‘ನ್ಯಾಯಾಂಗ ವ್ಯವಸ್ಥೆ ಆಧುನೀಕರಣದ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ’- ಸಿಜೆಐ ಎನ್​.ವಿ.ರಮಣ ಬೇಸರ

CJI N.V.Ramana: ಕೋರ್ಟ್​ಗಳ ಶಿಥಿಲ ವ್ಯವಸ್ಥೆ, ಅಸಮರ್ಪಕ ಮೂಲ ಸೌಕರ್ಯಗಳ ಬಗ್ಗೆ ಸಿಜೆಐ ಎನ್​. ವಿ.ರಮಣ ಮಾತನಾಡುತ್ತಿರುವುದು ಇದೇ ಮೊದಲಲ್ಲ. ಅವರು ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಏರುವುದಕ್ಕೂ ಮುನ್ನ ಕೂಡ ಈ ವಿಚಾರವನ್ನು ಎತ್ತಿದ್ದರು.

‘ನ್ಯಾಯಾಂಗ ವ್ಯವಸ್ಥೆ ಆಧುನೀಕರಣದ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ’- ಸಿಜೆಐ ಎನ್​.ವಿ.ರಮಣ ಬೇಸರ
ಸಿಜೆಐ ಎನ್​.ವಿ.ರಮಣ

ನಮ್ಮ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಇನ್ನೂ ಶಿಥಿಲಗೊಂಡ ರಚನೆಯೊಳಗೇ ಕೆಲಸ ಮಾಡುತ್ತಿದೆ ಎಂದು ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ (CJI NV Ramana) ವಿಷಾದ ವ್ಯಕ್ತಪಡಿಸಿದ್ದಾರೆ. ಹಾಗೇ, ನಮ್ಮ ನ್ಯಾಯಾಂಗ ಮೂಲಸೌಕರ್ಯಗಳನ್ನು ಆಧುನೀಕರಣಗೊಳಿಸುವ ಅಗತ್ಯತೆ ಇದೆ ಎಂಬುದನ್ನೂ ಒತ್ತಿ ಹೇಳಿದರು.   ಅಲಹಾಬಾದ್​ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಮತ್ತು ಹೈಕೋರ್ಟ್​ ಹೊಸ ಸಂಕೀರ್ಣಕ್ಕೆ ಇಂದು ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಅಡಿಗಲ್ಲು ಸ್ಥಾಪಿಸಿದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿಜೆಐ ರಮಣ, ನ್ಯಾಯಾಂಗ ವ್ಯವಸ್ಥೆ ಸುಧಾರಿಸಬೇಕೆಂಬ ಆಶಯ ವ್ಯಕ್ತಪಡಿಸಿದರು.  

ನ್ಯಾಯಾಂಗ ವ್ಯವಸ್ಥೆಯಲ್ಲಿ ಮೂಲಸೌಕರ್ಯ ಹೆಚ್ಚಿಸಿ, ಬಲಪಡಿಸುವುದರಿಂದ ಏನೆಲ್ಲ ಉಪಯೋಗಗಳಿವೆ ಎಂಬುದನ್ನು ಉತ್ಪ್ರೇಕ್ಷೆ ಮಾಡಿ ಹೇಳಲು ಸಾಧ್ಯವಿಲ್ಲ. ಆದರೆ ಈಗೀಗ ಹೆಚ್ಚುತ್ತಿರುವ ಪ್ರಕರಣಗಳು, ದಾವೆಗಳು ಮತ್ತು ದಾವೆದಾರರ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸಲು ನ್ಯಾಯಾಂಗ ಅಡಿಗಟ್ಟು ಆಧುನಿಕೀರಣಗೊಳ್ಳುವ ಅನಿವಾರ್ಯತೆ ಇದೆ ಎಂದು ಎನ್. ವಿ.ರಮಣ ಹೇಳಿದ್ದಾರೆ. ಹಾಗೇ,  ಭಾರತದಲ್ಲಿನ ನ್ಯಾಯಾಲಯಗಳ ರಚನೆಗಳು ಶಿಥಿಲಗೊಂಡಿವೆ. ಇಲ್ಲಿ ಯಾವುದೇ ಹೊಸ, ಆಧುನಿಕ ವ್ಯವಸ್ಥೆಗಳೂ ಇಲ್ಲ.  ಇಂಥ ವ್ಯವಸ್ಥೆಯಲ್ಲಿ ಕೆಲಸ ಮಾಡಲು ವಕೀಲರಿಗೆ, ನ್ಯಾಯಾಲಯ ಸಿಬ್ಬಂದಿಗೆ, ನ್ಯಾಯಾಧೀಶರಿಗೆ ತೀವ್ರ ಅಹಿತ ಎನ್ನಿಸುತ್ತಿದೆ. ದಾವೆದಾರರಿಗೂ ಕಷ್ಟವೇ ಆಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೋರ್ಟ್​ಗಳ ಶಿಥಿಲ ವ್ಯವಸ್ಥೆ, ಅಸಮರ್ಪಕ ಮೂಲ ಸೌಕರ್ಯಗಳ ಬಗ್ಗೆ ಸಿಜೆಐ ಎನ್​.ವಿ.ರಮಣ ಮಾತನಾಡುತ್ತಿರುವುದು ಇದೇ ಮೊದಲಲ್ಲ. ಅವರು ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಏರುವುದಕ್ಕೂ ಮುನ್ನ ಕೂಡ ಈ ವಿಚಾರವನ್ನು ಎತ್ತಿದ್ದರು. ನಂತರ ಸಿಜೆಐ ಆಗಿ ನೇಮಕಗೊಂಡ ಬಳಿಕ ಜೂ 1 ಮತ್ತು 2ರಂದು ಹೈಕೋರ್ಟ್​ಗಳ ಮುಖ್ಯ ನ್ಯಾಯಾಧೀಶರೊಟ್ಟಿಗೆ ನಡೆದ ಚರ್ಚೆಯಲ್ಲೂ ಧ್ವನಿ ಎತ್ತಿದ್ದರು. ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದರು.

ಅಂದು ಮಾತನಾಡಿದ್ದ ಎನ್​.ವಿ.ರಮಣ, ಭಾರತದಲ್ಲಿ ಸ್ವಾತಂತ್ರ್ಯ ಬಂದ ನಂತರ ಉಳಿದ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾದಷ್ಟು ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಗತಿಯಾಗಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನಗಳು ನಮ್ಮ ಜೀವನದ ಎಲ್ಲ ವಿಭಾಗಗಳಲ್ಲೂ ಪರಿಣಾಮ ಬೀರಿದ್ದರೂ, ನ್ಯಾಯಾಂಗ ವ್ಯವಸ್ಥೆಗೆ ಅದನ್ನು ಸಂಯೋಜಿಸುವುದರಲ್ಲಿ ಹಿಂದೆ ಉಳಿದಿದ್ದೇವೆ. ಆದರೆ ಮುಖ್ಯವಾಗಿ ಆ ಕೆಲಸ ಮೊದಲಾಗಬೇಕು ಎಂದಿದ್ದರು.

ಇದನ್ನೂ ಓದಿ: ಮಂಜು-ದಿವ್ಯಾ ಜೋಡಿಗೆ ಪ್ರೀತಿಯಿಂದ ಹೊಸ ಹೆಸರಿಟ್ಟ ಅಭಿಮಾನಿಗಳು

ಇಂದಿರಾ ಗಾಂಧಿ ಅವರನ್ನು ಅನರ್ಹಗೊಳಿಸಿದ ತೀರ್ಪು ಮಹಾ ಧೈರ್ಯದ್ದಾಗಿತ್ತು: ಸಿಜೆಐ ಎನ್ ವಿ ರಮಣ

Click on your DTH Provider to Add TV9 Kannada