ದಾರೆ.
“We were pleased to know about President Putin’s visit to our country. I think that the dates are almost finalized now”, NSA Ajit Doval tells Russian Security Council chief Sergei Shoigu.
Full comments: pic.twitter.com/cBbfuVxuuA
— Sidhant Sibal (@sidhant) August 7, 2025
ಇದನ್ನೂ ಓದಿ: ರೈತರ ಹಿತಾಸಕ್ತಿ ಕಾಪಾಡಲು ಯಾವುದೇ ವೈಯಕ್ತಿಕ ನಷ್ಟಕ್ಕೂ ಸಿದ್ಧ ಎಂದು ಟ್ರಂಪ್ಗೆ ಸವಾಲೆಸೆದ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪುಟಿನ್ ಕಳೆದ ವರ್ಷ ಎರಡು ಬಾರಿ ಭೇಟಿಯಾಗಿದ್ದರು. ಕಳೆದ ವರ್ಷ ಜುಲೈನಲ್ಲಿ ಪ್ರಧಾನಿ ಮೋದಿ 22ನೇ ಭಾರತ-ರಷ್ಯಾ ಶೃಂಗಸಭೆಗಾಗಿ ಮಾಸ್ಕೋಗೆ ಭೇಟಿ ನೀಡಿದ ಸಮಯದಲ್ಲಿ ಒಮ್ಮೆ ಅವರಿಬ್ಬರೂ ಭೇಟಿಯಾಗಿದ್ದರು. ಇದು ಮೋದಿ ಪ್ರಧಾನಿಯಾಗಿ ಮೂರನೇ ಅವಧಿಯ ಅಧಿಕಾರಾವಧಿಯನ್ನು ಪ್ರಾರಂಭಿಸಿದ ನಂತರ ಅವರ ಮೊದಲ ದ್ವಿಪಕ್ಷೀಯ ಪ್ರವಾಸವಾಗಿತ್ತು. ಭಾರತ-ರಷ್ಯಾ ಸಂಬಂಧಗಳನ್ನು ಬಲಪಡಿಸುವಲ್ಲಿ ನೀಡಿದ ಕೊಡುಗೆಗಳಿಗಾಗಿ ಪ್ರಧಾನಿ ಮೋದಿಗೆ ರಷ್ಯಾದ ಅತ್ಯುನ್ನತ ನಾಗರಿಕ ಗೌರವವಾದ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೋಸ್ತಲ್ ಪ್ರಶಸ್ತಿಯನ್ನು ನೀಡಲಾಗಿತ್ತು. ಎರಡನೇ ಬಾರಿಗೆ, ಕಳೆದ ಅಕ್ಟೋಬರ್‌ನಲ್ಲಿ ಕಜಾನ್‌ನಲ್ಲಿ ಪ್ರಧಾನಿ ಮೋದಿ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ್ದಾಗ ಇಬ್ಬರು ನಾಯಕರು ಮತ್ತೆ ಭೇಟಿಯಾಗಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




