ಯಾವ ಶಕ್ತಿಯೂ ಅಸ್ಸಾಂ ಒಡೆಯಲು ಸಾಧ್ಯವಿಲ್ಲ; ‘No CAA’ ಶಾಲು ಧರಿಸಿ ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಅಸ್ಸಾಂ ಒಪ್ಪಂದವನ್ನು ಮುಟ್ಟಲು ಬಂದವರು ಯಾರೇ ಆಗಿರಲಿ, ಅಂಥವರಿಗೆ ನಾಡಿನ ಜನತೆ ಮತ್ತು ಕಾಂಗ್ರೆಸ್ ಪಕ್ಷ ಒಟ್ಟಾಗಿ ಪಾಠ ಕಲಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.

  • TV9 Web Team
  • Published On - 16:52 PM, 14 Feb 2021
RAHUL GANDHI IN ASSAM
‘No CAA’ ಶಾಲು ಧರಿಸಿ ಕಂಡುಬಂದ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕರು

ಗುವಹಾಟಿ: ಅಸ್ಸಾಂ ಒಪ್ಪಂದವನ್ನು ಬದಲಿಸಲು ಮುಂದಾಗುವವರು ಮತ್ತು ದ್ವೇಷ ಹರಡಲು ಯತ್ನಿಸುವವರನ್ನು ಅಸ್ಸಾಂ ಜನರು ಮತ್ತು ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ಭಾನುವಾರ (ಫೆ.14) ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು  ಏಪ್ರಿಲ್-ಮೇ ತಿಂಗಳಲ್ಲಿ ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಸೂಚನೆಯಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅಸ್ಸಾಂ ಪ್ರವಾಸ ಕೈಗೊಂಡಿದ್ದಾರೆ. ತಮಿಳುನಾಡು, ಕೇರಳ ಬಳಿಕ ಅಸ್ಸಾಂನಲ್ಲಿ ಪಕ್ಷ ಸಂಘಟನೆಗೆ ತೊಡಗಿಕೊಂಡಿದ್ದಾರೆ.

ಅಸ್ಸಾಂ ಒಪ್ಪಂದವನ್ನು ಮುಟ್ಟಲು ಬಂದವರು ಯಾರೇ ಆಗಿರಲಿ, ಅಂಥವರಿಗೆ ನಾಡಿನ ಜನತೆ ಮತ್ತು ಕಾಂಗ್ರೆಸ್ ಪಕ್ಷ ಒಟ್ಟಾಗಿ ಪಾಠ ಕಲಿಸುತ್ತದೆ. ಯಾವ ಶಕ್ತಿಯೂ ರಾಜ್ಯವನ್ನು ಒಡೆಯಲು ಸಾಧ್ಯವಿಲ್ಲ ಎಂದು ಸಾರ್ವಜನಿಕ ಪ್ರಚಾರ ಯಾತ್ರೆಯಲ್ಲಿ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಗುಜರಾತ್​ನ ವ್ಯಾಪಾರಸ್ಥರು ಚಹಾ ತೋಟವನ್ನೇ ಪಡೆಯುತ್ತಿದ್ದರೆ, ಅಸ್ಸಾಂನ ಚಹಾ ತೋಟದಲ್ಲಿ ಕೆಲಸ ಮಾಡುವ ದಿನಗೂಲಿ ಕಾರ್ಮಿಕರು ಕೇವಲ ₹ 167 ದಿನಗೂಲಿ ಪಡೆಯುತ್ತಿದ್ದಾರೆ. ರಾಜ್ಯದ ಎಲ್ಲಾ ಚಹಾ ತೋಟದ ಕೆಲಸಗಾರರಿಗೆ ₹ 365 ದಿನಗೂಲಿ ನೀಡುವ ಭರವಸೆ ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ರಾಹುಲ್ ಟಾಂಗ್ ನೀಡಿದರು.

ರಾಹುಲ್ ಗಾಂಧಿ ಸಹಿತ ಇತರ ಕಾಂಗ್ರೆಸ್ ನಾಯಕರು ‘No CAA’ ಶಾಲು ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಕಂಡುಬಂತು. ‘hum do, hamare do’ ಎಂದು ಸಂಬೋಧಿಸಿದ ರಾಹುಲ್ ಗಾಂಧಿ, ಸರಿಯಾಗಿ ಕೇಳಿ ಸಿಎಎ ಎಂದಿಗೂ ಜಾರಿಯಾಗುವುದಿಲ್ಲ ಎಂದು ತಿಳಿಸಿದರು.

ಈ ವರ್ಷ, ಅಸ್ಸಾಂಗೆ ರಾಹುಲ್ ಗಾಂಧಿ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಸದ್ಯ ಆಡಳಿತ ನಡೆಸುತ್ತಿರುವ ಬಿಜೆಪಿಯನ್ನು ಬಗ್ಗು ಬಡಿದೇ ತೀರುವ ಪಣ ತೊಟ್ಟಿರುವ ಕಾಂಗ್ರೆಸ್, ಐದು ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ನಡೆಸಿ ಚುನಾವಣೆ ಎದುರಿಸಲು ಮುಂದಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯನ್ನು ರಾಜ್ಯದ ಐದು ಪಕ್ಷಗಳೊಂದಿಗೆ ಮೈತ್ರಿ ಮಾಡಿ ಎದುರಿಸುತ್ತೇವೆ ಎಂದು ಕಳೆದ ತಿಂಗಳು ಕಾಂಗ್ರೆಸ್ ಹೇಳಿತ್ತು.

ಜನವರಿ 20ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ, ರಿಪುನ್ ಬೊರಾ, ಕಾಂಗ್ರೆಸ್ ಪಕ್ಷವು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (CPI), CPI (Marxist), CPI (Marxist-Leninist) ಮತ್ತು ಅಂಚಾಲಿಕ್ ಗಾನಾ ಮೋರ್ಚಾ (AGM) ಪಕ್ಷಗಳು ಬಿಜೆಪಿ ಸೋಲಿಸಲು ಜೊತೆಯಾಗಿ ಸ್ಪರ್ಧಿಸಲಿದೆ ಎಂದು ಹೇಳಿದ್ದರು. ಬಿಜೆಪಿ ವಿರುದ್ಧ ಇತರ ಪಕ್ಷಗಳು ಸಂಘಟಿತ ಹೋರಾಟ ಮಾಡಲು ಇಚ್ಚಿಸುವುದಾದರೆ ನಮ್ಮನ್ನು ಜೊತೆಯಾಗಬಹುದು ಎಂದು ಸಣ್ಣ ಪ್ರಾದೇಶಿಕ ಪಕ್ಷಗಳನ್ನು ಮೈತ್ರಿಗೆ ಆಹ್ವಾನಿಸಿದ್ದರು.

No CAA ಶಾಲು ಧರಿಸಿರುವ ಕಾರಣ ಹೇಳಿದ ರಾಹುಲ್ ಗಾಂಧಿ 

ಇದನ್ನೂ ಓದಿ: ಅಸ್ಸಾಂ ಹೊರತಾಗಿ ಭಾರತೀಯ ಕಲೆ-ಸಂಸ್ಕೃತಿ ಪರಿಪೂರ್ಣವಾಗುವುದಿಲ್ಲ: ಅಮಿತ್ ಶಾ

ರಾಜಕೀಯ ವಿಶ್ಲೇಷಣೆ | ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ; ಯಾರಿಗೆ ಹೂವು? ಯಾರಿಗೆ ಮುಳ್ಳು?