ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಕೊರತೆ ಇಲ್ಲ: ಸಚಿವ ಪ್ರಲ್ಹಾದ್ ಜೋಶಿ ಭರವಸೆ
ಛತ್ತೀಸಗಡದ ದೀಪ್ಕಾ ಕಲ್ಲಿದ್ದಲು ಗಣಿಗೆ ಬುಧವಾರ ಭೇಟಿ ನೀಡಿದ ಪ್ರಲ್ಹಾದ ಜೋಶಿ ಅಧಿಕಾರಿಗಳೊಂದಿಗೆ ಮಾತನಾಡಿದರು.
ದೆಹಲಿ: ದೇಶದಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಕೊರತೆ ಇಲ್ಲ ಎಂದು ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಪ್ರಸ್ತುತ ದೇಶದಲ್ಲಿ 20 ಟನ್ ಕಲ್ಲಿದ್ದಲಿಗೆ ಬೇಡಿಕೆಯಿದೆ. ಇಂಧನ ಇಲಾಖೆಯ ಬೇಡಿಕೆಯಂತೆ ಪೂರ್ಣ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆ ಮಾಡಲಾಗುತ್ತಿದೆ. ಈ ಮೊದಲು 19 ಲಕ್ಷ ಟನ್ ಕಲ್ಲಿದ್ದಲಿಗೆ ಬೇಡಿಕೆ ಇತ್ತು. ಈಗ 1 ಲಕ್ಷ ಟನ್ ಹೆಚ್ಚುವರಿ ಬೇಡಿಕೆ ಬಂದಿದೆ. ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಕೊರತೆಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಛತ್ತೀಸಗಡದ ದೀಪ್ಕಾ ಕಲ್ಲಿದ್ದಲು ಗಣಿಗೆ ಬುಧವಾರ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಮಾತನಾಡಿದರು. ಕಲ್ಲಿದ್ದಲು ಉತ್ಪಾದನೆಯ ಪ್ರಮಾಣ ಹೆಚ್ಚಿಸಬೇಕು ಎಂದು ತಾಕೀತು ಮಾಡಿದರು. ಈ ಕುರಿತು ಟ್ವಿಟರ್ನಲ್ಲಿ ಮಾಹಿತಿ ನೀಡಿರುವ ಸಚಿವರು, ‘ಭಾರತದ ಅತಿದೊಡ್ಡ ಕಲ್ಲಿದ್ದಲು ಗಣಿಯಾದ ದಿಪ್ಕಾಗೆ ಭೇಟಿ ನೀಡಿ ಪರಿಶೀಲಿಸಿದೆ. ಛತ್ತೀಸಗಡದ ಕೊಬ್ರಾ ಜಿಲ್ಲೆಯಲ್ಲಿರುವ ಈ ಗಣಿಯು ವರ್ಷಕ್ಕೆ 35 ದಶಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆಯ ಸಾಮರ್ಥ್ಯ ಹೊಂದಿದೆ’ ಎಂದು ಹೇಳಿದ್ದಾರೆ. ರಾಂಚಿ ಸುತ್ತಮುತ್ತ ಇರುವ ಹಲವು ಗಣಿಗಳಿಗೂ ಜೋಶಿ ಗುರುವಾರ ಭೇಟಿ ನೀಡುವ ಸಾಧ್ಯತೆಯಿದೆ.
ಕೇರಳ, ಪಂಜಾಬ್, ಕರ್ನಾಟಕ ಮತ್ತು ದೆಹಲಿ ಸೇರಿದಂತೆ ಹಲವು ರಾಜ್ಯಗಳಿಂದ ಕಲ್ಲಿದ್ದಲು ಕೊರತೆಯ ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ ಕಲ್ಲಿದ್ದಲು ಸಚಿವರು ಸ್ವತಃ ಗಣಿಗಳಿಗೆ ಭೇಟಿ ನೀಡಿ ಉತ್ಪಾದನೆಯ ವೇಗ ಪರಿಶೀಲಿಸುತ್ತಿದ್ದಾರೆ.
ಈ ಮೊದಲು ಕೇಂದ್ರ ಸರ್ಕಾರವು ಈ ಆತಂಕಗಳನ್ನು ತಳ್ಳಿಹಾಕಿತ್ತು. ದೇಶದಲ್ಲಿ ಅಗತ್ಯಪ್ರಮಾಣದ ಕಲ್ಲಿದ್ದಲು ದಾಸ್ತಾನು ಇದ್ದು, ಎಲ್ಲ ಉತ್ಪಾದನಾ ಘಟಕಗಳಿಗೆ ಅಗತ್ಯ ಪ್ರಮಾಣದ ಕಲ್ಲಿದ್ದಲು ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿತ್ತು. ಕಲ್ಲಿದ್ದಲು ಸಚಿವರ ಗಣಿ ಭೇಟಿಯ ಬಗ್ಗೆ ಛತ್ತೀಸಗಡದ ಮುಖ್ಯಮಂತ್ರಿ ಭೂಪೇಶ್ ಬಾಘೆಲ್ ವ್ಯಂಗ್ಯವಾಡಿದ್ದಾರೆ.
‘ಕೇಂದ್ರ ಸರ್ಕಾರವು ದೇಶದಲ್ಲಿ ಕಲ್ಲಿದ್ದಲು ಕೊರತೆಯಿಲ್ಲ ಎಂದು ಹೇಳುತ್ತಿದೆ. ಆದರೆ ಕೇಂದ್ರ ಗಣಿ ಸಚಿವರು ಕಲ್ಲಿದ್ದಲು ಪರಿಸ್ಥಿತಿ ಪರಿಶೀಲಿಸಲು ಬಿಲಾಸಪುರಕ್ಕೆ ಬಂದಿದ್ದಾರೆ’ ಎಂದು ಹೇಳಿದ್ದಾರೆ. ‘ಕೊವಿಡ್-19ರ ಪಿಡುಗು ವ್ಯಾಪಿಸಿದ್ದಾಗ ಕೇಂದ್ರ ಸರ್ಕಾರವು ಆಮ್ಲಜನಕದ ಕೊರತೆಯಿಲ್ಲ ಎಂದು ಹೇಳಿತ್ತು. ಈಗ ಕಲ್ಲಿದ್ದಲು ವಿಚಾರದಲ್ಲಿಯೂ ಹೀಗೆಯೇ ಹೇಳುತ್ತಿದೆ’ ಎಂದು ನೆನಪಿಸಿಕೊಂಡಿದ್ದಾರೆ.
ನಿನ್ನೆ ಕೋಲ್ ಇಂಡಿಯಾ ಸೇರಿದಂತೆ ಇತರೆ ಎಲ್ಲಾ ಮೂಲಗಳಿಂದ ಉಷ್ಣ ವಿದ್ಯುತ್ ಸ್ಥಾವರಗಳಿಗೆ 2 ಮಿಲಿಯನ್ ಟನ್ ಕಲ್ಲಿದ್ದಲು ಸರಬರಾಜು ಮಾಡಲಾಗಿದೆ.
ವಿದ್ಯುತ್ ಸ್ಥಾವರಗಳಲ್ಲಿ ಸಾಕಷ್ಟು ಕಲ್ಲಿದ್ದಲು ಸಂಗ್ರಹವನ್ನು ಮಾಡಿಕೊಳ್ಳಲು ನಾವು ವಿದ್ಯುತ್ ಸ್ಥಾವರಗಳಿಗೆ ಹೆಚ್ಚಿನ ಕಲ್ಲಿದ್ದಲನ್ನು ರವಾನೆ ಮಾಡುತ್ತಿದ್ದೇವೆ.
— Pralhad Joshi (@JoshiPralhad) October 13, 2021
No Coal Shortage in India says Union Minister Pralhad Joshi
ಇದನ್ನೂ ಓದಿ: Coal Mines: 40 ಹೊಸ ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆ ಆರಂಭಿಸಿದ ಕೇಂದ್ರ ಸರ್ಕಾರ
ಇದನ್ನೂ ಓದಿ: Coal Crisis: ರಾಯಚೂರು, ಬಳ್ಳಾರಿಗೆ ಕಲ್ಲಿದ್ದಲು ಪೂರೈಕೆ; ವಿದ್ಯುತ್ ವ್ಯತ್ಯಯ ಆತಂಕ ಕೊಂಚ ದೂರ