ಜೈಪುರ: ರಾಜಸ್ಥಾನದ ಕೋಟಾ ಮತ್ತು ಮಹಾರಾಷ್ಟ್ರದ ವಾಶಿಮ್‌ನಲ್ಲಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) 2022 ಪರೀಕ್ಷೆ ಬರೆಯಲು ಹೋದ ಹಲವಾರು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ (Hijab) ಧರಿಸಿ ಎಕ್ಸಾಂ ಹಾಲ್ಗೆ ಹೋಗಿದ್ದಕ್ಕಾಗಿ ತೊಂದರೆ ಅನುಭವಿಸಿದ್ದಾರೆ. ಕೋಟಾದಲ್ಲಿ ಮೋದಿ ಕಾಲೇಜಿನ ಪ್ರವೇಶದ್ವಾರದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ತಡೆದು ಅವರ ಹಿಜಾಬ್‌ಗಳನ್ನು ತೆಗೆದು ಎಕ್ಸಾಂ ಹಾಲ್ಗೆ ತೆರಳಲು ಸೂಚಿಸಲಾಯಿತು. ಇದರಿಂದ ಪರೀಕ್ಷಾ ಕೇಂದ್ರದ ಹೊರಗೆ ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು.
ಬಳಿಕ, ಪರೀಕ್ಷಾ ವೀಕ್ಷಕರನ್ನು ಕರೆಸಿ ಪರೀಕ್ಷೆಯ ವೇಳೆ ಯಾವುದೇ ರೀತಿಯ ಅವ್ಯವಹಾರ ನಡೆದರೆ ಅವರೇ ಹೊಣೆ ಎಂದು ಲಿಖಿತ ಅರ್ಜಿಗೆ ಸಹಿ ಹಾಕಿಸಿಕೊಂಡ ನಂತರ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಒಳಗೆ ಬಿಡಲು ಅನುಮತಿ ನೀಡಲಾಯಿತು.
ಕೋಟಾದ ವಿದ್ಯಾರ್ಥಿನಿಯರಿಗೆ ಗಲಾಟೆಯ ನಂತರ ತಮ್ಮ ಹಿಜಾಬ್ ಧರಿಸಿ ಪರೀಕ್ಷೆಗಳನ್ನು ಬರೆಯಲು ಅನುಮತಿಸಿದರೆ, ವಾಶಿಮ್‌ನ ಹಲವಾರು ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆಯುವ ಮೊದಲು ತಮ್ಮ ಹಿಜಾಬ್‌ಗಳನ್ನು ತೆಗೆದುಹಾಕಲು ಒತ್ತಾಯಿಸಲಾಯಿತು.
ಇದನ್ನೂ ಓದಿ: NEET PG 2022 ನೀಟ್ ಪಿಜಿ ಪರೀಕ್ಷೆ ಮುಂದೂಡಲು ಸುಪ್ರೀಂಕೋರ್ಟ್ ನಕಾರ
ಇರಾಮ್ ಮೊಹಮ್ಮದ್ ಝಾಕಿರ್ ಮತ್ತು ಅರಿಬಾ ಸಮನ್ ಅಜರ್ ಹುಸೇನ್ ಸೇರಿದಂತೆ ಸುಮಾರು 6 ವಿದ್ಯಾರ್ಥಿಗಳು ಆಡಳಿತ ಅಧಿಕಾರಿಗಳು ಮತ್ತು ಪರೀಕ್ಷಾ ಕೇಂದ್ರದ ಅಧಿಕಾರಿಗಳು ಅನುಚಿತವಾಗಿ ವರ್ತಿಸುತ್ತಾರೆ ಮತ್ತು ತಮ್ಮ ಹಿಜಾಬ್‌ಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ ಎಂದು ದೂರಿದ್ದಾರೆ.
ಮಾತೋಶ್ರೀ ಶಾಂತಾಬಾಯಿ ಗೋಟೆ ಕಾಲೇಜು ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಯಿಂದ ಹೊರಗೆ ಕರೆಸಿ ಅವರ ಹಿಜಾಬ್‌ಗಳನ್ನು ಬಲವಂತವಾಗಿ ತೆಗೆಯಲಾಯಿತು. ಇದು ಮುಸ್ಲಿಂ ಸಮುದಾಯವನ್ನು ಕೆರಳಿಸಿತು ಮತ್ತು ಕ್ಯಾಂಪಸ್‌ನ ಹೊರಗೆ ಹೆಚ್ಚಿನ ಜನರು ಜಮಾಯಿಸಿದರು. ಪೊಲೀಸ್ ವರಿಷ್ಠಾಧಿಕಾರಿಗಳು ಇತರ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಕಾಲೇಜಿನ ಹೊರಗೆ ಪೊಲೀಸ್ ಪಡೆಯನ್ನು ನೇಮಿಸಿದರು.
ಇದನ್ನೂ ಓದಿ: NEET Exam: ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳಿಗಾಗಿ ಇಂದು ನೀಟ್ ಪರೀಕ್ಷೆ
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಅಧಿಕೃತ ಮಾರ್ಗಸೂಚಿಗಳ ಪ್ರಕಾರ, ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಕ್ಯಾಶುಯಲ್ ಮತ್ತು ಹವಾಮಾನಕ್ಕೆ ಸೂಕ್ತವಾದ ಉಡುಪುಗಳನ್ನು ಧರಿಸಲು ಸೂಚಿಸಲಾಗುತ್ತದೆ. ಆದರೆ, ನೀಟ್ ಪರೀಕ್ಷೆಯ ಸಮಯದಲ್ಲಿ ಪೂರ್ಣ ತೋಳುಗಳನ್ನು ಹೊಂದಿರುವ ತಿಳಿ ಬಣ್ಣದ ಬಟ್ಟೆಗಳನ್ನು ಧರಿಸುವಂತಿಲ್ಲ.
ಅಲ್ಲದೆ, ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಶೂ ಧರಿಸುವಂತಿಲ್ಲ. ವಿದ್ಯಾರ್ಥಿಗಳು ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಬಹುದಾದರೂ ಅವರು ನಿಗದಿತ ಸಮಯಕ್ಕಿಂತ 2 ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು, ತಪಾಸಣೆಗೆ ಸಹಕರಿಸಬೇಕು ಎಂಬ ನಿಯಮವಿದೆ.