ಚರ್ಚೆಯಿಲ್ಲದೆ ಲೋಕಸಭೆಯಲ್ಲಿ ಟ್ರಿಬ್ಯೂನಲ್ ಸುಧಾರಣಾ ಮಸೂದೆ ಅಂಗೀಕಾರ; ಏನಿದರ ವಿಶೇಷತೆ?

ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಜುಲೈ 20ರಂದು ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದಿದೆ ಎನ್ನಲಾದ ಪೊಲೀಸ್ ಕ್ರಮವನ್ನು ಖಂಡಿಸಿ ವಿರೋಧ ಪಕ್ಷದ ಸದಸ್ಯರು ನಡೆಸಿದ ತೀವ್ರ ಗದ್ದಲದ ನಡುವೆಯೇ 'ಟ್ರಿಬ್ಯೂನಲ್ ಸುಧಾರಣಾ ಮಸೂದೆ, 2026' ಅನ್ನು ಲೋಕಸಭೆ ಇಂದು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಿತು. ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮಸೂದೆಯನ್ನು ಮಂಡಿಸಿದ ನಂತರ, ವಿಪಕ್ಷಗಳ ಘೋಷಣೆಗಳ ನಡುವೆಯೇ ಮಸೂದೆ ಅಂಗೀಕಾರಗೊಂಡಿತು.

ಚರ್ಚೆಯಿಲ್ಲದೆ ಲೋಕಸಭೆಯಲ್ಲಿ ಟ್ರಿಬ್ಯೂನಲ್ ಸುಧಾರಣಾ ಮಸೂದೆ ಅಂಗೀಕಾರ; ಏನಿದರ ವಿಶೇಷತೆ?
Lok Sabha Session
Image Credit source: PTI

Updated on: Aug 10, 2026 | 7:57 PM

ನವದೆಹಲಿ, ಆಗಸ್ಟ್ 10: ಟ್ರಿಬ್ಯೂನಲ್‌ಗಳ ನಿರ್ವಹಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪುನರ್ ರಚಿಸಲು ಮತ್ತು ಉಸ್ತುವಾರಿಗಾಗಿ ‘ರಾಷ್ಟ್ರೀಯ ಟ್ರಿಬ್ಯೂನಲ್ ಆಯೋಗ (NTC)’ ಎಂಬ ಹೊಸ ಸಂಸ್ಥೆಯನ್ನು ಸ್ಥಾಪಿಸಲು ಪ್ರಸ್ತಾಪಿಸುವ ಟ್ರಿಬ್ಯೂನಲ್ ಸುಧಾರಣಾ ಮಸೂದೆ, 2026 (Tribunals Reforms Bill) ಇಂದು ಲೋಕಸಭೆಯಲ್ಲಿ (Lok Sabha Session) ಅಂಗೀಕಾರಗೊಂಡಿದೆ. ಭಾರತದ 16 ಟ್ರಿಬ್ಯೂನಲ್‌ಗಳಲ್ಲಿ ಕಾರ್ಯಕ್ಷಮತೆಯ ಕೊರತೆ ಮತ್ತು ಸ್ವಾತಂತ್ರ್ಯದ ಅಭಾವವಿದೆ ಎಂಬ ಸುಪ್ರೀಂ ಕೋರ್ಟ್​ನ ಕಳವಳಗಳನ್ನು ಪರಿಹರಿಸುವ ಉದ್ದೇಶವನ್ನು ಈ ಮಸೂದೆ ಹೊಂದಿದೆ. ಇದು ಕಾಯ್ದೆಯಾಗಿ ಜಾರಿಗೆ ಬಂದರೆ ಭಾರತದ ಅರೆ-ನ್ಯಾಯಾಂಗ ಸಂಸ್ಥೆಗಳ ಕಾರ್ಯವೈಖರಿಯನ್ನು ಸಂಪೂರ್ಣವಾಗಿ ಬದಲಾಯಿಸಲಿದೆ.

ಟ್ರಿಬ್ಯೂನಲ್ ಸುಧಾರಣಾ ಮಸೂದೆ ಎಂದರೇನು?:

ಟ್ರಿಬ್ಯೂನಲ್ ಸದಸ್ಯರ ನೇಮಕಾತಿ ಪ್ರಕ್ರಿಯೆಯಲ್ಲಿ ಏಕರೂಪತೆ, ಪಾರದರ್ಶಕತೆ ಮತ್ತು ಕ್ಷಮತೆಯನ್ನು ತರುವುದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ. ಇದು ಸದಸ್ಯರ ಅರ್ಹತೆ, ಆಯ್ಕೆ, ನೇಮಕಾತಿ, ವೇತನ, ಭತ್ಯೆಗಳು, ರಾಜೀನಾಮೆ, ವಜಾಗೊಳಿಸುವಿಕೆ ಮತ್ತು ಇತರ ಸೇವಾ ಷರತ್ತುಗಳನ್ನು ಒಳಗೊಂಡ ಸಾಮಾನ್ಯ ನಿಯಮಗಳನ್ನು ನಿಗದಿಪಡಿಸುತ್ತದೆ. ಈ ಮಸೂದೆ ಪ್ರಸ್ತುತ ಇರುವ ಟ್ರಿಬ್ಯೂನಲ್‌ಗಳ ಅಧಿಕಾರ ವ್ಯಾಪ್ತಿ ಅಥವಾ ಕಾರ್ಯಚಟುವಟಿಕೆಗಳನ್ನು ಬದಲಾಯಿಸುವುದಿಲ್ಲ ಎಂದು ಕಾನೂನು ಸಚಿವ ಅರ್ಜುನ್ ಮೇಘವಾಲ್ ಸ್ಪಷ್ಟಪಡಿಸಿದ್ದಾರೆ. ಇದರ ಬದಲಿಗೆ, ನೇಮಕಾತಿಗಳಿಗೆ ಸಂಬಂಧಿಸಿದಂತೆ ಒಂದು ಪ್ರಮಾಣೀಕೃತ ಸಂಸ್ಥಾಗತ ಚೌಕಟ್ಟನ್ನು ರಚಿಸುವುದರ ಮೇಲೆ ಇದು ಗಮನಹರಿಸುತ್ತದೆ.

ಇದನ್ನೂ ಓದಿ: ತೆರಿಗೆ ತಿದ್ದುಪಡಿ ಮಸೂದೆ ಮಂಡನೆ: ತೆರಿಗೆ, ವಿದೇಶಿ ಹೂಡಿಕೆ, ಯುಪಿಐ ಪಾವತಿ ಇತ್ಯಾದಿ ನಿಯಮಗಳ ಪರಿಷ್ಕರಣೆಗೆ ಪ್ರಸ್ತಾಪ

ರಾಷ್ಟ್ರೀಯ ಟ್ರಿಬ್ಯೂನಲ್ ಆಯೋಗ (NTC) ಸ್ಥಾಪನೆ:

ಈ ಮಸೂದೆಯ ಅತ್ಯಂತ ಪ್ರಮುಖ ಅಂಶವೆಂದರೆ, ರಾಷ್ಟ್ರೀಯ ಟ್ರಿಬ್ಯೂನಲ್ ಆಯೋಗ (NTC) ಸ್ಥಾಪನೆ. ನವದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಲಿರುವ ಎನ್‌ಟಿಸಿ, ಟ್ರಿಬ್ಯೂನಲ್‌ಗಳ ಖಾಲಿ ಹುದ್ದೆಗಳ ಆಯ್ಕೆ ಪ್ರಕ್ರಿಯೆ ನಡೆಸುವುದು, ಕಾರ್ಯಕ್ಷಮತೆಯನ್ನು ಪರಾಮರ್ಶಿಸುವುದು ಮತ್ತು ಪ್ರಕರಣಗಳ ಮಾಹಿತಿಗಾಗಿ ಹೊಸ ಡಿಜಿಟಲ್ ವ್ಯವಸ್ಥೆಯನ್ನು ನಿರ್ವಹಿಸುವ ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.

ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸದನಕ್ಕೆ ಆಗಮಿಸಿ ಸ್ಪಷ್ಟನೆ ನೀಡಬೇಕೆಂದು ವಿರೋಧ ಪಕ್ಷಗಳು ಆಗ್ರಹಿಸಿದ್ದವು. ಮಸೂದೆಯನ್ನು ಮಂಡನೆ ಹಂತದಲ್ಲೇ ವಿರೋಧಿಸಲು ಹಲವಾರು ವಿಪಕ್ಷ ಸಂಸದರು ನೋಟಿಸ್ ನೀಡಿದ್ದರು. ಆದರೆ ಗದ್ದಲ ಹಾಗೂ ಘೋಷಣೆಗಳ ನಡುವೆ ಅವರಿಗೆ ಮಾತನಾಡಲು ಸಾಧ್ಯವಾಗಲಿಲ್ಲ.

ಟ್ರಿಬ್ಯೂನಲ್ ಸುಧಾರಣಾ ಮಸೂದೆ ನ್ಯಾಯಾಧಿಕರಣಗಳ ಅಧ್ಯಕ್ಷರು ಮತ್ತು ಸದಸ್ಯರ ಅರ್ಹತೆ, ನೇಮಕಾತಿ ಪ್ರಕ್ರಿಯೆ ಮತ್ತು ಸೇವಾ ಷರತ್ತುಗಳಲ್ಲಿ ಹೆಚ್ಚಿನ ಏಕರೂಪತೆಯನ್ನು ತರುವ ಮೂಲಕ ಅವುಗಳ ಕಾರ್ಯಾಚರಣೆಯ ಚೌಕಟ್ಟನ್ನು ಸಂಪೂರ್ಣವಾಗಿ ಪುನ್ ರಚಿಸಲು ಬಯಸುತ್ತದೆ. ಈ ಮಸೂದೆಯ ಪ್ರಮುಖ ಪ್ರಸ್ತಾಪವೆಂದರೆ ‘ರಾಷ್ಟ್ರೀಯ ಟ್ರಿಬ್ಯೂನಲ್ ಆಯೋಗ’ದ ರಚನೆ. ನವದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಲಿರುವ ಈ ಆಯೋಗವು, ವಿವಿಧ ಟ್ರಿಬ್ಯೂನಲ್‌ಗಳ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆ ಹಾಗೂ ನೇಮಕಾತಿಯನ್ನು ಮೇಲ್ವಿಚಾರಣೆ ಮಾಡುವ ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.

ಆಯೋಗದ ರಚನೆ:

ಈ ಆಯೋಗವು ಒಬ್ಬರು ಅಧ್ಯಕ್ಷರು ಮತ್ತು ನಾಲ್ವರು ಸದಸ್ಯರನ್ನು (ಇಬ್ಬರು ನ್ಯಾಯಾಂಗ ಸದಸ್ಯರು ಹಾಗೂ ಇಬ್ಬರು ತಾಂತ್ರಿಕ ಸದಸ್ಯರು) ಒಳಗೊಂಡಿರುತ್ತದೆ. ಅಧ್ಯಕ್ಷರಾಗುವವರು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾಗಿರಬೇಕು ಅಥವಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಯಾಗಿರಬೇಕು. ತಾಂತ್ರಿಕ ಸದಸ್ಯರು ಸಾರ್ವಜನಿಕ ಆಡಳಿತ, ಹಣಕಾಸು, ಕಾನೂನು ಅಥವಾ ತಂತ್ರಜ್ಞಾನ ಕ್ಷೇತ್ರದಲ್ಲಿ ಕನಿಷ್ಠ 25 ವರ್ಷಗಳ ಅನುಭವ ಹೊಂದಿರಬೇಕು.

ಇದನ್ನೂ ಓದಿ: ಇಂದು ಲೋಕಸಭೆಯಲ್ಲಿ 4 ಪ್ರಮುಖ ಮಸೂದೆ ಮಂಡನೆ: ಗೃಹ ಸಚಿವ ಅಮಿತ್ ಶಾ ಎರಡು ಪ್ರಮುಖ ವಿಧೇಯಕ ಮಂಡನೆ

ಹೈಕೋರ್ಟ್ (ಆರ್ಟಿಕಲ್ 226/227) ಮತ್ತು ಸುಪ್ರೀಂ ಕೋರ್ಟ್ (ಆರ್ಟಿಕಲ್ 32) ಹೊಂದಿರುವ ನ್ಯಾಯಾಂಗ ಪರಾಮರ್ಶೆಯ ಅಧಿಕಾರವು ಸಂವಿಧಾನದ ಮೂಲ ರಚನೆಯ ಅವಿಭಾಜ್ಯ ಅಂಗ ಎಂದು ಕೋರ್ಟ್ ಸ್ಪಷ್ಟಪಡಿಸಿತ್ತು. “ಹೊಸ ಕಾಯ್ದೆಯಿಂದ ಎನ್‌ಜಿಟಿ (ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ) ಸೇರಿದಂತೆ ವಿವಿಧ ಟ್ರಿಬ್ಯೂನಲ್‌ಗಳು ತಮ್ಮ ಧ್ವನಿ ಮತ್ತು ಅಧಿಕಾರವನ್ನು ಮರಳಿ ಪಡೆಯಲಿವೆ. 2021ರ ಚರ್ಚಾಸ್ಪದ ಕಾನೂನನ್ನು ಸುಪ್ರೀಂ ಕೋರ್ಟ್‌ವರೆಗೆ ಸಮರ್ಥಿಸಿಕೊಂಡಿದ್ದ ಮೋದಿ ಸರ್ಕಾರ, ಈಗ ತಾನು ತೀವ್ರವಾಗಿ ವಿರೋಧಿಸಿದ್ದ ಸುಧಾರಣೆಗಳನ್ನೇ ಜಾರಿಗೆ ತರಲು ಬದ್ಧವಾಗಿದೆ” ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ಕೇಂದ್ರೀಕೃತ ಆಯ್ಕೆ ಮತ್ತು ನೇಮಕಾತಿ ಪ್ರಕ್ರಿಯೆನೇಮಕಾತಿಗಳಲ್ಲಿ ಪಾರದರ್ಶಕತೆ ತರಲು NTC ಪ್ರತಿಯೊಂದು ಟ್ರಿಬ್ಯೂನಲ್‌ಗೂ ‘ಶೋಧನಾ ಮತ್ತು ಆಯ್ಕೆ ಸಮಿತಿ’ಗಳನ್ನು ರೂಪಿಸಲಿದೆ. ಈ ಸಮಿತಿಯಲ್ಲಿ ಆಯೋಗದ ಸದಸ್ಯರು, ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು ಮತ್ತು ಹಿರಿಯ ಸರ್ಕಾರಿ ಕಾರ್ಯದರ್ಶಿಗಳು ಇರುತ್ತಾರೆ. ಆಯ್ಕೆ ಸಮಿತಿಗಳ ಶಿಫಾರಸುಗಳನ್ನು ಸ್ವೀಕರಿಸಿದ 3 ತಿಂಗಳ ಒಳಗೆ ಕೇಂದ್ರ ಸರ್ಕಾರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಮಸೂದೆ ಕಡ್ಡಾಯಗೊಳಿಸಿದೆ. ಅಧ್ಯಕ್ಷರ ಅಧಿಕಾರಾವಧಿ 5 ವರ್ಷಗಳು ಅಥವಾ 70 ವರ್ಷ ವಯಸ್ಸಾಗುವವರೆಗೆ (ಯಾವುದು ಮೊದಲೋ ಅದು) ಹಾಗೂ ಸದಸ್ಯರ ಅಧಿಕಾರಾವಧಿ 5 ವರ್ಷಗಳು ಅಥವಾ 67 ವರ್ಷ ವಯಸ್ಸಾಗುವವರೆಗೆ ಇರಲಿದೆ.

ಟ್ರಿಬ್ಯೂನಲ್ ಸುಧಾರಣಾ ಮಸೂದೆಯ ಮುಖ್ಯಾಂಶಗಳು:

– ಟ್ರಿಬ್ಯೂನಲ್‌ಗಳ (ನ್ಯಾಯಾಧಿಕರಣಗಳ) ಆಡಳಿತದಲ್ಲಿ ಹೆಚ್ಚಿನ ಪಾರದರ್ಶಕತೆ ತರುವುದು ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು.

– ಬಾಕಿ ಉಳಿದಿರುವ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವುದು.

– ಅನಗತ್ಯ ಟ್ರಿಬ್ಯೂನಲ್‌ಗಳನ್ನು ರದ್ದುಗೊಳಿಸಿ, ಅವುಗಳ ಅಧಿಕಾರವನ್ನು ನೇರವಾಗಿ ಹೈಕೋರ್ಟ್ ಅಥವಾ ಇತರ ಚಾಲ್ತಿಯಲ್ಲಿರುವ ನ್ಯಾಯಾಲಯಗಳಿಗೆ ಹಸ್ತಾಂತರಿಸುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us