ಮನಮೋಹನ್ ಸಿಂಗ್ ಅಸಾಧಾರಣ ವ್ಯಕ್ತಿ, ಆದರೂ ಭಾರತದ ಆರ್ಥಿಕತೆ ಸ್ಥಗಿತಗೊಂಡಿತು; ಇನ್​ಫೋಸಿಸ್ ನಾರಾಯಣಮೂರ್ತಿ ವಿಷಾದ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಓರ್ವ ಅಸಾಧಾರಣ ವ್ಯಕ್ತಿ ಮತ್ತು ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೂ, ಭಾರತವು ಯುಪಿಎ ಅವಧಿಯಲ್ಲಿ ಸ್ಥಗಿತಗೊಂಡಿತು ಎಂದು ಎನ್​ಆರ್​ ನಾರಾಯಣ ಮೂರ್ತಿ ಹೇಳಿದ್ದಾರೆ.

ಮನಮೋಹನ್ ಸಿಂಗ್ ಅಸಾಧಾರಣ ವ್ಯಕ್ತಿ, ಆದರೂ ಭಾರತದ ಆರ್ಥಿಕತೆ ಸ್ಥಗಿತಗೊಂಡಿತು; ಇನ್​ಫೋಸಿಸ್ ನಾರಾಯಣಮೂರ್ತಿ ವಿಷಾದ
ಇನ್ಫೋಸಿಸ್‌ನ ಸಹ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ
Follow us
| Updated By: ಸುಷ್ಮಾ ಚಕ್ರೆ

Updated on: Sep 24, 2022 | 11:21 AM

ಅಹಮದಾಬಾದ್: ಭಾರತದಲ್ಲಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ಕಾಂಗ್ರೆಸ್ ನೇತೃತ್ವದ ಯುಪಿಎ (UPA) ಅವಧಿಯಲ್ಲಿ ಪ್ರಧಾನಮಂತ್ರಿಯಾಗಿದ್ದ ಮನಮೋಹನ್ ಸಿಂಗ್ (Manmohan Singh) ಅವರ ಸರ್ಕಾರವು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲ ಎಂದು ಐಟಿ ದಿಗ್ಗಜ ಇನ್ಫೋಸಿಸ್‌ನ ಸಹ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ (NR Narayana Murthy) ವಿಷಾದ ವ್ಯಕ್ತಪಡಿಸಿದ್ದಾರೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ – ಅಹಮದಾಬಾದ್ (IIMA)ನಲ್ಲಿ ನಡೆದ ಯುವ ಉದ್ಯಮಿಗಳು ಮತ್ತು ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಮಾತನಾಡಿದ ಎನ್​ಆರ್​ ನಾರಾಯಣ ಮೂರ್ತಿ, ಯುವ ಮನಸ್ಸುಗಳು ಭಾರತವನ್ನು ವಿಶ್ವದ 2ನೇ ಅತಿದೊಡ್ಡ ಆರ್ಥಿಕತೆಯಾದ ಚೀನಾಕ್ಕೆ ಪ್ರಬಲ ಪ್ರತಿಸ್ಪರ್ಧಿಯನ್ನಾಗಿ ಮಾಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾನು ಲಂಡನ್‌ನಲ್ಲಿ (2008 ಮತ್ತು 2012ರ ವೇಳೆ) ಎಚ್‌ಎಸ್‌ಬಿಸಿಯ ಬೋರ್ಡ್‌ನಲ್ಲಿದ್ದೆ. ಮೊದಲ ಕೆಲವು ವರ್ಷಗಳಲ್ಲಿ ಬೋರ್ಡ್‌ರೂಮ್‌ನಲ್ಲಿ ಚೀನಾವನ್ನು 2ರಿಂದ 3 ಬಾರಿ ಉಲ್ಲೇಖಿಸಿದರೆ ಭಾರತದ ಹೆಸರನ್ನು ಒಮ್ಮೆ ಉಲ್ಲೇಖಿಸಲಾಗುತ್ತಿತ್ತು. ಆದರೆ ದುರದೃಷ್ಟವಶಾತ್, ನಂತರ ಭಾರತಕ್ಕೆ ಏನಾಯಿತು ಎಂದು ನನಗೆ ತಿಳಿದಿಲ್ಲ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಓರ್ವ ಅಸಾಧಾರಣ ವ್ಯಕ್ತಿ ಮತ್ತು ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೂ, ಭಾರತವು ಯುಪಿಎ ಅವಧಿಯಲ್ಲಿ ಸ್ಥಗಿತಗೊಂಡಿತು. ಅವರು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಾಕಷ್ಟು ವಿಳಂಬ ಮಾಡಿದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: Amit Shah: ಭಾರತ ಕೆಲವೇ ವರ್ಷಗಳಲ್ಲಿ 3ನೇ ಅತಿದೊಡ್ಡ ಆರ್ಥಿಕತೆ ದೇಶವಾಗಲಿದೆ: ಅಮಿತ್ ಶಾ

ಜನರು ಇತರ ಯಾವುದೇ ದೇಶದ ಹೆಸರನ್ನು ಅದರಲ್ಲೂ ವಿಶೇಷವಾಗಿ ಚೀನಾವನ್ನು ಉಲ್ಲೇಖಿಸಿದಾಗ ಭಾರತದ ಹೆಸರನ್ನು ಕೂಡ ಉಲ್ಲೇಖಿಸುವಂತೆ ಮಾಡುವುದು ಯುವ ಪೀಳಿಗೆಯ ಜವಾಬ್ದಾರಿ. ನೀವು ಅದನ್ನು ಮಾಡುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.

ಬಹುಪಾಲು ಪಾಶ್ಚಿಮಾತ್ಯರು ಭಾರತವನ್ನು ಕೀಳಾಗಿ ನೋಡುತ್ತಿದ್ದ ಕಾಲವಿತ್ತು. ಆದರೆ ಇಂದು ನಮ್ಮ ದೇಶದ ಬಗ್ಗೆ ಒಂದು ನಿರ್ದಿಷ್ಟ ಮಟ್ಟದ ಗೌರವವಿದೆ. ಭಾರತ ಈಗ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಎನ್​ಆರ್​ ನಾರಾಯಣ ಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿದ್ದಾಗ 1991ರ ಆರ್ಥಿಕ ಸುಧಾರಣೆಗಳು ಮತ್ತು ಪ್ರಸ್ತುತ ಭಾರತೀಯ ಜನತಾ ಪಕ್ಷದ ನೇತೃತ್ವದ ಎನ್‌ಡಿಎ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಮತ್ತು ‘ಸ್ಟಾರ್ಟಪ್ ಇಂಡಿಯಾ’ ಮುಂತಾದ ಯೋಜನೆಗಳು ದೇಶವನ್ನು ಮುನ್ನಡೆಸಲು ಸಹಾಯ ಮಾಡಿವೆ ಎಂದಿದ್ದಾರೆ.

ಇದನ್ನೂ ಓದಿ: Taiwan: ತೈವಾನ್​ ಮೇಲೆ ಚೀನಾ ಆಕ್ರಮಣ ಮಾಡಿದರೆ ಅಮೆರಿಕ ಪಡೆಗಳ ರವಾನೆ; ಜೋ ಬೈಡೆನ್ ನೇರ ಎಚ್ಚರಿಕೆ

“ನಾನು ನಿಮ್ಮ ವಯಸ್ಸಿನಲ್ಲಿದ್ದಾಗ ನನಗೆ ಹೆಚ್ಚಿನ ಜವಾಬ್ದಾರಿ ಇರಲಿಲ್ಲ. ಏಕೆಂದರೆ ನನ್ನಿಂದ ಅಥವಾ ಭಾರತದಿಂದ ಹೆಚ್ಚು ನಿರೀಕ್ಷೆಗಳೂ ಇರಲಿಲ್ಲ. ಆದರೆ, ಇಂದು ನೀವು ದೇಶವನ್ನು ಮುನ್ನಡೆಸುತ್ತೀರಿ ಎಂಬ ನಿರೀಕ್ಷೆಯಿದೆ. ನೀವು ಭಾರತವನ್ನು ಚೀನಾದ ಯೋಗ್ಯ ಪ್ರತಿಸ್ಪರ್ಧಿಯಾಗಿ ಮಾಡಬಹುದು ಎಂದು ನಾನು ನಂಬುತ್ತೇನೆ. ಚೀನಾ ಆರ್ಥಿಕತೆ ಭಾರತಕ್ಕಿಂತ 6 ಪಟ್ಟು ದೊಡ್ಡದಾಗಿದೆ. 44 ವರ್ಷಗಳಲ್ಲಿ ಅಂದರೆ 1978 ಮತ್ತು 2022ರ ನಡುವೆ, ಚೀನಾ ಭಾರತವನ್ನು ತುಂಬಾ ಹಿಂದೆ ಹಾಕಿ ಮುನ್ನುಗ್ಗಿದೆ. ಇದೀಗ ಭಾರತವನ್ನು ಚೀನಾಕ್ಕಿಂತ ಮುಂದೆ ತೆಗೆದುಕೊಂಡು ಹೋಗಬೇಕಾದ ಹೊಣೆ ಯುವಪೀಳಿಗೆಯ ಮೇಲಿದೆ ಎಂದು ನಾರಾಯಣಮೂರ್ತಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ