ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಎಡೆಬಿಡದೆ ಏರುತ್ತಲೇ ಇದೆ. ಆಗೊಮ್ಮೆ ಈಗೊಮ್ಮೆ ನಗಣ್ಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆಯಾದರೂ ಗ್ರಾಹಕ ಸಂತುಷ್ಟನಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರ್ಧರಿಸುವ ಜವಾಬ್ದಾರಿಯನ್ನು ಪೆಟ್ರೋಲಿಯಂ ಸರಬರಾಜು ಕಂಪನಿಗಳಿಂದ ವಾಪಸ್ ಪಡೆದು ಅದನ್ನು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ (ಜಿಎಸ್ಟಿ) ತನ್ನಿ ಎಂಬ ಕೂಗು ಎದ್ದಿದೆ. ಆದರೆ ಇದು ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬಂತಾಗಿದೆ?
ಈ ಮಧ್ಯೆ, ತೈಲ ಬೆಲೆಗಳನ್ನು ಇಳಿಸುವುದು ಸಾಧ್ಯವಾಗದ ಮಾತು ಎಂಬು ಸ್ವತಃ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಕೊಂಡಿದ್ದಾರೆ. ಹಾಗಾಗಿ ಅವರೂ ಸಹ ತೈಲ ಬೆಲೆಗಳ ಇಳಿಸುವ ತಪನೆಯಲ್ಲಿ ಮುಂದಿನ ಜಿಎಸ್ಟಿ ಸಭೆಯಲ್ಲಿ ತೈಲ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವ ಪ್ರಸ್ತಾಪ ಆಗಲಿ ಎಂದು ಆಶಿಸಿದ್ದಾರೆ. ಇದನ್ನು ನಿನ್ನೆ ರಾಜ್ಯಸಭೆಯಲ್ಲೂ ಪ್ರಸ್ತಾಪ ಮಾಡಿದ್ದಾರೆ.
ಆದರೆ ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಬಿಹಾರದ ಮಾಜಿ ಉಪಮುಖ್ಯಮಂತ್ರಿ, ಹಾಲಿ ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್ ಮೋದಿ ಅವರು ಒಂದೇ ಏಟಿಗೆ ಅದೆಲ್ಲಾ ಆಗದ ಮಾತು ಬಿಡಿ ಅಂದುಬಿಟ್ಟಿದ್ದಾರೆ. ಅದಕ್ಕೆ ಸಕಾರಣಗಳನ್ನು ಮುಂದಿಡುತ್ತಾ ಮುಂದಿನ 8-10 ವರ್ಷ ಕಾಲ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವುದು ಸಾಧ್ಯವಾಗಲಿಕ್ಕಿಲ್ಲ.
40% ತೆರಿಗೆ ಆದಾಯ ಕಳೆದುಕೊಳ್ಳುವುದಕ್ಕೆ ಯಾವ ರಾಜ್ಯವೂ ಒಪ್ಪೊಲ್ಲ; ಅದಕ್ಕೇ ಪೆಟ್ರೋಲ್ ಬೆಲೆ ಇನ್ನು 10 ವರ್ಷ ಆದರೂ ಇಳಿಯೋಲ್ಲ!
ಏಕೆಂದರೆ ಹಾಗೆ ಮಾಡುವ ಮೂಲಕ ಯಾವುದೇ ರಾಜ್ಯ ಸರ್ಕಾರವು ವಾರ್ಷಿಕ 2 ಲಕ್ಷ ಕೋಟಿ ರೂಪಾಯಿ ಆದಾಯವನ್ನು ಕಳೆದುಕೊಳ್ಳಲು ಸಿದ್ಧವಿಲ್ಲ. ಈಗಾಗಲೇ ಕೊರೊನಾ ಸಂಕಷ್ಟದಿಂದ ಆರ್ಥಿಕ ಚಟುವಟಿಕೆ ಮುಗ್ಗರಿಸಿರುವಾಗ, ರಾಜ್ಯ ಸರ್ಕಾರಗಳಿಗೆ ಆದಾಯದ ಮೂಲಗಳೇ ಬತ್ತಿಹೋಗಿರುವಾಗ ತೈಲೋತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತಂದುಬಿಟ್ಟು ಆದಾಯ ಕಳೆದುಕೊಳ್ಳಲು ಸಿದ್ಧವಿಲ್ಲ ಎಂದು ಜಿಎಸ್ಟಿ ಮಂಡಳಿ ಸಂಚಾಲಕ, ಅನುಭವೀ ಸುಶೀಲ್ ಕುಮಾರ್ ಮೋದಿ ವ್ಯಾಖ್ಯಾನಿಸಿದ್ದಾರೆ.
ಇದಕ್ಕೆ ಬಿಜೆಪಿಯೇತರ ಸರ್ಕಾರಗಳೂ ಸಮ್ಮತ ಸೂಚಿಸಿಲ್ಲ. ಆ ಸರ್ಕಾರಗಳಿಗೂ ಆದಾಯ ಖೋತಾ ಮಾಡಿಕೊಳ್ಳುವುದು ಬೇಕಾಗಿಲ್ಲ. ಸುಮ್ಮನೆ ರಾಜಕೀಯ ವಿಷಯವಾಗಿ ತೈಲೋತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತಂದುಬಿಡಿ ಎಂದು ಮಾತಿಗಷ್ಟೇ ಹೇಳುತ್ತಿದ್ದಾರೆ ಎಂಬ ಧಾಟಿಯಲ್ಲಿ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ. ಇದು ವಾಸ್ತವವೂ ಹೌದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೈಲೋತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಮೂಲಕ ವಾರ್ಷಿಕ 5 ಲಕ್ಷ ಕೋಟಿ ರೂಪಾಯಿ ಆದಾಯವನ್ನು ಗಳಿಸುತ್ತಿವೆ.
ತೈಲೋತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತಂದಿದ್ದೇ ಆದರೆ ಅ ಉತ್ಪನ್ನಗಳ ಮೇಲೆ ಅತ್ಯಧಿಕ ಅಂದರೆ ಶೇ. 28ರಷ್ಟು ಮಾತ್ರ ತೆರಿಗೆ ವಿಧಿಸಬಹುದು. ಏಕೆಂದರೆ ಜಿಎಸ್ಟಿ ನೀತಿಯ ಪ್ರಕಾರ ಯಾವುದೇ ಉತ್ಪನ್ನದ ಮೇಲೆ ಗರಿಷ್ಠ ಶೇ. 28ರಷ್ಟು ತೆರಿಗೆ ಮಾತ್ರವೇ ವಿಧಿಸಬಹುದಾಗಿದೆ ಅಷ್ಟೇ.
ಆದರೆ ವಾಸ್ತವ ಏನು ಗೊತ್ತಾ? ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಸ್ತುತ ತೈಲೋತ್ಪನ್ನಗಳ ಮೂಲಕ ಮೇಲೆ ಶೇ. 60ರಷ್ಟು ತೆರಿಗೆ ಆದಾಯ ಗಳಿಸುತ್ತಿವೆ.
ಪರಿಸ್ಥಿತಿ ಹೀಗಿರುವಾಗ ಎಲ್ಲರೂ ಬಾಯಿ ಮಾತಿಗೆ ಹೇಳುವಂತೆ ನಾವು ತೈಲೋತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತಂದು ಕೇವಲ ಶೇ. 28ರಷ್ಟು ಜಿಎಸ್ಟಿ ತೆರಿಗೆ ಮಾತ್ರ ಗಳಿಸುವಂತಾದರೆ ಒಂದು ಲೀಟರ್ ಪೆಟ್ರೋಲ್ ಮೇಲೆ ಕೇವಲ 14 ರೂಪಾಯಿ ತೆರಿಗೆ ಆದಾಯ ಗಳಿಸಿದಂತಾಗುತ್ತದೆ. ಆದರೆ ಈಗ ಲೀಟರ್ ಪೆಟ್ರೋಲ್ ಅನ್ನು 90-100 ರೂಪಾಯಿಗೆ ಮಾರುವ ಮೂಲಕ ಗಳಿಸುತ್ತಿರುವುದು ಲೀಟರಿಗೆ 60 ರೂಪಾಯಿ ತೆರಿಗೆ ಆದಾಯವನ್ನು! ಇದರಲ್ಲಿ ಕೇಂದ್ರಕ್ಕೆ 35 ರೂಪಾಯಿ ಸಂದಾಯವಾದರೆ ರಾಜ್ಯಗಳಿಗೆ ಉಳಿದ 25 ರೂಪಾಯಿ ತಲುಪುತ್ತಿದೆ.
ಕೊನೆಯ ಆಯ್ಕೆ ಎಂಬಂತೆ ಹೇಳುವುದಾರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಸಿಕ್ಕಾಪಟ್ಟೆ ಇಳಿಯಬೇಕು. ಅಥವಾ ಡಾಲರ್ ಎದುರು ರೂಪಾಯಿ ಮೌಲ್ಯ ದೃಢಗೊಳ್ಳಬೇಕು. ಅಥವಾ ವಿಶ್ವ ಮಟ್ಟದಲ್ಲಿ ಭಾರತ ಸದೃಢಗೊಳ್ಳಬೇಕು. ಅಥವಾ ಭಾರತದಲ್ಲಿ ಕಚ್ಚಾ ತೈಲ ಆಮದಿಗೆ ಗುಡ್ಬೈ ಹೇಳಿ ಇತರೆ ತೈಲ ಮೂಲಗಳು/ ಅಸಾಂಪ್ರದಾಯಿಕ ಇಂಧನಗಳ ಬಳಕೆ ಮಾಡುವುದಕ್ಕೆ ಶುರು ಮಾಡಬೇಕು… ಆದರೆ ಈ ಆಯ್ಕೆಗಳು ಅಷ್ಟು ಸುಲಭವಲ್ಲ ಎಂಬುದು ಗಮನಾರ್ಹ.
ಇದನ್ನೂ ಓದಿ: ಗ್ರಾಹಕರಿಗೆ ಸಂತೋಷದ ಸುದ್ದಿ.. ಸತತ ಎರಡನೇ ದಿನವೂ ಪೆಟ್ರೋಲ್, ಡೀಸೆಲ್ ದರ ಇಳಿಕೆ!
Published On - 11:34 am, Thu, 25 March 21