ಚೆನ್ನೈ: ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ (RN Ravi) ಅವರು ಇತ್ತೀಚೆಗೆ ತಮಿಳುನಾಡು (Tamil Nadu)ಎಂಬ ಹೆಸರನ್ನು ತಮಿಳಗಂ (Tamizhagam) ಎಂದು ಬದಲಾಯಿಸುವಂತೆ ಸೂಚಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೆ ಡಿಎಂಕೆ ನೇತೃತ್ವದ ಸರ್ಕಾರ ಮಾತ್ರವಲ್ಲದೆ ವಿರೋಧ ಪಕ್ಷವಾದ ಎಐಎಡಿಎಂಕೆ ಕೂಡ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ತಮಿಳುನಾಡು ರಾಜ್ಯಪಾಲ ಆರ್ಎನ್ ರವಿ, ನಾನು ತಮಿಳುನಾಡಿನ ಹೆಸರು ಬದಲಾಯಿಸುವಂತೆ ಸೂಚಿಸಿದ್ದೇನೆ ಎಂಬುದು ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದ್ದಾರೆ.
ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ಮತ್ತು ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ ನಡುವೆ ಹಲವು ವಿಚಾರಗಳಲ್ಲಿ ಜಗಳ ನಡೆಯುತ್ತಲೇ ಇದೆ. ಇತ್ತೀಚೆಗಷ್ಟೇ ದ್ರಾವಿಡ ರಾಜಕೀಯವನ್ನು ‘ಪ್ರತಿಗಾಮಿ ರಾಜಕೀಯ’ ಎಂದು ಕರೆದಿದ್ದ ರಾಜ್ಯಪಾಲ ರವಿ ಅವರ ಹೇಳಿಕೆಗೆ ಡಿಎಂಕೆ ಬಲವಾದ ವಿರೋಧ ವ್ಯಕ್ತಪಡಿಸಿತ್ತು. ತಮಿಳುನಾಡು ರಾಜ್ಯದ ಹೆಸರನ್ನು ‘ತಮಿಳಗಂ’ ಎಂದು ಬದಲಾಯಿಸಲು ರಾಜ್ಯಪಾಲರು ಸೂಚಿಸಿದ್ದರು.
ಇದನ್ನೂ ಓದಿ: ತಮಿಳುನಾಡು ವಿಧಾನಸಭೆಯಲ್ಲಿ ಹೈಡ್ರಾಮಾ; ಕಲಾಪ ಬಿಟ್ಟು ಹೊರನಡೆದ ರಾಜ್ಯಪಾಲ ಆರ್ಎನ್ ರವಿ
ಜನವರಿ 4ರಂದು ಚೆನ್ನೈನ ರಾಜಭವನದಲ್ಲಿ ನಡೆದ ಕಾಶಿ ತಮಿಳು ಸಂಗಮದ ಸಂಘಟಕರು ಮತ್ತು ಸ್ವಯಂಸೇವಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಆರ್.ಎನ್.ರವಿ ತಮಿಳುನಾಡಿಗೆ ‘ತಮಿಳಗಂ’ ಪದವು ಹೆಚ್ಚು ಸೂಕ್ತವಾದ ಪದವಾಗಿದೆ ಎಂದು ಟೀಕಿಸಿದ್ದರು.
#WATCH | Chennai: A ruckus breaks out at the Tamil Nadu assembly soon after Governor RN Ravi begins his address as the Session begins.
A few MLAs of DMK alliance parties are raising slogans against the Governor.
(Video Source: Tamil Nadu Assembly) pic.twitter.com/M8gzGDwKO7
— ANI (@ANI) January 9, 2023
ಈ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ ರಾಜ್ಯಪಾಲ ರವಿ, ಈ ರೀತಿಯಾಗಿ ಸುದ್ದಿ ಹರಡುತ್ತಿರುವವರು ನನ್ನ ಭಾಷಣವನ್ನು ಅರ್ಥಮಾಡಿಕೊಂಡಿಲ್ಲ. ತಮಿಳುನಾಡು ಹೆಸರನ್ನು ಬದಲಾಯಿಸಲು ನಾನು ಸಲಹೆ ನೀಡಿದ್ದೇನೆ ಎಂಬುದು ತಪ್ಪು ಎಂದಿದ್ದಾರೆ. ಕಾಶಿಯೊಂದಿಗೆ ತಮಿಳು ಜನರ ನಡುವಿನ ಐತಿಹಾಸಿಕ ಸಾಂಸ್ಕೃತಿಕ ಸಂಪರ್ಕದ ಕುರಿತು ಮಾತನಾಡುವಾಗ ಅವರು “ತಮಿಳಗಂ” ಪದವನ್ನು ಉಲ್ಲೇಖಿಸಿದ್ದರು. ಆಗಿನ ಕಾಲದಲ್ಲಿ ತಮಿಳುನಾಡು ಇರಲಿಲ್ಲ ಎಂದಿದ್ದರು. ಐತಿಹಾಸಿಕ ಸಾಂಸ್ಕೃತಿಕ ಸಂದರ್ಭದಲ್ಲಿ, ನಾನು ತಮಿಳಗಂ ಪದವನ್ನು ಹೆಚ್ಚು ಸೂಕ್ತವಾದ ಅಭಿವ್ಯಕ್ತಿ ಎಂದು ಉಲ್ಲೇಖಿಸಿದ್ದೇನೆಯೇ ಹೊರತು ತಮಿಳುನಾಡು ಹೆಸರನ್ನು ಬದಲಾಯಿಸಲು ಸೂಚಿಸಿಲ್ಲ ಎಂದು ರಾಜ್ಯಪಾಲ ರವಿ ಹೇಳಿದ್ದಾರೆ.
ಇದನ್ನೂ ಓದಿ: ಕಾಶ್ಮೀರಕ್ಕೆ ಹೋಗಿ, ನಿಮ್ಮ ಹತ್ಯೆಗೆ ಭಯೋತ್ಪಾದಕನ ಕಳುಹಿಸುತ್ತೇವೆ; ತಮಿಳುನಾಡು ರಾಜ್ಯಪಾಲರಿಗೆ ಡಿಎಂಕೆ ಕಾರ್ಯಕರ್ತನ ಬೆದರಿಕೆ
“ನನ್ನ ಭಾಷಣವನ್ನು ಅರ್ಥಮಾಡಿಕೊಳ್ಳದೆ, ರಾಜ್ಯಪಾಲರು ತಮಿಳುನಾಡು ಪದಕ್ಕೆ ವಿರುದ್ಧವಾಗಿದ್ದಾರೆ ಎಂಬ ವಾದಗಳು ಚರ್ಚೆಯ ವಿಷಯವಾಗಿ ಮಾರ್ಪಟ್ಟಿವೆ. ಆದ್ದರಿಂದ, ಅದನ್ನು ಕೊನೆಗೊಳಿಸಲು ನಾನು ಈ ಸ್ಪಷ್ಟೀಕರಣವನ್ನು ನೀಡುತ್ತಿದ್ದೇನೆ.” ಎಂದು ರಾಜ್ಯಪಾಲ ರವಿ ಹೇಳಿದ್ದಾರೆ.