2027ರ ಯುಪಿ ಚುನಾವಣೆಯಲ್ಲಿ ಎಐಎಂಐಎಂ ಏಕಾಂಗಿ ಸ್ಪರ್ಧೆಯಿಲ್ಲ: ಆಜಾದ್ ಸಮಾಜ್ ಪಾರ್ಟಿ ಜೊತೆ ಮೈತ್ರಿ ಸುಳಿವು ನೀಡಿದ ಓವೈಸಿ

2027ರ ಯುಪಿ ಚುನಾವಣೆಗೆ ಎಐಎಂಐಎಂ ಏಕಾಂಗಿ ಸ್ಪರ್ಧೆಯಿಲ್ಲ ಎಂದು ಓವೈಸಿ ಘೋಷಿಸಿದ್ದಾರೆ. ಆಜಾದ್ ಸಮಾಜ್ ಪಕ್ಷದೊಂದಿಗೆ ಮೈತ್ರಿಗೆ ಮಾತುಕತೆ ನಡೆದಿದ್ದು, ಇದು ದಲಿತ-ಮುಸ್ಲಿಂ ಮತಗಳನ್ನು ಕ್ರೋಢೀಕರಿಸಬಹುದು. ಸಮಾಜವಾದಿ ಪಕ್ಷಕ್ಕೆ ಇದು ಹೊಸ ಸವಾಲೊಡ್ಡಲಿದೆ. ಬಿಜೆಪಿಯ ಬುಲ್ಡೋಜರ್ ಕ್ರಮಗಳ ವಿರುದ್ಧವೂ ಓವೈಸಿ ವಾಗ್ದಾಳಿ ನಡೆಸಿದರು. ಈ ಮೈತ್ರಿ ಪಶ್ಚಿಮ ಯುಪಿಯ ರಾಜಕೀಯ ಸಮೀಕರಣಗಳನ್ನು ಬದಲಾಯಿಸಲಿದೆ.

2027ರ ಯುಪಿ ಚುನಾವಣೆಯಲ್ಲಿ ಎಐಎಂಐಎಂ ಏಕಾಂಗಿ ಸ್ಪರ್ಧೆಯಿಲ್ಲ: ಆಜಾದ್ ಸಮಾಜ್ ಪಾರ್ಟಿ ಜೊತೆ ಮೈತ್ರಿ ಸುಳಿವು ನೀಡಿದ ಓವೈಸಿ
ಅಸಾದುದ್ದೀನ್ ಓವೈಸಿ
Image Credit source: PTI

Updated on: Sep 21, 2026 | 8:00 AM

ಹೈದರಾಬಾದ್, ಸೆಪ್ಟೆಂಬರ್ 21: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸುವುದಿಲ್ಲ, ಬದಲಾಗಿ ಸಮಾನಮನಸ್ಕ ಪಕ್ಷಗಳ ಬಲವಾದ ಮೈತ್ರಿಕೂಟ ರಚಿಸಿ ಕಣಕ್ಕಿಳಿಯಲಿದೆ ಎಂದು ಎಐಎಂಐಎಂ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಮಹತ್ವದ ಘೋಷಣೆ ಮಾಡಿದ್ದಾರೆ. ಈ ಸಂಬಂಧ ನಗೀನಾ ಸಂಸದ ಚಂದ್ರಶೇಖರ್ ಆಜಾದ್ ಅವರ ಆಜಾದ್ ಸಮಾಜ್ ಪಕ್ಷ (ASP) ಸೇರಿದಂತೆ ಹಲವು ಪಕ್ಷಗಳೊಂದಿಗೆ ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲೇ ಅಧಿಕೃತ ನಿರ್ಧಾರ ಪ್ರಕಟವಾಗಲಿದೆ ಎಂದಿದ್ದಾರೆ. ಇದೇ ವೇಳೆ ತಮ್ಮನ್ನು ‘ಬಿಜೆಪಿಯ ಬಿ-ಟೀಮ್’ ಎಂದು ಟೀಕಿಸುತ್ತಾ ಬಂದಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ಓವೈಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಏಕಾಂಗಿ ಸ್ಪರ್ಧೆಯಿಲ್ಲ, ಮೈತ್ರಿಗೆ ಒತ್ತು: ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಓವೈಸಿ, ನಾನು ಒಬ್ಬಂಟಿಯಾಗಿ ಸ್ಪರ್ಧಿಸಲು ಬಯಸುವುದಿಲ್ಲ, ಮೈತ್ರಿಕೂಟದಲ್ಲೇ ಕಣಕ್ಕಿಳಿಯುವುದು ನಮ್ಮ ಸ್ಪಷ್ಟ ಉದ್ದೇಶ. ಚಂದ್ರಶೇಖರ್ ಆಜಾದ್ ರಾವಣ್ ಸೇರಿದಂತೆ ಇತರ ನಾಯಕರೊಂದಿಗೆ ಮಾತುಕತೆ ನಡೆಯುತ್ತಿದ್ದು, ಎಲ್ಲವನ್ನೂ ಅಂತಿಮಗೊಳಿಸಲು ಸ್ವಲ್ಪ ಸಮಯ ಬೇಕು ಎಂದು ಸ್ಪಷ್ಟಪಡಿಸಿದ್ದಾರೆ ಈ ಕುರಿತು ಇಂಡಿಯಾ ಟಿವಿ ವರದಿ ಮಾಡಿದೆ.

ಅಖಿಲೇಶ್ ಯಾದವ್‌ಗೆ ಚಾಟಿ: ತಮ್ಮ ಸತತ ವೈಫಲ್ಯಗಳಿಗೆ ಸಮಾಜವಾದಿ ಪಕ್ಷವು ಎಐಎಂಐಎಂ ಅನ್ನು ದೂಷಿಸುತ್ತಿದೆ ಎಂದು ಕಿಡಿಕಾರಿದ ಓವೈಸಿ, “2014, 2017, 2019 ಮತ್ತು 2022ರ ಚುನಾವಣೆಗಳಲ್ಲಿ ಸೋತಾಗಲೂ ಎಸ್‌ಪಿ ನಮ್ಮನ್ನೇ ದೂಷಿಸಿತು. ಅವರು ಎಂದಿಗೂ ಆತ್ಮಾವಲೋಕನ ಮಾಡಿಕೊಳ್ಳಲಿಲ್ಲ. 2022ರ ಚುನಾವಣೆಗೆ ಮುನ್ನ ನಾವು ಎಸ್‌ಪಿ ಜೊತೆ ಮೈತ್ರಿಗೆ ಮುಂದಾಗಿದ್ದರೂ ಅವರು ಸ್ಪಂದಿಸಲಿಲ್ಲ” ಎಂದಿದ್ದಾರೆ.

ಬುಲ್ಡೋಜರ್ ಕ್ರಮ ಮತ್ತು ವಕ್ಫ್ ಮಸೂದೆಗೆ ವಿರೋಧ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಕಾನೂನಿನ ಪ್ರಕಾರ ನಡೆಯುತ್ತಿಲ್ಲ ಎಂದು ಆರೋಪಿಸಿದ ಓವೈಸಿ, ಸಂಭಾಲ್ ಮತ್ತು ಸಹಾರನ್‌ಪುರಗಳಲ್ಲಿ ಸುಪ್ರೀಂ ಕೋರ್ಟ್ ಆದೇಶಗಳನ್ನು ಉಲ್ಲಂಘಿಸಿ ಮಸೀದಿಗಳು ಹಾಗೂ ಮುಸ್ಲಿಮರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು. ಮುಸ್ಲಿಮರ ಹಕ್ಕುಗಳನ್ನು ಮೊಟಕುಗೊಳಿಸಲು ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ ತಂದಿದೆ ಎಂದು ಆರೋಪಿಸಿದರು.

ಮತ್ತಷ್ಟು ಓದಿ: ಉತ್ತರ ಪ್ರದೇಶದಲ್ಲಿ ನಕಲಿ ನಾಣ್ಯ ತಯಾರಿಕೆ ಗ್ಯಾಂಗ್ ಖಾಕಿ ಬಲೆಗೆ: ಐವರು ಆರೋಪಿಗಳು ಅರೆಸ್ಟ್​​

ದಲಿತ-ಮುಸ್ಲಿಂ ಮತಬ್ಯಾಂಕ್ ಸಮೀಕರಣ: ಉತ್ತರ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದ ಮತಗಳು ಶೇ. 19 ರಷ್ಟಿದ್ದರೆ, ದಲಿತ ಮತಗಳು ಶೇ. 20 ಕ್ಕಿಂತ ಹೆಚ್ಚಿವೆ. ನಗೀನಾ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರವಾಗಿ ಭರ್ಜರಿ ಗೆಲುವು ಸಾಧಿಸಿರುವ ಚಂದ್ರಶೇಖರ್ ಆಜಾದ್ ಮತ್ತು ಓವೈಸಿ ಒಂದಾದರೆ, ಅದು ಪಶ್ಚಿಮ ಯುಪಿ ಭಾಗದಲ್ಲಿ ಸಮಾಜವಾದಿ ಪಕ್ಷದ ಸಾಂಪ್ರದಾಯಿಕ ‘ಪಿಡಿಎ’ (ಹಿಂದುಳಿದ, ದಲಿತ, ಅಲ್ಪಸಂಖ್ಯಾತ) ಮತಬ್ಯಾಂಕ್‌ಗೆ ನೇರ ಪೆಟ್ಟು ನೀಡುವ ಸಾಧ್ಯತೆಯಿದೆ.

2022ರ ಯುಪಿ ಚುನಾವಣೆಯ ಕಹಿ ಅನುಭವ: 2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಎಐಎಂಐಎಂ ಸುಮಾರು 100 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತಾದರೂ ಶೇಕಡಾ 0.5 ಕ್ಕಿಂತ ಕಡಿಮೆ ಮತಗಳನ್ನು ಪಡೆದು ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗಿರಲಿಲ್ಲ. ಮತಗಳು ವಿಭಜನೆಯಾಗಿ ಬಿಜೆಪಿ ಸುಲಭವಾಗಿ ಗೆಲ್ಲಲು ಇದು ಕಾರಣವಾಯಿತು ಎಂದು ಇಂಡಿಯಾ ಒಕ್ಕೂಟ ಆರೋಪಿಸಿತ್ತು.

2027 ರ ಯುಪಿ ಅಖಾಡ: ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 37 ಸ್ಥಾನಗಳನ್ನು ಗೆದ್ದು ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿರುವ ಸಮಾಜವಾದಿ ಪಕ್ಷಕ್ಕೆ, ಓವೈಸಿ-ಚಂದ್ರಶೇಖರ್ ಆಜಾದ್ ಸಂಭಾವ್ಯ ಮೈತ್ರಿಕೂಟವು ಮುಂಬರುವ 2027ರ ವಿಧಾನಸಭಾ ಚುನಾವಣೆಯಲ್ಲಿ ಕಠಿಣ ತ್ರಿಕೋನ ಸ್ಪರ್ಧೆಯ ಸವಾಲೊಡ್ಡುವ ಮುನ್ಸೂಚನೆ ನೀಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Loading...
Unable to load recommendations.
Follow Us