ಆನ್​ಲೈನ್​ನಲ್ಲಿ ಜೀವ ವಿಮಾ ಪಾಲಿಸಿ ರದ್ದುಗೊಳಿಸಲು ಹೋಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ವ್ಯಕ್ತಿ

ಸಂತ್ರಸ್ತರು ಭೋಪಾಲ್‌ನ ಅರೇರಾ ಕಾಲೋನಿಯ ನಿವಾಸಿಯಾಗಿದ್ದು, ವಂಚನೆಯ ಆರೋಪದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ಶುರುಮಾಡಿದ್ದಾರೆ.

ಆನ್​ಲೈನ್​ನಲ್ಲಿ ಜೀವ ವಿಮಾ ಪಾಲಿಸಿ ರದ್ದುಗೊಳಿಸಲು ಹೋಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ವ್ಯಕ್ತಿ
ಸಾಂದರ್ಭಿಕ ಚಿತ್ರ
Edited By:

Updated on: Sep 04, 2021 | 8:48 AM

ಭೋಪಾಲ್: ಆನ್‌ಲೈನ್ ವಂಚನೆಯ ಜಾಲಕ್ಕೆ ಸಿಲುಕಿ ನಿವೃತ್ತ ಡಿಜಿಪಿಯ ಪುತ್ರನೇ ಮೋಸ ಹೋದ ಘಟನೆ ಭೋಪಾಲ್‌ನಲ್ಲಿ ನಡೆದಿದೆ. ಆನ್‌ಲೈನ್ ವಂಚಕರು ಡಿಜಿಪಿಯ ಪುತ್ರನಿಂದ 3.16 ಲಕ್ಷ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಖಾಸಗಿ ಕಂಪನಿಯಿಂದ ನೀಡಲಾದ ತನ್ನ ಮೂರು ಜೀವ ವಿಮಾ ಪಾಲಿಸಿಗಳನ್ನು ರದ್ದುಗೊಳಿಸಲು ಅತುಲ್ ಕುಮಾರ್ ಜೈನ್ ಎಂಬುವವರು ಬಿಮಾ ಲೋಕಪಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಜುಲೈ 31 ರಂದು ವಂಚನೆ ನಡೆದಿದ್ದು, ಸದ್ಯ ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. 

ವರದಿಯ ಪ್ರಕಾರ, 66 ವರ್ಷದ ಅತುಲ್ ಕುಮಾರ್ ಜೈನ್, ಕಂಪನಿಯಿಂದ ಮೂರು ಜೀವ ವಿಮೆ ಖರೀದಿಸಿದ್ದರು. ಅವರು ಅದನ್ನು ರದ್ದುಗೊಳಿಸಲು ಅಂತರ್ಜಾಲದ ಮೊರೆ ಹೋಗಿದ್ದರು. ಅಲ್ಲಿ ಹುಡುಕಾಡಿದಾಗ ಸಿಕ್ಕ ಮಾಹಿತಿ ಆಧರಿಸಿ ಆನ್‌ಲೈನ್ ಅರ್ಜಿ ನಮೂನೆಯನ್ನು ಬಿಮಾ ಲೋಕಪಾಲಕ್ಕೆ ತುಂಬಿ ಕಳುಹಿಸಿದ್ದಾರೆ.

ಆದರೆ, ಅದಾದ ಕೆಲವು ದಿನಗಳ ನಂತರ ಅಪರಿಚಿತ ಸಂಖ್ಯೆಯಿಂದ ಅವರಿಗೆ ಕರೆ ಬಂದಿದೆ. ವರದಿಯ ಪ್ರಕಾರ, ಕರೆ ಮಾಡಿದವರು ತನ್ನನ್ನು ಭಾರತೀಯ ರಿಸರ್ವ್ ಬ್ಯಾಂಕಿನ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾರೆ. ಪ್ರತಿ ಪಾಲಿಸಿಗೆ ಮರುಪಾವತಿಸಬಹುದಾದ ಪ್ರೊಸೆಸಿಂಗ್ ಶುಲ್ಕವಾಗಿ 4,500 ರೂ.ಗಳನ್ನು ಪಾವತಿಸುವಂತೆ ಆರೋಪಿಗಳು ಜೈನ್ ಅವರನ್ನು ಕೇಳಿದ್ದಾರೆ. ಬಳಿಕ ಜುಲೈ 31 ರಂದು ಮತ್ತೆ ಕರೆ ಮಾಡಿದ ಆರೋಪಿಗಳು ಯಾರೋ ಇಬ್ಬರು ಮರಣ ಪ್ರಮಾಣಪತ್ರವನ್ನು ಸಲ್ಲಿಸಿದ್ದರಿಂದ ನಿಮ್ಮ ವಿನಂತಿಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಅದನ್ನು ಕೇಳಿ ಗೊಂದಲಗೊಂಡ ಅತುಲ್ ಕುಮಾರ್ ಜೈನ್ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಲೆಂದು ಅವರನ್ನು ವಿನಂತಿಸಿಕೊಂಡು, ಆರೋಪಿಗಳು ಬೇಡಿಕೆ ಇಟ್ಟ ರೀತಿಯಲ್ಲಿ ಕಂತುಗಳಲ್ಲಿ ಹಣ ಪಾವತಿಸಿದ್ದಾರೆ.

ಸಂತ್ರಸ್ತರು ಭೋಪಾಲ್‌ನ ಅರೇರಾ ಕಾಲೋನಿಯ ನಿವಾಸಿಯಾಗಿದ್ದು, ವಂಚನೆಯ ಆರೋಪದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ಶುರುಮಾಡಿದ್ದಾರೆ. ಹಣವನ್ನು ದೆಹಲಿಯ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ವರದಿಯಾಗಿದೆ. ಆರೋಪಿಯನ್ನು ಬಂಧಿಸಲು ಪೊಲೀಸರು ತಂಡವನ್ನು ರಾಷ್ಟ್ರ ರಾಜಧಾನಿಗೆ ಕಳುಹಿಸಿದ್ದಾರೆ.

(Online fraud a person lost more than 3 lakhs while cancelling his insurance policies online)

ಇದನ್ನೂ ಓದಿ:
ಬೀದರ್: ಎಲ್ಐಸಿ ಮಾಡಿಸುವುದಾಗಿ 165 ಅಂಗನವಾಡಿ ಕಾರ್ಯಕರ್ತೆಯರಿಗೆ ವಂಚನೆ ಆರೋಪ 

ಐಟಿ ಪ್ರಾಜೆಕ್ಟ್​ ಕೊಡಿಸುತ್ತೇನೆಂದು 50 ಲಕ್ಷಕ್ಕೂ ಹೆಚ್ಚು ಹಣ ಪಡೆದು ಅಕ್ಕ ತಮ್ಮನಿಂದ ಮೋಸ; ತಮ್ಮನ ಬಂಧನ, ಅಕ್ಕನಿಗಾಗಿ ತಲಾಶ್