Pakistan Floods: ಪ್ರವಾಹಕ್ಕೆ ನಲುಗಿದ ಪಾಕಿಸ್ತಾನಕ್ಕೆ ನೆರವಿನ ಭರವಸೆ ಕೊಟ್ಟ ಭಾರತ; ಆಹಾರ, ಔಷಧಿ ಒದಗಿಸಲು ಸರ್ಕಾರದ ಚಿಂತನೆ
2005 ಮತ್ತು 2010ರಲ್ಲಿ ಪಾಕಿಸ್ತಾನವು ಪ್ರವಾಹದಿಂದ ಕಂಗಾಲಾಗಿದ್ದಾಗ ಭಾರತದಿಂದ ಮಾನವೀಯ ನೆರವು ಅಲ್ಲಿನ ಜನರಿಗೆ ಆಸರೆಯಾಗಿತ್ತು.
ದೆಹಲಿ/ಇಸ್ಲಾಮಾಬಾದ್: ಪಾಕಿಸ್ತಾನದ ಜನರು ಪ್ರವಾಹದಿಂದ (Pakistan Floods) ಸಲುಗಿದ್ದಾರೆ. ನನ್ನ ಹೃದಯ ಭಾರವಾಗಿದೆ. ಅಲ್ಲಿನ ಪರಿಸ್ಥಿತಿ ಶೀಘ್ರ ಸುಧಾರಿಸಲಿ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ. ಇತಿಹಾಸದ ಅತ್ಯಂತ ಭೀಕರ ಪ್ರವಾಹ ಪರಿಸ್ಥಿತಿಗೆ ಸಿಲುಕಿರುವ ಪಾಕಿಸ್ತಾನದ ಬಗ್ಗೆ ಭಾರತ ಸರ್ಕಾರದ ಪರವಾಗಿ ಇದೇ ಮೊದಲ ಬಾರಿಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿ, ಜನರ ನೋವಿಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನಕ್ಕೆ ಅಗತ್ಯ ಮಾನವೀಯ ನೆರವು ಒದಗಿಸಲು, ಪಾಕಿಸ್ತಾನದ ಅಗತ್ಯಗಳನ್ನು ಸರಿಯಾಗಿ ಗ್ರಹಿಸಿ ಸ್ಪಂದಿಸುವ ಉದ್ದೇಶದಿಂದ ಪಾಕ್ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಭಾರತ ಒದಗಿಸುವ ನೆರವು ಯಾವ ಸ್ವರೂಪದಲ್ಲಿ ಇರುತ್ತದೆ ಎನ್ನುವ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಒಂದು ವೇಳೆ ಭಾರತದ ಪ್ರಸ್ತಾವಕ್ಕೆ ಪಾಕಿಸ್ತಾನವು ಸಕಾರಾತ್ಮಕವಾಗಿ ಸ್ಪಂದಿಸಿದರೆ, ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆ ಆಗದಿದ್ದರೆ 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪಾಕಿಸ್ತಾನಕ್ಕೆ ಒದಗಿಸುತ್ತಿರುವ ಮೊದಲ ನೆರವು ಇದಾಗಲಿದೆ. ಈ ಹಿಂದೆಯೂ ಪಾಕಿಸ್ತಾನದ ಸಂಕಷ್ಟ ಪರಿಸ್ಥಿತಿಯ ಸಮಯದಲ್ಲಿ ಭಾರತ ಸರ್ಕಾರವು ನೆರವು ಒದಗಿಸಿತ್ತು. 2005 ಮತ್ತು 2010ರಲ್ಲಿ ಪಾಕಿಸ್ತಾನವು ಪ್ರವಾಹದಿಂದ ಕಂಗಾಲಾಗಿದ್ದಾಗ ಭಾರತದಿಂದ ಮಾನವೀಯ ನೆರವು ಅಲ್ಲಿನ ಜನರಿಗೆ ಆಸರೆಯಾಗಿತ್ತು. ಆಗ ಯುಪಿಎ ಮೈತ್ರಿಕೂಟ ಅಧಿಕಾರದಲ್ಲಿತ್ತು, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು.
‘ಪಾಕಿಸ್ತಾನದಲ್ಲಿ ಪ್ರವಾಹದಿಂದ ಸಾಕಷ್ಟು ಜನರು ಜೀವ ಕಳೆದುಕೊಂಡಿದ್ದು ತಿಳಿದು ಬೇಸರವಾಯಿತು. ನೈಸರ್ಗಿಕ ದುರಂತದಲ್ಲಿ ಗಾಯಗೊಂಡವರಿಗೆ, ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಭಾರತೀಯರ ಹೃದಯ ತುಂಬಿದ ಸಂತಾಪಗಳು. ಪಾಕಿಸ್ತಾನದಲ್ಲಿ ಬೇಗ ಸಹಜ ಸ್ಥಿತಿ ನೆಲೆಸುವಂತಾಗಲಿ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
Saddened to see the devastation caused by the floods in Pakistan. We extend our heartfelt condolences to the families of the victims, the injured and all those affected by this natural calamity and hope for an early restoration of normalcy.
— Narendra Modi (@narendramodi) August 29, 2022
ಪಾಕಿಸ್ತಾನದಲ್ಲಿ ಪ್ರವಾಹದಿಂದ ಈವರೆಗೆ 1,100 ಮಂದಿ ಮೃತಪಟ್ಟಿದ್ದು, ಸುಮಾರು 700 ಮನೆಗಳು ಹಾಳಾಗಿವೆ. ಗಾಯದ ಮೇಲೆ ಬರೆ ಎಳೆದಂತೆ ಪಾಕಿಸ್ತಾನವು ಈಗ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಪ್ರಧಾನಿ ಶೆಹ್ಬಾಜ್ ಷರೀಫ್ ಜಾಗತಿಕ ಸಮುದಾಯದ ನೆರವು ಕೋರಿದ್ದಾರೆ. ಪಾಕಿಸ್ತಾನದ ಸುಮಾರು 3.3 ಕೋಟಿ ಮಂದಿ ಪ್ರವಾಹದಿಂದಾಗಿ ಸ್ಥಳಾಂತರವಾಗಿದ್ದಾರೆ. ಒಟ್ಟು ಜನಸಂಖ್ಯೆಯ ಏಳನೇ ಒಂದು ಭಾಗ ಪ್ರವಾಹದಿಂದ ಹಾನಿ ಅನುಭವಿಸಿದೆ.
‘ಭಾರತದಿಂದ ಆಹಾರ ಧಾನ್ಯ, ತರಕಾರಿ ಮತ್ತಿತರ ಆಹಾರ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಕುರಿತು, ನೆರವು ಕೋರಲು ಚಿಂತನೆ ನಡೆದಿದೆ. ಪ್ರವಾಹದಿಂದ ಬೆಳೆ ಹಾಳಾಗಿದೆ’ ಎಂದು ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾಬ್ ಇಸ್ಮಾಯಿಲ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
Just IN:— Floods wreaking havoc in Pakistan; 40+ small dams breached. 210+ bridges collapsed; 1,115 people dead. 10M people displaced. pic.twitter.com/z0H2yYhXoq
— South Asia Index (@SouthAsiaIndex) August 27, 2022
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನವು ಭಾರತದಿಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು, ಶಾಂತಿ ಕಾಪಾಡಲು ಮುಂದಾಗಿರುವ ಕುರಿತು ಆಗಾಗ ಹೇಳಿಕೆಗಳನ್ನು ನೀಡಿ ಗಮನ ಸೆಳೆಯುತ್ತಿದೆ. ಶಹಬಾಜ್ ಷರೀಫ್ ಅವರು ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ ಪತ್ರವೊಂದನ್ನು ಬರೆದಿದ್ದರು. ಈ ಪತ್ರಕ್ಕೆ ಉತ್ತರಿಸಿದ್ದ ಶಹಬಾಜ್ ಷರೀಫ್, ‘ಪ್ರಾದೇಶಿಕ ಶಾಂತಿ ಮತ್ತು ಭದ್ರತೆಗೆ ಪಾಕಿಸ್ತಾನವು ಬದ್ಧವಾಗಿದೆ. ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತದೆ ಎಂದು ಹೇಳಿದ್ದರು. ನರೇಂದ್ರ ಮೋದಿ ಅವರು ಕಾಶ್ಮೀರ ಸಮಸ್ಯೆ ಪರಿಹರಿಸಲು ಹೆಜ್ಜೆ ಮುಂದಿಡಬೇಕು. ಈ ವಿವಾದ ಬಗೆಹರಿದರೆ ಎರಡೂ ದೇಶಗಳು ಬಡತನ ಮತ್ತು ನಿರುದ್ಯೋಗ ಸಮಸ್ಯೆ ಪರಿಹರಿಸಲು ಮುಂದಾಗಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.
Published On - 7:11 am, Tue, 30 August 22