ಬೆಂಗಳೂರು: ಇಂದಿನಿಂದ (ಜುಲೈ 1) ಭಾರತದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ (Single Use Plastic) ಬಳಕೆ ಮೇಲೆ ನಿಷೇಧ ಹೇರಲಾಗಿದೆ. ಹೀಗಾಗಿ, ತರಕಾರಿ, ಹಾಲು, ಹಣ್ಣು ಮತ್ತಿತರ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅಂಗಡಿಗಳಲ್ಲಿ ನಿಮಗೆ ಪ್ಲಾಸ್ಟಿಕ್ ಕವರ್ ಸಿಗುವುದಿಲ್ಲ. ಭಾರತ ಸರ್ಕಾರವು ಇಂದಿನಿಂದ (ಜುಲೈ 1) ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಆಮದು, ದಾಸ್ತಾನು, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಿದೆ. ಕಸದ ಮತ್ತು ನಿರ್ವಹಣೆಯಿಲ್ಲದ ಪ್ಲಾಸ್ಟಿಕ್ ತ್ಯಾಜ್ಯದಿಂದ ಉಂಟಾಗುವ ಮಾಲಿನ್ಯವನ್ನು ನಿಯಂತ್ರಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಏಕ-ಬಳಕೆಯ ಪ್ಲಾಸ್ಟಿಕ್ ನಿಷೇಧದ ಭಾಗವಾಗಿ, ಶಾಂಪೂ ಬಾಟಲಿಗಳು, ಪ್ಲೋಯ್ಥೀನ್ ಪ್ಲಾಸ್ಟಿಕ್ ಚೀಲಗಳು ಮತ್ತು ಬಿಸಾಡಬಹುದಾದ ಕಾಫಿ, ಟೀ ಕಪ್ಗಳಂತಹ ವಸ್ತುಗಳನ್ನು ನಿಷೇಧಿಸಲಾಗಿದೆ.
ದೇಶಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ಮೇಲೆ ನಿಷೇಧ ಹೇರಲಾಗಿದ್ದು, ಕರ್ನಾಟಕ ಸರ್ಕಾರವು 2016ರಿಂದಲೇ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದೆ. ಇದೀಗ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಹೊರಡಿಸಿದ ಈ ಆದೇಶವು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (KSPCB) ಗಡಿ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸಲು ಇನ್ನಷ್ಟು ಸಹಾಯಕವಾಗಿದೆ.
KSPCB ಇಂದಿನಿಂದ ನಿಷೇಧಿತ ವಸ್ತುಗಳ ಪಟ್ಟಿಯನ್ನು ಸಹ ಸಿದ್ಧಪಡಿಸಿದ್ದು, ಅವರು ಪ್ಲಾಸ್ಟಿಕ್‌ಗೆ ಪರ್ಯಾಯಗಳನ್ನು ಒದಗಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಮಿಶ್ರಗೊಬ್ಬರ ಚೀಲಗಳು ಮತ್ತು ಬಟ್ಟೆ ಚೀಲಗಳ ಪೂರೈಕೆಗೆ ಮಂಡಳಿಯು ಈಗಾಗಲೇ ಅನುಮೋದನೆ ನೀಡಲಾಗಿದೆ.
1 ಲಕ್ಷ ರೂ. ದಂಡ!:
ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸಿದರೆ ಅಥವಾ ಕಸದ ರೂಪದಲ್ಲಿ ಹಾಕಿದರೆ ವ್ಯಕ್ತಿಯ ಮತ್ತು ಮನೆಗಳಿಗೆ ಹಾಗೂ ಸಾಂಸ್ಥಿಕ ತ್ಯಾಜ್ಯ ಉತ್ಪಾದಕರಿಗೆ 500 ರೂ.ನಿಂದ 1 ಲಕ್ಷದವರೆಗೂ ದಂಡ ವಿಧಿಸಬಹುದು. ಹಾಗೇ, 5 ವರ್ಷಗಳವರೆಗೆ ಜೈಲು ಶಿಕ್ಷೆಯನ್ನೂ ವಿಧಿಸಬಹುದಾಗಿದೆ.
ಇಂದಿನಿಂದ ಯಾವ ವಸ್ತುಗಳಿಗೆ ನಿಷೇಧ?:
ಇಯರ್ ಬಡ್‌ಗಳು, ಬಲೂನ್‌ಗಳು, ಕ್ಯಾಂಡಿ, ಐಸ್‌ಕ್ರೀಮ್‌ಗಳಿಗೆ ಬಳಸುವ ಪ್ಲಾಸ್ಟಿಕ್ ಸ್ಟ್ರಾ, ಕಟ್ಲರಿ ವಸ್ತುಗಳು – ಪ್ಲೇಟ್‌ಗಳು, ಕಪ್‌ಗಳು, ಗ್ಲಾಸ್‌ಗಳು, ಫೋರ್ಕ್ಸ್, ಸ್ಪೂನ್‌ಗಳು, ಚಾಕುಗಳು, ಟ್ರೇಗಳು, ಸ್ಟಿರರ್‌ಗಳು, ಸ್ವೀಟ್ ಬಾಕ್ಸ್, ಇನ್ವಿಟೇಶನ್ ಕಾರ್ಡ್, ಸಿಗರೇಟ್ ಪ್ಯಾಕೆಟ್ಗಳಿಗೆ ಬಳಸುವ ಪ್ಯಾಕೇಜಿಂಗ್ ವಸ್ತುಗಳಿಗೆ ನಿಷೇಧ ಹೇರಲಾಗಿದೆ. ಹಾಗೇ, 100 ಮೈಕ್ರಾನ್‌ಗಿಂತ ಕಡಿಮೆ ಇರುವ PVC ಬ್ಯಾನರ್‌ಗಳು, ಅಲಂಕಾರಕ್ಕಾಗಿ ಪಾಲಿಸ್ಟೈರೀನ್, ಕ್ಯಾರಿ ಬ್ಯಾಗ್‌ಗಳು, ಅಲಂಕಾರಕ್ಕಾಗಿ ಬಳಸುವ ಥರ್ಮಾಕೋಲ್ ಗಳು, ಪ್ಲಾಸ್ಟಿಕ್ ಧ್ವಜಗಳನ್ನು ನಿಷೇಧಿಸಲಾಗಿದೆ.
Published On - 7:49 am, Fri, 1 July 22