ಲಖನೌ: ತಾಜ್ಮಹಲ್ ಕುರಿತ ಸತ್ಯ ಎಲ್ಲರಿಗೂ ಅರ್ಥವಾಗಬೇಕು. ತಾಜ್ಮಹಲ್ನ ಯಥಾರ್ಥ ಇತಿಹಾಸವನ್ನು ಜನರ ಎದುರು ತೆರೆದಿಡಲು ಸತ್ಯಶೋಧನ ಸಮಿತಿ ರಚಿಸಬೇಕು. ಸದಾ ಬೀಗ ಹಾಕಿರುವ 22 ಕೊಠಡಿಗಳ ಬೀಗಗಳನ್ನು ತೆರೆಯಬೇಕು ಎಂದು ಕೋರಿ ಅಲಹಾಬಾದ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಬಿಜೆಪಿ ಅಯೋಧ್ಯೆ ಘಟಕದ ಮಾಧ್ಯಮ ಪ್ರಮುಖ್ ರಜನೀಶ್ ಸಿಂಗ್ ಈ ಸಂಬಂಧ ಅಲಹಾಬಾದ್ ಹೈಕೋರ್ಟ್ನ ಲಖನೌ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಪ್ರಾಥಮಿಕ ಪರಿಶೀಲನೆಯ ನಂತರ ಈ ಅರ್ಜಿಯು ವಿಚಾರಣೆಗೆ ಬರಲಿದೆ. ‘ಸತ್ಯ ಏನಿದ್ದರೂ ಸರಿ, ಅದು ಜನರಿಗೆ ತಿಳಿಯಬೇಕಿದೆ. ಹೀಗಾಗಿಯೇ ತಾಜ್ ಮಹಲ್ನ 22 ಕೊಠಡಿಗಳ ಬೀಗ ತೆರೆಯಬೇಕು ಎಂದು ಅರ್ಜಿ ಸಲ್ಲಿಸಿದ್ದೇನೆ’ ಎಂದು ರಜನೀಶ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಪುರಾತತ್ವ ಮತ್ತು ಐತಿಹಾಸಿಕ ಸ್ಮಾರಕಗಳ ಕಾಯ್ದೆ (1951) ಹಾಗೂ ಪುರಾತತ್ವ ಮತ್ತು ಪ್ರಾಚೀನ ಸ್ಮಾರಕಗಳ ಕಾಯ್ದೆಯ (1958) ಕೆಲ ಅಂಶಗಳನ್ನು ತಾಜ್ ಮಹಲ್ ವಿಚಾರದಲ್ಲಿ ಕೈಬಿಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಈ ಕಾಯ್ದೆಗಳ ಅನ್ವಯವೇ ತಾಜ್ಮಹಲ್, ಫತೇಪುರ್ ಸಿಕ್ರಿ, ಆಗ್ರಾ ಕೋಟೆ, ಇತಿಮದ್-ಉದ್-ದೌಲಾ ಸಮಾಧಿ ಇರುವ ಸ್ಥಳಗಳನ್ನು ಐತಿಹಾಸಿಕ ಸ್ಮಾರಕಗಳು ಎಂದು ಘೋಷಿಸಲಾಗಿದೆ.
ತಾಜ್ ಮಹಲ್ ಸ್ಮಾರಕವಿರುವ ಸ್ಥಳದಲ್ಲಿ ಪ್ರಾಚೀನ ಶಿವ ದೇವಾಲಯವಿತ್ತು ಎಂದು ಹಲವು ಬಲಪಂಥೀಯ ಸಂಘಟನೆಗಳು ಪ್ರತಿಪಾದಿಸುತ್ತಿವೆ. ಇದೇ ಅಂಶವನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯೂ ಪ್ರಸ್ತಾಪಿಸಿದೆ. ವಕೀಲರಾದ ರಾಮ್ ಪ್ರಕಾಶ್ ಶುಕ್ಲ ಮತ್ತು ರುದ್ರ ವಿಕ್ರಮ್ ಸಿಂಗ್ ಅರ್ಜಿದಾರರ ಪರವಾಗಿ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: Taj Mahal: ವಿಶ್ವವಿಖ್ಯಾತ ತಾಜ್ ಮಹಲ್ ಪ್ರವಾಸಿಗರಿಗೆ ಓಪನ್; ಒಮ್ಮೆಗೆ 650 ಜನರ ಭೇಟಿಗೆ ಮಾತ್ರ ಅವಕಾಶ
ಇದನ್ನೂ ಓದಿ: ತಾಜ್ ಮಹಲ್ ಜಗತ್ತಿಗೇ ಅದ್ಭುತ! ಆದರೆ ಅದರ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ, ಯಾಕೆ?