ದೆಹಲಿ: ಭಾರತವನ್ನು ಎರಡನೇ ಅಲೆ ರೂಪದಲ್ಲಿ ಕಾಡಿರುವ ರೂಪಾಂತರಿ ಕೊರೊನಾ ವೈರಾಣು ಊಹೆಗೂ ಮೀರಿ ತೊಂದರೆ ಉಂಟುಮಾಡಿದೆ. ಸದ್ಯ ಎರಡನೇ ಅಲೆಯ ಪ್ರಭಾವ ಗಣನೀಯವಾಗಿ ತಗ್ಗುತ್ತಿದೆಯಾದರೂ ಸಂಭವನೀಯ ಮೂರನೇ ಅಲೆ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಉಲ್ಬಣಿಸಬಹುದು ಎಂಬ ಬಗ್ಗೆ ಒಂದಷ್ಟು ಮಾತುಕತೆಗಳು ಆರಂಭವಾಗಿರುವುದರಿಂದ ಜನರಲ್ಲಿ ಅದರ ಕುರಿತು ದಿಗಿಲು ಮೂಡಿದೆ. ಈಗಾಗಲೇ ಎರಡನೇ ಅಲೆಗೆ ಕಾರಣವಾದ ಡೆಲ್ಟಾ ವೈರಾಣುವಿನ ನಂತರದ ಹಂತ ಎಂದೆನ್ನಲಾದ ಡೆಲ್ಟಾ ಪ್ಲಸ್ ವೈರಾಣು ದೇಶದ ಕೆಲ ಭಾಗಗಳಲ್ಲಿ ಕಾಣಿಸಿಕೊಂಡಿದ್ದು, ಅದು ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂಬ ಅಭಿಪ್ರಾಯಗಳೂ ಇರುವುದರಿಂದ ಸಹಜವಾಗಿಯೇ ಅದನ್ನು ಹೇಗೆ ನಿಯಂತ್ರಿಸುವುದು ಎಂಬ ಚಿಂತೆಯೂ ಶುರುವಾಗಿದೆ. ಆದರೆ, ಈ ಹಂತದಲ್ಲಿ ಅತ್ಯಂತ ಪ್ರಮುಖವೆನಿಸುವ ಸಲಹೆಯೊಂದನ್ನು ನೀಡಿರುವ ಇನ್ಸ್ಟಿಟ್ಯೂಟ್ ಆಫ್ ಜಿನೋಮಿಕ್ಸ್ ಅಂಡ್ ಇಂಟಿಗ್ರೇಟಿವ್ ಬಯಲಾಜಿ (ಐಜಿಐಬಿ) ಸಂಸ್ಥೆಯ ನಿರ್ದೇಶಕ ಡಾ.ಅನುರಾಗ್ ಅಗರ್ವಾಲ್, ಡೆಲ್ಟಾಪ್ಲಸ್ ಮಾದರಿ ಮೂರನೇ ಅಲೆಗೆ ಕಾರಣವಾಗುತ್ತದೆ ಎನ್ನುವುದಕ್ಕೆ ಪುರಾವೆಗಳಿಲ್ಲ. ಹೀಗಾಗಿ ಮೂರನೇ ಅಲೆ ಎಷ್ಟು ಗಂಭೀರ ಎಂದು ಯೋಚಿಸುವುದು ಒತ್ತಟ್ಟಿಗಿರಲಿ. ಇನ್ನೂ ಎರಡನೇ ಅಲೆ ಸಂಪೂರ್ಣ ಮುಗಿದಿಲ್ಲ ಎನ್ನುವುದನ್ನು ಮರೆಯುತ್ತಿರುವುದು ಅದಕ್ಕಿಂತಲೂ ಅಪಾಯಕಾರಿ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಎಚ್ಚರಿಸಿದ್ದಾರೆ.
ಡೆಲ್ಟಾ ಪ್ಲಸ್ ಬಗ್ಗೆ ಮಾತನಾಡಿರುವ ಡಾ.ಅನುರಾಗ್ ಅಗರ್ವಾಲ್, ಈ ಹಂತದಲ್ಲಿ ಡೆಲ್ಟಾ ಪ್ಲಸ್ ಮಾದರಿಯ ರೂಪಾಂತರಿ ಕೊರೊನಾ ವೈರಾಣು ಮೂರನೇ ಅಲೆಗೆ ಕಾರಣವಾಗಬಹುದು ಎಂದು ಅಂದಾಜಿಸಲು ಆಗುವುದಿಲ್ಲ. ಐಜಿಐಬಿ ಸಂಸ್ಥೆ ಏಪ್ರಿಲ್ ಹಾಗೂ ಮೇ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯದಿಂದ ಸಂಗ್ರಹಿಸಿದ ಸುಮಾರು 3,500 ಮಾದರಿಗಳನ್ನು ಪ್ರಸಕ್ತ ಜೂನ್ ತಿಂಗಳಲ್ಲಿ ಪರೀಕ್ಷಿಸಿದೆ. ಅದರಲ್ಲಿ ಡೆಲ್ಟಾ ಪ್ಲಸ್ ಮಾದರಿಗಳು ಅನೇಕ ಲಭ್ಯವಾಗಿವೆ. ಆದರೆ, ಒಟ್ಟಾರೆಯಾಗಿ ಅದರ ಪ್ರಮಾಣ ಶೇ.1ಕ್ಕಿಂತ ಕಡಿಮೆ ಎನ್ನುವುದು ಕೂಡಾ ಗಮನಾರ್ಹ. ಡೆಲ್ಟಾ ಪ್ಲಸ್ ಮಾದರಿ ಅಧಿಕವಾಗಿ ಸಿಕ್ಕಿರುವ ಪ್ರದೇಶಗಳಲ್ಲೂ ಅದು ನಂತರದಲ್ಲಿ ಅತಿ ಹೆಚ್ಚು ಎನ್ನುವ ಮಟ್ಟಕ್ಕೆ ಹೋಗಿಲ್ಲ. ಬದಲಾಗಿ ನಿರ್ದಿಷ್ಟ ಪ್ರಮಾಣದಲ್ಲಿಯೇ ಉಳಿದಿದೆ ಎಂದಿದ್ದಾರೆ.
ಡೆಲ್ಟಾ ಪ್ಲಸ್ ಮಾದರಿಯ 40ಕ್ಕೂ ಹೆಚ್ಚು ಪ್ರಕರಣಗಳ ಆಧಾರದ ಮೇಲೆ ಅದನ್ನು ಚಿಂತನೀಯ ಮಾದರಿ ಎಂದು ಗುರುತಿಸಲಾಗಿದೆ. ಅಲ್ಲದೇ, ಮಹಾರಾಷ್ಟ್ರ, ಕೇರಳ ಹಾಗೂ ಮಧ್ಯ ಪ್ರದೇಶ ರಾಜ್ಯಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿರುವ ಆರೋಗ್ಯ ಸಚಿವಾಲಯ ತುರ್ತು ಕ್ರಮ ಕೈಗೊಳ್ಳುವಂತೆಯೂ ಹೇಳಿದೆ. ಆದರೆ, ಈ ಬಗ್ಗೆ ಇನ್ನೊಂದು ಆಯಾಮವನ್ನು ತೆರೆದಿಟ್ಟಿರುವ ಡಾ.ಅನುರಾಗ್ ಅಗರ್ವಾಲ್, ಈಗಲೇ ಡೆಲ್ಟಾ ಪ್ಲಸ್ ಬಗ್ಗೆ ಅಷ್ಟು ತಲೆ ಕೆಡಿಸಿಕೊಳ್ಳುವ ಧಾವಂತದಲ್ಲಿ ಡೆಲ್ಟಾ ವೈರಾಣು ಇನ್ನೂ ಚಿಂತನೀಯ ಮಾದರಿಯಾಗಿಯೇ ಉಳಿದಿದೆ ಎನ್ನುವುದನ್ನು ಮರೆಯಬಾರದು ಎಂದು ಸೂಚ್ಯವಾಗಿ ತಿಳಿಸಿದ್ದಾರೆ.
ಅಂದರೆ, ನಾವೀಗ ಎರಡನೇ ಅಲೆ ಮುಗಿದಿಲ್ಲ ಎನ್ನುವುದರ ಬಗ್ಗೆಯೇ ಹೆಚ್ಚು ಯೋಚನೆ ಮಾಡಬೇಕಿದೆಯೇ ಹೊರತು ಮೂರನೇ ಅಲೆ ಹೇಗೆ ಬರಬಹುದು ಎನ್ನುವುದರ ಬಗ್ಗೆಯಲ್ಲ. ಸದ್ಯಕ್ಕೆ ಜನ ಮೂರನೇ ಅಲೆ ಕುರಿತು ಈ ಮಟ್ಟದಲ್ಲಿ ಭೀತರಾಗುವುದಕ್ಕೆ ಯಾವ ಕಾರಣಗಳಿವೆ ಎನ್ನುವುದು ಅರ್ಥವಾಗುತ್ತಿಲ್ಲ. ಡೆಲ್ಟಾ ಮಾದರಿಗಿಂತಲೂ ಡೆಲ್ಟಾ ಪ್ಲಸ್ ಭೀಕರ ಎನ್ನುವುದಕ್ಕೆ ನಿರ್ದಿಷ್ಟ ದಾಖಲೆಗಳೂ ಇಲ್ಲ. ಆದ್ದರಿಂದ ಈಗ ಅಸ್ತಿತ್ವದಲ್ಲಿರುವ ಮಾದರಿ ಬಗ್ಗೆ ಮೊದಲು ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:
ಕೊರೋನಾವೈರಸ್ನ ಹೊಸ ಡೆಲ್ಟಾ ಪ್ಲಸ್ ರೂಪಾಂತರಿ ಮೂರನೇ ಅಲೆಗೆ ನಾಂದಿ ಹಾಡಬಹುದು ಎನ್ನುತ್ತಾರೆ ತಜ್ಞರು
Delta Plus ದೂರವಾದ ಆತಂಕ, ಮಹಾರಾಷ್ಟ್ರದಲ್ಲಿ ಈಗಾಗಲೇ ಡೆಲ್ಟಾ ಪ್ಲಸ್ ಕೊರೊನಾದಿಂದ ಬಹುತೇಕರು ಗುಣಮುಖ!!