Omicron in India: ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ್ದ ವ್ಯಕ್ತಿಗೆ ಒಮಿಕ್ರಾನ್ ಪಾಸಿಟಿವ್: ಗುಜರಾತ್​ನಲ್ಲಿ ಆತಂಕ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 04, 2021 | 3:23 PM

ಜಾಮ್​ನಗರದ 72 ವರ್ಷಗಳ ವೃದ್ಧರೊಬ್ಬರು ಇತ್ತೀಚೆಗಷ್ಟೇ ಝಿಂಬಾಬ್ವೆಯಿಂದ ಹಿಂದಿರುಗಿದ್ದರು. ಅವರಲ್ಲಿ ನಿನ್ನೆಯಷ್ಟೇ ಕೊವಿಡ್ ದೃಢಪಟ್ಟಿತ್ತು

Omicron in India: ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ್ದ ವ್ಯಕ್ತಿಗೆ ಒಮಿಕ್ರಾನ್ ಪಾಸಿಟಿವ್: ಗುಜರಾತ್​ನಲ್ಲಿ ಆತಂಕ
ಒಮಿಕ್ರಾನ್
Follow us on

ಜಾಮ್​ನಗರ: ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ್ದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ವೈರಸ್​ನ ಒಮಿಕ್ರಾನ್ ರೂಪಾಂತರದ ಸೋಂಕು ಶನಿವಾರ ಪತ್ತೆಯಾಗಿದೆ. ಜಾಮ್​ನಗರದ 72 ವರ್ಷಗಳ ವೃದ್ಧರೊಬ್ಬರು ಇತ್ತೀಚೆಗಷ್ಟೇ ಝಿಂಬಾಬ್ವೆಯಿಂದ ಹಿಂದಿರುಗಿದ್ದರು. ಅವರಲ್ಲಿ ನಿನ್ನೆಯಷ್ಟೇ ಕೊವಿಡ್ ದೃಢಪಟ್ಟಿತ್ತು. ಪ್ರಸ್ತುತ ಅವರಿಗೆ ಸರ್ಕಾರಿ ಸ್ವಾಮ್ಯದ ಜಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಝಿಂಬಾಬ್ವೆಯಿಂದ ಜಾಮ್​ನಗರಕ್ಕೆ ಕಳೆದ ವಾರ ಭಾರತೀಯ ಮೂಲದ ಮೂವರು ಹಿಂದುರುಗಿದ್ದರು. ಒಬ್ಬರ ಪರೀಕ್ಷಾ ವರದಿ ಮಾತ್ರ ಬಂದಿದೆ. ಉಳಿದಿಬ್ಬರ ವರದಿಗಳು ಇನ್ನೂ ಬಾಕಿಯಿವೆ. ಜಿನೋಮ್ ಸೀಕ್ವೆನ್ಸ್​ಗೆ ಮಾದರಿಗಳನ್ನು ಕಳಿಸಲಾಗಿದ್ದು, ರೂಪಾಂತರವನ್ನು ನಿರ್ದಿಷ್ಟವಾಗಿ ಪತ್ತೆಹಚ್ಚಲು ಯತ್ನಿಸಲಾಗುತ್ತಿದೆ ಎಂದು ಜಾಮ್​ನಗರ ನಗರಸಭೆ ಆಯುಕ್ತ ವಿಜಯ್ ಖಾರಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇತ್ತೀಚೆಗಷ್ಟೇ ಜಾಮ್​ನಗರದ ಒಂದೇ ಕುಟುಂಬದ ಎಂಟು ಮಂದಿಯಲ್ಲಿ ಕೊವಿಡ್ ದೃಢಪಟ್ಟಿತ್ತು. ಜುನಾಗಡದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಈ ಕುಟುಂಬ ಇಬ್ಬರು ಮನೆಗಳಿಗೆ ಹಿಂದಿರುಗಿದ ನಂತರ ಸೋಂಕು ದೃಢಪಟ್ಟಿತ್ತು. ಇವರು ಮದುವೆ ಮುಗಿದ ನಂತರ ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮದ ಬಸ್​ಗಳಲ್ಲಿ ಜಾಮ್​ನಗರಕ್ಕೆ ಹಿಂದಿರುಗಿದ್ದರು. ಈ ಬೆಳವಣಿಗೆಯು ಜುನಾಗಡದಲ್ಲಿ ಕೊರೊನಾ ಹರಡಬಹುದು ಎಂಬ ಆತಂಕ ಹುಟ್ಟುಹಾಕಿದೆ.

ಒಮಿಕ್ರಾನ್ ಸೋಂಕಿತ ವೈದ್ಯ ಬಿಚ್ಚಿಟ್ಟ ಮಾಹಿತಿ
ಬೆಂಗಳೂರು: ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿ ಜಗತ್ತನ್ನೇ ನಡುಗಿಸಿರೋ ಒಮಿಕ್ರಾನ್, ಕರ್ನಾಟಕದಲ್ಲಿಯೂ ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಎರಡು ಕೇಸ್ ಪತ್ತೆಯಾಗಿದೆ ಅನ್ನೋದು ಗೊತ್ತಾಗ್ತಿದ್ದಂತೆ ಸರ್ಕಾರ ಅಲರ್ಟ್ ಆಗಿದೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಚಿವರು, ತಜ್ಞರು ಮತ್ತು ಅಧಿಕಾರಿಗಳ ಸಭೆ ನಡೆಸಿದ್ದು, ಮತ್ತೆ ಕಟ್ಟುಪಾಡುಗಳನ್ನ ಬಿಗಿಗೊಳಿಸೋಕೆ, ಹಳೇ ನಿಯಮಗಳನ್ನ ಜಾರಿಗೆ ತರೋಕೆ ಹೊಸ ಅಸ್ತ್ರ ಪ್ರಯೋಗಿಸಿದೆ. ಸದ್ಯ ಒಮಿಕ್ರಾನ್ ವೈರಸ್‌ ಕಂಡು ಬಂದವರಲ್ಲಿ ಒಬ್ಬರಾದ ವೈದ್ಯ ಸೋಂಕಿನ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಇಬ್ಬರಲ್ಲಿ ಒಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿದೆ. 66 ವರ್ಷದ ವೃದ್ಧ, 46 ವರ್ಷದ ವ್ಯಕ್ತಿಗೆ ಒಮಿಕ್ರಾನ್ ಸೋಂಕು ತಗುಲಿದೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿತ್ತು. ಸದ್ಯ ಒಮಿಕ್ರಾನ್ ವೈರಸ್‌ಗೆ ಚಿಕಿತ್ಸೆ ಪಡೆಯುತ್ತಿರುವ 46 ವರ್ಷದ ವೈದ್ಯ ಸೋಂಕಿನ ಲಕ್ಷಣದ ಬಗ್ಗೆ ಮಾಹಿತಿ ನೀಡಿದ್ದಾರೆ. ನನಗೆ ಸೋಂಕು ಬಂದು 13 ದಿನ ಆಗಿದೆ. ಸದ್ಯಕ್ಕೆ ನಾನು ಆರೋಗ್ಯವಾಗಿದ್ದೇನೆ ನನ್ನಲ್ಲಿ ಸಣ್ಣ ಪುಟ್ಟ ರೋಗ ಲಕ್ಷಣಗಳಿವೆ. ನನಗೆ ಯಾರಿಂದ ಸೋಂಕು ಬಂತೆಂದು ಗೊತ್ತಿಲ್ಲ. ನಾನು ಯಾವುದೇ ವಿದೇಶ ಪ್ರಯಾಣ ಮಾಡಿಲ್ಲ. ನವೆಂಬರ್‌ನಲ್ಲಿ ವೈದ್ಯರ ಸಮ್ಮೇಳನದಲ್ಲಿ ಭಾಗಿಯಾಗಿದ್ದೆ. ಆ ಸಭೆಗೆ ದೇಶ, ವಿದೇಶದ ವೈದ್ಯರು ಬಂದಿದ್ದರು. ಆ ಸಭೆಯ ಬಳಿಕ ನನಗೆ ರೋಗ ಲಕ್ಷಣ ಪತ್ತೆಯಾಗಿತ್ತು ಎಂದು ಒಮಿಕ್ರಾನ್ ಸೋಂಕಿತ ವೈದ್ಯ ತಿಳಿಸಿದ್ದಾರೆ.

ನವೆಂಬರ್ 20ರಂದು ವೈದ್ಯರ ಸಮ್ಮೇಳನ ನಡೆದಿತ್ತು. ನವೆಂಬರ್ 21ರ ಸಂಜೆ ನನಗೆ ಮೈಕೈ ನೋವು ಕಾಣಿಸಿತು.ಚಳಿ ಮತ್ತು ಜ್ವರ ಮಾತ್ರ ಕಾಣಿಸಿಕೊಂಡಿತ್ತು. ನವೆಂಬರ್ 22ರಂದು ನಾನು ಟೆಸ್ಟ್ ಮಾಡಿಸಿದೆ. ಟೆಸ್ಟ್‌ನಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಆಗ ಕೊಠಡಿಯಲ್ಲೇ ನಾನು ಸ್ವಯಂ ಐಸೋಲೇಷನ್ ಆಗಿದ್ದೆ. ನನ್ನ ಜೊತೆಗಿದ್ದವರೂ ಟೆಸ್ಟ್ ಮಾಡಿಸಿದ್ದರು. ಸದ್ಯ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಜಿನೋಮಿಕ್ ಸೀಕ್ವೆನ್ಸ್‌ನಲ್ಲಿ ನನಗೆ ಒಮಿಕ್ರಾನ್ ದೃಢವಾಗಿದೆ. ಒಮಿಕ್ರಾನ್ ದೃಢವಾದ ಬಳಿಕ ಚಿಕಿತ್ಸೆ ಪಡೆಯುತ್ತಿದ್ದೇನೆ. ಒಮಿಕ್ರಾನ್‌ಗೆ ವಿಶೇಷವಾದ ಟ್ರೀಟ್ಮೆಂಟ್ ಏನೂ ಇಲ್ಲ. ನಿತ್ಯ ವೈದ್ಯರ ನಿಗಾ ಇದೆ, ಚೇತರಿಸಿಕೊಳ್ಳುತ್ತಿದ್ದೇನೆ ಎಂದರು.

ಇದನ್ನೂ ಓದಿ: ಒಮಿಕ್ರಾನ್​ ವಿರುದ್ಧ ಹೋರಾಟಕ್ಕೆ ಕೊವಿಡ್ 19 ಲಸಿಕೆ ಬೂಸ್ಟರ್​ ಡೋಸ್​ ಅಗತ್ಯ?-ಡಿ.7ಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಸಭೆ
ಇದನ್ನೂ ಓದಿ: ಒಮಿಕ್ರಾನ್ ತಡೆಗೆ ಕರ್ನಾಟಕ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ: ನೀವು ತಿಳಿಯಲೇಬೇಕಾದ 20 ಅಂಶಗಳಿವು