ಚೆನ್ನೈ: ತಮಿಳುನಾಡಿನ (Tamil Nadu) ಚೆನ್ನೈ ಸಮೀಪದ ತಾಂಬರಂನಲ್ಲಿ ಆರ್‌ಎಸ್‌ಎಸ್ ಕಾರ್ಯಾಧ್ಯಕ್ಷರ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಲಾಗಿದೆ. ಆರ್‌ಎಸ್‌ಎಸ್ (RSS) ಕಾರ್ಯಾಧ್ಯಕ್ಷ ಸೀತಾರಾಮನ್ ಅವರ ನಿವಾಸದ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ. ಪೆಟ್ರೋಲ್ ಬಾಂಬ್ (Petrol Bomb) ಎಸೆದ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಚೆನ್ನೈ ಹೊರವಲಯದ ಚಿಟ್ಲಪಾಕ್ಕಂನ ರಾಜರಾಜೇಶ್ವರಿ ನಗರದಲ್ಲಿ ಇಂದು (ಶನಿವಾರ) ಮುಂಜಾನೆ ಅಪರಿಚಿತ ದುಷ್ಕರ್ಮಿಗಳು ಆರ್‌ಎಸ್‌ಎಸ್ ಕಾರ್ಯಾಧ್ಯಕ್ಷರ ನಿವಾಸದ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಪಾದರಕ್ಷೆಗಳು ಸುಟ್ಟುಹೋಗಿವೆ ಎಂಬುದನ್ನು ಹೊರತುಪಡಿಸಿ ಯಾವುದೇ ವ್ಯಕ್ತಿ ಈ ಘಟನೆಯಲ್ಲಿ ಗಾಯಗೊಂಡಿಲ್ಲ. ಯಾವುದೇ ಆಸ್ತಿಗೆ ಕೂಡ ಹಾನಿಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರ್‌ಎಸ್‌ಎಸ್‌ನ ಜಿಲ್ಲಾ ಸಂಯೋಜಕ ಸೀತಾರಾಮನ್ (62) ಅವರು ತಮ್ಮ ಕುಟುಂಬದೊಂದಿಗೆ ಮನೆಯೊಳಗೆ ಇದ್ದರು. ಆಗ ದೊಡ್ಡ ಸದ್ದು ಕೇಳಿದ್ದರಿಂದ ಕುಟುಂಬದ ಸದಸ್ಯರು ಹೊರಗೆ ಧಾವಿಸಿದರು. ಆಗ ಹೊತ್ತಿಕೊಂಡಿದ್ದ ಸಣ್ಣ ಬೆಂಕಿಯನ್ನು ಮನೆಯವರು ಹಾಗೂ ನೆರೆಹೊರೆಯವರು ಆರಿಸಿದ್ದಾರೆ.
ಬಳಿಕ, ವಿಷಯ ತಿಳಿದು ತಾಂಬರಂ ನಗರ ಪೊಲೀಸರು ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಬೈಕ್ ನಲ್ಲಿ ಬಂದ ಇಬ್ಬರು ಈ ದಾಳಿ ನಡೆಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಶಂಕಿತರ ಗುರುತು ಪತ್ತೆಗೆ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸುತ್ತಿದ್ದಾರೆ.
Tamil Nadu | Petrol Bomb hurled on RSS functionary Seetharaman’s residence at Chitlapakkam in Tambaram near Chennai. Efforts underway to nab two unidentified people who threw petrol bomb: Tambaram Police
— ANI (@ANI) September 24, 2022
ಶುಕ್ರವಾರ, ಕೊಯಮತ್ತೂರಿನ ಕೋವೈಪುದೂರ್‌ನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಅಪರಿಚಿತ ವ್ಯಕ್ತಿಗಳು ಆರ್‌ಎಸ್‌ಎಸ್ ಕಾರ್ಯಕರ್ತರೊಬ್ಬರ ನಿವಾಸದ ಮೇಲೆ ಪೆಟ್ರೋಲ್ ಬಾಂಬ್ ಎಸೆದ ನಂತರ ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು.