‘ಧರ್ಮ-ರಾಷ್ಟ್ರವನ್ನು ಬೇರ್ಪಡಿಸಲಾಗದು’; ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಸಂಘರ್ಷ ಹಾಗೂ ಆತಂಕಗಳಿಂದ ತತ್ತರಿಸುತ್ತಿರುವ ಆಧುನಿಕ ಜಗತ್ತಿನ ಹಲವಾರು ಸವಾಲುಗಳಿಗೆ ಪರಿಹಾರ ನೀಡಲು ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಜ್ಞಾನ ಪರಂಪರೆಗೆ ಸಾಧ್ಯವಿದೆ. ಭಾರತದಲ್ಲಿ 'ಧರ್ಮ ಮತ್ತು ರಾಷ್ಟ್ರ' ಒಂದಕ್ಕೊಂದು ಪೂರಕವಾಗಿದ್ದು, ಇವೆರಡನ್ನೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಆರ್‌ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ. ಮುಂಬೈನಲ್ಲಿ ನಡೆದ 'ಅಖಿಲ ಭಾರತ ವಿಹಾರ ಸೇವಾ ಬಳಗ'ದ 14ನೇ ರಾಷ್ಟ್ರೀಯ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಜಾಗತಿಕ ಬಿಕ್ಕಟ್ಟುಗಳು ಹಾಗೂ ಭಾರತದ ಐತಿಹಾಸಿಕ ಜವಾಬ್ದಾರಿಯ ಕುರಿತು ಪ್ರಮುಖ ವಿಚಾರಗಳನ್ನು ಹಂಚಿಕೊಂಡರು.

ಮುಂಬೈ, ಅಕ್ಟೋಬರ್ 2: ಭಾರತದಲ್ಲಿ ‘ಧರ್ಮ ಮತ್ತು ರಾಷ್ಟ್ರ’ ಒಂದಕ್ಕೊಂದು ಪೂರಕವಾಗಿದ್ದು, ಇವೆರಡನ್ನೂ ಬೇರ್ಪಡಿಸಲು ಸಾಧ್ಯವಿಲ್ಲ. ಪ್ರಸ್ತುತ ಇಡೀ ಜಗತ್ತು ಎದುರಿಸುತ್ತಿರುವ ನಾನಾ ರಂಗಗಳ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಭಾರತದ ಅಪಾರ ಜ್ಞಾನ ಪರಂಪರೆಯು ಪ್ರಮುಖ ಪಾತ್ರ ವಹಿಸಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ. ಮುಂಬೈನಲ್ಲಿ ನಡೆದ ‘ಅಖಿಲ ಭಾರತ ವಿಹಾರ ಸೇವಾ ಬಳಗ’ದ ಸಮಾವೇಶವನ್ನು ಉದ್ದೇಶಿಸಿ ಇಂದು ಮಾತನಾಡಿದ ಅವರು, ಇಂದಿನ ಜಗತ್ತು ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಕುಟುಂಬ ವ್ಯವಸ್ಥೆ, ಹಾಗೂ ಧಾರ್ಮಿಕ ಶ್ರದ್ಧೆ ಮತ್ತು ಸಂಘರ್ಷಗಳ ನಡುವಿನ ವೈರುಧ್ಯಗಳಿಂದ ಕಂಗಾಲಾಗಿದೆ ಎಂದರು.
ಧರ್ಮ ಮತ್ತು ರಾಷ್ಟ್ರದ ಸಂಬಂಧದ ಬಗ್ಗೆ ಮಾತನಾಡಿದ ಅವರು, “ನಮ್ಮ ರಾಷ್ಟ್ರ ಮತ್ತು ಧರ್ಮ ಬೇರೆ ಬೇರೆಯಲ್ಲ. ರಾಷ್ಟ್ರದ ಉದ್ದೇಶವೇ ಧರ್ಮ, ಮತ್ತು ಧರ್ಮವು ರಾಷ್ಟ್ರವನ್ನು ಉಳಿಸಿ ಬೆಳೆಸುತ್ತದೆ. ಇವೆರಡೂ ಒಂದನ್ನೊಂದು ಅವಲಂಬಿಸಿವೆ. ಒಂದಿದ್ದರೆ ಇನ್ನೊಂದು ಇರುತ್ತದೆ; ಒಂದಿಲ್ಲದಿದ್ದರೆ ಇನ್ನೊಂದರ ಅಸ್ತಿತ್ವ ಸಾಧ್ಯವಿಲ್ಲ” ಎಂದಿದ್ದಾರೆ. ಇದೇ ವೇಳೆ, ಭಾರತದ ಬಳಿ ವೇದಗಳು, ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆ, ಜೈನ ಆಗಮಗಳು, ತ್ರಿಪಿಟಕ, ಗುರು ಗ್ರಂಥ ಸಾಹಿಬ್ ಹಾಗೂ ಸಂತರ ಬೋಧನೆಗಳ ಅಪಾರ ಜ್ಞಾನ ಭಂಡಾರವಿದೆ ಎಂಬುದನ್ನು ಮೋಹನ್ ಭಾಗವತ್ ಸ್ಮರಿಸಿದರು. “ನಮ್ಮ ದೇಶದ ಬಳಿ ಜ್ಞಾನದ ಬಹುದೊಡ್ಡ ಸಂಪತ್ತಿದೆ, ಇದರ ಅಗತ್ಯ ಇಂದಿನ ಜಗತ್ತಿಗಿದೆ” ಎಂದು ಅವರು ಪ್ರತಿಪಾದಿಸಿದರು.
ಇದನ್ನೂ ಓದಿ: ‘ಮಾನವೀಯತೆಯ ಸೇವೆಯಿಂದಲೇ ಭಾರತ ವಿಶ್ವಗುರುವಾಗಿದೆ’; ಕೆನಡಾದಲ್ಲಿ ಮೋಹನ್ ಭಾಗವತ್ ಹೇಳಿಕೆ
ಮೋಹನ್ ಭಾಗವತ್ ಭಾಷಣದ ಮುಖ್ಯಾಂಶಗಳು:
- “ನಮ್ಮ ರಾಷ್ಟ್ರ ಮತ್ತು ಧರ್ಮ ಬೇರೆ ಬೇರೆಯಲ್ಲ. ರಾಷ್ಟ್ರದ ಉದ್ದೇಶವೇ ಧರ್ಮ, ಮತ್ತು ಧರ್ಮವು ರಾಷ್ಟ್ರವನ್ನು ಉಳಿಸಿ ಬೆಳೆಸುತ್ತದೆ. ಒಂದಿದ್ದರೆ ಇನ್ನೊಂದು ಇರುತ್ತದೆ; ಒಂದಿಲ್ಲದಿದ್ದರೆ ಇನ್ನೊಂದರ ಅಸ್ತಿತ್ವ ಸಾಧ್ಯವಿಲ್ಲ. ರಾಷ್ಟ್ರ ದುರ್ಬಲವಾದರೆ ಧರ್ಮಕ್ಕೆ ಆಪತ್ತು ಎದುರಾಗುತ್ತದೆ”.
- “ಇಂದಿನ ಜಗತ್ತು ತೀವ್ರ ಗೊಂದಲಗಳಲ್ಲಿದೆ. ಅಭಿವೃದ್ಧಿ ಹೆಚ್ಚಾದಂತೆ ಪರಿಸರ ನಾಶವಾಗುತ್ತಿದೆ, ವೈಯಕ್ತಿಕ ಸ್ವಾತಂತ್ರ್ಯ ಹೆಚ್ಚಿದಂತೆ ಕುಟುಂಬಗಳು ಹಾಗೂ ಸಮಾಜ ಒಡೆಯುತ್ತಿವೆ. ಸಂತೋಷ ಮತ್ತು ಆಕಾಂಕ್ಷೆಗಳ ನಡುವೆ ಸಮತೋಲನವಿಲ್ಲದೆ ಜಗತ್ತು ಸಾಗುತ್ತಿದೆ”.
- “ವೇದ, ಉಪನಿಷತ್, ರಾಮಾಯಣ, ಮಹಾಭಾರತ, ಭಗವದ್ಗೀತೆ, ಜೈನ ಆಗಮಗಳು, ತ್ರಿಪಿಟಕ, ಗುರು ಗ್ರಂಥ ಸಾಹಿಬ್ ಹಾಗೂ ಸಂತರ ಬೋಧನೆಗಳು ಭಾರತದ ಅಪಾರ ಜ್ಞಾನದ ನಿಧಿಯಾಗಿವೆ. ಇತರ ದೇಶಗಳ ಮೇಲೆ ದಾಳಿ ಮಾಡದೆ ಅಥವಾ ಯಾರನ್ನೂ ಮತಾಂತರಗೊಳಿಸದೆ ತನ್ನ ಜ್ಞಾನವನ್ನು ಜಗತ್ತಿಗೆ ಹಂಚಿದ ಸುದೀರ್ಘ ಇತಿಹಾಸ ಭಾರತಕ್ಕಿದೆ”.
- “ಭಾರತದ ಪ್ರಾಚೀನ ಚಿಂತನೆಗಳು ಕೇವಲ ಒಂದು ನಿರ್ದಿಷ್ಟ ವರ್ಗದ ಕಲ್ಯಾಣಕ್ಕೆ ಸೀಮಿತವಾಗಿರಲಿಲ್ಲ. ನಾವು ಪ್ರತಿಯೊಬ್ಬರೂ ಸುಖವಾಗಿರಲಿ (ಸರ್ವೇ ಭವಂತು ಸುಖಿನಃ) ಎಂದು ಬಯಸುತ್ತೇವೆಯೇ ಹೊರತು ಕೆಲವರಷ್ಟೇ ಅಭಿವೃದ್ಧಿ ಹೊಂದಲಿ ಎಂಬುದರಲ್ಲಿ ನಂಬಿಕೆ ಹೊಂದಿಲ್ಲ”.
- “ಅಭಿವೃದ್ಧಿ ಹೆಚ್ಚಾದಂತೆ ಪರಿಸರ ನಾಶವಾಗುತ್ತಿದೆ. ಪರಿಸರ ಉಳಿಸಬೇಕಾದಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ವೈಯಕ್ತಿಕ ಸ್ವಾತಂತ್ರ್ಯ ಹೆಚ್ಚಿದಂತೆ ಕುಟುಂಬಗಳು ಮತ್ತು ಸಮಾಜ ಒಡೆಯುತ್ತಿವೆ”.
- “ಭಾರತೀಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಜ್ಞಾನವನ್ನು ಕಾಪಾಡಿಕೊಂಡು ಬರುವವರನ್ನು ರಕ್ಷಿಸುವುದು ಕೇವಲ ಧಾರ್ಮಿಕ ಕರ್ತವ್ಯವಲ್ಲ, ಬದಲಿಗೆ ಸಂಪೂರ್ಣ ಮಾನವಕುಲದ ಸುರಕ್ಷಿತ ಭವಿಷ್ಯಕ್ಕಾಗಿ ಮಾಡುವ ಮಾನವೀಯ ಸೇವೆಯಾಗಿದೆ”.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




