ಪಹಲ್ಗಾಮ್ ದಾಳಿ ಹಿಂದೆ ಮೂವರು ಪಾಕಿಸ್ತಾನಿ ಉಗ್ರರ ಕೈವಾಡ; ಎನ್​ಐಎ ತನಿಖೆಯಲ್ಲಿ ಬಹಿರಂಗ

ಪಹಲ್ಗಾಮ್‌ನ ಬೈಸರನ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕೇವಲ ಮೂವರು ಪಾಕಿಸ್ತಾನಿ ಭಯೋತ್ಪಾದಕರು ಭಾಗಿಯಾಗಿದ್ದಾರೆ ಎಂದು NIA ವರದಿ ಬಹಿರಂಗಪಡಿಸಿದೆ. ಈ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಎನ್​ಐಎ ವರದಿಯು ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನದ ನೇರ ಪಾತ್ರವನ್ನು ದೃಢಪಡಿಸಿದೆ. ಪ್ರವಾಸಿಗರಿಂದ ತುಂಬಿರುವ ಬೈಸರನ್ ಕಣಿವೆಯನ್ನು ಭಯೋತ್ಪಾದಕರು ಗುರಿಯಾಗಿಸಿಕೊಂಡಿದ್ದರು. ಕೇವಲ ಪುರುಷರನ್ನು ಮಾತ್ರ ಹತ್ಯೆ ಮಾಡಲಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತ್ತು.

ಪಹಲ್ಗಾಮ್ ದಾಳಿ ಹಿಂದೆ ಮೂವರು ಪಾಕಿಸ್ತಾನಿ ಉಗ್ರರ ಕೈವಾಡ; ಎನ್​ಐಎ ತನಿಖೆಯಲ್ಲಿ ಬಹಿರಂಗ
Pahalgam Attack

Updated on: Aug 28, 2025 | 9:38 PM

ನವದೆಹಲಿ, ಆಗಸ್ಟ್ 28: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ (Pahalgam Attack) ಕೇವಲ 3 ಭಯೋತ್ಪಾದಕರು ಭಾಗಿಯಾಗಿದ್ದಾರೆ. ಅವರೆಲ್ಲರೂ ಪಾಕಿಸ್ತಾನದ ಲಷ್ಕರ್ ಸಂಘಟನೆಗೆ ಸೇರಿದವರು ಎಂದು NIA ತನಿಖೆಯಿಂದ ತಿಳಿದುಬಂದಿದೆ. ಪಹಲ್ಗಾಮ್ ದಾಳಿಯಲ್ಲಿ ತಮ್ಮ ಕೈವಾಡವಿಲ್ಲ ಎಂದು ಪಾಕಿಸ್ತಾನ ಪದೇಪದೆ ಹೇಳಿಕೆ ನೀಡಿತ್ತು. ಆದರೆ, ಇದೀಗ ಪಾಕಿಸ್ತಾನದ ಕುತಂತ್ರ ಬುದ್ಧಿ ಮತ್ತೊಮ್ಮೆ ಬಯಲಾಗಿದೆ. ಆ ಉಗ್ರರಿಗೆ ಆಶ್ರಯ ನೀಡಿದವರಿಗೆ ಕೇವಲ 3000 ರೂ.ಗಳನ್ನು ನೀಡಲಾಗಿತ್ತು. ಈಗಾಗಲೇ ದಾಳಿಗೆ ಸಹಾಯ ಮಾಡಿದ ಇಬ್ಬರು ಸ್ಥಳೀಯ ಸಹಾಯಕರನ್ನು ಬಂಧಿಸಲಾಗಿದೆ. ಈ ಭಯೋತ್ಪಾದಕರಿಗೆ ಸ್ಥಳೀಯ ಮಟ್ಟದಲ್ಲಿಯೂ ಸಹಾಯ ಸಿಕ್ಕಿತು.

ಉಗ್ರರ ದಾಳಿ ನಡೆದ ಬೈಸರನ್ ಕಣಿವೆ ನಿರ್ಜನ ಸ್ಥಳವಾಗಿದ್ದು, ಅಲ್ಲಿ ಪ್ರವಾಸಿಗರ ಸಂಖ್ಯೆ ಅತಿ ಹೆಚ್ಚು ಇರುವುದರಿಂದ ಭಯೋತ್ಪಾದಕರು ಬೈಸರನ್ ಕಣಿವೆಯನ್ನು ಆರಿಸಿಕೊಂಡಿದ್ದರು. ಅಲ್ಲದೆ, ಅಲ್ಲಿಗೆ ಹೋಗುವುದು ಸುಲಭವಾಗಿರಲಿಲ್ಲ. ಹೀಗಾಗಿ, ದಾಳಿ ವೇಳೆ ಪ್ರವಾಸಿಗರು ತಪ್ಪಿಸಿಕೊಳ್ಳುವ ಸಾಧ್ಯತೆ ಬಹಳ ಕಡಿಮೆಯಿತ್ತು. ಇದೀಗ ಈ ದಾಳಿಯಲ್ಲಿ ಪಾಕಿಸ್ತಾನದ ನೇರ ಪಾತ್ರ ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ.

ಇದನ್ನೂ ಓದಿ: ನಿನ್ನೆಯೇ ಪಹಲ್ಗಾಮ್ ದಾಳಿಯ ಉಗ್ರರನ್ನು ಕೊಂದಿದ್ದೇಕೆ?; ಆಪರೇಷನ್ ಮಹಾದೇವ್ ಬಗ್ಗೆ ಅಖಿಲೇಶ್ ಯಾದವ್ ಪ್ರಶ್ನೆ

ದಾಳಿ ನಡೆದ ಸ್ಥಳದಿಂದ ವಶಪಡಿಸಿಕೊಂಡ ಕಾರ್ಟ್ರಿಡ್ಜ್‌ಗಳು ಎನ್‌ಕೌಂಟರ್ ನಂತರ ಭಯೋತ್ಪಾದಕರಿಂದ ವಶಪಡಿಸಿಕೊಂಡ ಕಾರ್ಟ್ರಿಡ್ಜ್‌ಗಳಂತೆಯೇ ಇದ್ದವು ಎಂದು ಎನ್‌ಐಎ ವರದಿ ಹೇಳಿದೆ. ಆಪರೇಷನ್ ಮಹಾದೇವ್‌ನಲ್ಲಿ ಮೂವರು ಉಗ್ರರು ಸಾವನ್ನಪ್ಪಿದ ನಂತರ ಎನ್​ಐಎಯ ಮೊದಲ ಅಧಿಕೃತ ಹೇಳಿಕೆ ಇದಾಗಿದೆ.

ಪಹಲ್ಗಾಮ್ ದಾಳಿಯಲ್ಲಿ ಬದುಕುಳಿದವರ ಹಿಂದಿನ ಹೇಳಿಕೆಗಳು 4ರಿಂದ 5 ದಾಳಿಕೋರರು ಇದ್ದರು ಎಂದು ಸೂಚಿಸಿದ್ದವು. ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಸ್ಥಳೀಯರೊಬ್ಬರು ಸೇರಿದಂತೆ ಹೆಚ್ಚಿನ ಜನರು ಭಾಗಿಯಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಈಗ ಎನ್ಐಎ ಕೇವಲ ಮೂವರು ಪಾಕಿಸ್ತಾನಿ ಭಯೋತ್ಪಾದಕರು ಮಾತ್ರ ದಾಳಿ ನಡೆಸಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಪಹಲ್ಗಾಮ್ ದಾಳಿಗೂ ಪಾಕ್​ಗೂ ಇರುವ ನಂಟು ಖಾತ್ರಿಯಾಯ್ತು, ಪಿಒಕೆಯಲ್ಲಿ ನಡೆದಿದೆ ದಾಳಿಕೋರನ ಅಂತ್ಯಕ್ರಿಯೆ

ಎನ್​ಐಎ ತನಿಖೆಯಲ್ಲಿ ಈ ಮೂವರು ಬೈಸರನ್ ಮೇಲೆ ದಾಳಿ ನಡೆಸಿದ್ದರು ಎಂಬುದು ಖಚಿತವಾಗಿದೆ. ಪಹಲ್ಗಾಮ್ ಜಮ್ಮು ಕಾಶ್ಮೀರದಿಂದ ದೂರದಲ್ಲಿರುವ ಜನಪ್ರಿಯ ಪ್ರವಾಸಿ ತಾಣವಾಗಿದೆ. ಭಯೋತ್ಪಾದಕರು ಅದನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲು ಬಯಸಿದ್ದರು. ಅಲ್ಲಿ ಬೇರೆ ಪ್ರವಾಸಿ ಸ್ಥಳಗಳಿಗೆ ಹೋಲಿಸಿದರೆ ಕಡಿಮೆ ಪೊಲೀಸ್ ಬಂದೋಬಸ್ತ್ ಇತ್ತು, ಹೋಗುವ ದಾರಿ ದುರ್ಗಮವಾಗಿತ್ತು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ತಿಳಿದುಬಂದಿದೆ. ಆಹಾರ ಮತ್ತು ವಸತಿಗಾಗಿ ಇಬ್ಬರು ಸ್ಥಳೀಯರಿಗೆ ಆ ಉಗ್ರರು 3,000 ರೂ.ಗಳನ್ನು ಸಹ ಪಾವತಿಸಿದ್ದಾರೆ. ಅವರಿಬ್ಬರನ್ನು ಬಂಧಿಸಲಾಗಿದೆ.

ಆಪರೇಷನ್ ಮಹಾದೇವ್ ಸಮಯದಲ್ಲಿ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಗೃಹ ಸಚಿವರು ಈಗಾಗಲೇ ಸಂಸತ್ತಿಗೆ ತಿಳಿಸಿದ್ದಾರೆ. ಈ NIA ತನಿಖೆಯು ಪಹಲ್ಗಾಮ್ ದಾಳಿಗೆ ಅದೇ ಉಗ್ರರು ಕಾರಣ ಎಂದು ದೃಢಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ