48 ದಿನ ನಂತರ ಹೆಚ್ಚಳವಾಯ್ತು ಪೆಟ್ರೋಲ್ ದರ, ಟ್ವಿಟರ್​​ನಲ್ಲಿ ಹರಿಯಿತು ಮೀಮ್ ಮಹಾಪೂರ..

48 ದಿನ ನಂತರ ಹೆಚ್ಚಳವಾಯ್ತು ಪೆಟ್ರೋಲ್ ದರ, ಟ್ವಿಟರ್​​ನಲ್ಲಿ ಹರಿಯಿತು ಮೀಮ್ ಮಹಾಪೂರ..
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ನಗರ ಸೇರಿದಂತೆ ದೇಶದ ವಿವಿಧೆಡೆ ಪೆಟ್ರೋಲ್ ಮತ್ತು ಡೀಸೆಲ್ ದರ ಶುಕ್ರವಾರ ತುಸು ಹೆಚ್ಚಾಗಿದೆ. ಸುಮಾರು 2 ತಿಂಗಳುಗಳಿಂದ ಪೆಟ್ರೋಲ್-ಡೀಸೆಲ್ ದರಗಳಲ್ಲಿ ಬದಲಾವಣೆ ಆಗಿರಲಿಲ್ಲ. ಇಂಧನ ಬೆಲೆ ಏರಿಕೆಯ ಬಗ್ಗೆ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. #PetrolPrice ಹ್ಯಾಷ್​ ಟ್ಯಾಗ್ ಟ್ವಿಟರ್​​ ಜಾಲತಾಣದಲ್ಲಿ ‘ಇಂಡಿಯಾ ಟ್ರೆಂಡಿಂಗ್’ನಲ್ಲಿ ಎದ್ದು ಕಾಣುತ್ತಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರವು ಲೀಟರಿಗೆ 16 ಪೈಸೆ ಹೆಚ್ಚಾಗಿದ್ದು, ₹ 83.92 ಮುಟ್ಟಿದೆ. ಡೀಸೆಲ್ ದರವು 22 ಪೈಸೆ ಹೆಚ್ಚಾಗಿದ್ದು, ₹ 74.91 ಮುಟ್ಟಿದೆ. ಏಕೆ ಹೆಚ್ಚಳ […]

sadhu srinath

|

Nov 20, 2020 | 3:31 PM

ಬೆಂಗಳೂರು: ನಗರ ಸೇರಿದಂತೆ ದೇಶದ ವಿವಿಧೆಡೆ ಪೆಟ್ರೋಲ್ ಮತ್ತು ಡೀಸೆಲ್ ದರ ಶುಕ್ರವಾರ ತುಸು ಹೆಚ್ಚಾಗಿದೆ. ಸುಮಾರು 2 ತಿಂಗಳುಗಳಿಂದ ಪೆಟ್ರೋಲ್-ಡೀಸೆಲ್ ದರಗಳಲ್ಲಿ ಬದಲಾವಣೆ ಆಗಿರಲಿಲ್ಲ. ಇಂಧನ ಬೆಲೆ ಏರಿಕೆಯ ಬಗ್ಗೆ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. #PetrolPrice ಹ್ಯಾಷ್​ ಟ್ಯಾಗ್ ಟ್ವಿಟರ್​​ ಜಾಲತಾಣದಲ್ಲಿ ‘ಇಂಡಿಯಾ ಟ್ರೆಂಡಿಂಗ್’ನಲ್ಲಿ ಎದ್ದು ಕಾಣುತ್ತಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ದರವು ಲೀಟರಿಗೆ 16 ಪೈಸೆ ಹೆಚ್ಚಾಗಿದ್ದು, ₹ 83.92 ಮುಟ್ಟಿದೆ. ಡೀಸೆಲ್ ದರವು 22 ಪೈಸೆ ಹೆಚ್ಚಾಗಿದ್ದು, ₹ 74.91 ಮುಟ್ಟಿದೆ.

ಏಕೆ ಹೆಚ್ಚಳ ಕೊರೊನಾ ತಡೆಗಟ್ಟುವ ಲಸಿಕೆಯ ಭರವಸೆ ಆಶಾವಾದ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವಿಶ್ವದ ವಿವಿಧೆಡೆ ಸಾರಿಗೆ ಸೇರಿದಂತೆ ವಿವಿಧ ಉದ್ಯಮ ವಲಯಗಳು ಚೇತರಿಸಿಕೊಂಡಿವೆ. ಇಂಧನಕ್ಕೂ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಕಚ್ಚಾ ತೈಲದ ದರವೂ ಮುಂದಿನ ದಿನಗಳಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ.

ಅಕ್ಟೋಬರ್ ತಿಂಗಳಿನಲ್ಲಿ ಒಂದು ಬ್ಯಾರೆಲ್ ಬ್ರೆಂಟ್ ಕ್ರೂಡ್ (ಕಚ್ಚಾತೈಲ) ಬೆಲೆ 40 ಡಾಲರ್ ಆಸುಪಾಸಿನಲ್ಲಿತ್ತು. ಶುಕ್ರವಾರ (ನ.20) ಇದು 44 ಡಾಲರ್ ಮುಟ್ಟಿದೆ.

ಕಚ್ಚಾ ತೈಲದ ಬೆಲೆ ಒಂದು ಡಾಲರ್ ಹೆಚ್ಚಾದರೆ, ಪೆಟ್ರೋಲ್ ಅಥವಾ ಡೀಸೆಲ್ನ ಚಿಲ್ಲರೆ ಮಾರಾಟ ದರವು 40 ಪೈಸೆಗಳಷ್ಟು ಏರುವುದು ವಾಡಿಕೆ. ಈ ಲೆಕ್ಕಾಚಾರದಂತೆ ಪ್ರಸ್ತುತ ಇಂಧನ ದರವು ಪ್ರತಿ ಲೀಟರ್​ಗೆ ₹ 1.20ರಷ್ಟು ಏರಿಕೆಯಾಗಬೇಕಿತ್ತು. ಆದರೆ ಕಚ್ಚಾ ತೈಲದ ದರ ಕಡಿಮೆಯಿದ್ದ ಅವಧಿಯೂ ಸೇರಿದಂತೆ, ಕಳೆದ 2 ತಿಂಗಳುಗಳಿಂದ ಇಂಧನ ದರ ಪರಿಷ್ಕರಣೆ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ದರ ಏರಿಕೆಗೆ ತೈಲ ಕಂಪನಿಗಳು ಮುಂದಾಗಿವೆ.

ಟ್ವಿಟರ್​​ನಲ್ಲಿ #PetrolPrice ಟ್ರೆಂಡಿಂಗ್ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಕಡಿಮೆಯಿದ್ದರೂ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿಯೂ ಸದ್ದು ಮಾಡಿದೆ.

#PetrolPrice ಹ್ಯಾಷ್​ ಟ್ಯಾಗ್ ಟ್ವಿಟರ್​​ ಜಾಲತಾಣದಲ್ಲಿ ಇಂಡಿಯಾ ಟ್ರೆಂಡಿಂಗ್​ನಲ್ಲಿ ಎದ್ದು ಕಾಣುತ್ತಿದೆ. ಶುಕ್ರವಾರ ಮಧ್ಯಾಹ್ನ 12.30ರ ಹೊತ್ತಿಗೆ ಈ ಹ್ಯಾಷ್​ ಟ್ಯಾಗ್​ನೊಂದಿಗೆ 1,548 ಟ್ವೀಟ್​ಗಳು ಪೋಸ್ಟ್ ಆಗಿದ್ದವು.

ಕುತೂಹಲಕಾರಿ ಟ್ವೀಟ್​ಗಳು ಇಲ್ಲಿವೆ..

‘ಪೆಟ್ರೋಲ್ ದರ ಏರಿಕೆಗೂ ಮೊದಲು ಜೋಡಿಗಳು ಲಾಂಗ್​ ಡ್ರೈವ್​ಗಾಗಿ ಕಾರು ಏರುತ್ತಿದ್ದರು. ಈಗ ಸೈಕಲ್ ಸಾಕಾಗಿದೆ’ ಎಂದು ಸಂಸ್ಕೃತಿಕ ಶರ್ಮಾ ಎಂಬುವವರು ನಟ ಅಕ್ಷಯ್ ಕುಮಾರ್ ಅವರ ಎರಡು ಭಿನ್ನ ಸಿನಿಮಾಗಳ ದೃಶ್ಯಗಳನ್ನು ಟ್ವೀಟ್ ಮಾಡಿದ್ದಾರೆ.

ಬೆಲೆ ಏರಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಸಾಗರ್ ಎನ್ನುವವರು, ಬೆಲೆ ಏರಿಕೆಯ ಪರಿಣಾಮ ಬಿಂಬಿಸುವ ವ್ಯಂಗ್ಯಚಿತ್ರವೊಂದನ್ನು ಟ್ವೀಟ್ ಜೊತೆಗೆ ಲಗತ್ತಿಸಿದ್ದಾರೆ.

ಪೆಟ್ರೋಲ್ ದರ ಏರಿಕೆ ಚರ್ಚೆಗಳು ರಾಜಕೀಯ ಸ್ವರೂಪವನ್ನೂ ಪಡೆದುಕೊಂಡಿವೆ. ಎಕ್ಸ್​ವೈಝೆಡ್ ಟ್ವಿಟರ್ ಅಕೌಂಟ್​ನಿಂದ ಟ್ವೀಟ್ ಆಗಿರುವ ಪೋಸ್ಟ್ ಒಂದು ದೇಶದ ವಿವಿಧ ರಾಜ್ಯಗಳ ಪೆಟ್ರೋಲ್ ದರವನ್ನು ಹೋಲಿಸಿದೆ.

ಪೆಟ್ರೋಲ್ ದರವು ಉತ್ತರ ಪ್ರದೇಶದಲ್ಲಿ ಪ್ರತಿ ಲೀಟರಿಗೆ ₹ 81.63, ಗುಜರಾತ್​ನಲ್ಲಿ ₹ 78.50 ಇದೆ. ಮಹಾರಾಷ್ಟ್ರದಲ್ಲಿ ₹ 88, ರಾಜಸ್ಥಾನದಲ್ಲಿ ₹87.50 ಇದೆ ಎಂದು ಎತ್ತಿ ತೋರಿಸುವ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿರುವ ದರ ವ್ಯತ್ಯಾಸವನ್ನು ಎತ್ತಿ ತೋರಿಸಿದೆ.

Follow us on

Related Stories

Most Read Stories

Click on your DTH Provider to Add TV9 Kannada