ಎಲ್ಜಿಯನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಒಮರ್ ಅಬ್ದುಲ್ಲಾ; ಮುಂದಿನ ವಾರ ಪ್ರಮಾಣವಚನ ಸ್ವೀಕಾರ ಸಾಧ್ಯತೆ
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಭರ್ಜರಿ ಗೆಲುವಿನ ನಂತರ ಒಮರ್ ಅಬ್ದುಲ್ಲಾ ಅವರು ನ್ಯಾಷನಲ್ ಕಾನ್ಫರೆನ್ಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇಂದು ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿಯಾದ ಒಮರ್ ಅಬ್ದುಲ್ಲಾ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.
ಶ್ರೀನಗರ: ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಮತ್ತು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಅಭ್ಯರ್ಥಿ ಒಮರ್ ಅಬ್ದುಲ್ಲಾ ಅವರು ಇಂದು ಸಂಜೆ (ಅಕ್ಟೋಬರ್ 11) ಜಮ್ಮು ಮತ್ತು ಕಾಶ್ಮೀರದ ಎಲ್‌ಜಿ ಮನೋಜ್ ಸಿನ್ಹಾ ಅವರನ್ನು ಭೇಟಿಯಾದರು. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗಿನ ತಮ್ಮ ಪಕ್ಷದ ನೇತೃತ್ವದ ಮೈತ್ರಿ ಬಹುಮತದೊಂದಿಗೆ ಜಯಗಳಿಸಿದ ನಂತರ ಅವರು ಸರ್ಕಾರ ರಚಿಸಲು ಬೆಂಬಲ ಪತ್ರವನ್ನು ನೀಡಿದರು. ಬಹುತೇಕ ಅವರು ಬುಧವಾರ (ಅಕ್ಟೋಬರ್ 16) ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.
ಒಮರ್ ಅಬ್ದುಲ್ಲಾ ಗುರುವಾರ ನ್ಯಾಷನಲ್ ಕಾನ್ಫರೆನ್ಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು. ಅವರ ತಂದೆ ಮತ್ತು ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಈ ಬಾರಿಯ ವಿಧಾನಸಭಾ ಚುನಾವಣಾ ವಿಜಯದ ನಂತರ, ಒಮರ್ ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಯಾಗುತ್ತಾರೆ ಎಂದು ಘೋಷಿಸಿದರು.
ಇದನ್ನೂ ಓದಿ: ಜಮ್ಮು ಕಾಶ್ಮೀರದ ನಾಯಕ ಒಮರ್ ಅಬ್ದುಲ್ಲಾ ಪ್ರಧಾನಿ ಮೋದಿಯತ್ತ ವಾಲುತ್ತಿರುವುದೇಕೆ?
ಇಂದು ಎಲ್ಜಿಯನ್ನು ಭೇಟಿಯಾಗಿ ಪ್ರಮಾಣ ವಚನ ಸಮಾರಂಭದ ದಿನಾಂಕವನ್ನು ನಿಗದಿಪಡಿಸುವಂತೆ ಮನವಿ ಮಾಡಿದ್ದೇನೆ. 2 ರಿಂದ 3 ದಿನಗಳಲ್ಲಿ ಯಾವ ದಿನಾಂಕದಂದು ಪ್ರಮಾಣವಚನ ಸ್ವೀಕರಿಸುವುದೆಂದು ನಿರ್ಧಾರವಾಗುವ ನಿರೀಕ್ಷೆಯಿದೆ ಎಂದು ಒಮರ್ ಹೇಳಿದರು. ಮಂಗಳವಾರದೊಳಗೆ ಪ್ರಕ್ರಿಯೆ ಪೂರ್ಣಗೊಂಡರೆ ಬುಧವಾರವೇ ಸಮಾರಂಭ ನಡೆಯುವ ನಿರೀಕ್ಷೆ ಇದೆ ಎಂದರು.
#WATCH | Srinagar: After meeting LG Manoj Sinha, Jammu and Kashmir National Conference Vice President Omar Abdullah says, “I met the LG and handed over letters of support that I have received from the Congress, CPM, AAP and independents. I requested him to fix a date for the… pic.twitter.com/ecF6EBgCur
— ANI (@ANI) October 11, 2024
“ನಾನು ಎಲ್‌ಜಿ ಅವರನ್ನು ಭೇಟಿಯಾಗಿ ಕಾಂಗ್ರೆಸ್, ಸಿಪಿಎಂ, ಎಎಪಿ ಮತ್ತು ಸ್ವತಂತ್ರ ಪಕ್ಷಗಳಿಂದ ಪಡೆದ ಬೆಂಬಲ ಪತ್ರಗಳನ್ನು ಹಸ್ತಾಂತರಿಸಿದೆ. ಪ್ರಮಾಣವಚನ ಸಮಾರಂಭದ ದಿನಾಂಕವನ್ನು ನಿಗದಿಪಡಿಸುವಂತೆ ನಾನು ಅವರಿಗೆ ಮನವಿ ಮಾಡಿದ್ದೇನೆ. ಇದರಿಂದ ಸರ್ಕಾರವು ಬೇಗ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ಇಲ್ಲಿ ಕೇಂದ್ರದ ನಿಯಮವಿರುವುದರಿಂದ ಎಲ್‌ಜಿಯವರು ಮೊದಲು ದಾಖಲೆಗಳನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸುತ್ತಾರೆ. ಅದು 2-3 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ. ಈ ಸರ್ಕಾರದಲ್ಲಿ ಜಮ್ಮುವನ್ನು ಕಡೆಗಣಿಸುವುದಿಲ್ಲ ಎಂದು ನಾನು ಹೇಳಬಯಸುತ್ತೇನೆ” ಎಂದು ಎಲ್‌ಜಿ ಅವರನ್ನು ಭೇಟಿಯಾದ ನಂತರ ಒಮರ್ ಅಬ್ದುಲ್ಲಾ ಹೇಳಿದರು.
ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಒಮರ್ ಅಬ್ದುಲ್ಲಾರ ಪಕ್ಷ ಬೆಂಬಲಿಸುವುದಾಗಿ ಘೋಷಿಸಿದ ಆಮ್ ಆದ್ಮಿ ಪಕ್ಷ
ಒಮರ್ ಅಬ್ದುಲ್ಲಾ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (ಜೆಕೆಎನ್‌ಸಿ) ಗುರುವಾರ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ನಾಲ್ವರು ಸ್ವತಂತ್ರ ಶಾಸಕರು ಪಕ್ಷಕ್ಕೆ ಸೇರುವ ನಿರ್ಧಾರದ ನಂತರ ಬಹುಮತವನ್ನು ಸಾಧಿಸಿದೆ. ಈ ಸೇರ್ಪಡೆಯೊಂದಿಗೆ ಅಸೆಂಬ್ಲಿಯಲ್ಲಿ ಎನ್‌ಸಿಯ ಬಲವು 46ಕ್ಕೆ ಏರಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಕೂಡ ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಗೆ ತನ್ನ ಬೆಂಬಲವನ್ನು ಅಧಿಕೃತವಾಗಿ ಘೋಷಿಸಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ