ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜೊತೆ ಪ್ರಧಾನಿ ಮಾತುಕತೆ; ರಷ್ಯಾ ಜೊತೆಗಿನ ಸಂಘರ್ಷದ ಶಾಂತಿಯುತ ಪರಿಹಾರಕ್ಕೆ ಸಲಹೆ
ಪ್ರಧಾನಿ ನರೇಂದ್ರ ಮೋದಿ ಇಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ಮಾತನಾಡಿದ್ದಾರೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ಶಾಂತಿಯುತ ಇತ್ಯರ್ಥದ ಪ್ರಯತ್ನಗಳಿಗೆ ಬೆಂಬಲ ನೀಡುವ ಭಾರತದ ಸ್ಥಿರ ನಿಲುವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ. ಆಗಸ್ಟ್ 15ರಂದು ಅಲಾಸ್ಕಾದಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಸಭೆಯ ಬಗ್ಗೆಯೂ ಈ ಮಾತುಕತೆ ವೇಳೆ ಚರ್ಚಿಸಲಾಗಿದೆ.

ನವದೆಹಲಿ, ಆಗಸ್ಟ್ 11: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Ukraine President Zelenskyy) ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಈ ವೇಳೆ ಅವರು ದ್ವಿಪಕ್ಷೀಯ ಸಹಕಾರಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಹಾಗೂ ಉಕ್ರೇನ್‌ನಲ್ಲಿ ರಷ್ಯಾದ ಜೊತೆ ನಡೆಯುತ್ತಿರುವ ಯುದ್ಧದ ಬಗ್ಗೆ ಪ್ರಸ್ತಾಪಿಸಿದರು. ಜಪೋರಿಝಿಯಾದಲ್ಲಿನ ಬಸ್ ನಿಲ್ದಾಣದ ಮೇಲೆ ನಡೆದ ಮಾರಕ ಬಾಂಬ್ ದಾಳಿ ಸೇರಿದಂತೆ ಇತ್ತೀಚಿನ ರಷ್ಯಾದ ದಾಳಿಯ ಬಗ್ಗೆ ಝೆಲೆನ್ಸ್ಕಿ ಮೋದಿಗೆ ವಿವರಿಸಿದರು. ಈ ದಾಳಿಯಲ್ಲಿ ಡಜನ್ಗಟ್ಟಲೆ ಜನರು ಗಾಯಗೊಂಡಿದ್ದರು. ಶಾಂತಿಗಾಗಿ ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ ರಷ್ಯಾ ತನ್ನ ಆಕ್ರಮಣದ ಪ್ರಯತ್ನಗಳನ್ನು ಮುಂದುವರೆಸಿದೆ. ಕದನ ವಿರಾಮಕ್ಕೆ ಒಪ್ಪಿಕೊಳ್ಳಲು ಯಾವುದೇ ಇಚ್ಛೆಯನ್ನು ತೋರಿಸುತ್ತಿಲ್ಲ ಎಂದು ಉಕ್ರೇನ್ ಅಧ್ಯಕ್ಷ ಒತ್ತಿ ಹೇಳಿದರು.
ಈ ವೇಳೆ ಭಾರತದ ನಿರಂತರ ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ ಝೆಲೆನ್ಸ್ಕಿ, ಸಂಘರ್ಷಕ್ಕೆ ಸಂಬಂಧಿಸಿದ ಯಾವುದೇ ಪರಿಹಾರವು ಉಕ್ರೇನ್ ಅನ್ನು ನೇರವಾಗಿ ಒಳಗೊಂಡಿರಬೇಕು. ಉಕ್ರೇನ್ ಅನ್ನು ಬಿಟ್ಟು ರಷ್ಯಾದ ಜೊತೆ ಮಾತುಕತೆ ನಡೆಸಿದರೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ಹೇಳಿದ್ದಾರೆ. ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಅಂತಾರಾಷ್ಟ್ರೀಯ ನಿರ್ಬಂಧಗಳು ಅದರಲ್ಲೂ ವಿಶೇಷವಾಗಿ ತೈಲದಂತಹ ರಷ್ಯಾದ ಇಂಧನ ರಫ್ತುಗಳನ್ನು ಗುರಿಯಾಗಿಸಿಕೊಂಡು, ಮಾಸ್ಕೋದ ಯುದ್ಧಕ್ಕೆ ಹಣಕಾಸು ಒದಗಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು. ಭಾರತ ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದರಿಂದ ಝೆಲೆನ್ಸ್ಕಿ ಭಾರತದ ಪ್ರಧಾನಿಯ ಜೊತೆ ಈ ವಿಷಯ ಪ್ರಸ್ತಾಪಿಸಿದ್ದಾರೆ.
I had a long conversation with the Prime Minister of India @narendramodi. We discussed in detail all important issues – both of our bilateral cooperation and the overall diplomatic situation. I am grateful to the Prime Minister for his warm words of support for our people.
— Volodymyr Zelenskyy / Володимир Зеленський (@ZelenskyyUa) August 11, 2025
ಇದನ್ನೂ ಓದಿ: ಅಮೆರಿಕ-ರಷ್ಯಾ ಮಾತುಕತೆಗೂ ಮುನ್ನ ಪುಟಿನ್ ಹಾಗೂ ಝೆಲೆನ್ಸ್ಕಿ ಭೇಟಿಯಾಗಲ್ಲ ಎಂದ ಟ್ರಂಪ್
ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ಪ್ರತಿಪಾದಿಸುವ ಭಾರತದ ದೀರ್ಘಕಾಲದ ನಿಲುವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ. ಝೆಲೆನ್ಸ್ಕಿ ಅವರ ದೃಷ್ಟಿಕೋನಗಳಿಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತ-ಉಕ್ರೇನ್ ದ್ವಿಪಕ್ಷೀಯ ಸಂಬಂಧಗಳಲ್ಲಿನ ಪ್ರಗತಿಯ ಬಗ್ಗೆ ಇಬ್ಬರೂ ನಾಯಕರು ಮಾತನಾಡಿದ್ದಾರೆ. ಪರಸ್ಪರ ಆಸಕ್ತಿಯ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಗಟ್ಟಿಗೊಳಿಸುವ ಅವಕಾಶಗಳನ್ನು ಅವರು ಚರ್ಚಿಸಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಇದನ್ನೂ ಓದಿ: ಅಮೆರಿಕ-ರಷ್ಯಾ ಮಾತುಕತೆಗೂ ಮುನ್ನ ಪುಟಿನ್ ಹಾಗೂ ಝೆಲೆನ್ಸ್ಕಿ ಭೇಟಿಯಾಗಲ್ಲ ಎಂದ ಟ್ರಂಪ್
ಆಗಸ್ಟ್ 15ರಂದು ಅಲಾಸ್ಕಾದಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಸಭೆಯ ಬಗ್ಗೆಯೂ ಈ ಮಾತುಕತೆ ವೇಳೆ ಚರ್ಚಿಸಲಾಗಿದೆ. ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ ಈ ಸಭೆ ನಡೆಯಲಿದೆ. ಭಾರತದ ವಿದೇಶಾಂಗ ಸಚಿವಾಲಯವು ಈ ಮಾತುಕತೆಗಳನ್ನು ಸ್ವಾಗತಿಸಿತು, ಶಾಂತಿಯನ್ನು ಪುನಃಸ್ಥಾಪಿಸಲು ರಾಜತಾಂತ್ರಿಕ ಪ್ರಯತ್ನಗಳ ಮಹತ್ವವನ್ನು ಎತ್ತಿ ತೋರಿಸಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:53 pm, Mon, 11 August 25




