ಜಾಗತಿಕ ತೈಲ ಸಂಕಷ್ಟದ ನಡುವೆ ಇಂಧನ ಬಳಕೆ ಕಡಿತಕ್ಕೆ ಮೋದಿ ಕರೆ: ಚಿನ್ನ ಖರೀದಿ ತಪ್ಪಿಸುವಂತೆಯೂ ಮನವಿ

ಜಾಗತಿಕ ತೈಲ ಸಂಕಷ್ಟದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಂಧನ ಉಳಿತಾಯಕ್ಕೆ ಕರೆ ನೀಡಿದ್ದಾರೆ. ಪೆಟ್ರೋಲ್, ಡೀಸೆಲ್ ಬಳಕೆ ಕಡಿಮೆಗೊಳಿಸಿ, ಸಾರ್ವಜನಿಕ ಸಾರಿಗೆ ಮತ್ತು ಎಲೆಕ್ಟ್ರಿಕ್ ವಾಹನ ಬಳಸಲು ಸೂಚಿಸಿದ್ದಾರೆ. ವಿದೇಶಿ ವಿನಿಮಯ ಉಳಿಸಲು ಒಂದು ವರ್ಷ ಚಿನ್ನ ಖರೀದಿಸದಿರುವಂತೆ ಮನವಿ ಮಾಡಿದ್ದು, ದೇಶದ ಆರ್ಥಿಕತೆಗೆ ಕೊಡುಗೆ ನೀಡಲು ಜನರಿಗೆ ಕಿವಿಮಾತು ಹೇಳಿದ್ದಾರೆ.

ಜಾಗತಿಕ ತೈಲ ಸಂಕಷ್ಟದ ನಡುವೆ ಇಂಧನ ಬಳಕೆ ಕಡಿತಕ್ಕೆ ಮೋದಿ ಕರೆ: ಚಿನ್ನ ಖರೀದಿ ತಪ್ಪಿಸುವಂತೆಯೂ ಮನವಿ
ಹೈದರಾಬಾದ್​​ನಲ್ಲಿ ಮೋದಿ

Updated on: May 10, 2026 | 8:45 PM

ಹೈದರಾಬಾದ್, ಮೇ 10: ಪಶ್ಚಿಮ ಏಷ್ಯಾದ ಯುದ್ಧದಿಂದ ಉಂಟಾದ ಜಾಗತಿಕ ತೈಲ ಸಂಕಷ್ಟದ ನಡುವೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಭೀತಿ ಹೆಚ್ಚುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶದ ಜನತೆಗೆ ಇಂಧನ ಉಳಿತಾಯದ ಕರೆ ನೀಡಿದ್ದಾರೆ. ವರ್ಕ್ ಫ್ರಾಂ ಹೋಂ ಪದ್ಧತಿಯನ್ನು ಮತ್ತೆ ಆರಂಭಿಸುವುದು, ಪೆಟ್ರೋಲ್-ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವುದು ಹಾಗೂ ಒಂದು ವರ್ಷ ಮದುವೆಗಳಿಗೆ ಚಿನ್ನ ಖರೀದಿಸದಿರುವಂತೆ ಅವರು ಮನವಿ ಮಾಡಿದ್ದಾರೆ.

ಇಂಧನ ಬಳಕೆ ಕಡಿತಕ್ಕೆ ಕರೆ

ಹೈದರಾಬಾದ್‌ನ ಪರೇಡ್ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಾದ ಮೆಟ್ರೋ ಮತ್ತು ಬಸ್‌ಗಳನ್ನು ಜನರು ಹೆಚ್ಚು ಬಳಸಬೇಕು. ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಒತ್ತು ನೀಡಬೇಕು. ವರ್ಕ್ ಫ್ರಾಂ ಹೋಂನಂತಹ ಕ್ರಮಗಳಿಂದ ಇಂಧನ ಉಳಿತಾಯ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಬ್ಲಾಸ್ಟ್​​ ಬೆದರಿಕೆ, ಜಿಲೆಟಿನ್​​ ಪತ್ತೆ; ಪ್ರಧಾನಿ ಮೋದಿ ಬೆಂಗಳೂರು ಭೇಟಿ ವೇಳೆ ಖಾಕಿಗೆ ಟೆನ್ಷನ್​​ ತಂದ ಭದ್ರತೆ

ದೇಶದ ಜನರಿಗೆ ಮೋದಿ ಕಿವಿಮಾತು

ದೇಶದ ವಿದೇಶಿ ವಿನಿಮಯ ಸಂಗ್ರಹ ಉಳಿಸಲು ಜನರು ಒಂದು ವರ್ಷ ಚಿನ್ನ ಖರೀದಿ ತಪ್ಪಿಸುವಂತೆ ಸಲಹೆ ನೀಡಿದ ಅವರು, ದೇಶದಲ್ಲಿ ತಾಮ್ರದ ಕೊರತೆ ಕೂಡ ಹೆಚ್ಚಾಗಿರುವುದರಿಂದ ಸಂಪನ್ಮೂಲಗಳನ್ನು ಮಿತವಾಗಿ ಬಳಸಬೇಕು ಎಂದಿದ್ದಾರೆ. ಅಲ್ಲದೆ ಅತಿರೇಕದ ಖರ್ಚು ಮತ್ತು ವೈಭವ ಪ್ರದರ್ಶನದಿಂದ ದೂರವಿರಬೇಕು ಎಂದು ಮಧ್ಯಮ ವರ್ಗಕ್ಕೆ ಕಿವಿ ಮಾತು ಹೇಳಿದ ಪ್ರಧಾನಿ, ಸದ್ಯದ ಸಂಕಷ್ಟದ ಸಮಯದಲ್ಲಿ ವಿದೇಶ ಪ್ರವಾಸಗಳನ್ನು ಕಡಿಮೆ ಮಾಡಿದರೆ ದೇಶದ ಸಂಪತ್ತು ಹೊರಹೋಗುವುದನ್ನು ತಡೆಯಬಹುದು ಎಂದು ಹೇಳಿದ್ದಾರೆ.

ವಿಪಕ್ಷಗಳ ವಿರುದ್ಧವೂ ವಾಗ್ದಾಳಿ

ಇದೇ ವೇಳೆ ಕಾಂಗ್ರೆಸ್ ಮತ್ತು ಟಿಎಂಸಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮೋದಿ, ದೇಶದಲ್ಲಿ ಕಾಂಗ್ರೆಸ್ ಆಡಳಿತ ಇರುವ ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ದೇಶದಲ್ಲಿ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಸುಳ್ಳಿನ ರಾಜಕಾರಣ ನಡೆಸುತ್ತಿದೆ ಎಂದು ಟೀಕಿಸಿದ್ದಾರೆ. ಪಶ್ಚಿಮ ಬಂಗಾಳದ ಜನರು ಟಿಎಂಸಿ ಹಾಗೂ ಎಡಪಕ್ಷಗಳನ್ನು ತಿರಸ್ಕರಿಸಿ ಮಮತಾ ಬ್ಯಾನರ್ಜಿ ಅವರ ಸರ್ವಾಧಿಕಾರಕ್ಕೆ ತಿರುಗೇಟು ನೀಡಿದೆ. ದೇಶದಾದ್ಯಂತ ಬಿಜೆಪಿ ವಿಸ್ತರಿಸುತ್ತಿದ್ದು, ಕುಟುಂಬ ರಾಜಕಾರಣಕ್ಕಿಂತ ಜನರು ನಂಬಿಕೆಯ ರಾಜಕಾರಣಕ್ಕೆ ಬೆಂಬಲ ನೀಡುತ್ತಿದ್ದಾರೆ. ಒಮ್ಮೆ ಪಕ್ಷದ ಕಾರ್ಯಕರ್ತರೇ ಇಲ್ಲದಿದ್ದ ಪಶ್ಚಿಮ ಬಂಗಾಳದಲ್ಲಿಯೂ ಈಗ ಬಿಜೆಪಿ ಸರ್ಕಾರ ಬಂದಿದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 8:44 pm, Sun, 10 May 26

Follow Us