ಉತ್ತರ ಪ್ರದೇಶದಲ್ಲಿನ್ನು ಅತ್ಯಾಚಾರ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಸಿಗಲ್ಲ; ಹೊಸ ಮಸೂದೆಗೆ ಅಂಗೀಕಾರ
ಈ ಮಸೂದೆಯು ಯುವತಿಯರು ಮತ್ತು ಮಹಿಳೆಯರ ಮೇಲಿನ ಲೈಂಗಿಕ ಅಪರಾಧಗಳಲ್ಲಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನನ್ನು ನಿರಾಕರಿಸುವುದರಿಂದ ಆರೋಪಿಗಳು ಸಾಕ್ಷ್ಯವನ್ನು ನಾಶಪಡಿಸುವ ಸಾಧ್ಯತೆ ಕಡಿಮೆಯಾಗುತ್ತದೆ.
ಲಕ್ನೋ: ಅತ್ಯಾಚಾರದ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು (Anticipatory Bail) ನೀಡುವುದನ್ನು ತಡೆಯುವ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಉತ್ತರ ಪ್ರದೇಶ ತಿದ್ದುಪಡಿ) ಮಸೂದೆ 2022ಯನ್ನು ಉತ್ತರ ಪ್ರದೇಶದ ವಿಧಾನಸಭೆಯಲ್ಲಿ (Uttar Pradesh Assembly) ಅಂಗೀಕರಿಸಲಾಗಿದೆ. ಉತ್ತರ ಪ್ರದೇಶ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಖನ್ನಾ ಶುಕ್ರವಾರ ಸದನದಲ್ಲಿ ಈ ತಿದ್ದುಪಡಿ ಮಸೂದೆಯ ಕುರಿತು ಮಾತನಾಡಿದ್ದು, ಪೋಕ್ಸೊ ಕಾಯ್ದೆ (POCSO Act) ಮತ್ತು ಮಹಿಳೆಯರೊಂದಿಗೆ ದುಷ್ಕೃತ್ಯ ಎಸಗುವ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡದಂತೆ ನಿಬಂಧನೆಯನ್ನು ಹೇರಲಾಗಿದೆ ಎಂದು ಹೇಳಿದ್ದಾರೆ.
ಈ ಮಸೂದೆಯು ಯುವತಿಯರು ಮತ್ತು ಮಹಿಳೆಯರ ಮೇಲಿನ ಲೈಂಗಿಕ ಅಪರಾಧಗಳಲ್ಲಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನನ್ನು ನಿರಾಕರಿಸುವುದರಿಂದ ಆರೋಪಿಗಳು ಸಾಕ್ಷ್ಯವನ್ನು ನಾಶಪಡಿಸುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಸಚಿವ ಸುರೇಶ್ ಕುಮಾರ್ ಖನ್ನಾ ಹೇಳಿದ್ದಾರೆ. ಈ ನಿಬಂಧನೆಯು ಆರೋಪಿಗಳು ಸಂತ್ರಸ್ತೆ ಮತ್ತು ಇತರ ಸಾಕ್ಷಿಗಳನ್ನು ಹೆದರಿಸುವುದು ಅಥವಾ ಕಿರುಕುಳ ನೀಡುವುದನ್ನು ತಡೆಯಲು ಸಹಾಯ ಮಾಡುತ್ತದೆ. ಈ ಮಸೂದೆಯು CrPCಯ ನಿಬಂಧನೆಗಳಿಗೆ ಬದಲಾವಣೆಗಳನ್ನು ಮಾಡಲು ಪ್ರಯತ್ನಿಸುತ್ತದೆ ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶ ಅಸೆಂಬ್ಲಿ ಮತ್ತೊಂದು ಮಸೂದೆಯನ್ನು ಕೂಡ ಅಂಗೀಕರಿಸಿದೆ. ಉತ್ತರ ಪ್ರದೇಶ ವಿಧಾನಸಭೆಯು ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ಹಾನಿ ವಸೂಲಾತಿ (ತಿದ್ದುಪಡಿ) ಮಸೂದೆ, 2022ಯನ್ನು ಅಂಗೀಕರಿಸಿದೆ. ಗಲಭೆಯಲ್ಲಿ ಸತ್ತವರಿಗೆ 5 ಲಕ್ಷ ರೂ. ಪರಿಹಾರ ನೀಡಲು ತಿದ್ದುಪಡಿ ಮಸೂದೆಯು ಹಕ್ಕು ನ್ಯಾಯಮಂಡಳಿಗೆ ಅಧಿಕಾರ ನೀಡುತ್ತದೆ. ಪರಿಹಾರದ ಹಣವನ್ನು ತಪ್ಪಿತಸ್ಥ ವ್ಯಕ್ತಿಯಿಂದ ವಸೂಲಿ ಮಾಡಲಾಗುವುದು ಎಂದು ಸಚಿವ ಖನ್ನಾ ಹೇಳಿದ್ದಾರೆ.
ಈ ಮಸೂದೆಯ ಅಡಿಯಲ್ಲಿ ಸಂತ್ರಸ್ತೆ ಅಥವಾ ಗಲಭೆಯಲ್ಲಿ ಜೀವ ಕಳೆದುಕೊಂಡ ವ್ಯಕ್ತಿಯ ಅವಲಂಬಿತರು ಪರಿಹಾರಕ್ಕಾಗಿ ಮನವಿ ಮಾಡಬಹುದು. ಅಂತಹ ಪ್ರಕರಣಗಳಲ್ಲಿ ಪೊಲೀಸ್ ಕ್ರಮದ ವೆಚ್ಚವನ್ನು ತಪ್ಪಿತಸ್ಥರೇ ಭರಿಸಬೇಕೆಂದು ತಿದ್ದುಪಡಿ ಮಸೂದೆಯಲ್ಲಿ ತಿಳಿಸಲಾಗಿದೆ. ಅಂತಹ ವಸೂಲಾತಿಗಾಗಿ ಹಕ್ಕುಗಳ ನ್ಯಾಯಮಂಡಳಿಯನ್ನು ರಚಿಸಲು ಸರ್ಕಾರವು ಈ ಹಿಂದೆ ಉತ್ತರ ಪ್ರದೇಶ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ಹಾನಿ ಮರುಪಡೆಯುವಿಕೆ ಕಾಯ್ದೆ, 2020ಯನ್ನು ಅನ್ವಯಿಸಿತ್ತು.