
ನವದೆಹಲಿ, ಸೆಪ್ಟೆಂಬರ್ 22: ಇಂದಿನಿಂದ ದೇಶಾದ್ಯಂತ ಜಾರಿಗೆ ಬಂದ ಜಿಎಸ್‌ಟಿ ಸುಧಾರಣೆಗಳನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತೊಮ್ಮೆ ಶ್ಲಾಘಿಸಿದ್ದಾರೆ. ಜಿಎಸ್‌ಟಿ ಸುಧಾರಣೆಗಳು (GST Reforms) ಉಳಿತಾಯವನ್ನು ಹೆಚ್ಚಿಸುತ್ತವೆ ಮತ್ತು ಸಮಾಜದ ಪ್ರತಿಯೊಂದು ವರ್ಗಕ್ಕೂ ನೇರವಾಗಿ ಪ್ರಯೋಜನವನ್ನು ನೀಡುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ದೇಶಕ್ಕೆ ಬರೆದ ಬಹಿರಂಗ ಪತ್ರದಲ್ಲಿ ದೇಶದ ಜನರಿಗೆ ನವರಾತ್ರಿಯ ಶುಭಾಶಯಗಳನ್ನು ಸಲ್ಲಿಸಿದ್ದಾರೆ. ಜಿಎಸ್‌ಟಿ ಕಡಿತದಿಂದಾಗಿ ವೆಚ್ಚ ಕಡಿಮೆಯಾಗಿ, ಪ್ರತಿ ಮನೆಯಲ್ಲೂ ನಗು ಅರಳಲಿ ಎಂದು ಅವರು ಹಾರೈಸಿದ್ದಾರೆ. ಈ ಹಬ್ಬವು ಭಾರತದಲ್ಲಿ ‘ಜಿಎಸ್‌ಟಿ ಉಳಿತಾಯ ಉತ್ಸವ’ದ ಆರಂಭವಾಗಿದೆ ಎಂದು ಅವರು ಹೇಳಿದ್ದಾರೆ.
ಸುಧಾರಣೆಗಳು ದೇಶದ ಪ್ರತಿಯೊಂದು ರಾಜ್ಯ ಮತ್ತು ಪ್ರದೇಶದ ಬೆಳವಣಿಗೆ, ಹೂಡಿಕೆ ಮತ್ತು ಪ್ರಗತಿಯನ್ನು ವೇಗಗೊಳಿಸುತ್ತದೆ. ಇನ್ಮುಂದೆ ಶೇ. 5 ಮತ್ತು ಶೇ. 18ರ ಎರಡು ಜಿಎಸ್‌ಟಿ ಸ್ಲ್ಯಾಬ್‌ಗಳು ಮಾತ್ರ ಇರುತ್ತವೆ. “ಆಹಾರ, ಔಷಧಿಗಳು, ಸೋಪ್, ಟೂತ್‌ಪೇಸ್ಟ್, ವಿಮೆ ಮತ್ತು ಇನ್ನೂ ಅನೇಕ ವಸ್ತುಗಳು ಈಗ ತೆರಿಗೆ ಮುಕ್ತವಾಗಿರುತ್ತವೆ ಅಥವಾ ಕಡಿಮೆ ಶೇ. 5ರ ತೆರಿಗೆ ಸ್ಲ್ಯಾಬ್‌ಗೆ ಬರುತ್ತವೆ. ಈ ಹಿಂದೆ ಶೇ. 12 ರಷ್ಟು ತೆರಿಗೆ ವಿಧಿಸಲಾಗುತ್ತಿದ್ದ ಸರಕುಗಳು ಬಹುತೇಕ ಸಂಪೂರ್ಣವಾಗಿ ಶೇ. 5ರ ತೆರಿಗೆ ವ್ಯಾಪ್ತಿಗೆ ಬಂದಿವೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
“ವಿವಿಧ ಅಂಗಡಿಯವರು ಮತ್ತು ವ್ಯಾಪಾರಿಗಳು ಜಿಎಸ್‌ಟಿ ಸುಧಾರಣೆಗಳ ಮೊದಲು ಮತ್ತು ಸುಧಾರಣೆಗಳ ನಂತರ ತೆರಿಗೆಗಳನ್ನು ಸೂಚಿಸುವ ‘ಆಗ ಮತ್ತು ಈಗ’ ಫಲಕಗಳನ್ನು ಹಾಕುತ್ತಿರುವುದನ್ನು ನೋಡಲು ತುಂಬಾ ಸಂತೋಷವಾಗುತ್ತಿದೆ. ಈ ತೆರಿಗೆ ಕಡಿತ ಪ್ರತಿ ಮನೆಯಲ್ಲೂ ನಗುವನ್ನು ಬೆಳಗಿಸುತ್ತದೆ” ಎಂದು ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ಜಿಎಸ್‌ಟಿ ಬಗ್ಗೆ ಹೇಳುವಾಗ ಪ್ರಧಾನಿ ಮೋದಿ ಬೆಂಗಳೂರನ್ನು ಪ್ರಸ್ತಾಪಿಸಿದ್ದು ಯಾಕೆ? ಇಲ್ಲಿದೆ ಅದರ ಹಿನ್ನೆಲೆ
“ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 25 ಕೋಟಿ ಜನರನ್ನು ಬಡತನದಿಂದ ಹೊರಗೆ ತರಲಾಗಿದೆ. ಅವರು ಈಗ ಮಹತ್ವಾಕಾಂಕ್ಷೆಯ ನವ-ಮಧ್ಯಮ ವರ್ಗವನ್ನು ರೂಪಿಸಿಕೊಂಡಿದ್ದಾರೆ. ಆದಾಯ ತೆರಿಗೆ ಕಡಿತ ಮತ್ತು ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳು ಜನರಿಗೆ ರೂ. 2.5 ಲಕ್ಷ ಕೋಟಿ ಉಳಿಸಲು ಸಹಾಯ ಮಾಡುತ್ತದೆ. ಈಗ ದೇಶವಾಸಿಗಳು ತಮ್ಮ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವುದು ಸುಲಭವಾಗಲಿದೆ” ಎಂದು ಮೋದಿ ಹೇಳಿದ್ದಾರೆ.
This festive season, let’s celebrate the ‘GST Bachat Utsav’! Lower GST rates mean more savings for every household and greater ease for businesses. pic.twitter.com/QOUGWXrC3d
— Narendra Modi (@narendramodi) September 22, 2025
“ನಮ್ಮ ಸಣ್ಣ ಕೈಗಾರಿಕೆಗಳು, ಅಂಗಡಿಯವರು, ವ್ಯಾಪಾರಿಗಳು, ಉದ್ಯಮಿಗಳು ಮತ್ತು ಎಂಎಸ್‌ಎಂಇಗಳು ವ್ಯವಹಾರ ಮಾಡುವ ಸುಲಭತೆಯನ್ನು ಸಹ ಕಾಣುತ್ತವೆ. ಕಡಿಮೆ ತೆರಿಗೆಗಳು, ಕಡಿಮೆ ಬೆಲೆಗಳು ಮತ್ತು ಸರಳ ನಿಯಮಗಳು ಉತ್ತಮ ಮಾರಾಟ, ಕಡಿಮೆ ಅನುಸರಣೆ ಹೊರೆ ಮತ್ತು ಅವಕಾಶಗಳ ಬೆಳವಣಿಗೆಯನ್ನು ಅರ್ಥೈಸುತ್ತವೆ. ಅದರಲ್ಲೂ ವಿಶೇಷವಾಗಿ ಎಂಎಸ್‌ಎಂಇ ವಲಯದಲ್ಲಿ ಇದು ಗಮನಾರ್ಹವಾಗಿದೆ” ಎಂದು ಅವರು ಹೇಳಿದ್ದಾರೆ.
2047ರ ವೇಳೆಗೆ ‘ವಿಕಸಿತ್ ಭಾರತ್’ ಕನಸನ್ನು ಸಾಧಿಸುವುದು ದೇಶದ ಸಾಮೂಹಿಕ ಗುರಿಯಾಗಿದೆ ಎಂದು ಪ್ರಧಾನಿ ಮೋದಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಇದಕ್ಕಾಗಿ, ದೇಶವು ಸ್ವಾವಲಂಬನೆಯ ಮೇಲೆ ಕೇಂದ್ರೀಕರಿಸಬೇಕಾಗಿದೆ ಮತ್ತು ಜಿಎಸ್‌ಟಿ 2.0 ದೇಶವು ‘ಆತ್ಮನಿರ್ಭರ’ ಆಗಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಇಟಾನಗರದಲ್ಲಿ ಪ್ರಧಾನಿ ಮೋದಿ ರೋಡ್ ಶೋ; ವಂದೇ ಭಾರತ್ ಘೋಷಣೆ ಮೂಲಕ ಜನರಿಂದ ಭರ್ಜರಿ ಸ್ವಾಗತ
“ಇದಕ್ಕೆ ಸಂಬಂಧಿಸಿದಂತೆ, ಈ ನವರಾತ್ರಿ ಹಬ್ಬದ ಋತುವಿನಲ್ಲಿ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಬೆಂಬಲಿಸಲು ನಾವು ಸಂಕಲ್ಪ ಮಾಡೋಣ. ಇದರರ್ಥ ಭಾರತೀಯರ ಬೆವರು ಮತ್ತು ಶ್ರಮವನ್ನು ವ್ಯರ್ಥ ಮಾಡದೆ ಸ್ವದೇಶಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ನಮ್ಮನ್ನು ನಾವು ಪ್ರೋತ್ಸಾಹಿಸಿಕೊಳ್ಳೋಣ. ಅವುಗಳನ್ನು ತಯಾರಿಸುವ ಬ್ರ್ಯಾಂಡ್ ಅಥವಾ ಕಂಪನಿಯನ್ನು ಲೆಕ್ಕಿಸದೆ ಸ್ವದೇಶಿ ಉತ್ಪನ್ನಗಳಿಗೆ ಬೆಂಬಲ ನೀಡೋಣ” ಎಂದು ಮೋದಿ ಹೇಳಿದ್ದಾರೆ.
ಹಾಗೇ, ಭಾರತದ ಕುಶಲಕರ್ಮಿಗಳು, ಕಾರ್ಮಿಕರು ಮತ್ತು ಕೈಗಾರಿಕೆಗಳಿಗೆ ಸಹಾಯ ಮಾಡಲು ಅವರು ದೇಶವಾಸಿಗಳನ್ನು ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವಂತೆ ಮೋದಿ ಒತ್ತಾಯಿಸಿದ್ದಾರೆ. ಇದು ಅನೇಕ ಕುಟುಂಬಗಳು ತಮ್ಮ ಜೀವನವನ್ನು ಸಂಪಾದಿಸಲು ಸಹಾಯ ಮಾಡುತ್ತದೆ ಮತ್ತು ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದ್ದಾರೆ. “ನಮ್ಮ ಅಂಗಡಿಯವರು ಮತ್ತು ವ್ಯಾಪಾರಿಗಳಿಗೆ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ನಾನು ಮನವಿ ಮಾಡುತ್ತೇನೆ. ನಾವು ಖರೀದಿಸುವುದು ಸ್ವದೇಶಿ ಉತ್ಪನ್ನಗಳನ್ನು ಎಂದು ನಾವು ಹೆಮ್ಮೆಯಿಂದ ಹೇಳೋಣ” ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ