ಭಾರತದ ಧ್ವಜದಿಂದಾಗಿ ಉಕ್ರೇನ್​ನಿಂದ ಸುರಕ್ಷಿತವಾಗಿ ಪಾರಾದ ಪಾಕಿಸ್ತಾನಿ, ಟರ್ಕಿಶ್ ವಿದ್ಯಾರ್ಥಿಗಳು!

| Updated By: ಸುಷ್ಮಾ ಚಕ್ರೆ

Updated on: Mar 02, 2022 | 2:40 PM

ಭಾರತೀಯ ಧ್ವಜಗಳನ್ನು ತಯಾರಿಸಲು ಮಾರುಕಟ್ಟೆಯಿಂದ ಸ್ಪ್ರೇ ಪೇಂಟ್‌ಗಳನ್ನು ಖರೀದಿಸಿ ತಂದೆವು. ಅದನ್ನು ಮೈಮೇಲೆ ಹೊದ್ದ ಕಾರಣದಿಂದ ನಾವು ಸುರಕ್ಷಿತವಾಗಿ ಚೆಕ್​ಪೋಸ್ಟ್​ಗಳನ್ನು ದಾಟಿ ಬಂದೆವು ಎಂದು ವಿದ್ಯಾರ್ಥಿಗಳು ವಿವರಿಸಿದ್ದಾರೆ.

ಭಾರತದ ಧ್ವಜದಿಂದಾಗಿ ಉಕ್ರೇನ್​ನಿಂದ ಸುರಕ್ಷಿತವಾಗಿ ಪಾರಾದ ಪಾಕಿಸ್ತಾನಿ, ಟರ್ಕಿಶ್ ವಿದ್ಯಾರ್ಥಿಗಳು!
ಉಕ್ರೇನ್​ನಿಂದ ಬಚಾವಾಗಿ ಬಂದ ಭಾರತದ ವಿದ್ಯಾರ್ಥಿಗಳು
Follow us on

ನವದೆಹಲಿ: ಭಾರತದ ತ್ರಿವರ್ಣ ಧ್ವಜ (Tricolour Flag) ರಷ್ಯಾ ಸಾರಿದ ಯುದ್ಧದಿಂದ ಹಾನಿಗೊಳಗಾದ ಉಕ್ರೇನ್‌ನಿಂದ (Ukraine) ಭಾರತೀಯರು ಮಾತ್ರವಲ್ಲದೆ ಪಾಕಿಸ್ತಾನಿ, ಟರ್ಕಿಶ್ ವಿದ್ಯಾರ್ಥಿಗಳನ್ನು ಕೂಡ ರಕ್ಷಣೆ ಮಾಡಿದೆ. ಇದೇನಿದು ಹೊಸ ವಿಷಯ? ಇದು ಹೇಗೆ ಸಾಧ್ಯ? ಎಂದು ನಿಮಗೆ ಆಶ್ಚರ್ಯವಾಗಬಹುದು. ಆದರೆ, ಇದು ನಿಜವಾಗಿಯೂ ನಡೆದಿರುವ ಘಟನೆ. ಈ ಕುರಿತು ರೊಮೇನಿಯನ್ ಸಿಟಿಯಿಂದ ಭಾರತಕ್ಕೆ ಸುರಕ್ಷಿತವಾಗಿ ಮರಳಿರುವ ವಿದ್ಯಾರ್ಥಿಯೊಬ್ಬರು ಮಾಹಿತಿ ನೀಡಿದ್ದಾರೆ. ಉಕ್ರೇನ್‌ನಿಂದ ರೊಮೇನಿಯಾದ ಬುಕಾರೆಸ್ಟ್ ನಗರಕ್ಕೆ ಆಗಮಿಸಿದ ಭಾರತೀಯ ವಿದ್ಯಾರ್ಥಿಗಳು ಭಾರತದ ರಾಷ್ಟ್ರ ಧ್ವಜವು ತಮಗೆ ಹಾಗೂ ಕೆಲವು ಪಾಕಿಸ್ತಾನಿ ಮತ್ತು ಟರ್ಕಿಶ್ ವಿದ್ಯಾರ್ಥಿಗಳಿಗೆ ಯುದ್ಧ ಪೀಡಿತ ದೇಶದ ವಿವಿಧ ಚೆಕ್‌ಪೋಸ್ಟ್‌ಗಳನ್ನು ಸುರಕ್ಷಿತವಾಗಿ ದಾಟಲು ಸಹಾಯ ಮಾಡಿದೆ ಎಂದು ಹೇಳಿದ್ದಾರೆ.

ಭಾರತದ ಆಪರೇಷನ್ ಗಂಗಾ ಯೋಜನೆಯ ವಿಶೇಷ ವಿಮಾನದಲ್ಲಿ ದಕ್ಷಿಣ ಉಕ್ರೇನ್‌ನ ಒಡೆಸಾದಿಂದ ಆಗಮಿಸಿದ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ANIಯೊಂದಿಗೆ ಮಾತನಾಡುತ್ತಾ, ಉಕ್ರೇನ್‌ನಲ್ಲಿ ಭಾರತೀಯರಿಗೆ ಮತ್ತು ಭಾರತೀಯ ಧ್ವಜವನ್ನು ಹೊತ್ತಿರುವವರಿಗೆ ಯಾವುದೇ ತೊಂದರೆಗಳನ್ನು ಮಾಡುವುದಿಲ್ಲ ಎಂದು ನಮಗೆ ಗೊತ್ತಾಯಿತು. ಹೀಗಾಗಿ, ಭಾರತೀಯ ಧ್ವಜಗಳನ್ನು ತಯಾರಿಸಲು ಮಾರುಕಟ್ಟೆಯಿಂದ ಸ್ಪ್ರೇ ಪೇಂಟ್‌ಗಳನ್ನು ಖರೀದಿಸಿ ತಂದೆವು. ಅದನ್ನು ಮೈಮೇಲೆ ಹೊದ್ದ ಕಾರಣದಿಂದ ನಾವು ಸುರಕ್ಷಿತವಾಗಿ ಚೆಕ್​ಪೋಸ್ಟ್​ಗಳನ್ನು ದಾಟಿ ಬಂದೆವು ಎಂದು ವಿವರಿಸಿದ್ದಾರೆ.

ನಾನು ಮಾರುಕಟ್ಟೆಗೆ ಓಡಿ, ಕೆಲವು ಬಣ್ಣದ ಸ್ಪ್ರೇಗಳನ್ನು ಮತ್ತು ಅಗಲವಾದ ಬಟ್ಟೆಯನ್ನು ಖರೀದಿಸಿದೆ. ನಂತರ ನಾನು ಬಟ್ಟೆಯನ್ನು ಕತ್ತರಿಸಿ ಅದನ್ನು ಭಾರತೀಯ ತ್ರಿವರ್ಣ ಧ್ವಜವನ್ನು ಮಾಡಲು ಕೇಸರಿ, ಬಿಳಿ, ಹಸಿರು ಬಣ್ಣದ ಸ್ಪ್ರೇ-ಪೇಂಟ್ ಮಾಡಿದೆ. ದರ ವಿಡಿಯೋ ಕೂಡ ನನ್ನ ಬಳಿ ಇದೆ ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.

ನಾವು ಮಾಡಿದ ಪ್ಲಾನ್ ನೋಡಿಕೊಂಡು ಭಾರತದ ಧ್ವಜವನ್ನು ಬಳಸಿಕೊಂಡು ಚೆಕ್‌ಪೋಸ್ಟ್‌ಗಳನ್ನು ಹಾದುಹೋದ ಕೆಲವು ಪಾಕಿಸ್ತಾನಿ ಮತ್ತು ಟರ್ಕಿಶ್ ವಿದ್ಯಾರ್ಥಿಗಳನ್ನು ಕೂಡ ನಾನು ನೋಡಿದ್ದೇನೆ ಎಂದು ಅವರು ಹೇಳಿದ್ದಾರೆ. ಟರ್ಕಿ ಮತ್ತು ಪಾಕಿಸ್ತಾನಿ ವಿದ್ಯಾರ್ಥಿಗಳೂ ಭಾರತದ ಧ್ವಜವನ್ನು ಬಳಸುತ್ತಿದ್ದರು ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.

ಭಾರತೀಯ ವಿದ್ಯಾರ್ಥಿಗಳು ಮೊಲ್ಡೊವಾವನ್ನು ಪ್ರವೇಶಿಸಿದ ಅನುಭವವನ್ನು ಹಂಚಿಕೊಂಡರು. ಮೊಲ್ಡೊವನ್ ನಾಗರಿಕರು ತುಂಬಾ ಒಳ್ಳೆಯವರು. ಅವರು ನಮಗೆ ಉಚಿತ ವಸತಿ, ಟ್ಯಾಕ್ಸಿಗಳು ಮತ್ತು ರೊಮೇನಿಯಾಗೆ ಹೋಗಲು ಬಸ್​ಗಳನ್ನು ಒದಗಿಸಿದರು ಅವರು ಹೇಳಿದ್ದಾರೆ.

ಭಾರತೀಯ ರಾಯಭಾರ ಕಚೇರಿಯು ಈಗಾಗಲೇ ವ್ಯವಸ್ಥೆಗಳನ್ನು ಮಾಡಿದ್ದರಿಂದ ಮೊಲ್ಡೊವಾದಲ್ಲಿ ನಾವು ಹೆಚ್ಚಿನ ಸಮಸ್ಯೆಯನ್ನು ಎದುರಿಸಲಿಲ್ಲ. ಉಕ್ರೇನ್‌ನಿಂದ ಬರುವ ವಿದ್ಯಾರ್ಥಿಗಳನ್ನು ಮೊದಲು ಸರಿಯಾದ ಆಶ್ರಯಕ್ಕೆ ಕರೆದೊಯ್ಯಲಾಗುತ್ತದೆ ಮತ್ತು ಆಹಾರವನ್ನು ಒದಗಿಸಲಾಗುತ್ತದೆ. ನೋಂದಣಿ ಪ್ರಕ್ರಿಯೆ ಬಳಿಕ ಅವರನ್ನು ಸ್ಥಳಾಂತರಿಸುವ ದಿನಾಂಕಗಳನ್ನು ಅಂತಿಮಗೊಳಿಸಲಾಗುತ್ತದೆ.

ಅಂದಹಾಗೆ, ಯುದ್ಧಪೀಡಿತ ಉಕ್ರೇನ್‌ನಿಂದ ಎಲ್ಲಾ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವುದು ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಭಾರತ ಸರ್ಕಾರವು ನಾಲ್ಕು ಕೇಂದ್ರ ಕ್ಯಾಬಿನೆಟ್ ಮಂತ್ರಿಗಳಾದ ಹರ್ದೀಪ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು ಮತ್ತು ವಿಕೆ ಸಿಂಗ್ ಅವರನ್ನು ಭಾರತೀಯರನ್ನು ಸ್ಥಳಾಂತರಿಸುವ ಪ್ರಯತ್ನಗಳನ್ನು ಸಂಘಟಿಸಲು ಉಕ್ರೇನ್‌ನ ನೆರೆಯ ರಾಷ್ಟ್ರಗಳಿಗೆ ನಿಯೋಜನೆ ಮಾಡಿದೆ.

ಇದನ್ನೂ ಓದಿ: Video: ಉಕ್ರೇನ್​ನಲ್ಲಿ ಹತ್ಯೆಯಾದ ವಿದ್ಯಾರ್ಥಿ ನವೀನ್ ಕನ್ನಡ ಪ್ರೇಮದ ವಿಡಿಯೋ ವೈರಲ್

ಉಕ್ರೇನ್‌ಗಾಗಿ ಹೋರಾಡಲು ಸ್ವಯಂಪ್ರೇರಿತರಾಗಿ ಮುಂದೆ ಬಂದ 70 ಜಪಾನಿಯರು – ವರದಿ

Published On - 2:39 pm, Wed, 2 March 22