ನಕಲಿ ಆಧಾರ್ ಕಾರ್ಡ್ ತೋರಿಸಿ ಸಂಸತ್ ಪ್ರವೇಶಿಸಲು ಯತ್ನ: ಮೂವರ ಬಂಧನ
Parliment Security Breach: ನಕಲಿ ಆಧಾರ್ ಕಾರ್ಡ್ ತೋರಿಸಿ ಸಂಸತ್ ಪ್ರವೇಶಿಸುವ ಯತ್ನ ನಡೆದಿದೆ. ಅದೃಷ್ಟವಶಾತ್ ಈ ಬಾರಿ ಅಲರ್ಟ್ ಆದ ಭದ್ರತಾ ಸಿಬ್ಬಂದಿ ಒಳನುಸುಳುವಿಕೆ ತಡೆದಿದ್ದು, ಮೂವರನ್ನು ಬಂಧಿಸಿದ್ದಾರೆ. ಹೀಗಾಗಿ ಸಂಭಾವ್ಯ ಭದ್ರತಾ ಲೋಪವೊಂದು ತಪ್ಪಿದೆ. ಘಟನೆ ಕುರಿತ ವಿವರ ಇಲ್ಲಿದೆ.
ನವದೆಹಲಿ, ಜೂನ್ 7: ನಕಲಿ ಆಧಾರ್ ಕಾರ್ಡ್ (Fake Adhaar Card) ತೋರಿಸಿ ಸಂಸತ್ ಭವನ (Parliment) ಪ್ರವೇಶಿಸಲು ಮೂವರು ಯತ್ನಿಸಿದ ಘಟನೆ ಜೂನ್ 4ರಂದು ನಡೆದಿರುವುದು ಈಗ ಬೆಳಕಿಗೆ ಬಂದಿದೆ. ಮೈಸೂರು ಕೊಡಗು ಮಾಜಿ ಸಂಸದ ಪ್ರತಾಮ್ ಸಿಂಹ ಅವರಿಂದ ಪಾಸ್ ಗಿಟ್ಟಿಸಿಕೊಂಡು ಸಂಸತ್ ಪ್ರವೇಶಿಸಿ ಲೋಕಸಭೆ ಕಲಾಪದ ವೇಳೆ ಅಶ್ರುವಾಯು ಸಿಡಿಸಿದ್ದ ಪ್ರಕರಣದ ನೆನಪು ಪೂರ್ಣ ಮಾಸುವ ಮುನ್ನವೇ ಈ ವಿದ್ಯಮಾನ ನಡೆದಿದೆ. ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ.
ನಕಲಿ ಆಧಾರ್ ಕಾರ್ಡ್ ತೋರಿಸಿ ಸಂಸತ್ ಭವನ ಪ್ರವೇಶಿಸಲು ಮುಂದಾದ ಮೂವರನ್ನು ಸಿಐಎಸ್‌ಎಫ್ ವಶಕ್ಕೆ ಪಡೆದಿದೆ. ಕಾಸಿಂ, ಮೋನಿಸ್ ಮತ್ತು ಶೋಯೆಬ್ ಎಂದು ಗುರುತಿಸಲಾದ ಮೂವರು ವ್ಯಕ್ತಿಗಳು ಕಾರ್ಮಿಕರಂತೆ ನಟಿಸಿ ಗೇಟ್ ಸಂಖ್ಯೆ 3 ರಿಂದ ಸಂಸತ್ ಭವನದ ಒಳ ಪ್ರವೇಶಿಸಲು ಪ್ರಯತ್ನಿಸಿದರು.
ಬಂಧಿತರ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 19/465/468/471/120B ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್ ಪ್ರಕಾರ, ಜೂನ್ 4ರಂದು ಮಧ್ಯಾಹ್ನ 1.30ಕ್ಕೆ ಘಟನೆ ನಡೆದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಸತ್ ಪ್ರವೇಶಿಸಲು ಯತ್ನಿಸಿದವರು ಯಾರು?
ಈ ಹಿಂದೆ, ಹೊಸ ಸಂಸತ್ ಭವನದ ಭದ್ರತೆಯ ಜವಾಬ್ದಾರಿಯನ್ನು ದೆಹಲಿ ಪೊಲೀಸರಿಗೆ ವಹಿಸಲಾಗಿತ್ತು. ಆದರೆ ಇತ್ತೀಚೆಗೆ ಅದರ ಭದ್ರತೆಯ ಜವಾಬ್ದಾರಿಯನ್ನು ಸಿಐಎಸ್‌ಎಫ್‌ಗೆ ಹಸ್ತಾಂತರಿಸಲಾಗಿದೆ. ಪಾರ್ಲಿಮೆಂಟ್ ಕಾಂಪ್ಲೆಕ್ಸ್ ಪ್ರವೇಶಿಸಲು ಪ್ರಯತ್ನಿಸಿದ ಮೂವರು ಕಾರ್ಮಿಕರನ್ನು ನಿರ್ಮಾಣ ಕಂಪನಿ ಡೀ ವೀ ಪ್ರಾಜೆಕ್ಟ್ಸ್ ಲಿಮಿಟೆಡ್ ಮೂಲಕ ನೇಮಕ ಮಾಡಿಕೊಳ್ಳಲಾಗಿದೆ ಎಂದು ಸಿಐಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಸಂಸತ್ತಿನ ಎಂಪಿ ಲಾಂಜ್‌ನಲ್ಲಿ ನಿರ್ಮಾಣ ಕಾರ್ಯ ಮಾಡಲು ಮೂವರು ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿತ್ತು.
ಇಬ್ಬರು ವ್ಯಕ್ತಿಗಳು ವೀಕ್ಷಕರ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಜಿಗಿದು ಹಳದಿ ಬಣ್ಣದ ಅಶ್ರುವಾಯು ಸಿಡಿಸಿದ ಘಟನೆ ಕಳೆದ ವರ್ಷ ಡಿಸೆಂಬರ್ 13 ರಂದು ಸಂಭವಿಸಿತ್ತು. ಸಂಸತ್ನಲ್ಲಿ ಉಂಟಾದ ಈ ಭದ್ರತಾ ಲೋಪ ಸಂಸದರಲ್ಲಿ ಭಯವನ್ನು ಉಂಟುಮಾಡಿತ್ತು. ಆಗಿನ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪಾಸ್ ವಿತರಿಸಲಾಗಿತ್ತು.
ಇದನ್ನೂ ಓದಿ: ಲೋಕಸಭೆಯಲ್ಲಿ ಭದ್ರತಾ ಲೋಪ: ಕಲಾಪ ವೇಳೆ ನುಗ್ಗಿ ಅಶ್ರುವಾಯು ಸಿಡಿಸಿದ ಇಬ್ಬರು ವ್ಯಕ್ತಿಗಳು ವಶಕ್ಕೆ
ಅಂದು ನಡೆದಿದ್ದೇನು?
ಸಂಸತ್ ಮೇಲೆ ಭಯೋತ್ಪಾದಕ ದಾಳಿ ನಡೆದು 22 ವರ್ಷಗಳಾದ ಸಂದರ್ಭದಲ್ಲೇ ಸಂಸತ್ ಭವನದೊಳಕ್ಕೆ ಇಬ್ಬರು ನುಗ್ಗಿದ್ದರು. ಚಳಿಗಾಲದ ಅಧಿವೇಶನ ನಡೆಯುತ್ತಿದ್ದಾಗಲೇ ಈ ಘಟನೆ ಸಂಭವಿಸಿತ್ತು. ಇಬ್ಬರು ಯುವಕರು ಗ್ಯಾಲರಿಯಿಂದ ಜಿಗಿದು, ಅನಿಲ ಹೊರಸೂಸುವಂಥಾ ವಸ್ತುವನ್ನು ಎಸೆದಿದ್ದರು. ಅವರನ್ನು ಸಂಸದರು ಹಿಡಿದಿದ್ದರು. ಆಮೇಲೆ, ಅವರನ್ನು ಭದ್ರತಾ ಸಿಬ್ಬಂದಿ ಹೊರಗೆ ಕರೆತಂದಿದ್ದರು. ಅದೇ ವೇಳೆ, ಸಂಸತ್ ಭವನದ ಹೊರಗಡೆಯಲ್ಲಿಯೂ ಇಬ್ಬರು ಪ್ರತಿಭಟನೆ ನಡೆಸಿದ್ದರು. ಅವರನ್ನೂ ನಂತರ ಬಂಧಿಸಲಾಗಿತ್ತು.
ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಮಿತ್ರಪಕ್ಷಗಳ ಬೇಡಿಕೆಯೇನು, ಮಂತ್ರಿಗಿರಿ ನೀಡಲು ಬಿಜೆಪಿ ಸೂತ್ರವೇನು? ಇಲ್ಲಿದೆ ವಿವರ
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:55 am, Fri, 7 June 24