Fact Check ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆಗಿರುವ ಫೋಟೊ ವಿಯೆಟ್ನಾಂನದ್ದು
ವೈರಲ್ ಆಗಿರುವ ಫೋಟೊವನ್ನು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, 2020 ರಲ್ಲಿ ವಿಯೆಟ್ನಾಂನಲ್ಲಿ ಪತ್ತೆಯಾದ '1100 ವರ್ಷ ಹಳೆಯ' ಶಿವಲಿಂಗದ ಬಗ್ಗೆ ವರದಿಗಳು ಪ್ರಕಟವಾಗಿರುವುದು ಸಿಕ್ಕಿದೆ
ಜ್ಞಾನವಾಪಿ ಮಸೀದಿಯಲ್ಲಿ (Gyanvapi Mosque) ಪತ್ತೆಯಾದ ಶಿವಲಿಂಗ (Shivling) ಎಂಬ ಶೀರ್ಷಿಕೆಯೊಂದಿಗೆ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ (Varanasi) ಮೊಘಲರ ಕಾಲದ ಜ್ಞಾನವಾಪಿ ಮಸೀದಿಯ ಕಾನೂನು ವಿವಾದದ ಸಂದರ್ಭದಲ್ಲಿ ಈ ಫೋಟೊ ವೈರಲ್ ಆಗಿದ್ದು, ಮಸೀದಿಯನ್ನು ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ಹಿಂದೂ ಗುಂಪುಗಳು ಆರೋಪಿಸಿವೆ. ಮೇ 16, 2022 ರಂದು ನ್ಯಾಯಾಲಯದ ಆದೇಶದ ಸಮೀಕ್ಷೆಯ ಸಮಯದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಮುಸ್ಲಿಂ ವಾದಿಗಳನ್ನು ಪ್ರತಿನಿಧಿಸುವ ಅಂಜುಮನ್ ಇಂತೇಝಾಮಿಯಾ ಮಸೀದಿ ಸಮಿತಿಯು ಶಿವಲಿಂಗ ಎಂದು ವರ್ಣಿಸಲಾದ ವಸ್ತುವು ವಾಜು ಖಾನಾ (ಶುಚಿಮಾಡುವ) ಪ್ರದೇಶದಲ್ಲಿರುವ ಕಾರಂಜಿಯಾಗಿದೆ ಎಂದು ಪ್ರತಿಪಾದಿಸಿದೆ. ಈ ಫೋಟೋವನ್ನು ವಕೀಲ ವೈಭವ್ ತ್ರಿಪಾಠಿ ಅವರು ವ್ಯಂಗ್ಯ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದರು.ಆದರೆ ಶಿವಲಿಂಗವು ವಿಯೆಟ್ನಾಂನಲ್ಲಿ ಪತ್ತೆಯಾಗಿದೆ, ಅದ ಭಾರತದಲ್ಲಿ ಅಲ್ಲ ಎಂದು ಪ್ರತಿಕ್ರಿಯೆ ಬರತೊಡಗಿದಾಗ ಆ ಟ್ವೀಟ್ನ್ನು ಅವರು ಅಳಿಸಿದ್ದಾರೆ.
ಇದನ್ನೂ ಓದಿ: Gyanvapi Mosque Survey ಶಿವಲಿಂಗವನ್ನು ರಕ್ಷಿಸಲು ಸುಪ್ರೀಂ ಆದೇಶ, ಮಸೀದಿಗೆ ಮುಸ್ಲಿಮರ ಪ್ರವೇಶಕ್ಕೆ ನಿರ್ಬಂಧಗಳಿಲ್ಲ
ಫ್ಯಾಕ್ಟ್ ಚೆಕ್
ವೈರಲ್ ಆಗಿರುವ ಫೋಟೊವನ್ನು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, 2020 ರಲ್ಲಿ ವಿಯೆಟ್ನಾಂನಲ್ಲಿ ಪತ್ತೆಯಾದ ‘1100 ವರ್ಷ ಹಳೆಯ’ ಶಿವಲಿಂಗದ ಬಗ್ಗೆ ವರದಿಗಳು ಪ್ರಕಟವಾಗಿರುವುದು ಸಿಕ್ಕಿದೆ ಎಂದು ಬೂಮ್ ಲೈವ್ ವರದಿ ಮಾಡಿದೆ. ವಿಯೆಟ್ನಾಂನಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಶಿವಲಿಂಗವನ್ನು ಪತ್ತೆ ಹಚ್ಚಿರುವ ಸುದ್ದಿಯು ಭಾರತದಲ್ಲಿ ಭಾರೀ ಸುದ್ದಿಯಾಗಿತ್ತು. ಮೇ 2020 ರಲ್ಲಿ ಹಿಂದಿ ಮತ್ತು ಇಂಗ್ಲಿಷ್ ಸುದ್ದಿವಾಹಿನಿಗಳು ಇದನ್ನು ವರದಿ ಮಾಡಿದ್ದು, ನವಭಾರತ್ ಟೈಮ್ಸ್ ಮತ್ತು ನ್ಯೂಸ್ 18 ಹಿಂದಿ ವರದಿ ಮಾಡಿದೆ. “ಭಾರತದ ಪುರಾತತ್ವ ಸಮೀಕ್ಷೆ (ASI) ಇತ್ತೀಚೆಗೆ ಕ್ರಿಸ್ತಶಕೆ 9 ನೇ ಶತಮಾನದ ಏಕಶಿಲೆಯ ಮರಳುಗಲ್ಲಿನ ಶಿವಲಿಂಗವನ್ನು ಕಂಡುಹಿಡಿದಿದೆ, ಸಂರಕ್ಷಣಾ ಯೋಜನೆಯ ಸಮಯದಲ್ಲಿ ಮೈಸನ್ನಲ್ಲಿ(ಮಧ್ಯ ವಿಯೆಟ್ನಾಂನ ಕ್ವಾಂಗ್ ನಾಮ್ ಪ್ರಾಂತ್ಯದಲ್ಲಿ ಭಾಗಶಃ ನಾಶವಾದ ಹಿಂದೂ ದೇವಾಲಯಗಳ ಸಮೂಹ) ಶಿವಲಿಂಗ ಪತ್ತೆಯಾಗಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಮೈಸನ್ ಅಭಯಾರಣ್ಯವು ಮಧ್ಯ ವಿಯೆಟ್ನಾಂನಲ್ಲಿರುವ ದೇವಾಲಯದ ಸಂಕೀರ್ಣವಾಗಿದ್ದು, ಚಂಪಾ ಸಾಮ್ರಾಜ್ಯದ ಧಾರ್ಮಿಕ ಮತ್ತು ರಾಜಕೀಯ ರಾಜಧಾನಿಯಾಗಿತ್ತು. ಇದು 4 ನೇ ಮತ್ತು 13 ನೇ ಶತಮಾನದ ನಡುವಿನ ಅವಧಿಯ ಭಾಗಶಃ ನಾಶವಾದ ರಚನೆಗಳನ್ನು ಹೊಂದಿದೆ.
Reaffirming a civilisational connect.
Monolithic sandstone Shiv Linga of 9th c CE is latest find in ongoing conservation project. Applaud @ASIGoI team for their work at Cham Temple Complex, My Son, #Vietnam. Warmly recall my visit there in 2011. pic.twitter.com/7FHDB6NAxz
— Dr. S. Jaishankar (@DrSJaishankar) May 27, 2020
ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಎಎಸ್‌ಐ ಅನ್ನು ಶ್ಲಾಘಿಸುವ ಮತ್ತು ಭಾರತ ಮತ್ತು ವಿಯೆಟ್ನಾಂ ನಡುವಿನ ನಾಗರಿಕತೆಯ ಸಂಪರ್ಕವನ್ನು ಎತ್ತಿ ತೋರಿಸುವ ಬಗ್ಗೆ ಟ್ವೀಟ್ ಮಾಡಿದ್ದರು. ಇದೀಗ ವಿಯೆಟ್ನಾಂನಲ್ಲಿ ಕಂಡುಬಂದ ಶಿವಲಿಂಗದ ಚಿತ್ರವನ್ನು ಜೂಮ್ ಮಾಡಿ ಇದನ್ನು ಜ್ಞಾನವಾಪಿಯಲ್ಲಿ ಪತ್ತೆಯಾದ ಶಿವಲಿಂಗ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಮಾಡಲಾಗಿದೆ.
ಹೆಚ್ಚಿನ ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ