ವೈಯಕ್ತಿಕ, ರಾಜಕೀಯ ಲಾಭಕ್ಕಾಗಿ ಭಯೋತ್ಪಾದನೆಯನ್ನು ಮೌನವಾಗಿ ಬೆಂಬಲಿಸುವುದು ತಪ್ಪು: ಮೋದಿ
BRICS Summit: ಭಯೋತ್ಪಾದನೆಯನ್ನು ಖಂಡಿಸುವುದು ನಮ್ಮ ತತ್ವವಾಗಬೇಕು, ಕೇವಲ ಅನುಕೂಲಕ್ಕಾಗಿ ಅಲ್ಲ, ಯಾವ ದೇಶದ ಮೇಲೆ ದಾಳಿ ನಡೆದಿದೆ, ಯಾರು ಮಾಡಿದ್ದಾರೆಂದು ನೋಡುತ್ತಾ ಹೋದರೆ ಅದು ಮಾನವೀಯತೆಗೆ ಮಾಡಿದ ದ್ರೋಹವಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಭಯೋತ್ಪಾದಕರ ವಿರುದ್ಧ ನಿರ್ಬಂಧಗಳನ್ನು ವಿಧಿಸುವಲ್ಲಿ ಯಾವುದೇ ಹಿಂಜರಿಕೆ ಬೇಡ. ಭಯೋತ್ಪಾದನೆಗೆ ಸಂಬಂಧಿಸಿದಂತೆ ಮಾತು ಮತ್ತು ಕ್ರಿಯೆಯ ನಡುವೆ ಯಾವುದೇ ವ್ಯತ್ಯಾಸ ಇರಬಾರದು.

ರಿಯೊ ಡಿ ಜನೈರೊ, ಜುಲೈ 07: ವೈಯಕ್ತಿಕ ಅಥವಾ ರಾಜಕೀಯ ಲಾಭಕ್ಕಾಗಿ ಭಯೋತ್ಪಾದನೆಯನ್ನು ಮೌನವಾಗಿ ಬೆಂಬಲಿಸುವುದು ತಪ್ಪು ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ 17 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿ ಪಾಕಿಸ್ತಾ, ಚೀನಾವನ್ನು ಹೆಸರಿಸದೆ ಎರಡೂ ದೇಶಗಳನ್ನು ಟೀಕಿಸಿದರು.
ಭಯೋತ್ಪಾದನೆಯನ್ನು ಖಂಡಿಸುವುದು ನಮ್ಮ ತತ್ವವಾಗಬೇಕು, ಕೇವಲ ಅನುಕೂಲಕ್ಕಾಗಿ ಅಲ್ಲ, ಯಾವ ದೇಶದ ಮೇಲೆ ದಾಳಿ ನಡೆದಿದೆ, ಯಾರು ಮಾಡಿದ್ದಾರೆಂದು ನೋಡುತ್ತಾ ಹೋದರೆ ಅದು ಮಾನವೀಯತೆಗೆ ಮಾಡಿದ ದ್ರೋಹವಾಗುತ್ತದೆ. ಭಯೋತ್ಪಾದಕರ ವಿರುದ್ಧ ನಿರ್ಬಂಧಗಳನ್ನು ವಿಧಿಸುವಲ್ಲಿ ಯಾವುದೇ ಹಿಂಜರಿಕೆ ಬೇಡ. ಭಯೋತ್ಪಾದನೆಗೆ ಸಂಬಂಧಿಸಿದಂತೆ ಮಾತು ಮತ್ತು ಕ್ರಿಯೆಯ ನಡುವೆ ಯಾವುದೇ ವ್ಯತ್ಯಾಸ ಇರಬಾರದು.
ಜಗತ್ತಿನಲ್ಲಿ ನಡೆಯುತ್ತಿರುವ ಸಂಘರ್ಷಗಳ ಬಗ್ಗೆ ಕಳವಳ
ಪಶ್ಚಿಮ ಏಷ್ಯಾದಿಂದ ಯುರೋಪ್ ವರೆಗೆ ಜಗತ್ತಿನಲ್ಲಿ ನಡೆಯುತ್ತಿರುವ ಸಂಘರ್ಷಗಳು ಮತ್ತು ಉದ್ವಿಗ್ನತೆಗಳ ಬಗ್ಗೆ ಪ್ರಧಾನಿ ಕಳವಳ ವ್ಯಕ್ತಪಡಿಸಿದರು. ಗಾಜಾದಲ್ಲಿನ ಮಾನವೀಯ ಪರಿಸ್ಥಿತಿಯ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು. ಶಾಂತಿಯ ಮಾರ್ಗವೇ ಏಕೈಕ ಆಯ್ಕೆ ಎಂದು ಭಾರತ ನಂಬುತ್ತದೆ ಎಂದು ಅವರು ಹೇಳಿದರು. ಜಗತ್ತನ್ನು ವಿಭಜನೆ ಮತ್ತು ಸಂಘರ್ಷದಿಂದ ದೂರವಿಡುವ ಮಾತುಕತೆ, ಸಹಕಾರ ಮತ್ತು ಸಮನ್ವಯದತ್ತ ಸಾಗುವ ಮತ್ತು ಒಗ್ಗಟ್ಟು ಮತ್ತು ವಿಶ್ವಾಸವನ್ನು ಹೆಚ್ಚಿಸುವ ಪ್ರತಿಯೊಂದು ಪ್ರಯತ್ನಕ್ಕೂ ಭಾರತ ಬೆಂಬಲ ನೀಡುತ್ತದೆ ಎಂದು ಅವರು ಹೇಳಿದರು.
ಭಯೋತ್ಪಾದನೆಯಿಂದ ತೊಂದೆಗೊಳಗಾದವರು ಹಾಗೂ ಭಯೋತ್ಪಾದಕರನ್ನು ಒಂದೇ ತಕ್ಕಡಿಯಲ್ಲಿ ತೂಗಬಾರದು ಎಂದು ಪ್ರಧಾನಿ ಮೋದಿ ಹೇಳಿದರು.ಭಯೋತ್ಪಾದನೆ ಇಂದು ಮಾನವೀಯತೆಗೆ ಅತ್ಯಂತ ಗಂಭೀರ ಸವಾಲಾಗಿದೆ.ಭಯೋತ್ಪಾದನೆಯ ವಿರುದ್ಧ ಕ್ರಮದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ.
ಮತ್ತಷ್ಟು ಓದಿ: ಬ್ರಿಕ್ಸ್ ರಾಷ್ಟ್ರಗಳಿಗೆ ಟ್ರಂಪ್ ಎಚ್ಚರಿಕೆ, ಅಮೆರಿಕ ವಿರೋಧಿ ನೀತಿಗಳ ಬೆಂಬಲಿಸುವ ದೇಶಗಳ ಮೇಲೆ ಶೇ.10 ಹೆಚ್ಚುವರಿ ಸುಂಕ
ಭಾರತದಲ್ಲಿ ನಡೆಯಲಿರುವ ಶೃಂಗಸಭೆಗೆ ಆಹ್ವಾನ
ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಗೆ ಪ್ರಧಾನಿ ಎಲ್ಲಾ ದೇಶಗಳನ್ನು ಆಹ್ವಾನಿಸಿದರು. ಜಗತ್ತಿನಲ್ಲಿ ಶಾಂತಿ ಮತ್ತು ಸುರಕ್ಷತೆ ಬಹಳ ಮುಖ್ಯ. ಇದು ನಮ್ಮೆಲ್ಲರಿಗೂ ಸಾಮಾನ್ಯ ಭವಿಷ್ಯದ ಅಡಿಪಾಯ. ಪರಿಸರ ಶಾಂತಿಯುತ ಮತ್ತು ಸುರಕ್ಷಿತವಾಗಿದ್ದರೆ ಮಾತ್ರ ಜನರು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಈ ಗುರಿಯನ್ನು ಸಾಧಿಸುವಲ್ಲಿ ಬ್ರಿಕ್ಸ್ ಪ್ರಮುಖ ಪಾತ್ರ ವಹಿಸಬಹುದು. ನಾವು ಒಟ್ಟಾಗಿ ಸವಾಲುಗಳನ್ನು ಎದುರಿಸಬೇಕು ಮತ್ತು ಒಟ್ಟಾಗಿ ಮುಂದುವರಿಯಬೇಕು ಎಂದು ಹೇಳಿದರು.
ಪಹಲ್ಗಾಮ್ ದಾಳಿ ಉಲ್ಲೇಖ
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಅವರು ಉಲ್ಲೇಖಿಸಿದರು. ಈ ದಾಳಿ ಭಾರತದ ಆತ್ಮ, ಗುರುತು ಮತ್ತು ಗೌರವದ ಮೇಲಿನ ನೇರ ದಾಳಿ ಎಂದು ಪ್ರಧಾನಿ ಹೇಳಿದರು. ಇದು ಕೇವಲ ಭಾರತದ ಮೇಲಿನ ದಾಳಿಯಲ್ಲ, ಇಡೀ ಮಾನವೀಯತೆಯ ಮೇಲಿನ ದಾಳಿಯಾಗಿದೆ. ಈ ಕಷ್ಟದ ಸಮಯದಲ್ಲಿ ಭಾರತವನ್ನು ಬೆಂಬಲಿಸಿದ ದೇಶಗಳಿಗೆ ಧನ್ಯವಾದ ಅರ್ಪಿಸಿದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ