Oommen Chandy: ನ್ಯುಮೋನಿಯಾದಿಂದ ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ ಆಸ್ಪತ್ರೆಗೆ ದಾಖಲು
ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ ಅವರು ನ್ಯುಮೋನಿಯಾ ಮತ್ತು ತೀವ್ರ ಜ್ವರದಿಂದ ಸೋಮವಾರ ತಿರುವನಂತಪುರಂನ ನೆಯ್ಯಟ್ಟಿಂಕರ ಪ್ರದೇಶದ ನಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಿರುವನಂತಪುರಂ: ಕೇರಳದ (Kerala) ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ (Oommen Chandy) ಅವರಿಗೆ ನ್ಯುಮೋನಿಯಾ ಮತ್ತು ತೀವ್ರ ಜ್ವರ ಕಾಣಿಸಿಕೊಂಡಿದ್ದು, ಸೋಮವಾರ ಸಂಜೆ ತಿರುವನಂತಪುರಂನಲ್ಲಿರುವ (Tiruvanantapuram) ನೂರುಲ್ ಇಸ್ಲಾಂ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ನಿಮ್ಸ್)ಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಬಗ್ಗೆ ಉಮ್ಮನ್ ಚಾಂಡಿ ಅವರ ಮಗ ಫೇಸ್‌ಬುಕ್ ಲೈವ್ ವಿಡಿಯೋ ಮಾಡಿದ್ದು, 79 ವರ್ಷದ ಉಮ್ಮನ್ ಚಾಂಡಿ ನ್ಯುಮೋನಿಯಾ ಮತ್ತು ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೆ ಮಾಡಿ ನಮ್ಮ ತಂದೆಯ ಆರೋಗ್ಯ ವಿಚಾರಿಸಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
Kerala | Ex-CM Oommen Chandy admitted to NIMS hospital, Neyyattinkara last night. His son Chandy Oommen, in a Facebook post, stated that the ex-CM has been diagnosed with slight pneumonia and hospitalised with high fever
State’s Health Min Veena George met him today.
(File pic) pic.twitter.com/TRP8PJWVNx
— ANI (@ANI) February 7, 2023
ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಮಂಗಳವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಾಗಿರುವ ಉಮ್ಮನ್ ಚಾಂಡಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ ಅವರು ನ್ಯುಮೋನಿಯಾ ಮತ್ತು ತೀವ್ರ ಜ್ವರದಿಂದ ಸೋಮವಾರ ತಿರುವನಂತಪುರಂನ ನೆಯ್ಯಟ್ಟಿಂಕರ ಪ್ರದೇಶದ ನಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೂ ಅವರ ಆರೋಗ್ಯದ ಬಗ್ಗೆ ಆಸ್ಪತ್ರೆಯಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
ಇದನ್ನೂ ಓದಿ: ಸೋಲಾರ್ ಹಗರಣದ ಆರೋಪಿಯ ಲೈಂಗಿಕ ಕಿರುಕುಳ ಪ್ರಕರಣ: ಕೇರಳ ಸಿಎಂ ನಿವಾಸದಲ್ಲಿ ಸಿಬಿಐ ಪರಿಶೀಲನೆ
ಇತ್ತೀಚೆಗಷ್ಟೇ ಸೋಲಾರ್ ಹಗರಣದ ಪ್ರಮುಖ ಆರೋಪಿ ಮಹಿಳೆಯೊಬ್ಬರು ಉಮ್ಮನ್ ಚಾಂಡಿ ವಿರುದ್ಧ ಮಾಡಿದ್ದ ಅತ್ಯಾಚಾರದ ಆರೋಪ ಪ್ರಕರಣದಲ್ಲಿ ಉಮ್ಮನ್ ಚಾಂಡಿಗೆ ಸಿಬಿಐ ಕ್ಲೀನ್ ಚಿಟ್ ನೀಡಿತ್ತು. ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು. ಸೋಲಾರ್ ಶಕ್ತಿ ಹಗರಣದ ಆರೋಪಿ ಸರಿತಾ ನಾಯರ್ ಅವರು ಉಮ್ಮನ್ ಚಾಂಡಿ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದರು. 2012ರಲ್ಲಿ ಸೋಲಾರ್ ಫಲಕವನ್ನು ಅಳವಡಿಕೆ ಮಾಡುವ ಬಗ್ಗೆ ಮಾತುಕತೆ ನಡೆಸಲು ಹೋಗಿದ್ದಾಗ ಸಿಎಂ ಆಗಿದ್ದ ಉಮ್ಮನ್ ಚಾಂಡಿ ತಮ್ಮ ಮನೆಯಲ್ಲೇ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಸರಿತಾ ಆರೋಪಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಕೇರಳದ ಕ್ರೈಂ ಬ್ರಾಂಚ್ ವಿಭಾಗದ ಪೊಲೀಸರು ಉಮ್ಮನ್ ಚಾಂಡಿ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದರು.
ಸೋಲಾರ್ ಹಗರಣದಲ್ಲಿ ಸಿಲುಕಿಕೊಂಡಿದ್ದ ಇನ್ನೋರ್ವ ಆರೋಪಿ ಬಿಜು ರಾಧಾಕೃಷ್ಣನ್ ಕೂಡ ಮಾಜಿ ಸಿಎಂ ಉಮ್ಮನ್ ಚಾಂಡಿ ಮೇಲೆ ಇದೇ ರೀತಿಯ ಆರೋಪ ಮಾಡಿದ್ದರು. ತಮ್ಮ ಜೊತೆ ಉಮ್ಮನ್ ಚಾಂಡಿ ಲೈಂಗಿಕ ಕ್ರಿಯೆ ನಡೆಸಲು ಬಯಸಿದ್ದರು ಎಂದು ಅವರು ಹೇಳಿಕೆ ನೀಡಿದ್ದರು. ಅದಾದ ಬಳಿಕ ಸರಿತಾ ನಾಯರ್ ಕೂಡ ಉಮ್ಮನ್ ಚಾಂಡಿ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದರು.
ಇದನ್ನೂ ಓದಿ: ಅತ್ಯಾಚಾರ ಪ್ರಕರಣ; ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿಗೆ ಸಿಬಿಐನಿಂದ ಕ್ಲೀನ್ಚಿಟ್
ಸೋಲಾರ್ ಫಲಕಗಳನ್ನು ಅಳವಡಿಸುವ ಹಗರಣಕ್ಕೆ ಸಂಬಂಧಿಸಿದಂತೆ ಅಂದು ಸಿಎಂ ಆಗಿದ್ದ ಉಮ್ಮನ್ ಚಾಂಡಿ ಸರ್ಕಾರಕ್ಕೆ ಸುಮಾರು 2 ಕೋಟಿ ರೂ. ಲಂಚ ನೀಡಿದ್ದಾಗಿ ಸರಿತಾ ಮತ್ತು ಬಿಜು ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಈ ಸೋಲಾರ್ ಹಗರಣದ ಮುಖ್ಯ ಆರೋಪಿಗಳಾದ ಬಿಜು ರಾಧಾಕೃಷ್ಣನ್ ಮತ್ತು ಸರಿತಾ ನಾಯರ್ ಅವರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಉಮ್ಮನ್ ಚಾಂಡಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕ್ಲಿಫ್ ಹೌಸ್‌ನಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರುದಾರರು ಆರೋಪಿಸಿದ್ದರು. ಆ ಪ್ರಕರಣದಲ್ಲಿ ಡಿಸೆಂಬರ್ ಅಂತ್ಯದಲ್ಲಿ ಉಮ್ಮನ್ ಚಾಂಡಿಗೆ ಕ್ಲೀನ್ ಚಿಟ್ ಸಿಕ್ಕಿತ್ತು.