Odisha Train Tragedy: ರೈಲು ದುರಂತಕ್ಕೆ ಎಂತಹ ಸ್ಪಂದನೆ! ನೋಡನೋಡುತ್ತಿದ್ದಂತೆಯೇ ರಕ್ಷಣಾ ಕಾರ್ಯಾಚರಣೆ ನಡೆದ ಪರಿ, ಈ ಹಿಂದೆ ಊಹಿಸಲೂ ಆಗದಷ್ಟು ಅಚ್ಚರಿ

ಒಡಿಶಾದಲ್ಲಿ ಸಂಭವಿಸಿದ ರೈಲು ದುರಂತದಲ್ಲಿ ಸಾವಿನ ಸಂಖ್ಯೆ ಏರುತ್ತಿದೆ. ಸಾವಿರಾರು ಜನ ನರಳಾಡುತ್ತಿದ್ದಾರೆ. ಇಡೀ ದೇಶವೇ ದುಖಿಸುತ್ತಿದ್ದು, ಒಡಿಶಾ ರೈಲು ದುರಂತ ಕಂಡು ಜನ ನಡುಗಿಹೋಗಿದ್ದಾರೆ. ಇನ್ನು ಕಾರ್ಯಚರಣೆ ಹೇಗಿತ್ತು? ಆಸ್ಪತ್ರೆ ವ್ಯವಸ್ಥೆ. ಗಾಯಾಳುಗಳಿಗೆ ರಕ್ತ ನೀಡಲು ಓಡೋಡಿ ಬಂದಿದ್ದೇಗೆ? ರೈಲು ದುರಂತಕ್ಕೆ ಎಂತಹ ಸ್ಪಂದನೆ,ಈ ಹಿಂದೆ ಊಹಿಸಲೂ ಆಗದಷ್ಟು ನೋಡನೋಡುತ್ತಿದ್ದಂತೆಯೇ ರಕ್ಷಣಾ ಕಾರ್ಯಾಚರಣೆ ನಡೆದ ಪರಿ ಇಲ್ಲಿದೆ.

Odisha Train Tragedy: ರೈಲು ದುರಂತಕ್ಕೆ ಎಂತಹ ಸ್ಪಂದನೆ! ನೋಡನೋಡುತ್ತಿದ್ದಂತೆಯೇ ರಕ್ಷಣಾ ಕಾರ್ಯಾಚರಣೆ ನಡೆದ ಪರಿ, ಈ ಹಿಂದೆ ಊಹಿಸಲೂ ಆಗದಷ್ಟು ಅಚ್ಚರಿ
Follow us
ರಮೇಶ್ ಬಿ. ಜವಳಗೇರಾ
|

Updated on:Jun 04, 2023 | 3:53 PM

ಒಡಿಶಾದ (Odisha) ಬಾಲಸೋರ್‌ (Balasore) ಸನಿಹ ತ್ರಿವಳಿ ರೈಲು ಅಪಘಾತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಘನಘೋರ ದುರಂತದ ಒಂದೊಂದು ದೃಶ್ಯಗಳು ಕರುಳು ಕಿತ್ತು ಬರುವಂತಿದೆ. ಒಂದೊಂದು ದೃಶ್ಯವೂ ಭೀಕರ, ಹೃದಯ ವಿದ್ರಾವಕ, ಘನಘೋರ, ಘೋರಾತಿ ಘೋರ. ನಜ್ಜುಗುಜ್ಜಾದ ರೈಲಿನ ಬೋಗಿಗಳನ್ನ ತೆರವು ಮಾಡುತ್ತಿದ್ದಾರೆ ಹೆಣಗಳು ಸಿಕ್ಕಿವೆ. ಇದೀಗ ಬಂದ ಮಾಹಿತಿ ಪ್ರಕಾರ ಕಾರ್ಯಚರಣೆ ಅಂತ್ಯವಾಗಿದೆ. ಸತತ ಕಾರ್ಯಾಚರಣೆ ಹಾಗೂ ರಕ್ಷಣಾ ಕಾರ್ಯ ಅಂತ್ಯಗೊಂಡಿದೆ ಎಂದು ಕೇಂದ್ರ ರೈಲ್ವೇ ಸಚಿವಾಲಯ ಮಾಹಿತಿ ನೀಡಿದೆ. ಸದ್ಯ ರಕ್ಷಣಾ ಕಾರ್ಯ ಮುಗಿಸಿರುವ ತಂಡಗಳು, ಜೆಸಿಬಿ-ಕ್ರೇನ್ ಬಳಸಿ ರೈಲು ಬೋಗಿಗಳನ್ನು ಪಕ್ಕಕ್ಕೆ ಸರಿಸುವ ಕಾರ್ಯ ಸಹ ಮುಗಿಸಿದ್ದು, ಇದೀಗ ರೈಲು ಹಳಿಗಳ ದುರಸ್ತಿ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ: ರಾಜೀನಾಮೆ ಕೂಗಿನ ಮಧ್ಯೆ ಗಮನಿಸಲೇಬೇಕಾದ ರೈಲ್ವೆ ಸಚಿವರ ಕಾರ್ಯವೈಖರಿ, ಬೇರೆಲ್ಲಾ ರೈಲ್ವೆ ಸಚಿವರುಗಳಿಗಿಂತ ಅಶ್ವಿನಿ ವೈಷ್ಣವ್ ಹೇಗೆ ಭಿನ್ನ?

ರಕ್ಷಣಾ ಕಾರ್ಯಚರಣೆ ಅಂತ್ಯ

1000ಕ್ಕೂ ಸಿಬ್ಬಂದಿ ತುರ್ತು ಕಾರ್ಯಾಚರಣೆ ನಡೆಸಿ ಎಲ್ಲಾ ಕ್ಲಿಯರ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನೂರಾರು ಆಂಬ್ಯುಲೆನ್ಸ್​ಗಳು ರೋಗಿಗಳ ಪ್ರಾಣ ಉಳಿಸಲು ಕಾರ್ಯಾಚರಣೆ ನಡೆಸಿವೆ. ಬುಲ್ಡೋಜರ್​ಗಳು, ಕ್ರೇನ್​ಗಳ ಮೂಲಕ ಅಪಘಾತವಾದ ಬೋಗಿಗಳನ್ನ ತೆರವು ಮಾಡಿವೆ. ಸದ್ಯ ಮೃತರ ಸಂಖ್ಯೆ 288ಕ್ಕೆ ಏರಿಕೆಯಾಗಿದೆ. 1 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಆಸ್ಪತ್ರೆಯಲ್ಲಿ ನರಳಾಡುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅತ್ತ ಅಪಘಾತಕ್ಕೀಡಾಗಿ ಬೆಂಕಿ ಪೊಟ್ಟಣಗಳಂತೆ ಬಿದ್ದಿರುವ ಬೋಗಿಗಳ ತೆರವು ಕಾರ್ಯ ಅಂತ್ಯಗೊಂಡಿದೆ. 30ಕ್ಕೂ ಹೆಚ್ಚು ರಕ್ಷಣಾ ಪಡೆಗಳು ಸೇರಿದಂತೆ ಒಟ್ಟು 1000ಕ್ಕೂ ಅಧಿಕರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ತುರ್ತು ಕಾರ್ಯಾಚರಣೆ ನಡೆಸಿ ಎಲ್ಲಾ ಕ್ಲಿಯರ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಚರಣೆ ಹೇಗೆ ಸಾಧ್ಯವಾಯ್ತು?

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಎನ್‌ಡಿಆರ್‌ ಸಿಬ್ಬಂದಿ ರಕ್ಷಣಾ ತಂಡ ಅತಿ ಬೇಗ ಸ್ಥಳಕ್ಕೆ ಬರಲು ಪ್ರಮುಖ ಪಾತ್ರವಹಿಸಿದ್ದಾರೆ. ರೈಲಿನಲ್ಲಿದ್ದ ಎನ್‌ಡಿಆರ್‌ಎಫ್‌ ಸಿಬ್ಬಂದಿ, ತಮಿಳುನಾಡು ಮೂಲದ ವೆಂಕಟೇಶನ್ ಎನ್‌ ಕೆ (39) (Venkatesan NK) ರೈಲಿನಲ್ಲಿ ಜೋರಾದ ಶಬ್ದ ಕೇಳುತ್ತಿದ್ದಂತೆ ಹೊರಗಡೆ ಬಂದಿದ್ದಾರೆ. ರೈಲು ಅಪಘಾತ ಆಗಿರುವುದು ತಮ್ಮ ಗಮನಕ್ಕೆ ಬರುತ್ತಿದ್ದಂತೆ ಕೂಡಲೇ ಅವರು ಜಿಪಿಎಸ್ ಸ್ಥಳ ಮತ್ತು ಘಟನೆಯ ಫೋಟೋಗಳನ್ನು ಉನ್ನತ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದರಿಂದ ಸಿಬ್ಬಂದಿ ಶೀಘ್ರವೇ ಸ್ಥಳಕ್ಕೆ ಬರಲು ಸಾಧ್ಯವಾಗಿದೆ.

ಇದನ್ನೂ ಓದಿ: Railway Achievements: ಒಂದು ರೈಲುದುರಂತಕ್ಕೆ 9 ವರ್ಷದ ಸಾಧನೆ ನೀರಲ್ಲಿ ಹೋಮ ಮಾಡಿದಂತೆಯಾ? 2014ರ ಬಳಿಕ ರೈಲ್ವೆ ಇಲಾಖೆಯಲ್ಲಾದ ಬದಲಾವಣೆಗಳೇನು? ತಪ್ಪದೇ ನೋಡಿ

ಘಟನಾ ಸ್ಥಳದಲ್ಲಿ ನಿಂತು ಅಶ್ವಿನಿ ವೈಷ್ಣವ್ ರಕ್ಷಣಾ ಕಾರ್ಯಾಚರಣೆ

ಈ ವಿಷಯ ತಿಳಿತಿದ್ದಂತೆ ಅಲರ್ಟ್ ಆಗಿದ್ದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘಟನೆ ನಡೆದ 2 ಗಂಟೆಗಳಲ್ಲಿ ಸ್ಥಳಕ್ಕಾಗಮಿಸಿದ್ದರು. ಖುದ್ದು ಸ್ಥಳದಲ್ಲಿ ನಿಂತು ರಕ್ಷಣಾ ಕಾರ್ಯಾಚರಣೆ ಪರಿಶೀಲನೆ ನಡೆಸಿದ್ರು. ಅಪಘಾತದಿಂದ ನರಳಾಡುತ್ತಿದವರನ್ನು ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡಿದ್ರು. ಬಳಿಕ ಯಾವುದೇ ಹಾನಿಯಾಗದವರನ್ನು ವಿಮಾನದ ಮೂಲಕ ಸುರಕ್ಷತ ಸ್ಥಳಕ್ಕೆ ಕಳುಹಿಸಿಕೊಟ್ರು. ಬಳಿಕ ಛಿದ್ರ ಛಿದ್ರವಾಗಿದ್ದ ಬೋಗಿಗಳನ್ನ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬೋಗಿಗಳಲ್ಲಿ, ಅವುಗಳ ಮಧ್ಯೆ ಮತ್ತು ಅಡಿಯಲ್ಲಿ ಸಿಕ್ಕಿಬಿದ್ದಿರಬಹುದಾದ ಜನರನ್ನು ಹೊರತಂದು ಆಸ್ಪತ್ರೆಗಳಿಗೆ ಸಾಗಿಸುವ ಕೆಲಸ ಮಾಡಲಾಗಿದೆ.ರೇಲ್ವೇ ಸಚಿವ ಅಶ್ವಿನ್ ವೈಷ್ಣವ್ (Ashwini Vaishnaw) ಸ್ಥಳದಲ್ಲಿ ಹಾಜರಿದ್ದು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ನೋಡಿಕೊಂಡಿದ್ದಾರೆ. ಎನ್​ಡಿಆರ್​ಎಫ್, ಎಸ್ ಡಿ ಆರ್ ಎಫ್, ಅರೆ ಮಿಲಿಟರಿ ಪಡೆ, ಅಸಂಖ್ಯಾತ ಆರೋಗ್ಯ ಸಿಬ್ಬಂದಿ ಮತ್ತು ಸ್ವಯಂಸೇವಕರು ದಣಿವರಿಯದೆ ಜನರ ಪ್ರಾಣವುಳಿಸಲು ಶ್ರಮಿಸಿದ್ದಾರೆ.

ರಕ್ಷಣಾ ಕಾರ್ಯಕ್ಕೆ NDRF-SDRF, Mi-17 ಯುದ್ಧ ವಿಮಾನ ಬಳಕೆ

ಇನ್ನು ಕೂಡಲೇ ಅಲರ್ಟ್ ಆದ ಕೇಂದ್ರ ಸರ್ಕಾರ ರೈಲುಗಳ ಅಪಘಾತದಲ್ಲಿ ಸಿಲುಕಿದ್ದ ಸಾವಿರಾರು ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಗಾಗಿ, ಭಾರತೀಯ ವಾಯುಪಡೆ, ಮಿಗ್-17 ಯುದ್ಧ ವಿಮಾನವನ್ನ ನಿಯೋಜಿಸಿತ್ತು. ಶುಕ್ರವಾರ ಇಡೀ ರಾತ್ರಿ ಸತತ ರಕ್ಷಣಾ ಕಾರ್ಯಾ ನಡೆಸಿತ್ತು. ಇಷ್ಟೇ ಅಲ್ಲ ಭೀಕರ ಅವಘಡ ನಡೆದ ಸ್ಥಳಕ್ಕೆ ಧಾವಿಸಿದ ಎನ್​ಡಿಆರ್​ಎಫ್ (NDRF) ಮತ್ತು ಎಸ್​ಡಿಆರ್​ಎಫ್ ನ (SDRF) 1000ಕ್ಕೂ ಅಧಿಕ ಸಿಬ್ಬಂದಿ, ರೈಲಿನಲ್ಲಿ ಸಿಲುಕಿದ್ದ ನೂರಾರು ಜನರನ್ನ ರಕ್ಷಿಸಿದ್ದಾರೆ.

ಇಡೀ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ನೂರಾರು ಮೃತದೇಹಗಳನ್ನ ಹೊರತೆಗೆಯಲಾಗಿತ್ತು. ಗಾಯಾಳುಗಳನ್ನ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯ್ತು. ಇದಕ್ಕಾಗಿ, 200ಕ್ಕೂ ಅಧಿಕ ಆ್ಯಂಬುಲೆನ್ಸ್​ಗಳು, 50 ಬಸ್, 45ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿ ಟೆಂಟ್​ಗಳನ್ನ ನಿಯೋಜಿಸಲಾಗಿತ್ತು. ಅಷ್ಟೇ ಅಲ್ಲ 3 ಆಸ್ಪತ್ರೆಗಳನ್ನು ಗಾಯಾಳುಗಳ ಚಿಕಿತ್ಸೆಗಾಗಿಯೇ ಮೀಸಲಿಡಲಾಗಿದೆ. ಇನ್ನು ಗಾಯಾಳುಗಳಿಗೆ ಚಿಕಿತ್ಸೆ ನೀಡಲು ದೆಹಲಿಯ ಏಮ್ಸ್​ ನುರಿತ ವೈದ್ಯರ ತಂಡವೂ  ಆಗಮಿಸಿದೆ.

ಜೀವ ಉಳಿಸಿದ ಸಹಸ್ರಾರು ರಕ್ತದಾನಿಗಳು

ಇನ್ನು ಘೋರ ದುರಂತರ ನಡುವೆ ಬಾಲೆಶ್ವರ್​ನ ಸ್ಥಳೀಯರು ಮಾನವೀಯತೆಗೆ ಸಾಕ್ಷಿಯಾದರು. ಸ್ಥಳೀಯ ಆಸ್ಪತ್ರೆಗಳ ಮುಂದೆ ಸಾಲು ನಿಂತು ಮಧ್ಯರಾತ್ರಿಯಾದರೂ ಸಹ ರಕ್ತದಾನ ಮಾಡಿ ಗಾಯಾಳುಗಳಿಗೆ ನೆರವಾದರು. ವಿದ್ಯಾರ್ಥಿ ಸಂಘಟನೆಗಳು, ಎನ್​ಜಿಒ, ಹಿಂದೂ ಪರ ಸಂಘಟನೆಗಳು ಗಾಯಾಳುಗಳ ನೆರವಿಗೆ ಧಾವಿಸಿವೆ. ಗಾಯಾಳುಗಳು ಹಾಗೂ ಕುಟುಂಬಸ್ಥರಿಗೆ ಕುಡಿಯಲು, ನೀರು, ಆಹಾರ ಒದಗಿಸುತ್ತಿದ್ದಾರೆ. ತಾವೇ ಮುಂದೆ ನಿಂತು ಸಹಾಯ ಹಸ್ತ ಚಾಚುತ್ತಿದ್ದಾರೆ. ಇತ್ತ ಬಡಕುಟುಂಬಗಳು ಸಹ ತಮ್ಮ ಕೈಲಾದ ಸಹಾಯ ಮಾಡಿ ಮಾನವೀಯತೆಗೆ ಸಾಕ್ಷಿಯಾಗಿವೆ.

ರೈಲು ದುರಂತ ಸಂಭವಿಸಿದ ಮಾಹಿತಿ ಲಭಿಸುತ್ತಿದ್ದಂತೆಯೇ ರಕ್ತದಾನಿಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಸ್ಪತ್ರೆಗಳಿಗೆ ದೌಡಾಯಿಸಿ ರಕ್ತದಾನ ಮಾಡಿದ್ದಾರೆ. ಈ ಮೂಲಕ ಸಾವಿನ ಅಂಚಿನಲ್ಲಿದ್ದ ನೂರಾರು ಗಾಯಾಳುಗಳು ಹಾಗೂ ಪ್ರಯಾಣಿಕರಿಗೆ ರಕ್ತ ನೀಡಿ ಅವರ ಜೀವ ಉಳಿಸಿದ್ದಾರೆ. ರಕ್ತದಾನಿಗಳು ನಾಮುಂದು ತಾಮುಂದು ಎಂಬಂತೆ ಆಸ್ಪತ್ರೆಯ ರಕ್ತದಾನ ಕೊಠಡಿ ಮುಂದೆ ಸರದಿ ಸಾಲಲ್ಲಿ ನಿಂತಿರುವ ವಿಡಿಯೋ ಹಾಗೂ ಫೋಟೋಗಳು ವೈರಲ್‌ ಆಗಿವೆ.

ಒಂದೇ ರಾತ್ರಿ ಸುಮಾರು 4000 ಯೂನಿಟ್‌ ರಕ್ತ ಸಂಗ್ರಹ

ಅಂದ ಹಾಗೆ ಒಡಿಶಾದಲ್ಲಿ ಶುಕ್ರವಾರ ಸಂಜೆ ಈ ದುರಂತ ಸಂಭವಿಸುತ್ತಿದ್ದಂತೆ ಇಡೀ ರಾಜ್ಯಾದ್ಯಂತ ಸುದ್ದಿ ಹಬ್ಬಿತ್ತು. ಪಕ್ಕದೂರಿನ ಮಂದಿಗಳೆಲ್ಲ ತಕ್ಷಣ ಘಟನಾ ಸ್ಥಳಕ್ಕೆ ಬಂದು ಸರ್ಕಾರದ ರಕ್ಷಣಾ ಸಿಬ್ಬಂದಿ ಬರುವ ಮುನ್ನವೇ ತಾವು ರೈಲಿನಲ್ಲಿ ಸಿಲುಕಿದ್ದ ಜನರನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ತೊಡಗಿದ್ದರು. ಮತ್ತೊಂದೆಡೆ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ರಕ್ತದ ಅವಶ್ಯಕತೆ ಇದೆ ಎಂದು ವಾಟ್ಸಾಪ್‌ ಮೂಲಕ ಕಳುಹಿಸಿದ ಸಂದೇಶಗಳನ್ನು ನೋಡಿಕೊಂಡೇ ನೂರಾರು ಮಂದಿ ಆಸ್ಪತ್ರೆಗೆ ಬಂದು ನಾವು ರಕ್ತ ನೀಡುತ್ತೇವೆ ತೆಗೆದುಕೊಳ್ಳಿ ಎಂದು ವೈದ್ಯರಿಗೆ ಮನವಿ ಮಾಡಿದಾಗ ಅಲ್ಲಿದ್ದವರಿಗೆ ಮಾನವೀಯತೆಯ ದರ್ಶನವಾಗಿದೆ.

ಕಟಕ್‌ ಎಸ್‌ಸಿಬಿ ಮೆಡಿಕಲ್‌ ಕಾಲೇಜು ಮುಖ್ಯಸ್ಥ ಡಾ. ಜಯಂತ ಪಾಂಡಾ (Jayanth Panda) ಮಾತನಾಡಿ, ಯುವಕರು ಭಾರಿ ಪ್ರತಿಕ್ರಿಯೆ ತೋರಿದರು. ನೂರಾರು ಯುವಕರು ನಮ್ಮಲ್ಲಿಗೆ ಬಂದು ರಕ್ತದಾನ ಮಾಡಿದರು. ಕಟಕ್‌, ಭದ್ರಕ್‌ ಹಾಗೂ ಬಾಲಸೋರ್‌ನಲ್ಲಿ ಶುಕ್ರವಾರ(ಅಪಘಾತ ಸಂಭವಿಸಿದ ದಿನ) ಒಂದೇ ರಾತ್ರಿ ಒಟ್ಟು 4000 ಯೂನಿಟ್‌ ರಕ್ತ ಸಂಗ್ರಹ ಆಗಿದೆ. ಅದನ್ನು ಅಗತ್ಯವಿರುವ ಗಾಯಾಳುಗಳಿಗೆ ನೀಡಿ ಪ್ರಾಣ ಕಾಪಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಬಾಲಸೋರ್‌ ಜಿಲ್ಲಾಸ್ಪತ್ರೆಯ ಉಪ ಮುಖ್ಯಸ್ಥ ಡಾ ಮೃತ್ಯುಂಜಯ ಮಿಶ್ರಾ (Mritunjaya Mishra) ಮಾತನಾಡಿ, ರಕ್ತದಾನಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಯುವಕರು ಬಂದಿದ್ದು ನೋಡಿಯೇ ನಮಗೆ ಅಚ್ಚರಿ ಆಯಿತು. ನಮ್ಮ ಆಸ್ಪತ್ರೆಯೊಂದರಲ್ಲೇ ಶುಕ್ರವಾರ ರಾತ್ರಿ 500 ಯೂನಿಟ್‌ ರಕ್ತ ಸಂಗ್ರಹಿಸಲಾಗಿದೆ. ರಕ್ತದಾನಿಗಳಿಗೆ ಧನ್ಯವಾದ. ಅವರ ರಕ್ತದಾನದಿಂದ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅದೇನೇ ಇರಲಿ ದುರಂತ ಸಂಭವಿಸಿದ ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಲ್ಲದೇ, ರಕ್ತದ ಅವಶ್ಯಕತೆ ಇದೆ ಎಂದ ತಕ್ಷಣ ಆಸ್ಪತ್ರೆಗೆ ಆಗಮಿಸಿ ರಕ್ತದಾನಕ್ಕೆ ಮುಂದಾದ ನೂರಾರು ಮಂದಿ ಒಡಿಶಾ ರಾಜ್ಯದ ಜನರ ಸೇವಾ ಮನೋಭಾವಕ್ಕೆ ರಾಷ್ಟ್ರಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

ಇಂತಹ ಘನ ಘೋರ ದುರಂತಗಳು ಸಂಭವಿಸಿದ್ದಾಗ ಈ ಹಿಂದಿನ ಕೇಂದ್ರ ಸರ್ಕಾರ ಈ ರೀತಿಯ ರಕ್ಷಣಾ ಕಾರ್ಯಚರಣೆ ಮಾಡಿದ ಉದಾಹರಣೆಗಳಿಲ್ಲ. ಆಗ ಯುದ್ಧ ವಿಮಾನಗಳು, ರಕ್ಷಣಾ ಇಲಾಖೆಯನ್ನು ಸಮರ್ಪಕವಾಗಿ ಬಳಕೆಯಾಗುತ್ತಿರಲಿಲ್ಲ.  ಅಲ್ಲದೇ ಘಟನೆಗಳು ನಡೆದಾಗ ಕ್ಷಿಪ್ರ ತೀರ್ಮಾನ ಬಹಳ ಕಡಿಮೆ. ಹಾಗೇ ಆ್ಯಂಬುಲೆನ್ಸ್ ಕೊರತೆಯಿಂದಾಗಿ ಸಾವು-ನೋವುಗಳು ಹೆಚ್ಚಾಗುತ್ತಿದ್ದವು. ಇದೀಗ ಎನ್​ಡಿಎ ಸರ್ಕಾರ ಬಂದಾಗಿನಿಂದ ಯಾವುದೇ ದೊಡ್ಡ ದುರಂತಗಳು ಸಂಭವಿಸುತ್ತಿದ್ದಂತೆಯೇ ಮೊದಲು ರಕ್ಷಣಾ ಕಾರ್ಯಕ್ಕೆ ಬೇಕಾದ ಯುದ್ಧ ವಿಮಾನಗಳು, ಹೆಲಿಕಾಪ್ಟರ್​ಗಳು, ರಕ್ಷಣ ಇಲಾಖೆ ಸ್ಥಳದಲ್ಲಿ ಮೂಕಂ ಹೂಡಿ ಕಾರ್ಯಚರಣೆಗಿಳಿಯುತ್ತವೆ.

Published On - 3:27 pm, Sun, 4 June 23