‘ಜಗತ್ತಿನ ಯಾವುದೇ ಶಕ್ತಿಯೂ ಭಾರತ ಪ್ರಗತಿ ಸಾಧಿಸುವುದನ್ನು ಬಯಸುವುದಿಲ್ಲ’; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಜಗತ್ತಿನ ಯಾವುದೇ ದೊಡ್ಡ ಶಕ್ತಿಗಳು ಭಾರತದ ಏಳಿಗೆಯನ್ನು ಬಯಸುವುದಿಲ್ಲ. ಏಕೆಂದರೆ ಭಾರತ ಬಲಿಷ್ಠವಾದರೆ ಅಂತಹ ಶಕ್ತಿಗಳ ‘ಅಂಗಡಿಗಳು’ (ಪ್ರಾಬಲ್ಯ ಮತ್ತು ದಬ್ಬಾಳಿಕೆ) ಮುಚ್ಚಿಹೋಗುತ್ತವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​ಎಸ್​ಎಸ್​) ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ. ಭಾರತವು ಎಲ್ಲರಿಗೂ ಸಹಾಯ ಮಾಡಲು ಬಯಸುವುದರಿಂದ, ಭಾರತ ಬಲಿಷ್ಠವಾದರೆ ಇಂತಹ ಶಕ್ತಿಗಳ ಅಂಗಡಿಗಳು ಮುಚ್ಚಿಹೋಗುತ್ತವೆ.  ಭಾರತವು ಸಂಕಷ್ಟದ ಸಮಯದಲ್ಲಿ ತನ್ನನ್ನು ದ್ವೇಷಿಸುವ ನೆರೆಯ ರಾಷ್ಟ್ರಗಳಿಗೂ ಸಹಾಯ ಹಸ್ತ ಚಾಚುತ್ತದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ಜಗತ್ತಿನ ಯಾವುದೇ ಶಕ್ತಿಯೂ ಭಾರತ ಪ್ರಗತಿ ಸಾಧಿಸುವುದನ್ನು ಬಯಸುವುದಿಲ್ಲ; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಮೋಹನ್ ಭಾಗವತ್
Image Credit source: PTI

Updated on: Nov 25, 2026 | 9:27 PM

ನವದೆಹಲಿ, ನವದೆಹಲಿ, ನವೆಂಬರ್ 25: ಜಗತ್ತಿನ ಪ್ರಬಲ ಶಕ್ತಿಗಳು ಇತರ ರಾಷ್ಟ್ರಗಳನ್ನು ಒತ್ತಡದಲ್ಲಿಡುವ ಉದ್ದೇಶದಿಂದ ಭಾರತ ಬೆಳೆಯುವುದನ್ನು ನೋಡಲು ಇಷ್ಟಪಡುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​ಎಸ್​ಎಸ್​) ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಎಂಐಟಿ ಕ್ಯಾಂಪಸ್‌ನ ಮಂಥನ್ ಹಾಲ್‌ನಲ್ಲಿ ನಡೆದ 5ನೇ ‘ಪದ್ಮಾ ಉತ್ಸವ’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮೋಹನ್ ಭಾಗವತ್, ಪ್ರಾಬಲ್ಯ ಸಾಧಿಸುವ ಜಾಗತಿಕ ರಾಜಕಾರಣವನ್ನು, ಶತ್ರು ರಾಷ್ಟ್ರಗಳಿಗೂ ಮಾನವೀಯ ಮತ್ತು ಆರ್ಥಿಕ ನೆರವು ನೀಡುವ ಭಾರತದ ನಾಗರಿಕತೆಯ ಧೋರಣೆಯೊಂದಿಗೆ ಹೋಲಿಸಿದರು.

“ಜಗತ್ತಿನ ಯಾವುದೇ ಶಕ್ತಿಯೂ ಭಾರತ ಪ್ರಗತಿ ಸಾಧಿಸುವುದನ್ನು ಬಯಸುವುದಿಲ್ಲ. ಏಕೆಂದರೆ, ಈ ಶಕ್ತಿಗಳು ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಬಯಸುತ್ತವೆ ಮತ್ತು ‘ಬಲಿಷ್ಠರೇ ಉಳಿಯುತ್ತಾರೆ’ ಎಂಬ ತತ್ವವನ್ನು ನಂಬುತ್ತವೆ. ಅವು ಎಲ್ಲರನ್ನೂ ಒತ್ತಡದಲ್ಲಿಡುತ್ತವೆ. ಈ ಮೂಲಕವೇ ಅವು ಶಕ್ತಿಶಾಲಿಗಳೆಂದು ಪರಿಗಣಿಸಲ್ಪಡುತ್ತವೆ ಮತ್ತು ಇತರರ ಮೇಲೆ ದಬ್ಬಾಳಿಕೆ ನಡೆಸುತ್ತವೆ. ಭಾರತ ಬೆಳೆದರೆ ಈ ಪ್ರಬಲ ಶಕ್ತಿಗಳ ‘ಅಂಗಡಿಗಳು’ ಮುಚ್ಚಿಹೋಗುತ್ತವೆ. ಏಕೆಂದರೆ ಭಾರತ ಎಲ್ಲರಿಗೂ ಸಹಾಯ ಮಾಡಲು ಬಯಸುತ್ತದೆ” ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

Loading...

ಇದನ್ನೂ ಓದಿ: ‘ಧರ್ಮ-ರಾಷ್ಟ್ರವನ್ನು ಬೇರ್ಪಡಿಸಲಾಗದು’; ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಸಂಕಷ್ಟದ ಸಮಯದಲ್ಲಿ ನೆರೆಹೊರೆಯವರಿಗೆ ನೆರವು:

ಭಾರತದ ಪ್ರಾದೇಶಿಕ ನೆರವಿನ ನೀತಿಯನ್ನು ವಿವರಿಸಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ದ್ವಿಪಕ್ಷೀಯ ಭಿನ್ನಾಭಿಪ್ರಾಯಗಳನ್ನು ಲೆಕ್ಕಿಸದೆ ತುರ್ತು ಸಂದರ್ಭಗಳಲ್ಲಿ ನೆರೆಯ ರಾಷ್ಟ್ರಗಳನ್ನು ಬೆಂಬಲಿಸಲು ಭಾರತ ಮುಂದಾದ ನಿದರ್ಶನಗಳನ್ನು ಉಲ್ಲೇಖಿಸಿದರು. “ನೆರೆಯ ರಾಷ್ಟ್ರಗಳು ಭಾರತವನ್ನು ದ್ವೇಷಿಸಿದರೂ ಸಹ, ಅವು ಸಂಕಷ್ಟದಲ್ಲಿದ್ದಾಗ ಭಾರತ ಅವುಗಳಿಗೆ ಸಹಾಯ ಮಾಡುತ್ತದೆ. ಮಾಲ್ಡೀವ್ಸ್ ತೊಂದರೆಯಲ್ಲಿದ್ದಾಗ ಭಾರತ ಕುಡಿಯುವ ನೀರನ್ನು ಸಾಗಿಸಿತು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಶ್ರೀಲಂಕಾಕ್ಕೆ ಭಾರತ ಆರ್ಥಿಕ ನೆರವು ನೀಡಿತು. ಪರಿಸರ ಸಮಸ್ಯೆಗಳನ್ನು ಎದುರಿಸುತ್ತಿರುವ ನೇಪಾಳಕ್ಕೆ ಭಾರತ ಸಹಾಯ ಮಾಡುತ್ತದೆ ಮತ್ತು ಬಾಂಗ್ಲಾದೇಶಕ್ಕೂ ನೆರವಾಗುತ್ತದೆ. ಪ್ರವಾಹ ಮತ್ತು ಭೂಕಂಪಗಳ ಸಮಯದಲ್ಲಿ ನಾವು ಪಾಕಿಸ್ತಾನಕ್ಕೂ ಸಹಾಯ ಮಾಡಿದ್ದೇವೆ” ಎಂದು ಹೇಳಿದ ಅವರು, ನಿಜವಾದ ಶಕ್ತಿಯನ್ನು ದುರ್ಬಲರ ರಕ್ಷಣೆಗಾಗಿ ಮತ್ತು ಶಾಂತಿಯನ್ನು ಬೆಳೆಸುವ ಸಾಧನವಾಗಿ ಭಾರತ ನೋಡುತ್ತದೆ ಎಂದರು.

ಇದನ್ನೂ ಓದಿ: ‘ಪ್ರತಿಯೊಬ್ಬರ ಮೇಲಿನ ಸಾತ್ವಿಕ ಪ್ರೇಮವೇ ಹಿಂದೂವಿನ ಮೂಲ ಸ್ವಭಾವ’: ಲಂಡನ್​ನಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

“ಯಾರಾದರೂ ಪ್ರಾಮಾಣಿಕವಾಗಿ ಮಾತನಾಡಿದರೆ, ಯುವಜನತೆ ಅವರ ಬೆನ್ನಿಗೆ ನಿಲ್ಲಲು ಸಿದ್ಧರಿದ್ದಾರೆ. ಅವರು ಸುಳ್ಳನ್ನು ದ್ವೇಷಿಸುತ್ತಾರೆ ಮತ್ತು ತಮ್ಮ ದೇಶವನ್ನು ಶ್ರೇಷ್ಠವಾಗಿಸಲು ಬಯಸುತ್ತಾರೆ” ಎಂದು ಹೇಳಿದ ಅವರು, ಸಮಾವೇಶದಲ್ಲಿ ಭಾಗವಹಿಸುತ್ತಿರುವ ಪದ್ಮ ಪ್ರಶಸ್ತಿ ಪುರಸ್ಕೃತರ ನಿಸ್ವಾರ್ಥ ಸಮರ್ಪಣಾ ಮನೋಭಾವವನ್ನು ಅನುಕರಿಸುವಂತೆ ಯುವ ನಾಗರಿಕರಿಗೆ ಕರೆ ನೀಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us