ಮಸ್ಕತ್ಗೆ ಪ್ರಧಾನಿ ಮೋದಿ ಭೇಟಿ; ಭಾರತ-ಓಮನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ
ಪ್ರಧಾನಿ ನರೇಂದ್ರ ಮೋದಿ 3 ರಾಷ್ಟ್ರಗಳ ಪ್ರವಾಸಕ್ಕಾಗಿ 4 ದಿನಗಳ ಹಿಂದೆ ಭಾರತದಿಂದ ಹೊರಟಿದ್ದರು. ಈ ಪ್ರವಾಸದ ಕೊನೆಯ ಹಂತವಾಗಿ ಅವರು ನಿನ್ನೆ ಓಮನ್ಗೆ ತೆರಳಿದ್ದಾರೆ. ಇಂದು ಭಾರತ ಮತ್ತು ಓಮನ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ. ಭಾರತ ಮತ್ತು ಓಮನ್ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ವಿಶ್ವಾಸ ಮತ್ತು ಶಕ್ತಿಯನ್ನು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಮಸ್ಕತ್, ಡಿಸೆಂಬರ್ 18: ಭಾರತ ಮತ್ತು ಓಮನ್ (PM Modi Oman Visit) ಇಂದು ಪ್ರಮುಖ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಸಹಿ ಹಾಕಿವೆ. ಇಂದು (ಡಿ. 18) ಸಹಿ ಹಾಕಲಾದ ಈ ಒಪ್ಪಂದವು ಎರಡೂ ದೇಶಗಳ ನಡುವಿನ ಆರ್ಥಿಕ ಸಂಬಂಧಗಳನ್ನು ಬಲಪಡಿಸುವತ್ತ ಮಹತ್ವದ ಹೆಜ್ಜೆಯನ್ನು ಗುರುತಿಸುತ್ತದೆ. ಈ ಒಪ್ಪಂದದ ಭಾಗವಾಗಿ ಜವಳಿ, ಕೃಷಿ ಸರಕುಗಳು ಮತ್ತು ಚರ್ಮದ ವಸ್ತುಗಳು ಸೇರಿದಂತೆ ಭಾರತದ ರಫ್ತಿನ ಶೇ. 98ಕ್ಕಿಂತ ಹೆಚ್ಚಿನ ಸುಂಕಗಳನ್ನು ಓಮನ್ ತೆಗೆದುಹಾಕಲಿದೆ. ಹಾಗೇ, ಖರ್ಜೂರ, ಅಮೃತಶಿಲೆ ಮತ್ತು ಪೆಟ್ರೋಕೆಮಿಕಲ್‌ಗಳು ಸೇರಿದಂತೆ ಅಗತ್ಯ ಓಮಾನಿ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಲು ಭಾರತ ಒಪ್ಪಿಕೊಂಡಿದೆ.
ಮಸ್ಕತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಸಹಿ ಹಾಕಲಾದ ಒಪ್ಪಂದವು ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಿಂದ ಜಾರಿಗೆ ಬರುವ ನಿರೀಕ್ಷೆಯಿದೆ. ಈ ಒಪ್ಪಂದಕ್ಕೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ಓಮನ್ನ ವಾಣಿಜ್ಯ, ಕೈಗಾರಿಕೆ ಮತ್ತು ಹೂಡಿಕೆ ಪ್ರಚಾರ ಸಚಿವ ಕೈಸ್ ಬಿನ್ ಮೊಹಮ್ಮದ್ ಅಲ್ ಯೂಸೆಫ್ ಸಹಿ ಹಾಕಿದ್ದಾರೆ.
#WATCH | Muscat, Oman: At the India-Oman Business Summit, PM Narendra Modi says, “You represent India-Oman business, our trade. You are the successors of that heritage which has had a prosperous history of centuries. Since the dawn of civilisation, our ancestors have been doing… pic.twitter.com/wfQ1CGpCEn
— ANI (@ANI) December 18, 2025
ಇದನ್ನೂ ಓದಿ: 3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್ಗೆ ತೆರಳಿದ ಪ್ರಧಾನಿ ಮೋದಿ
ಭಾರತವು ತನ್ನ ಅತಿದೊಡ್ಡ ರಫ್ತು ದೇಶವಾದ ಅಮೆರಿಕದಿಂದ ಶೇ. 50ರಷ್ಟು ಸುಂಕಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಒಪ್ಪಂದವು ಬಹಳ ಮಹತ್ವದ್ದಾಗಿದೆ. ಈ ಒಪ್ಪಂದದ ಅಡಿಯಲ್ಲಿ ರತ್ನಗಳು ಮತ್ತು ಆಭರಣಗಳು, ಜವಳಿ, ಚರ್ಮ, ಪಾದರಕ್ಷೆಗಳು, ಕ್ರೀಡಾ ಸಾಮಗ್ರಿಗಳು, ಪ್ಲಾಸ್ಟಿಕ್‌ಗಳು, ಪೀಠೋಪಕರಣಗಳು, ಕೃಷಿ ಉತ್ಪನ್ನಗಳು, ಎಂಜಿನಿಯರಿಂಗ್ ಉತ್ಪನ್ನಗಳು, ಔಷಧಗಳು, ವೈದ್ಯಕೀಯ ಸಾಧನಗಳು ಮತ್ತು ಆಟೋಮೊಬೈಲ್‌ಗಳು ಸೇರಿದಂತೆ ಎಲ್ಲಾ ಪ್ರಮುಖ ಕಾರ್ಮಿಕ-ತೀವ್ರ ವಲಯಗಳು ಸಂಪೂರ್ಣ ಸುಂಕ ಮುಕ್ತವಾಗಿದೆ. ಇವುಗಳಲ್ಲಿ, ಶೇ. 97.96ರಷ್ಟು ಉತ್ಪನ್ನ ವರ್ಗಗಳಿಗೆ ತಕ್ಷಣದ ಸುಂಕ ವಿನಾಯಿತಿ ನೀಡಲಾಗುತ್ತಿದೆ.
ಇದನ್ನೂ ಓದಿ: ಭಾರತದ ಪ್ರಧಾನಿಗೆ 29ನೇ ಜಾಗತಿಕ ಗೌರವ; ಮೋದಿಗೆ ಓಮನ್ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಓಮನ್ನಲ್ಲಿನ ಪ್ರಮುಖ ಸೇವಾ ವಲಯಗಳಲ್ಲಿ ಭಾರತೀಯ ಕಂಪನಿಗಳಿಂದ ವಾಣಿಜ್ಯ ಉಪಸ್ಥಿತಿಯ ಮೂಲಕ ಶೇ. 100ರಷ್ಟು ವಿದೇಶಿ ನೇರ ಹೂಡಿಕೆಯನ್ನು ಸಹ ಈ ಒಪ್ಪಂದವು ಒದಗಿಸುತ್ತದೆ. ಇದು ಈ ಪ್ರದೇಶದಲ್ಲಿ ಕಾರ್ಯಾಚರಣೆಗಳನ್ನು ವಿಸ್ತರಿಸಲು ಭಾರತದ ಸೇವಾ ಉದ್ಯಮಕ್ಕೆ ವಿಶಾಲ ಮಾರ್ಗವನ್ನು ತೆರೆಯುತ್ತದೆ. ಈ ಪ್ರದೇಶದಲ್ಲಿ ಓಮನ್ ಒಂದು ಪ್ರಮುಖ ಕಾರ್ಯತಂತ್ರದ ಪಾಲುದಾರ ರಾಷ್ಟ್ರವಾಗಿದ್ದು, ಮಧ್ಯಪ್ರಾಚ್ಯ ಮತ್ತು ಆಫ್ರಿಕಾಕ್ಕೆ ಭಾರತೀಯ ಸರಕು ಮತ್ತು ಸೇವೆಗಳಿಗೆ ಪ್ರಮುಖ ದ್ವಾರವಾಗಿದೆ.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, “ಭಾರತ ಬೆಳೆದಾಗಲೆಲ್ಲಾ ಅದು ತನ್ನ ಸ್ನೇಹಿತರನ್ನೂ ಬೆಳೆಯಲು ಸಹಾಯ ಮಾಡುತ್ತದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ಸಾಗುತ್ತಿದೆ. ನಾವು ಆಪ್ತ ಸ್ನೇಹಿತರಾಗುವುದರ ಜೊತೆಗೆ, ಕಡಲ ನೆರೆಹೊರೆಯವರೂ ಆಗಿದ್ದೇವೆ. ನಮ್ಮ ಜನರು ಪರಸ್ಪರ ಚೆನ್ನಾಗಿ ತಿಳಿದಿದ್ದಾರೆ. ನಮ್ಮ ವ್ಯವಹಾರ ಸಂಬಂಧಗಳಲ್ಲಿ ನಮಗೆ ತಲೆಮಾರುಗಳ ಹಿಂದಿನಿಂದಲೂ ನಂಬಿಕೆ ಇದೆ. ನಾವು ಪರಸ್ಪರರ ಮಾರುಕಟ್ಟೆಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ” ಎಂದು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




