
ನವದೆಹಲಿ, ಆಗಸ್ಟ್ 10: ಆಪರೇಷನ್ ಸಿಂದೂರದ ಬಳಿಕ ಭಾರತದ ವಿಮಾನಗಳಿಗೆ ತನ್ನ ವಾಯು ಪ್ರದೇಶದ ಪ್ರವೇಶ ಬಂದ್ ಮಾಡಿದ್ದ ಪಾಕಿಸ್ತಾನಕ್ಕೆ (Pakistan) ಸಾಕಷ್ಟು ಆದಾಯ ವಂಚಿತವಾಗಿದೆ. ವರದಿಯೊಂದರ ಪ್ರಕಾರ ಎರಡು ತಿಂಗಳಲ್ಲಿ ಪಾಕಿಸ್ತಾನಕ್ಕೆ ಆದ ನಷ್ಟ 123 ಕೋಟಿ ರೂ ಎನ್ನಲಾಗಿದೆ. ಇದು ಪಾಕಿಸ್ತಾನದ ಡಾನ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಲ್ಲಿರುವ ಮಾಹಿತಿ. ಈ ಮಾಹಿತಿಯನ್ನು ಆ ಪತ್ರಿಕೆಯು ಪಾಕಿಸ್ತಾನದ ರಕ್ಷಣಾ ಸಚಿವಾಲಯದಿಂದ ಪಡೆದು ಪ್ರಕಟಿಸಿದೆ. ಏಪ್ರಿಲ್ 24ರಿಂದ ಜೂನ್ 30ರವರೆಗಿನ ಅವಧಿಯಲ್ಲಿ ಈ ಪ್ರಮಾಣದ ನಷ್ಟವನ್ನು ಪಾಕಿಸ್ತಾನ ಹೊಂದಿದೆ.
ಕಾಶ್ಮೀರದ ಪಹಲ್ಗಾಂನಲ್ಲಿ ಪಾಕ್ ಬೆಂಬಲಿತ ಉಗ್ರರಿಂದ ದಾಳಿಯಾಗಿದ್ದಕ್ಕೆ ಪ್ರತಿಯಾಗಿ ಭಾರತ ಕೈಗೊಂಡ ಕ್ರಮಗಳಲ್ಲಿ ಸಿಂಧೂ ಜಲ ಒಪ್ಪಂದವನ್ನು ರದ್ದು ಮಾಡಿದ್ದೂ ಒಂದು. ಏಪ್ರಿಲ್ 23ರಂದು ಭಾರತ ಒಪ್ಪಂದದಿಂದ ಹಿಂದಕ್ಕೆ ಸರಿಯಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಏಪ್ರಿಲ್ 24ರಂದು ಭಾರತೀಯ ವಿಮಾನಗಳಿಗೆ ತನ್ನ ವಾಯು ಪ್ರದೇಶದಲ್ಲಿ ಪ್ರವೇಶ ನಿರಾಕರಿಸಿತು.
ಭಾರತದಲ್ಲಿ ನೊಂದಾಯಿತವಾದ ಮತ್ತು ಭಾರತೀಯ ವಿಮಾನಗಳು ಚಲಾಯಿಸುತ್ತಿರುವ ಎಲ್ಲಾ ವಿಮಾನಗಳಿಗೆ ಪಾಕಿಸ್ತಾನ ಅನುಮತಿ ನಿರಾಕರಿಸಿತು. ದಿನಕ್ಕೆ 100ರಿಂದ 150 ಭಾರತೀಯ ವಿಮಾನಗಳು ಪಾಕಿಸ್ತಾನದ ವಾಯು ಪ್ರದೇಶದ ಮೂಲಕ ಹಾದು ಹೋಗುತ್ತಿದ್ದುವು. ಪಾಕಿಸ್ತಾನದ ಏರ್ ಸ್ಪೇಸ್ನಲ್ಲಿ ಒಂದು ದಿನದಲ್ಲಿ ಶೇ. 20ರಷ್ಟು ಏರ್ ಟ್ರಾಫಿಕ್ ಭಾರತೀಯ ವಿಮಾನಗಳದ್ದೇ ಆಗಿರುತ್ತಿತ್ತು.
ಇದನ್ನೂ ಓದಿ: ಆಪರೇಷನ್ ಸಿಂಧೂರ್ ವೇಳೆ 5 ಪಾಕಿಸ್ತಾನಿ ಜೆಟ್, ಒಂದು ದೊಡ್ಡ ವಿಮಾನ ನಾಶ; ಐಎಎಫ್ ಮುಖ್ಯಸ್ಥ ಮಹತ್ವದ ಮಾಹಿತಿ
2019ರಲ್ಲೂ ಪಾಕಿಸ್ತಾನ ಇದೇ ರೀತಿ ತನ್ನ ವಾಯುಪ್ರದೇಶವನ್ನು ಮುಚ್ಚಿತ್ತು. ಆಗ 228 ಕೋಟಿ ರೂ ನಷ್ಟವಾಗಿತ್ತು. ಆಪರೇಷನ್ ಸಿಂದೂರ್ನಲ್ಲೂ ಇದೇ ಪುನಾವರ್ತನೆ ಆಗಿದೆ. ಭಾರತದ ಅಂದಾಜು ಪ್ರಕಾರ ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನ ಆದಾಯ ನಷ್ಟವಾಗಿರಬಹುದು. ಪಾಕಿಸ್ತಾನದ ವಾಯುಪ್ರದೇಶ ಬಂದ್ ಆದ್ದರಿಂದ ಭಾರತೀಯ ವಿಮಾನ ಕಂಪನಿಗಳಿಗೂ ಹೆಚ್ಚಿನ ವೆಚ್ಚವಾಗಿದೆ. ಪಾಕಿಸ್ತಾನ ಬಿಟ್ಟು ಬೇರೆ ಸುತ್ತು ಬಳಸಿನ ಮಾರ್ಗ ಮೂಲಕ ವಿಮಾನ ಹಾರಾಟ ಮಾಡಲಾಗುತ್ತಿತ್ತು. ಇದರಿಂದ ಎದುರಾದ ಹೆಚ್ಚುವರಿ ವೆಚ್ಚ ಎಷ್ಟು ಎನ್ನುವ ಮಾಹಿತಿ ಸಿಕ್ಕಿಲ್ಲ.
ಏಪ್ರಿಲ್ ತಿಂಗಳಲ್ಲಿ ಪಹಲ್ಗಾಂನಲ್ಲಿ ಪಾಕ್ ಪ್ರಚೋದಿತ ಉಗ್ರ ದಾಳಿಗೆ ಪ್ರತಿಯಾಗಿ ಭಾರತವು ಆಪರೇಷನ್ ಸಿಂದೂರ್ ನಡೆಸಿತು. ಪಾಕಿಸ್ತಾನದ ಕೆಲ ಉಗ್ರ ನೆಲೆಗಳನ್ನು ಮಾತ್ರ ಗುರಿಯಾಗಿಸಿ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿತು. ಆದರೆ, ಪಾಕಿಸ್ತಾನವು ಭಾರತದ ಮಿಲಿಟರಿ ಹಾಗೂ ನಾಗರಿಕ ಆಸ್ತಿಗಳನ್ನು ಗುರಿಯಾಗಿಸಿ ದಾಳಿ ಎಸಗಿತು. ಇದಾದ ಬಳಿಕ ಭಾರತವೂ ಕೂಡ ಪಾಕಿಸ್ತಾನದ ಒಂಬತ್ತು ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ಚಿಂದಿ ಉಡಾಯಿಸಿತು.
ಇದನ್ನೂ ಓದಿ: ಎಲ್ಎಟಿ ಏರೋಸ್ಪೇಸ್: ಭಾರತದ್ದೇ ಸ್ವಂತ ವಿಮಾನ ಎಂಜಿನ್ ತಯಾರಿಸಲು ಹೊರಟಿದ್ದಾರೆ ಜೊಮಾಟೊ ಸಂಸ್ಥಾಪಕರು
ಭಾರತದ ದಾಳಿಗೆ ಪಾಕಿಸ್ತಾನ ತತ್ತರಿಸಿಹೋಗಿತ್ತು. ಅದರ ಡಿಫೆನ್ಸ್ ಸಿಸ್ಟಂ ಪೂರ್ಣವಾಗಿ ಸೋತಿತ್ತು. ಭಾರತದಿಂದ ಇನ್ನೂ ಹೆಚ್ಚಿನ ಆಘಾತ ಸಿಗುವ ಸಾಧ್ಯತೆ ಕಂಡ ಪಾಕಿಸ್ತಾನವು ಡೊನಾಲ್ಡ್ ಟ್ರಂಪ್ ಮೊರೆ ಹೋಯಿತು. ಅವರ ಸಲಹೆ ಮೇರೆಗೆ ಭಾರತದೊಂದಿಗೆ ಕದನವಿರಾಮಕ್ಕೆ ಮನವಿ ಮಾಡಿತು. ಈ ಮೂಲಕ ಪಾಕಿಸ್ತಾನವು ಭಾರತದಿಂದ ಬೀಸುವ ದೊಣ್ಣೆಯಿಂದ ಬಚಾವಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ