
ಒಡಿಶಾ, ಫೆಬ್ರವರಿ 11: ಹೇನು(Lice) ತಾನೆ ತಲೆಯಲ್ಲಿರುವ ಸ್ವಲ್ಪ ರಕ್ತ(Blood) ಹೀರಬಹುದಷ್ಟೇ ಇನ್ನೇನು ಮಾಡುತ್ತೆ ಎಂದು ನೆಗ್ಲೆಕ್ಟ್ ಮಾಡಬೇಡಿ. ನಿಮ್ಮ ಮಕ್ಕಳ ಜೀವಕ್ಕೇ ಕುತ್ತು ತರಬಹುದು ಎಚ್ಚರ. ಸಾಮಾನ್ಯವಾಗಿ ಶಾಲೆಗೆ ಹೋಗುವ ಮಕ್ಕಳ ತಲೆಯಲ್ಲಿ ಹೇನು ಹೆಚ್ಚು. ಯಾಕೆಂದರೆ ನಿತ್ಯ ಧೂಳಿನಲ್ಲಿ ಆಟವಾಡುತ್ತಾರೆ, ಕೂದಲು ಬೆವರುತ್ತದೆ, ಅಲ್ಲಿ ಕೊಳೆ ಶೇಖರಣೆಗೊಂಡು ಹೇನಿಗೆ ಜಾಗ ಮಾಡಿಕೊಡುತ್ತದೆ. ಒಮ್ಮೆ ಒಂದು ಹೇನು ಹತ್ತಿದರೆ ಸಾಕು ಸ್ವಲ್ಪ ದಿನದಲ್ಲೇ ಅದು ನೂರಾಗುತ್ತದೆ. ಆದರೆ ಆ ಹೇನು ಎಷ್ಟು ಅಪಾಯಕಾರಿ ಎಂಬುದು ಒಡಿಶಾದಲ್ಲಿ ನಡೆದ ಘಟನೆ ಬಳಿಕವೇ ತಿಳಿದುಬಂದಿದೆ.
ಒಡಿಶಾದ ಪುರಿ ಜಿಲ್ಲೆಯಿಂದ ಬಹಳ ಆತಂಕಕಾರಿ ಪ್ರಕರಣವೊಂದು ಹೊರಬಿದ್ದಿದೆ, ಅಲ್ಲಿ ದೀರ್ಘಕಾಲದವರೆಗೆ ತಲೆಯಲ್ಲಿದ್ದ ಹೇನು ಆ ಬಾಲಕಿಯ ಜೀವವನ್ನೇ ಕಸಿದಿದೆ.ತಲೆ ಹೇನುಗಳ ಬಾಧೆಯಿಂದ ಬಳಲುತ್ತಿದ್ದ 12 ವರ್ಷದ ಬಾಲಕಿ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾಳೆ. ಬಲಂಗಾ ಪೊಲೀಸ್ ಠಾಣೆ ಪ್ರದೇಶದ ಚಂಪಗಡ ಸಾಹಿ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಗ್ರಾಮೀಣ ಪ್ರದೇಶದ ಮಕ್ಕಳ ಆರೋಗ್ಯ ಮತ್ತು ಸಕಾಲಿಕ ಚಿಕಿತ್ಸೆ ಲಭ್ಯತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಘಟನೆ ವಿವರ ಇಲ್ಲಿದೆ
ವರದಿಗಳ ಪ್ರಕಾರ ಬಾಲಕಿ ಸ್ಥಳೀಯ ಶಾಲೆಯೊಂದರಲ್ಲಿ ಆರನೇ ತರಗತಿ ಓದುತ್ತಿದ್ದಳು ಆಕೆಯ ಹೆಸರು ಲಕ್ಷ್ಮಿಪ್ರಿಯಾ ಸಾಹು. ಕುಟುಂಬ ಸದಸ್ಯರ ಪ್ರಕಾರ, ಆಕೆಯ ಹಲವು ತಿಂಗಳುಗಳಿಂದ ಹೇನಿನ ಸಮಸ್ಯೆಯಿಂದ ಬಳಲುತ್ತಿದ್ದಳು. ಆರಂಭದಲ್ಲಿ ಇದನ್ನು ಸಾಮಾನ್ಯ ಸಮಸ್ಯೆ ಎಂದು ತಳ್ಳಿ ಹಾಕಲಾಯಿತು. ಆದರೆ ಕಾಲಾನಂತರದಲ್ಲಿ ಬಾಧೆ ಮತ್ತಷ್ಟು ಹದಗೆಟ್ಟಿತ್ತು. ಸೋಂಕನ್ನು ಕಡಿಮೆ ಮಾಡಲು ಬಾಲಕಿಯ ತಾಯಿ ತಲೆ ಬೋಳಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಆದರೆ ಆಕೆ ನಿರಾಕರಿಸಿದ್ದಳು.
ಆಕೆಯ ತಲೆಯಲ್ಲಾ ಕಡಿತ ಶುರುವಾಗಿತ್ತು, ಮಾನಸಿಕವಾಗಿ ಕುಗ್ಗಿಹೋದಳು, ಶಾಲೆಗೆ ಹೋಗುವುದನ್ನೇ ಆಕೆ ನಿಲ್ಲಿಸಿದ್ದಳು. ಯಾವಾಗಲೂ ತನ್ನ ಕೂದಲನ್ನು ಕಟ್ಟಿಕೊಂಡು ಇರುತ್ತಿದ್ದರಿಂದ ಸಮಸ್ಯೆ ವಿಪರೀತವಾಗಿರುವುದು ಕುಟುಂಬ ಸದಸ್ಯರಿಗೆ ತಿಳಿಯಲೇ ಇಲ್ಲ.
ಮತ್ತಷ್ಟು ಓದಿ: ಗಂಟಲಿನ ಸೋಂಕಿನಿಂದ ಎನ್ಸಿಪಿ ನಾಯಕ ಶರದ್ ಪವಾರ್ ಆಸ್ಪತ್ರೆಗೆ ದಾಖಲು
ರಕ್ತ ವಾಂತಿ
ಮೂರು ದಿನಗಳ ಹಿಂದೆ ಬಾಲಕಿ ಇದ್ದಕ್ಕಿದ್ದಂತೆ ರಕ್ತ ವಾಂತಿ ಮಾಡಲು ಆರಂಭಿಸಿದಾಗ ಪರಿಸ್ಥಿತಿಯ ಆಳ ಕುಟುಂಬದವರಿಗೆ ಗೊತ್ತಾಗಿತ್ತು. ಆಕೆಯನ್ನು ಕೂಡಲೇ ಪುರಿಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಆಕೆಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದರು. ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ತಜ್ಞರು ಹೇಳುವುದೇನು?
ಹೆಚ್ಚಿನ ತಜ್ಞರು ಹೇನು ಜೀವಕ್ಕೆ ಅಪಾಯಕಾರಿಯಲ್ಲ ಎಂದೇ ಹೇಳುತ್ತಾರೆ, ಆದರೆ ಸೈನ್ಸ್ಡೈರೆಕ್ಟ್ನಲ್ಲಿ ಪ್ರಕಟವಾದ ಸಂಶೋಧನಾ ಅಧ್ಯಯನ ವರದಿ ಪ್ರಕಾರ, ಹೇನುಗಳು ಮಾನವ ರಕ್ತವನ್ನು ಹೀರುವ ಬಾಹ್ಯ ಪರಾವಲಂಬಿಗಳಾಗಿವೆ. ಈ ಸಮಸ್ಯೆ ಚಿಕ್ಕ ಮಕ್ಕಳು, ಅವರ ಆರೈಕೆದಾರರು ಮತ್ತು ಒಂದೇ ಮನೆಯಲ್ಲಿ ವಾಸಿಸುವ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹೇನುಗಳನ್ನು ಸಾಮಾನ್ಯವಾಗಿ ಗಂಭೀರ ಆರೋಗ್ಯ ಬೆದರಿಕೆ ಎಂದು ಪರಿಗಣಿಸಲಾಗುವುದಿಲ್ಲ ಮತ್ತು ಯಾವುದೇ ರೋಗವನ್ನು ನೇರವಾಗಿ ಹರಡುವುದಿಲ್ಲ ಎಂದು ತಿಳಿದಿಲ್ಲ. ಈ ಕಾರಣಕ್ಕಾಗಿ, ಜನರು ಅವುಗಳನ್ನು ಸಣ್ಣ ಸಮಸ್ಯೆ ಎಂದು ಪರಿಗಣಿಸಿ ನಿರ್ಲಕ್ಷಿಸುತ್ತಾರೆ. ಆದಾಗ್ಯೂ, ದೀರ್ಘಕಾಲದ ಮತ್ತು ತೀವ್ರವಾದ ಹೇನುಗಳು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು.
2020ರಲ್ಲಿ ಇಂಥದ್ದೇ ಘಟನೆ ಅಮೆರಿಕದಲ್ಲಿ ನಡೆದಿತ್ತು
ಆಗಸ್ಟ್ 26, 2020 ರಂದು ಅಮೆರಿಕದ ಜಾರ್ಜಿಯಾದ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದ 12 ವರ್ಷದ ಬಾಲಕಿಯ ಸಾವು ವೈದ್ಯಕೀಯ ಸಮುದಾಯವನ್ನು ಬೆಚ್ಚಿಬೀಳಿಸಿತ್ತು .ಸಾವಿಗೆ ಪ್ರಾಥಮಿಕ ಕಾರಣ ಹೃದಯಾಘಾತ, ಆದರೆ ತನಿಖೆಗಳು ಆಕೆಗೆ ತೀವ್ರವಾದ ಕಬ್ಬಿಣದ ಕೊರತೆಯ ರಕ್ತಹೀನತೆ ಇದೆ ಎಂದು ಬಹಿರಂಗಪಡಿಸಿವೆ, ಇದು ದೀರ್ಘಕಾಲದ, ತೀವ್ರವಾದ ತಲೆ ಹೇನುಗಳ ಬಾಧೆಯಿಂದ ಉಂಟಾದ ಸ್ಥಿತಿಯಾಗಿದೆ. ವೈದ್ಯಕೀಯ ವರದಿಗಳು ಹುಡುಗಿಗೆ ಅಸಹಜವಾಗಿ ಹೆಚ್ಚಿನ ಸಂಖ್ಯೆಯ ತಲೆ ಹೇನುಗಳಿವೆ ಎಂದು ಸೂಚಿಸಿವೆ. ನಿರಂತರ ರಕ್ತ ಹೀರುವಿಕೆಯು ರಕ್ತಹೀನತೆಗೆ ಕಾರಣವಾಯಿತು, ಇದು ಅಂತಿಮವಾಗಿ ಮಾರಕವಾಗಿದೆ.
ಹೇನುಗಳು ಎಷ್ಟು ರಕ್ತವನ್ನು ಹೀರುತ್ತೆ?
ಒಂದು ಅಧ್ಯಯನವು ವಯಸ್ಕ ಹೆಣ್ಣು ಹೇನುಗಳು ಒಂದು ಬಾರಿಗೆ ಸುಮಾರು 0.00015 ಮಿಲಿ ರಕ್ತವನ್ನು ಹೀರುತ್ತವೆ ಎಂದು ಕಂಡುಹಿಡಿದಿದೆ. ಸಾವಿರಾರು ಹೇನುಗಳು ಮಗುವಿನ ತಲೆಯ ಮೇಲಿದ್ದರೆ ಅದು ಅಪಾಯಕಾರಿ. ವಿಶೇಷವಾಗಿ ಈಗಾಗಲೇ ದುರ್ಬಲ ಅಥವಾ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಲ್ಲಿದ್ದರೆ ಎಂದೂ ಲಘುವಾಗಿ ಪರಿಗಣಿಸಬಾರದು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:31 am, Wed, 11 February 26