
ನವದೆಹಲಿ, ಅಕ್ಟೋಬರ್ 20: ತಜಿಕಿಸ್ತಾನ್‌ನ ದುಶಾನ್ಬೆಯಲ್ಲಿ ನಡೆದ ಎಸ್‌ಸಿಒ ಸಭೆಯಲ್ಲಿ ಪಾಲ್ಗೊಂಡಿರುವ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನದ ಉಪ ಪ್ರಧಾನಿಯ ಎದುರೇ ಭಯೋತ್ಪಾದನೆ ವಿರುದ್ಧ ಕಠಿಣ ನಿಲುವು ವ್ಯಕ್ತಪಡಿಸಿದ್ದಾರೆ. ಶಾಂತಿ ಮತ್ತು ಅಭಿವೃದ್ಧಿಗೆ ಭಯೋತ್ಪಾದನೆಯು ಅತ್ಯಂತ ಗಂಭೀರ ಬೆದರಿಕೆಯಾಗಿ ಉಳಿದಿದೆ ಎಂದಿರುವ ಅವರು, ಇದು ಅಮಾಯಕರ ಪ್ರಾಣ ಕಳೆಯುವುದು ಮಾತ್ರವಲ್ಲದೆ ಹೂಡಿಕೆ ಹಾಗೂ ವಾಣಿಜ್ಯ ಕ್ಷೇತ್ರಕ್ಕೆ ಭಾರಿ ಅಡಚಣೆಯನ್ನುಂಟುಮಾಡುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಭಯೋತ್ಪಾದನೆಗೆ ಯಾವುದೇ ರೀತಿಯ ಸಮರ್ಥನೆ ಇಲ್ಲ:
“ಭಯೋತ್ಪಾದನೆಗೆ ಯಾವುದೇ ರೀತಿಯ ಸಮರ್ಥನೆ ಇರಲು ಸಾಧ್ಯವಿಲ್ಲ. ಭಯೋತ್ಪಾದಕರಿಗೆ ಧನಸಹಾಯ ನೀಡುವ, ಬೆಂಬಲಿಸುವ ಅಥವಾ ಸುರಕ್ಷಿತ ಆಶ್ರಯ ನೀಡುವವರಿಗೆ ಜಾಗತಿಕ ಮಟ್ಟದಲ್ಲಿ ಯಾವುದೇ ಸ್ಥಾನವಿರಬಾರದು. ಇಡೀ ಭಯೋತ್ಪಾದಕ ವ್ಯವಸ್ಥೆ ಮತ್ತು ಜಾಲವನ್ನು ಜಾಗತಿಕವಾಗಿ ಒಗ್ಗಟ್ಟಿನಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು” ಎಂದು ರಾಜನಾಥ್ ಸಿಂಗ್ ಆಗ್ರಹಿಸಿದರು. ಎಂದು ರಾಜನಾಥ್ ಸಿಂಗ್ ಪ್ರತಿಪಾದಿಸಿದರು. ಪಾಕಿಸ್ತಾನದ ಉಪಪ್ರಧಾನಿ ಇಶಾಕ್ ದಾರ್ ಅವರ ಸಮ್ಮುಖದಲ್ಲೇ ರಾಜನಾಥ್ ಸಿಂಗ್ ಈ ಖಡಕ್ ಮಾತುಗಳನ್ನಾಡಿರುವುದು ವಿಶೇಷ.
ಇದನ್ನೂ ಓದಿ: ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ: ಪಹಲ್ಗಾಮ್ ದಾಳಿ ಪ್ರಸ್ತಾಪಿಸಿ ಜಾಗತಿಕ ವೇದಿಕೆಯಲ್ಲಿ ಪಾಕ್ ವಿರುದ್ಧ ಭಾರತ ನೇರ ವಾಗ್ದಾಳಿ
“ಆಪರೇಷನ್ ಸಿಂಧೂರ್, ಬಾಲಾಕೋಟ್ ವೈಮಾನಿಕ ದಾಳಿ ಮತ್ತು ಸರ್ಜಿಕಲ್ ಸ್ಟ್ರೈಕ್‌ಗಳು ಕೇವಲ ಸೇನಾ ಕಾರ್ಯಾಚರಣೆಗಳಾಗಿರಲಿಲ್ಲ. ಅವು ಕೇವಲ ರಾಜತಾಂತ್ರಿಕ ಖಂಡನೆಗೆ ಸೀಮಿತವಾಗದೆ, ಭಯೋತ್ಪಾದನೆಯ ಮೂಲಕ್ಕೇ ತಲುಪಿ ಅದನ್ನು ನಿರ್ಮೂಲನೆ ಮಾಡುವ ಭಾರತದ ದೃಢ ನಿರ್ಧಾರದ ಸಂಕೇತಗಳಾಗಿವೆ” ಎಂದು ರಾಜನಾಥ್ ಸಿಂಗ್ ಸ್ಮರಿಸಿದರು. ಭಾರತವು ಶಾಂತಿಯನ್ನು ಬಯಸುತ್ತದೆ. ಆದರೆ ದೇಶದ ಭದ್ರತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಲು ಯುದ್ಧಕ್ಕೆ ಸದಾ ಸಿದ್ಧವಾಗಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಮಾರಕ:
ಭಯೋತ್ಪಾದನೆಯು ಕೇವಲ ಅಮಾಯಕರ ಪ್ರಾಣ ಕಳೆಯುವುದು ಮಾತ್ರವಲ್ಲದೆ, ಜಾಗತಿಕ ವ್ಯಾಪಾರ, ಹೂಡಿಕೆ ಮತ್ತು ಆರ್ಥಿಕ ಅಭಿವೃದ್ಧಿಗೆ ಭಾರಿ ಅಡಚಣೆಯನ್ನುಂಟುಮಾಡುತ್ತದೆ. ಇದು ಸಮಾಜವನ್ನು ತೀವ್ರಗಾಮಿತ್ವಕ್ಕೆ ತಳ್ಳಿ ಯುವಜನರ ಭವಿಷ್ಯದ ಅವಕಾಶಗಳನ್ನು ಕಸಿದುಕೊಳ್ಳುತ್ತದೆ ಎಂದು ಸಚಿವ ರಾಜನಾಥ್ ಸಿಂಗ್ ಎಚ್ಚರಿಸಿದರು.
ಪಾಕಿಸ್ತಾನದ ಉಪಪ್ರಧಾನಿ ಇಶಾಕ್ ದಾರ್ ಅವರು ಎದುರಿನ ಆಸನದಲ್ಲೇ ಕುಳಿತಿದ್ದಾಗ ರಾಜನಾಥ್ ಸಿಂಗ್ ಈ ಮಾತುಗಳನ್ನಾಡಿದರು. ಅಷ್ಟೇ ಅಲ್ಲದೆ, ಪಾಕಿಸ್ತಾನದ ಮಣ್ಣಿನಿಂದ ಭಾರತದ ವಿರುದ್ಧ ಯಾವುದೇ ಉಗ್ರರ ದಾಳಿ ನಡೆದರೆ ಅದಕ್ಕೆ ಭಾರತದಿಂದ ಮತ್ತಷ್ಟು ಕಠಿಣ ಪ್ರತ್ಯುತ್ತರ ಸಿಗಲಿದೆ ಎಂದು ಇತ್ತೀಚೆಗೆ ನೀಡಿದ್ದ ಎಚ್ಚರಿಕೆಯನ್ನು ರಾಜನಾಥ್ ಸಿಂಗ್ ಅವರ ಈ ಮಾತುಗಳು ಪುಷ್ಟೀಕರಿಸಿದವು.
ದುಶಾನ್ಬೆಯಲ್ಲಿ ನಡೆದ ಎಸ್‌ಸಿಒ ಸಭೆಯ ಜೊತೆಗೆ, ರಾಜನಾಥ್ ಸಿಂಗ್ ಅವರು ತಜಿಕಿಸ್ತಾನ್ ಪ್ರಧಾನಿ ಕೋಹಿರ್ ರಸುಲ್ಜೋಡಾ ಹಾಗೂ ಇರಾನ್‌ನ ಮೊದಲ ಉಪರಾಷ್ಟ್ರಪತಿ ಮೊಹಮ್ಮದ್ ರೆಜಾ ಆರೀಫ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ತಜಿಕಿಸ್ತಾನ್ ಪ್ರಧಾನಿ ಭೇಟಿಯ ಬಗ್ಗೆ ಮಾಹಿತಿ ಹಂಚಿಕೊಂಡ ಅವರು, ಭಾರತ ಮತ್ತು ತಜಿಕಿಸ್ತಾನ್ ನಡುವಿನ ಸುದೀರ್ಘ ನಾಗರಿಕ ಹಾಗೂ ಸಾಂಸ್ಕೃತಿಕ ಬಾಂಧವ್ಯವನ್ನು ಸ್ಮರಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ