Odisha Train Accident: ಒಡಿಶಾದಲ್ಲಿ ರೈಲು ಅಪಘಾತ ಸಂಭವಿಸಿದ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕನ ನಡೆಸಿದ ಮೋದಿ

ನರೇಂದ್ರ ಮೋದಿ ಶನಿವಾರ ಒಡಿಶಾದಲ್ಲಿ ರೈಲು ಅಪಘಾತ ಸಂಭವಿಸಿದ ಸ್ಥಳಕ್ಕೆ ಆಗಮಿಸಿದ್ದಾರೆ. ಈ ಭೇಟಿ ನಂತರ ಅವರು ದುರಂತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜನರನ್ನು ಭೇಟಿ ಮಾಡಲಿದ್ದಾರೆ.

Odisha Train Accident: ಒಡಿಶಾದಲ್ಲಿ ರೈಲು ಅಪಘಾತ ಸಂಭವಿಸಿದ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕನ ನಡೆಸಿದ ಮೋದಿ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Jun 03, 2023 | 4:20 PM

ಒಡಿಶಾದ ಬಾಲಸೋರ್​​ನಲ್ಲಿ ರೈಲು ಅಪಘಾತ (Odisha Train Accident) ಸಂಭವಿಸಿದ ಸ್ಥಳಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಪರಿಸ್ಥಿತಿ ಅವಲೋಕನ ನಡೆಸಿದ್ದಾರೆ. ಅಂದಾಜಿನ ಪ್ರಕಾರ ಈ ರೈಲು ದುರಂತದಲ್ಲಿ 261 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 1000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.  ಬಾಲಸೋರ್ (Balasore) ಜಿಲ್ಲೆಯ ಬಹನಾಗಾ ಬಜಾರ್ ನಿಲ್ದಾಣದಲ್ಲಿ ಘಟನೆ ನಡೆದ ಸ್ಥಳದ ಬಳಿ ಪ್ರಧಾನಿ ಮೋದಿ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಬಂದಿಳಿದರು. ಅಪಘಾತದಲ್ಲಿ ಗಾಯಗೊಂಡು ರು ಬಾಲಸೋರ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವರನ್ನೂ ಮೋದಿ ಭೇಟಿ ಮಾಡಲಿದ್ದಾರೆ.

ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿಯನ್ನು ಪರಿಶೀಲಿಸಲು ಇಂದು ಬೆಳಗ್ಗೆ ಪ್ರಧಾನಿ ಮೋದಿ ಸಭೆ ಕರೆದಿದ್ದಾರೆ.

ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ನಿಲ್ದಾಣದಲ್ಲಿ ಡಿಕ್ಕಿ ಹೊಡೆದು ಈ ಭೀಕರ ಅಪಘಾತ ಸಂಭವಿಸಿದೆ.ಶುಕ್ರವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ಪ್ಯಾಸೆಂಜರ್ ರೈಲುಗಳ 17 ಬೋಗಿಗಳು ಹಳಿ ತಪ್ಪಿ ತೀವ್ರವಾಗಿ ಹಾನಿಗೀಡಾಗಿವೆ.

ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಾಥಮಿಕ ವರದಿಯ ಪ್ರಕಾರ, 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ವರದಿಯ ಪ್ರಕಾರ ಸಾವಿನ ಸಂಖ್ಯೆ 238 ರಿಂದ 261 ಕ್ಕೆ ಏರಿದೆ.

ಇದನ್ನೂ ಓದಿ: Odisha train accident: ಒಡಿಶಾ ರೈಲು ದುರಂತಕ್ಕೆ ನಿರ್ಲಕ್ಷ್ಯ ಕಾರಣವೇ ಆಥವಾ ತಾಂತ್ರಿಕ ದೋಷವೇ?

ಏಳು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳು, ಐದು ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ODRAF) ಘಟಕಗಳು ಮತ್ತು 24 ಅಗ್ನಿಶಾಮಕ ಸೇವೆಗಳು ಮತ್ತು ತುರ್ತು ಘಟಕಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಭಾರತೀಯ ವಾಯುಪಡೆ (IAF) ಮೃತರು ಮತ್ತು ಗಾಯಗೊಂಡವರ ಸ್ಥಳಾಂತರಕ್ಕಾಗಿ Mi-17 ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ. ಈಸ್ಟರ್ನ್ ಕಮಾಂಡ್ ಪ್ರಕಾರ, IAF ನಾಗರಿಕ ಆಡಳಿತ ಮತ್ತು ಭಾರತೀಯ ರೈಲ್ವೆಯೊಂದಿಗೆ ರಕ್ಷಣಾ ಪ್ರಯತ್ನಗಳನ್ನು ಸಂಯೋಜಿಸುತ್ತಿದೆ.

ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಸ್ಥಳಕ್ಕೆ ಭೇಟಿ ನೀಡಿ ಉನ್ನತ ಮಟ್ಟದ ತನಿಖೆಗೆ ನಿರ್ದೇಶನ ನೀಡಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೂಡ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:07 pm, Sat, 3 June 23