ನವದೆಹಲಿ: ಇನ್ಷೂರೆನ್ಸ್ ಮಾಡಿಸಿಕೊಂಡಂಥವರಿಗೆ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಕ್ಯಾಶ್ಲೆಸ್ ಸೇವೆ ಒದಗಿಸುವಂತೆ ಸೂಚಿಸಿ ಎಂದು ಇನ್ಷೂರೆನ್ಸ್ ಕಂಪೆನಿಗಳಿಗೆ ಇನ್ಷೂರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐಆರ್ಡಿಎಐ) ಹೇಳಿದೆ. ಒಂದು ವೇಳೆ ನೆಟ್ವರ್ಕ್ ಆಸ್ಪತ್ರೆಗಳು ಕ್ಯಾಶ್ಲೆಸ್ ವ್ಯವಸ್ಥೆ ಒದಗಿಸುವುದಕ್ಕೆ ನಿರಾಕರಿಸಿದಲ್ಲಿ ಮತ್ತು ಈಗಾಗಲೇ ಒಪ್ಪಿಕೊಂಡಿರುವಂಥ ಷರತ್ತು, ನಿಬಂಧನೆಗಳಿಂದ ದೂರ ಸರಿದಲ್ಲಿ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಟ್ವೀಟ್ ಮಾಡಿ, ಕೆಲವು ಆಸ್ಪತ್ರೆಗಳು ಕ್ಯಾಶ್ಲೆಸ್ ಚಿಕಿತ್ಸೆಗೆ ನಿರಾಕರಿಸುತ್ತಿರುವ ಬಗ್ಗೆ ವರದಿಗಳು ಬಂದಿವೆ. ಐಆರ್ಡಿಎಐ ಅಧ್ಯಕ್ಷ ಎಸ್.ಸಿ.ಕುಂಠಿಯಾ ಜತೆ ಮಾತನಾಡಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಹೇಳಿದ್ದೇನೆ. 2020ರ ಮಾರ್ಚ್ನಲ್ಲಿ ಕೋವಿಡ್ ಅನ್ನು ಕಾಂಪ್ರಹೆನ್ಸಿವ್ ಆರೋಗ್ಯ ವಿಮೆಯಲ್ಲಿ ಸೇರಿಸಲಾಗಿದೆ. ನೆಟ್ವರ್ಕ್ ಅಥವಾ ತಾತ್ಕಾಲಿಕ ಆಸ್ಪತ್ರೆಗಳಲ್ಲೂ ಕ್ಯಾಶ್ಲೆಸ್ ದೊರೆಯುತ್ತದೆ ಎಂದಿದ್ದರು.
ಎಲ್ಲಿ ಇನ್ಷೂರೆನ್ಸ್ ಮಾಡಿಸಿಕೊಂಡವರಿಗೆ ಆಸ್ಪತ್ರೆಯಲ್ಲಿ ಕ್ಯಾಶ್ಲೆಸ್ ವ್ಯವಸ್ಥೆಗೆ ಅನುಕೂಲ ಇರುತ್ತದೋ, ಅಂಥ ನೆಟ್ವರ್ಕ್ ಆಸ್ಪತ್ರೆಗಳು ಕೋವಿಡ್- 19 ಸೇರಿದಂತೆ ಎಲ್ಲ ಚಿಕಿತ್ಸೆಗೂ ಕ್ಯಾಶ್ಲೆಸ್ ವ್ಯವಸ್ಥೆ ಒದಗಿಸಬೇಕು. ಎಂದು ಐಆರ್ಡಿಎಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಂದಹಾಗೆ, ನೆಟ್ವರ್ಕ್ ಆಸ್ಪತ್ರೆಗಳು ಅಂದರೆ, ಜನರಲ್ ಮತ್ತು ಹೆಲ್ತ್ ಇನ್ಷೂರೆನ್ಸ್ ಕಂಪೆನಿಗಳ ಜತೆಗೆ ಸರ್ವೀಸ್ ಲೆವೆಲ್ ಅಗ್ರಿಮೆಂಟ್ಸ್ (SLA)ಸಹಿ ಮಾಡಿದ ಆಸ್ಪತ್ರೆಗಳು ಎಂದರ್ಥ. ಇವುಗಳು ಒಪ್ಪಂದದ ಪ್ರಕಾರವಾಗಿ, ಪಾಲಿಸಿದಾರರಿಗೆ ಕೋವಿಡ್- 19 ಸೇರಿದಂತೆ ಇತರ ಕಾಯಿಲೆಗಳಿಗೆ ಕಡ್ಡಾಯವಾಗಿ ಕ್ಯಾಶ್ಲೆಸ್ ವ್ಯವಸ್ಥೆ ಒದಗಿಸಬೇಕು ಎಂದು ಐಆರ್ಡಿಎಐ ಹೇಳಿದೆ.
ಎಲ್ಲ ನೆಟ್ವರ್ಕ್ ಆಸ್ಪತ್ರೆಗಳಿಂದಲೂ ಪ್ರಾಮಾಣಿಕವಾಗಿ ನಗದುರಹಿತ ಸೇವೆ ಖಾತ್ರಿಯಾಗುವಂತೆ ನಿರ್ದೇಶನ ನೀಡಬೇಕು ಎಂದು ಇನ್ಷೂರೆನ್ಸ್ ಕಂಪೆನಿಗಳಿಗೆ ಸೂಚಿಸಲಾಗಿದೆ. ಜತೆಗೆ ಆಸ್ಪತ್ರೆಗಳ ಜತೆಗೆ ಸಂವಹನ ನಡೆಸುವುದಕ್ಕೆ ಸೂಕ್ತ ಸಂವಹನ ಚಾನೆಲ್ ರಚಿಸಬೇಕು ಅಂತಲೂ ತಿಳಿಸಲಾಗಿದೆ. ಒಂದು ವೇಳೆ ಯಾವುದೇ ಲಿಸ್ಟೆಡ್ ನೆಟ್ವರ್ಕ್ ಆಸ್ಪತ್ರೆಯು ನಗದುರಹಿತ ವ್ಯವಸ್ಥೆಯನ್ನು ಒದಗಿಸುವುದಕ್ಕೆ ನಿರಾಕರಿಸಿದಲ್ಲಿ ಪಾಲಿಸಿದಾರರು ಈ ಬಗ್ಗೆ ಸಂಬಂಧಪಟ್ಟ ಇನ್ಷೂರೆನ್ಸ್ ಕಂಪೆನಿಗಳಿಗೆ ದೂರು ನೀಡಬಹುದು.
ಇದನ್ನೂ ಓದಿ: ಕೋವಿಡ್- 19 ಕ್ಲೇಮ್ಗೆ ಆದ್ಯತೆ ನೀಡುವಂತೆ ನಿರ್ದೇಶಿಸಲು ಐಆರ್ಡಿಎಐಗೆ ಸೂಚಿಸಿದ ನಿರ್ಮಲಾ ಸೀತಾರಾಮನ್
ಇದನ್ನೂ ಓದಿ: Health insurance: ಹೆಚ್ಚಿನ ಮೊತ್ತದ ಹೆಲ್ತ್ ಇನ್ಷೂರೆನ್ಸ್ ಖರೀದಿಯೋ ಅಥವಾ ರೀಸ್ಟೋರ್ ಮಾಡಿಸಬೇಕೋ?
(Network hospitals should not deny cashless facility to policyholders, said IRDAI)