ಬಾಂಗ್ಲಾದೇಶದಲ್ಲಿ ಬಿಎನ್‌ಪಿಗೆ ಭರ್ಜರಿ ಜಯ; ತಾರಿಕ್ ರೆಹಮಾನ್​ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ

ಬಾಂಗ್ಲಾದೇಶದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ನಾಯಕ ತಾರಿಕ್ ರೆಹಮಾನ್ ಅವರನ್ನು ಅಭಿನಂದಿಸಿದ್ದಾರೆ. ತಾರಿಕ್ ರೆಹಮಾನ್ ಇನ್ಮುಂದೆ ಬಾಂಗ್ಲಾದೇಶವನ್ನು ಆಳಲಿದ್ದಾರೆ. ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷವು ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದು, 299 ಸ್ಥಾನಗಳಲ್ಲಿ 209 ಸ್ಥಾನಗಳನ್ನು ಗಳಿಸಿದೆ. ಅದರ ಮಿತ್ರಪಕ್ಷಗಳು ಸೇರಿ 212 ಸ್ಥಾನಗಳನ್ನು ಗಳಿಸಿವೆ. 

ಬಾಂಗ್ಲಾದೇಶದಲ್ಲಿ ಬಿಎನ್‌ಪಿಗೆ ಭರ್ಜರಿ ಜಯ; ತಾರಿಕ್ ರೆಹಮಾನ್​ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ
Tarique Rahman And Pm Modi
Image Credit source: TV9

Updated on: Feb 13, 2026 | 7:07 PM

ನವದೆಹಲಿ, ಫೆಬ್ರವರಿ 13: ನೆರೆಯ ದೇಶವಾದ ಬಾಂಗ್ಲಾದೇಶದ ಸಂಸತ್ ಚುನಾವಣೆಯಲ್ಲಿ ಬಿಎನ್​ಪಿ ಭರ್ಜರಿ ಗೆಲುವು ಸಾಧಿಸಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Modi) ಇಂದು ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ನಾಯಕ ತಾರಿಕ್ ರೆಹಮಾನ್ ಅವರೊಂದಿಗೆ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಎರಡೂ ದೇಶಗಳ ಜನರ ನಡುವೆ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಭಾರತದ ನಿರಂತರ ಬದ್ಧತೆಯನ್ನು ಮೋದಿ ಪುನರುಚ್ಛರಿಸಿದ್ದಾರೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ” ತಾರಿಕ್ ರೆಹಮಾನ್ ಅವರೊಂದಿಗೆ ಮಾತನಾಡಿ ಸಂತೋಷವಾಯಿತು. ಬಾಂಗ್ಲಾದೇಶ ಚುನಾವಣೆಯ ಭರ್ಜರಿ ಗೆಲುವಿಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಬಾಂಗ್ಲಾದೇಶದ ಜನರ ಆಕಾಂಕ್ಷೆಗಳನ್ನು ಈಡೇರಿಸುವ ಅವರ ಪ್ರಯತ್ನದಲ್ಲಿ ನಾನು ನನ್ನ ಶುಭಾಶಯಗಳು ಮತ್ತು ಬೆಂಬಲವನ್ನು ವ್ಯಕ್ತಪಡಿಸಿದ್ದೇನೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಭಾರತ ಮಾತೆಯನ್ನು ಮಾರಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

“ಆಳವಾಗಿ ಬೇರೂರಿರುವ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿರುವ ಇಬ್ಬರು ನಿಕಟ ನೆರೆಹೊರೆಯವರಾಗಿ ನಮ್ಮ ಎರಡೂ ದೇಶಗಳ ಜನರ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಭಾರತದ ನಿರಂತರ ಬದ್ಧತೆಯನ್ನು ನಾನು ಪುನರುಚ್ಚರಿಸಿದ್ದೇನೆ” ಎಂದು ಪ್ರಧಾನಿ ಹೇಳಿದ್ದಾರೆ.

 

ಬಾಂಗ್ಲಾದೇಶದಲ್ಲಿ ನಡೆದ 13ನೇ ರಾಷ್ಟ್ರೀಯ ಸಂಸತ್ ಚುನಾವಣೆಯಲ್ಲಿ ತಾರಿಕ್ ರೆಹಮಾನ್ ನೇತೃತ್ವದಲ್ಲಿ ಬಿಎನ್‌ಪಿ ನಿರ್ಣಾಯಕ ಬಹುಮತ ಪಡೆದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಶುಭಾಶಯ ಕೋರಿದ್ದಾರೆ. ಬಾಂಗ್ಲಾದೇಶದ 299 ಸ್ಥಾನಗಳಲ್ಲಿ ಬಿಎನ್‌ಪಿ ಮತ್ತು ಅದರ ಮಿತ್ರಪಕ್ಷಗಳು 212 ಸ್ಥಾನಗಳನ್ನು ಗೆದ್ದಿವೆ. ಪಕ್ಷವಾರು ಅಂಕಿಅಂಶಗಳು ಬಿಎನ್‌ಪಿ ತನ್ನದೇ ಆದ 209 ಸ್ಥಾನಗಳನ್ನು ಗೆದ್ದಿದೆ ಎಂದು ತೋರಿಸಿದೆ. ಬಹುಮತದ ಸಂಖ್ಯೆ 150 ಆಗಿತ್ತು. ಹೀಗಾಗಿ, ಬಿಎನ್‌ಪಿ ಅಧ್ಯಕ್ಷ ತಾರಿಕ್ ರೆಹಮಾನ್ ಪ್ರಧಾನಿಯಾಗುವುದು ಖಚಿತವಾಗಿದೆ.

ಇದನ್ನೂ ಓದಿ: ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಪ್ರಧಾನಿ ಮೋದಿ

ಆಗಸ್ಟ್ 2024ರಲ್ಲಿ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಗಳ ಬಳಿಕ ಶೇಖ್ ಹಸೀನಾ ಅವರ 15 ವರ್ಷಗಳ ಸರ್ಕಾರ ಪತನವಾಯಿತು. ಬಳಿಕ ನೊಬೆಲ್ ಪ್ರಶಸ್ತಿ ವಿಜೇತ ಮಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರದಲ್ಲಿತ್ತು. ಇದೀಗ ಬಿಎನ್‌ಪಿಯ ನಾಯಕ ತಾರಿಕ್ ರೆಹಮಾನ್ ಮುಂದಿನ ಪ್ರಧಾನಿಯಾಗಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ