ಹರ್ಯಾಣದ ಮನೇಸರ್ನಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸಲು ಹಿಂದೂಗಳ ಕರೆ
ಹಿಂದೂಗಳ ಹತ್ಯೆಯಾಗುತ್ತಿದೆ. ಹಲವಾರು ರೊಹಿಂಗ್ಯಾ, ಬಾಂಗ್ಲಾದೇಶಿ ಮತ್ತು ಪಾಕಿಸ್ತಾನಿಗಳು ಗುರ್ ಗಾಂವ್ ಮತ್ತು ಮನೇಸರ್ ನಲ್ಲಿ ನಿಜವಾದ ಗುರುತು ಮರೆಮಾಚಿ ವಾಸಿಸುತ್ತಿದ್ದಾರೆ. ಅವರು ವಿವಿಧ ವಲಯಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ.
ಹರ್ಯಾಣದ ಮನೇಸರ್ನಲ್ಲಿರುವ (Manesar) ದೇವಾಲಯ ಆಯೋಜಿಸಿದ ಪಂಚಾಯತ್ನಲ್ಲಿ ಹಿಂದೂಗಳು(Hindu) ಮುಸ್ಲಿಂ ಅಂಗಡಿ ಮತ್ತು ವ್ಯಾಪಾರಿಗಳನ್ನು ಬಹಿಷ್ಕರಿಸುವ ಕರೆ ನೀಡಲಾಗಿದೆ. ಗ್ರಾಮ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಪ್ರಸ್ತುತ ಆಯಾ ಗ್ರಾಮಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸುವ ಕಾರ್ಯವನ್ನು ಜಾರಿಗೆ ತರುವಂತೆ ನೋಡಿಕೊಳ್ಳಬೇಕು ಎಂದು ಪಂಚಾಯತ್ ನಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಬಜಗಂಗದಳ ಮತ್ತು ವಿಶ್ವ ಹಿಂದೂ ಪರಿಷತ್ನ (VHP) ಕಾರ್ಯಕರ್ತರು ಸೇರಿದಂತೆ 200ಕ್ಕಿಂತಲೂ ಹೆಚ್ಚು ಮಂದಿ ಈ ಪಂಚಾಯತ್ನಲ್ಲಿ ಭಾಗವಹಿಸಿದ್ದರು. ಮನೇಸರ್ ಅಕ್ಕ ಪಕ್ಕದ ಗ್ರಾಮಗಳಾದ ಧರುಹೆರಾ ಮತ್ತು ಗುರ್ಗಾಂವ್ನಲ್ಲಿನ ಗ್ರಾಮಸ್ಥರೂ ಇದರಲ್ಲಿ ಭಾಗಿಯಾಗಿದ್ದರು. ಪಂಚಾಯತ್ ಸದಸ್ಯರು ಡ್ಯೂಟಿ ಮೆಜಿಸ್ಟ್ರೇಟ್ಗೆ ಜ್ಞಾಪನಾ ಪತ್ರವೊಂದನ್ನು ಸಲ್ಲಿಸಿದ್ದು ಅಕ್ರಮ ವಲಸೆಗಾರರನ್ನು ಅಲ್ಲಿಂದ ತೆರವು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ತ್ವರಿತ ವಿಚಾರಣೆ ನಡೆಸಬೇಕು. ಅಕ್ರಮವಾಗಿರುವವರನ್ನು ತೆರವು ಮಾಡಬೇಕು. ಅವರು ಮತಾಂತರ ಕಾರ್ಯದಲ್ಲಿ ತೊಡಗಿದ್ದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜ್ಞಾಪನಾ ಪತ್ರದಲ್ಲಿ ಹೇಳಲಾಗಿದೆ. ಆ ಪ್ರದೇಶದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಮೂಲಭೂತವಾದ, ಜಿಹಾದಿ ಶಕ್ತಿಗಳ ವಿರುದ್ಧ ದನಿಯೆತ್ತುವುದಕ್ಕಾಗಿ ಇಲ್ಲಿನ ಹಿಂದೂ ಸಮಾಜ ಪಂಚಾಯತ್ ಕರೆದಿದೆ ಎಂದು ಮನೇಸರ್ ವಿಹಿಂಪ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಸಿಂಗ್ ಹೇಳಿದ್ದಾರೆ.
ಹಿಂದೂಗಳ ಹತ್ಯೆಯಾಗುತ್ತಿದೆ. ಹಲವಾರು ರೊಹಿಂಗ್ಯಾ, ಬಾಂಗ್ಲಾದೇಶಿ ಮತ್ತು ಪಾಕಿಸ್ತಾನಿಗಳು ಗುರ್ಗಾಂವ್ ಮತ್ತು ಮನೇಸರ್ನಲ್ಲಿ ನಿಜವಾದ ಗುರುತು ಮರೆಮಾಚಿ ವಾಸಿಸುತ್ತಿದ್ದಾರೆ. ಅವರು ವಿವಿಧ ವಲಯಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ನಾವು ಆಡಳಿತಾಧಿಕಾರಿಗಳಿಗೆ ಒಂದು ವಾರ ಕಾಲಾವಕಾಶ ನೀಡಿದ್ದೇವೆ. ಆಗಲೂ ಕ್ರಮ ಕೈಗೊಳ್ಳದೇ ಇದ್ದರೆ ಹಿಂದೂ ಸಮಾಜ ಕ್ರಮ ಕೈಗೊಳ್ಳುತ್ತದೆ. ಇನ್ನೊಂದು ಪಂಚಾಯತ್ ಕರೆದು ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಸಿಂಗ್ ಹೇಳಿದ್ದಾರೆ.
ಸಂಚಿನ ಭಾಗವಾಗಿ ಮನೇಸರ್ನಲ್ಲಿ ಹಲವಾರು ಮುಸ್ಲಿಂ ಅಂಗಡಿಗಳಿಗೆ ಹಿಂದೂ ದೇವರ ಹೆಸರಿದೆ. ಹಾಗಾಗಿ ಆರ್ಥಿಕ ಬಹಿಷ್ಕಾರವೊಂದೇ ಇದಕ್ಕೆ ಮಾರ್ಗ. ಅವರ ಮೂಲಭಾತವಾದಿ ಮತ್ತು ಜಿಹಾದಿ ನಿಲುವುಗಳ ಬಗ್ಗೆ ನಾವು ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಗ್ರಾಮಗಳಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲು ಸಮಿತಿಗಳನ್ನು ರಚಿಸಬೇಕು. ನಾವು ಇದನ್ನು ಈಗಾಗಲೇ ಮನೇಸರ್‌ನಿಂದ ಪ್ರಾರಂಭಿಸಿದ್ದೇವೆ ಎಂದು ಸಿಂಗ್ ಹೇಳಿದರು.
Published On - 9:27 pm, Sun, 3 July 22