
ಮುಂಬೈ, ಜೂನ್ 16: ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೊಮ್ಮೆ ಭಾರಿ ರಾಜಕೀಯ ಬಿರುಗಾಳಿ ಎದ್ದಿದೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (TMC) ಎದುರಿಸುತ್ತಿರುವ ಬಂಡಾಯದ ಬೆನ್ನಲ್ಲೇ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (UBT) ಬಣಕ್ಕೂ ದೊಡ್ಡ ಆಘಾತ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ‘ಆಪರೇಷನ್ ಟೈಗರ್’ (Operation Tiger) ಬಗ್ಗೆ ಚರ್ಚೆ ನಡೆಯುತ್ತಿತ್ತು. ಶಿವಸೇನೆ ಏಕನಾಥ್ ಶಿಂಧೆ ಬಣವು ಆಕ್ರಮಣ ಮುಂದುವರಿಸಿದ್ದರೂ ಉದ್ಧವ್ ಠಾಕ್ರೆ ಬಣದ ಕೆಲವು ಸಂಸದರು ಮತ್ತು ಶಾಸಕರು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ, ಆಪರೇಷನ್ ಟೈಗರ್ ಬಗ್ಗೆ ಚರ್ಚೆ ತೀವ್ರಗೊಂಡಿದೆ.
ಉದ್ಧವ್ ಠಾಕ್ರೆ ಬಣ ಶೀಘ್ರದಲ್ಲೇ ಮತ್ತೊಂದು ದೊಡ್ಡ ಹಿನ್ನಡೆಯನ್ನು ಎದುರಿಸಬಹುದು ಎಂದು ಊಹಿಸಲಾಗುತ್ತಿದೆ. ಆಪರೇಷನ್ ಟೈಗರ್ ಯಾವಾಗ ನಡೆಯುತ್ತದೆ ಎಂಬುದರ ಕುರಿತು ಯಾವುದೇ ನಿರ್ದಿಷ್ಟ ದಿನಾಂಕವನ್ನು ಬಹಿರಂಗಪಡಿಸಲಾಗಿಲ್ಲ. ಇದರ ನಡುವೆ ಇದೀಗ ನಡೆಯುತ್ತಿರುವ ಚರ್ಚೆಗಳು ಠಾಕ್ರೆ ಬಣದ ಭಯವನ್ನು ಹೆಚ್ಚಿಸಿವೆ. ಇದಲ್ಲದೆ, ಭಾನುವಾರ ಮಾತೋಶ್ರೀಯಲ್ಲಿ ಉದ್ಧವ್ ಠಾಕ್ರೆ ಕರೆದಿದ್ದ ಸಭೆಯಲ್ಲಿ ಠಾಕ್ರೆ ಬಣದ 9 ಸಂಸದರಲ್ಲಿ ಕೇವಲ 4 ಮಂದಿ ಮಾತ್ರ ಭಾಗವಹಿಸಿದ್ದರು, 5 ಮಂದಿ ಗೈರುಹಾಜರಾಗಿದ್ದರು.
ಏನಿದು ಆಪರೇಷನ್ ಟೈಗರ್?:
ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ನಾಯಕರು ‘ಆಪರೇಷನ್ ಟೈಗರ್’ ಕುರಿತು ಸಂಚಲನದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಏಕನಾಥ್ ಶಿಂಧೆ ಬಣದ ವಿಧಾನಪರಿಷತ್ ಸದಸ್ಯ ಕೃಪಾಲ್ ತುಮಾನೆ ನೀಡಿರುವ ಹೇಳಿಕೆ ಉದ್ಧವ್ ಠಾಕ್ರೆ ಕ್ಯಾಂಪ್‌ನಲ್ಲಿ ನಡುಕ ಹುಟ್ಟಿಸಿದೆ. “ಆಸ್ಪತ್ರೆಯಲ್ಲಿ ಆಪರೇಷನ್ ಮಾಡುವ ಮುನ್ನ ರೋಗಿಗೆ ಎಲ್ಲ ರೀತಿಯ ತಪಾಸಣೆ ನಡೆಸಿ ವರದಿ ಸಿದ್ಧಪಡಿಸಿಕೊಳ್ಳುವಂತೆ, ನಮ್ಮ ‘ಆಪರೇಷನ್ ಟೈಗರ್’ ಪ್ರಕ್ರಿಯೆಯೂ ಸಂಪೂರ್ಣ ಮುಕ್ತಾಯವಾಗಿದೆ. ಕೇವಲ ವೈದ್ಯರೊಂದಿಗೆ ಶಸ್ತ್ರಚಿಕಿತ್ಸೆಯ ದಿನಾಂಕ ನಿಗದಿಪಡಿಸುವುದಷ್ಟೇ ಬಾಕಿ ಇದೆ. ಉದ್ಧವ್ ಬಣದ 7 ಸಂಸದರು ಮತ್ತು 16 ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನವೇ ಈ ಆಪರೇಷನ್ ನಡೆಯಲಿದೆ” ಎಂದು ಶಿಂಧೆ ಬಣದ ನಾಯಕ ಕೃಪಾಲ್ ತುಮಾನೆ ಹೇಳಿದ್ದರು.
ಇದನ್ನೂ ಓದಿ: ಪಶ್ಚಿಮ ಬಂಗಾಳದ ಬಳಿಕ ಮಹಾರಾಷ್ಟ್ರದಲ್ಲೂ ರಾಜಕೀಯ ಹೈಡ್ರಾಮ, ಏಕನಾಥ್ ಶಿಂಧೆ ಬಣದ ಸಂಪರ್ಕದಲ್ಲಿದ್ದಾರಾ ಶಿವಸೇನೆಯ 7 ಸಂಸದರು
ಕೇಂದ್ರ ಸಚಿವ ಪ್ರತಾಪ್ ರಾವ್ ಜಾಧವ್ ಕೂಡ ಉದ್ಧವ್ ಬಣದ ಹಲವು ಸಂಸದರು ತಮ್ಮ ನಾಯಕತ್ವದ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದು, ನಮ್ಮೊಂದಿಗೆ ಬರಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ. ಲೋಕಸಭೆಯಲ್ಲಿ ಉದ್ಧವ್ ಠಾಕ್ರೆ ಬಣದ 9 ಸಂಸದರಿದ್ದಾರೆ. ಪಕ್ಷಾಂತರ ನಿರೋಧಕ ಕಾಯ್ದೆಯಡಿ ಅನರ್ಹತೆಯಿಂದ ಬಚಾವಾಗಬೇಕಾದರೆ ಕನಿಷ್ಠ 7 ಸಂಸದರು ಒಟ್ಟಿಗೆ ಪಕ್ಷ ತೊರೆದು ಹೋಗಬೇಕಾಗುತ್ತದೆ. ಈ 7 ಸಂಸದರು ಈಗಾಗಲೇ ದೆಹಲಿಯಲ್ಲಿ ರಹಸ್ಯ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಈ ಭೀತಿಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಉದ್ಧವ್ ಠಾಕ್ರೆ, ಭಾನುವಾರ ತಮ್ಮ ಮುಂಬೈನ ನಿವಾಸ ‘ಮಾತೋಶ್ರೀ’ಯಲ್ಲಿ ಸಂಸದರ ತುರ್ತು ಸಭೆ ಕರೆದಿದ್ದರು. ಆದರೆ, ಒಟ್ಟು 9 ಸಂಸದರಲ್ಲಿ ಕೇವಲ 4 ಸಂಸದರು ಮಾತ್ರ ಖುದ್ದಾಗಿ ಹಾಜರಾಗಿದ್ದು, ಉಳಿದ 5 ಸಂಸದರು ವೀಡಿಯೊ ಕಾನ್ಫರೆನ್ಸ್ ಮೂಲಕ ಭಾಗವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಉದ್ಧವ್ ಠಾಕ್ರೆ ಜೂನ್ 22ರಂದು ಶಾಸಕರ ಮತ್ತೊಂದು ಸಭೆಯನ್ನು ಕರೆದಿದ್ದಾರೆ. ಠಾಕ್ರೆ ಬಣದ ಶಿವಸೇನೆ (UBT) ನಾಯಕ ಸಂಜಯ್ ರಾವತ್ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಹಾಗೂ ಶಿಂಧೆ ಬಣದ ದಾವೆಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ನಮ್ಮ ಎಲ್ಲಾ 9 ಸಂಸದರು ಒಗ್ಗಟ್ಟಾಗಿದ್ದಾರೆ ಮತ್ತು ಉದ್ಧವ್ ಅವರ ಬೆನ್ನಿಗೆ ನಿಂತಿದ್ದಾರೆ. ಅವರು ನಮ್ಮ ಮೇಲೆ ‘ಆಪರೇಷನ್ ಟೈಗರ್’ ಮಾಡಲು ಬಂದರೆ, ನಾವು ಅವರ ವಿರುದ್ಧ ‘ಆಪರೇಷನ್ ವುಲ್ಫ್’ ಆರಂಭಿಸುತ್ತೇವೆ. ತೃಣಮೂಲ ಕಾಂಗ್ರೆಸ್, ಎನ್‌ಸಿಪಿ ಮತ್ತು ಶಿವಸೇನೆಯನ್ನು ಒಡೆಯುವುದೇ ಬಿಜೆಪಿಯ ಏಕೈಕ ಕೆಲಸವಾಗಿದೆ,” ಎಂದು ಸಂಜಯ್ ರಾವತ್ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಮಹಾ ಭೂಕಂಪ: ಟಿಎಂಸಿ ಬಂಡಾಯ ಸಂಸದರಿಂದ ಹೊಸ ಪಕ್ಷ ಸ್ಥಾಪನೆ, ಎನ್‌ಡಿಎ ಜೊತೆ ವಿಲೀನ ಸಾಧ್ಯತೆ
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ನಂತರ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ನಲ್ಲಿ 50ಕ್ಕೂ ಹೆಚ್ಚು ಶಾಸಕರು ಮತ್ತು 20ಕ್ಕೂ ಹೆಚ್ಚು ಸಂಸದರು ದೀದಿ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದಾರೆ. ಈ ಬಿಕ್ಕಟ್ಟಿನ ಬೆನ್ನಲ್ಲೇ ಮಹಾರಾಷ್ಟ್ರದಲ್ಲೂ ಉದ್ಧವ್ ಬಣಕ್ಕೆ ಕೈಕೊಟ್ಟು ಸಂಸದರು ಎನ್‌ಡಿಎ (NDA) ಒಕ್ಕೂಟದತ್ತ ಮುಖ ಮಾಡಿದರೆ, ಅದು ರಾಷ್ಟ್ರಮಟ್ಟದಲ್ಲಿ ವಿರೋಧ ಪಕ್ಷಗಳ ಇಂಡಿಯ ಒಕ್ಕೂಟಕ್ಕೆ ದೊಡ್ಡ ಪೆಟ್ಟು ನೀಡಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ