ಮೋದಿ-ಟ್ರಂಪ್ ಮಧ್ಯೆ ಯಾವ ಫೋನ್ ಕರೆಯೂ ಇರಲಿಲ್ಲ; ಕದನ ವಿರಾಮದಲ್ಲಿ ಅಮೆರಿಕದ ಮಧ್ಯಸ್ಥಿಕೆ ನಿರಾಕರಿಸಿದ ಜೈಶಂಕರ್

ಭಯೋತ್ಪಾದನೆಯ ಬಗ್ಗೆ ಭಾರತ ಶೂನ್ಯ ಸಹಿಷ್ಣುತೆಯ ನೀತಿಯನ್ನು ಕಾಯ್ದುಕೊಂಡಿದೆ. ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ನೀಡುವ ಮತ್ತು ಉತ್ತೇಜಿಸುವಲ್ಲಿ ಪಾಕಿಸ್ತಾನದ ಪಾತ್ರವನ್ನು ಜಾಗತಿಕ ಸಮುದಾಯ ಅರ್ಥಮಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಭಾರತ ಬಲವಾದ ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಒತ್ತಿ ಹೇಳಿದ್ದಾರೆ.

ಮೋದಿ-ಟ್ರಂಪ್ ಮಧ್ಯೆ ಯಾವ ಫೋನ್ ಕರೆಯೂ ಇರಲಿಲ್ಲ; ಕದನ ವಿರಾಮದಲ್ಲಿ ಅಮೆರಿಕದ ಮಧ್ಯಸ್ಥಿಕೆ ನಿರಾಕರಿಸಿದ ಜೈಶಂಕರ್
S Jaishankar In Session

Updated on: Jul 28, 2025 | 9:03 PM

ನವದೆಹಲಿ, ಜುಲೈ 28: ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆ ಬಳಿಕ ನಡೆದ ಭಾರತ-ಪಾಕಿಸ್ತಾನದ ನಡುವಿನ ಕದನ ವಿರಾಮದಲ್ಲಿ ಅಮೆರಿಕದ ಯಾವುದೇ ಪಾತ್ರವಿಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಇಂದು ಮತ್ತೊಮ್ಮೆ ಸದನದಲ್ಲಿ ದೃಢಪಡಿಸಿದ್ದಾರೆ. ಆಪರೇಷನ್ ಸಿಂಧೂರ್ ಕುರಿತ ಚರ್ಚೆಯ ಸಂದರ್ಭದಲ್ಲಿ ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕದನ ವಿರಾಮಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಯಾವುದೇ ಫೋನ್ ಸಂಭಾಷಣೆ ನಡೆದಿರಲಿಲ್ಲ ಎಂದಿದ್ದಾರೆ. ಈ ಮೂಲಕ ತಾನೇ ಭಾರತ-ಪಾಕ್ ನಡುವಿನ ಯುದ್ಧ ತಡೆದಿದ್ದು ಎಂಬ ಟ್ರಂಪ್ ಪದೇಪದೆ ನೀಡುತ್ತಿರುವ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.

ಲೋಕಸಭೆಯಲ್ಲಿ ಮಾತನಾಡಿದ ಸಚಿವ ಜೈಶಂಕರ್, ಏಪ್ರಿಲ್ 22 (ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದ ದಿನ) ಮತ್ತು ಜೂನ್ 17 (ಭಾರತ-ಪಾಕಿಸ್ತಾನ ಕದನ ವಿರಾಮ ಘೋಷಿಸಿದ 1 ತಿಂಗಳ ನಂತರ) ನಡುವೆ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ಮೋದಿ ನಡುವೆ ಯಾವುದೇ ಫೋನ್ ಸಂಭಾಷಣೆ ನಡೆದಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಸಂಸತ್​​ನಲ್ಲಿ ಆಪರೇಷನ್ ಸಿಂಧೂರ್ ಬಗ್ಗೆ ವಿರೋಧಿಸಲ್ಲ ಎಂದ ಶಶಿ ತರೂರ್; ಕಾಂಗ್ರೆಸ್​ ಮನವಿಗೆ ಒಪ್ಪದ ಸಂಸದ

ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತವು ಅಮೆರಿಕದೊಂದಿಗೆ ನಡೆಸಿದ ಚರ್ಚೆಗಳ ಬಗ್ಗೆ ಬೆಳಕು ಚೆಲ್ಲಿದ ಸಚಿವ ಜೈಶಂಕರ್, ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಅವರು ಪ್ರಧಾನಿ ಮೋದಿಗೆ ಕರೆ ಮಾಡಿ ಪಾಕಿಸ್ತಾನದಿಂದ ಭಾರಿ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದ್ದರು. ಆದರೆ, ಟ್ರಂಪ್ ಯಾವುದೇ ಕರೆ ಮಾಡಿಲ್ಲ. ವ್ಯಾನ್ಸ್ ಅವರ ಬಳಿ ಪ್ರಧಾನಿ ಮೋದಿ ಅವರು ಭಾರತವು ಪಾಕಿಸ್ತಾನದ ದಾಳಿಗೆ ಇನ್ನಷ್ಟು ಬಲವಾಗಿ ಪ್ರತಿಕ್ರಿಯಿಸುತ್ತದೆ ಎಂದು ಉತ್ತರಿಸಿದ್ದರು ಎಂದಿದ್ದಾರೆ.

ಇದನ್ನೂ ಓದಿ: ಇನ್ನೂ 20 ವರ್ಷ ವಿರೋಧ ಪಕ್ಷದ ಕುರ್ಚಿಯಲ್ಲೇ ಇರ್ತೀರಿ; ಕಾಂಗ್ರೆಸ್ ವಿರುದ್ಧ ಗುಡುಗಿದ ಅಮಿತ್ ಶಾ

ಮೇ 9 ಮತ್ತು 10ರಂದು ಪಾಕಿಸ್ತಾನದಿಂದ ಪುನರಾವರ್ತಿತ ದಾಳಿಗಳನ್ನು ಭಾರತ ಯಶಸ್ವಿಯಾಗಿ ತಡೆಯಿತು ಎಂದು ಜೈಶಂಕರ್ ಖಚಿತಪಡಿಸಿದ್ದಾರೆ. ಹಲವಾರು ದೇಶಗಳು ಮೇ 10ರಂದು ಭಾರತವನ್ನು ಸಂಪರ್ಕಿಸಿ ಪಾಕಿಸ್ತಾನವು ಕದನ ವಿರಾಮಕ್ಕೆ ಸಿದ್ಧವಾಗಿದೆ ಎಂದು ಭಾರತಕ್ಕೆ ತಿಳಿಸಿದ್ದವು. ಆದರೆ, ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ಚಾನೆಲ್ ಮೂಲಕ ಬಂದರೆ ಮಾತ್ರ ಪಾಕಿಸ್ತಾನದಿಂದ ಕದನ ವಿರಾಮದ ಮಾತುಕತೆಗಳನ್ನು ಪರಿಗಣಿಸುವುದಾಗಿ ಭಾರತ ಎಲ್ಲಾ ದೇಶಗಳಿಗೆ ಸ್ಪಷ್ಟಪಡಿಸಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ