Damage Recovery: ಪಿಎಫ್ಐಯಿಂದ ಸಾರ್ವಜನಿಕ ಆಸ್ತಿಗೆ ಹಾನಿ; ನಷ್ಟ ವಸೂಲಿ ವಿಳಂಬಕ್ಕೆ ಹೈಕೋರ್ಟ್ ಕ್ಷಮೆ ಕೋರಿದ ಕೇರಳ ಸರ್ಕಾರ
ಕೇಂದ್ರ ಗೃಹ ಸಚಿವಾಲಯ ಪಿಎಫ್ಐ ಅನ್ನು ನಿಷೇಧಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಕೇರಳದಾದ್ಯಂತ ಹರತಾಳಕ್ಕೆ ಕರೆ ನೀಡಲಾಗಿತ್ತು. ಈ ಹರತಾಳದ ವೇಳೆ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು.
ತಿರುವನಂತಪುರ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆ ನಡೆಸಿದ್ದ ಹರತಾಳದ (Hartal) ವೇಳೆ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಆಗಿರುವ ಹಾನಿಯ ನಷ್ಟ ವಸೂಲಿ ಮಾಡುವಲ್ಲಿ ವಿಳಂಬವಾಗಿರುವುದಕ್ಕೆ ಕೇರಳ ಸರ್ಕಾರವು ಅಲ್ಲಿನ ಹೈಕೋರ್ಟ್ (Kerala High Court) ಕ್ಷಮೆ ಕೋರಿದೆ. ಹರತಾಳದಲ್ಲಿ ಭಾಗಿಯಾದವರ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದವರ ಆಸ್ತಿಗಳನ್ನು ಗುರುತಿಸಲಾಗಿದ್ದು, ಜನವರಿ 15ರ ಒಳಗಾಗಿ ವಶಪಡಿಸಿಕೊಳ್ಳಲಾಗುವುದು. ಈ ಪ್ರಕ್ರಿಯೆ ಪೂರ್ಣಗೊಳಿಸಲು ಒಂದು ತಿಂಗಳ ಕಾಲಾವಕಾಶ ಬೇಕು ಎಂದು ಹೈಕೋರ್ಟ್ಗೆ ರಾಜ್ಯ ಸರ್ಕಾರ ಮನವಿ ಮಾಡಿದೆ.
ತಮ್ಮ ಕಡೆಯಿಂದ ಉದ್ದೇಶಪೂರ್ವಕ ವಿಳಂಬ ಆಗಿಲ್ಲ. ವಸೂಲಾತಿ ಪ್ರಕ್ರಿಯೆಗಳನ್ನು ಕೈಗೊಳ್ಳುವ ಜವಾಬ್ದಾರಿಯನ್ನು ಭೂ ಕಂದಾಯ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಈ ಮಧ್ಯೆ, ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವುದು ಗಂಭೀರ ಸಮಸ್ಯೆ. ಇಂಥ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳುವುದು ಮುಖ್ಯ. ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವಂಥ ಘಟನೆಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.
ಅಸಮಾಧಾನ ವ್ಯಕ್ತಪಡಿಸಿದ್ದ ಕೇರಳ ಹೈಕೋರ್ಟ್
ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದವರಿಂದ ನಷ್ಟ ವಸೂಲಾತಿ ಮಾಡುವ ಪ್ರಕ್ರಿಯೆ ವಿಳಂಬವಾಗುತ್ತಿರುವ ಬಗ್ಗೆ ಕಳೆದ ವಾರ ಕೇರಳ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಜತೆಗೆ, ಜನವರಿಯ ಒಳಗೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಸೆಪ್ಟೆಂಬರ್ನಲ್ಲಿ ರಾಜ್ಯವ್ಯಾಪಿ ಹರತಾಳದ ಸಂದರ್ಭದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳಿಂದ 86 ಲಕ್ಷ ರೂ. ಮೌಲ್ಯದ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿಯಾಗಿದೆ ಎಂದು ಸರ್ಕಾರವು ನವೆಂಬರ್ 7ರಂದು ಹೈಕೋರ್ಟ್ಗೆ ತಿಳಿಸಿತ್ತು. ಖಾಸಗಿ ಕ್ಷೇತ್ರದವರಿಗೆ 16 ಲಕ್ಷ ರೂ. ನಷ್ಟವಾಗಿರುವುದಾಗಿಯೂ ತಿಳಿಸಿತ್ತು. ಈವರೆಗೆ ರಾಜ್ಯ ಪೊಲೀಸರು 361 ಪ್ರಕರಣಗಳನ್ನು ದಾಖಲಿಸಿದ್ದು, 2,674 ಜನರನ್ನು ಬಂಧಿಸಿತ್ತು.
ಹರತಾಳ ಸಂಬಂಧಿತ ಹಿಂಸಾಚಾರದ ವೇಳೆ ರಾಜ್ಯ ಸಾರಿಗೆ ಸಂಸ್ಥೆಗೆ ಆದ ಹಾನಿಗೆ ಸಂಬಂಧಿಸಿ 5.2 ಕೋಟಿ ರೂ. ಠೇವಣಿ ಇಡುವಂತೆ ಈ ಹಿಂದೆ ಪಿಎಫ್ಐ ಸಂಘಟನೆಯ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್ಗೆ ಹೈಕೋರ್ಟ್ ಸೂಚಿಸಿತ್ತು. ನಷ್ಟಕ್ಕೆ ಪಿಎಫ್ಐಯನ್ನೇ ಪ್ರಮುಖ ಹೊಣೆಯನ್ನಾಗಿ ಮಾಡಬೇಕು ಎಂದು ಸರ್ಕಾರಕ್ಕೆ ತಿಳಿಸಿತ್ತು.
ಕೇಂದ್ರ ಗೃಹ ಸಚಿವಾಲಯ ಪಿಎಫ್ಐ ಅನ್ನು ನಿಷೇಧಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಕೇರಳದಾದ್ಯಂತ ಹರತಾಳಕ್ಕೆ ಕರೆ ನೀಡಲಾಗಿತ್ತು. ಈ ಹರತಾಳದ ವೇಳೆ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು.
ಮತ್ತಷ್ಟು ರಾಷ್ಟ್ರೀಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ