ದೆಹಲಿ: ವೈದ್ಯರ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ವೈದ್ಯರನ್ನು ಉದ್ದೇಶಿಸಿ ಮಾತನಾಡಿದರು. ವೈದ್ಯರನ್ನು ನಾವು ದೇವರೆಂದು ಪರಿಗಣಿಸಿದ್ದೇವೆ. ವೈದ್ಯರು ನಮಗೆ ಪುನರ್ಜನ್ಮ ನೀಡುವ ದೇವರು. ಕೊರೊನಾ ಬಿಕ್ಕಟ್ಟಿನಿಂದ ದೇಶವನ್ನು ಪಾರು ಮಾಡುವಲ್ಲಿ ವೈದ್ಯರ ಕೊಡುಗೆ ದೊಡ್ಡದು. ವೈದ್ಯರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಜನರ ಜೀವ ಉಳಿಸಿದ್ದಾರೆ ಎಂದು ಪ್ರಧಾನಿ ನುಡಿದರು.
ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಶ್ರಮಿಸಿದ, ಕೊರೊನಾ ಸೋಂಕಿನಿಂದ ಮೃತಪಟ್ಟ ವೈದ್ಯರಿಗೆ ಇದೇ ಸಂದರ್ಭ ಮೋದಿ ಶ್ರದ್ಧಾಂಜಲಿ ಸಲ್ಲಿಸಿದರು. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ವಿಜ್ಞಾನಿಗಳ ಜತೆಗೂಡಿ ವೈದ್ಯರೂ ಹೋರಾಡಿದ್ದಾರೆ ಎಂದು ಮೋದಿ ನೆನಪಿಸಿಕೊಂಡರು.
ಆರೋಗ್ಯ ಕ್ಷೇತ್ರದ ಸುಧಾರಣೆಗೆ ₹50 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಈ ಬಾರಿ ಬಜೆಟ್ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ದುಪ್ಪಟ್ಟು ಅನುದಾನ ನೀಡಿದ್ದೇವೆ. ದೇಶದಲ್ಲಿ 7 ವರ್ಷದಲ್ಲಿ 15 ಹೊಸ ಏಮ್ಸ್ ಸ್ಥಾಪಿಸಲಾಗಿದೆ. ವೈದ್ಯರ ಮೇಲೆ ದೌರ್ಜನ್ಯ ತಡೆಗೆ ಹೊಸ ಕಾನೂನು ಜಾರಿ ಮಾಡಿದ್ದೇವೆ. ಕೊರೊನಾ ವಾರಿಯರ್ಸ್ಗೆ ವಿಮೆಯ ಸುರಕ್ಷೆ ಒದಗಿಸಿದ್ದೇವೆ ಎಂದು ಹೇಳಿದ ಅವರು, ವೈದ್ಯರ ಸಾಧನೆಯ ದಾಖಲೆ ಹಂಚಿಕೊಳ್ಳಲು ಮನವಿ ಮಾಡಿದರು.
ಆರೋಗ್ಯ ಕ್ಷೇತ್ರಕ್ಕೆ ₹ 50,000 ಕೋಟಿ: ನಿರ್ಮಲಾ ಸೀತಾರಾಮನ್
ಆರೋಗ್ಯ ಕ್ಷೇತ್ರವನ್ನು ಸದೃಢಗೊಳಿಸಲು ₹ 50,000 ಕೋಟಿ ಮೊತ್ತವನ್ನು ಕೇಂದ್ರ ಸರ್ಕಾರ ತೆಗೆದಿರಿಸಿದೆ. ಈ ಹಣದಿಂದ ದೇಶದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಮೂಲ ಸೌಕರ್ಯಗಳನ್ನು ಸದೃಢಗೊಳಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಚೆಗೆ ಘೋಷಿಸಿದ್ದರು.
ಆರೋಗ್ಯ ಕ್ಷೇತ್ರಕ್ಕೆ ಘೋಷಿಸಿರುವ 50 ಸಾವಿರ ಕೋಟಿ ರೂಪಾಯಿ ಸಾಲ ಗ್ಯಾರಂಟಿ ಯೋಜನೆಯ ಲಾಭವನ್ನು ದೇಶದ 8 ಮಹಾನಗರಗಳನ್ನು ಹೊರತುಪಡಿಸಿ ಉಳಿದ ನಗರಗಳು ಪಡೆದುಕೊಳ್ಳಬಹುದು. ಆರೋಗ್ಯ ಮೂಲಸೌಕರ್ಯದ ವಿಸ್ತರಣೆ ಹಾಗೂ ಹೊಸದಾಗಿ ಆಸ್ಪತ್ರೆ ಆರಂಭಿಸುವವರಿಗೂ ಈ ಯೋಜನೆಯಡಿ ಸಾಲ ಸಿಗಲಿದೆ. ವಿಸ್ತರಣೆಗಾದರೆ ಶೇ 50ರಷ್ಟು, ಹೊಸ ಯೋಜನೆಯಾದರೆ, ಶೇ 75ರಷ್ಟು ಸಾಲ ನೀಡಲಾಗುತ್ತೆ. ಆದ್ಯತೆಯ ಜಿಲ್ಲೆಗಳಲ್ಲಿ ಹೊಸ ಆಸ್ಪತ್ರೆ ಸ್ಥಾಪನೆ ಮತ್ತು ವಿಸ್ತರಣೆ ಯೋಜನೆಗಳಿಗೆ ಶೇ 75 ರಷ್ಟು ಸಾಲ ನೀಡಲಾಗುತ್ತೆ. ಗರಿಷ್ಠ 100 ಕೋಟಿ ರೂಪಾಯಿವರೆಗೂ ಸಾಲ ನೀಡಲು ಅವಕಾಶವಿದೆ. ಶೇ 7.95 ರ ಬಡ್ಡಿದರದಲ್ಲಿ 3 ವರ್ಷದ ಅವಧಿಗೆ ಸಾಲ ಸಿಗುತ್ತದೆ. ಈ ಸಾಲಕ್ಕೆ ನ್ಯಾಷನಲ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟಿ ಕಂಪನಿ ಲಿಮಿಟೆಡ್ನ ಖಾತ್ರಿ ಇರುತ್ತದೆ.
(PM Narendra Modi Addresses Doctors On National Doctors Day Praises Their Effort To Curtail Covid)
ಇದನ್ನೂ ಓದಿ: Digital India: ಆರೋಗ್ಯ ಸೇತು, ಕೊವಿನ್ ಆ್ಯಪ್ಗಳು ಡಿಜಿಟಲ್ ಇಂಡಿಯಾದ ಹೆಗ್ಗಳಿಕೆ..ಜಗತ್ತಿನ ಗಮನ ಸೆಳೆದಿವೆ: ಪ್ರಧಾನಿ ಮೋದಿ
ಇದನ್ನೂ ಓದಿ: Mann Ki Baat ನರೇಂದ್ರ ಮೋದಿ ‘ಮನದ ಮಾತು’ ಕೇಳಿ ಕೊವಿಡ್ ಲಸಿಕೆ ಪಡೆದ ವ್ಯಕ್ತಿ