ಸಿಎಂಗಳಿಗೆ ಪಿಎಂ ಕೊಟ್ಟ 5 ಟಿಪ್ಸ್​: ಕೊರೊನಾ ಸೋಂಕು ತಡೆಗೆ ರಾಜ್ಯಗಳಿಗೆ ನರೇಂದ್ರ ಮೋದಿ ಕೊಟ್ಟ ಮುಖ್ಯ ಸಲಹೆಗಳಿವು

Narendra Modi Speech: ಈ ಸಲಹೆಗಳನ್ನು ಯುದ್ಧೋಪಾದಿಯನ್ನು ಅನುಷ್ಠಾನಕ್ಕೆ ತನ್ನಿ, ಕೊರೊನಾ ಏಕೆ ನಿಯಂತ್ರಣಕ್ಕೆ ಬರಲ್ಲ ನೋಡಿ ಎಂದು ನಾಜೂಕಾಗಿ ಕಿವಿಹಿಂಡುವ ಕೆಲಸವನ್ನೂ ಮಾಡಿದರು. ಮೋದಿ ಕೊಟ್ಟ 5 ಟಿಪ್ಸ್​ಗಳಿವು...

  • TV9 Web Team
  • Published On - 7:15 AM, 9 Apr 2021
ಸಿಎಂಗಳಿಗೆ ಪಿಎಂ ಕೊಟ್ಟ 5 ಟಿಪ್ಸ್​: ಕೊರೊನಾ ಸೋಂಕು ತಡೆಗೆ ರಾಜ್ಯಗಳಿಗೆ ನರೇಂದ್ರ ಮೋದಿ ಕೊಟ್ಟ ಮುಖ್ಯ ಸಲಹೆಗಳಿವು
ಪ್ರಧಾನಿ ನರೇಂದ್ರ ಮೋದಿ

ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಗುರುವಾರ (ಏಪ್ರಿಲ್ 8) ಸಂಜೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು 5 ಮುಖ್ಯ ಸಲಹೆಗಳನ್ನು ಕೊಟ್ಟರು. ಈ ಸಲಹೆಗಳನ್ನು ಯುದ್ಧೋಪಾದಿಯನ್ನು ಅನುಷ್ಠಾನಕ್ಕೆ ತನ್ನಿ, ಕೊರೊನಾ ಏಕೆ ನಿಯಂತ್ರಣಕ್ಕೆ ಬರಲ್ಲ ನೋಡಿ ಎಂದು ನಾಜೂಕಾಗಿ ಕಿವಿಹಿಂಡುವ ಕೆಲಸವನ್ನೂ ಮಾಡಿದರು. ಮೋದಿ ಕೊಟ್ಟ 5 ಟಿಪ್ಸ್​ಗಳಿವು…

1) ಕೊರೊನಾ ಸೋಂಕು ಎಲ್ಲಿಂದ ಹರಡುತ್ತಿದೆ ಎಂದು ನಿಖರವಾಗಿ ಗುರುತಿಸಿಕೊಳ್ಳಿ. ನಮ್ಮ ಗಮನ ಮೈಕ್ರೊ ಕಂಟೇನ್​ಮೆಂಟ್​ ವಲಯಗಳ ಮೇಲೆ ಇರಬೇಕು. ಅಗತ್ಯವಿರುವ ಕಡೆ ನೈಟ್​ ಕರ್ಫ್ಯೂ ಜಾರಿ ಮಾಡಿ. ಇದಕ್ಕೆ ಕೊರೊನಾ ಕರ್ಫ್ಯೂ ಎಂಬ ಹೆಸರು ಕೊಡಿ.

2) ಸೋಂಕಿನ ಲಕ್ಷಣಗಳಿಲ್ಲದ ಅಸಿಂಪ್ಟಮಾಟಿಕ್ ಜನರನ್ನು ಪತ್ತೆ ಹಚ್ಚಲು ಟೆಸ್ಟಿಂಗ್ ಪ್ರಮಾಣ ಹೆಚ್ಚಿಸಿ. ಅಸಿಂಪ್ಟಮಾಟಿಕ್ ಜನರು ತಮ್ಮ ಇಡೀ ಕುಟುಂಬಕ್ಕೆ ಸೋಂಕು ಹರಡುತ್ತಾರೆ. ಆರ್​ಟಿಪಿಸಿಆರ್​ ಟೆಸ್ಟಿಂಗ್ ಮಾಡುವಾಗ ಸ್ಯಾಂಪಲ್ ಸಂಗ್ರಹದ ವೇಳೆ ಎಚ್ಚರವಿರಲಿ.

3) ಸೋಂಕು ಹರಡುತ್ತಿರುವ ಪ್ರಮಾಣವನ್ನು ಶೇ 5ರ ಒಳಗೆ ತರಬೇಕು. ಸಾವಿನ ಪ್ರಮಾಣ ತಗ್ಗಿಸಬೇಕು. ಸತ್ತವರ ದತ್ತಾಂಶವನ್ನು ನಿಖರವಾಗಿ ಸಂಗ್ರಹಿಸಬೇಕು. ಎಲ್ಲ ಪೋರ್ಟಲ್​ಗಳಲ್ಲಿ ಅದು ಸಿಗುವಂತಿರಬೇಕು.

4) ಲಸಿಕೆ ವ್ಯರ್ಥವಾಗುವುದನ್ನು ತಡೆಯಲು ಎಲ್ಲ ರೀತಿಯ ಗಮನ ಕೊಡಬೇಕು. ಅಗತ್ಯವಿರುವ ವಯೋಮಾನಕ್ಕೆ ಬೇಗನೇ ಲಸಿಕೆ ಸಿಗುವಂತೆ ಮಾಡಿ. ಏಪ್ರಿಲ್ 11ರಿಂದ 14ರವರೆಗೆ ಲಸಿಕಾ ಅಭಿಯಾನ ನಡೆಸೋಣ. ಶೂನ್ಯ ವ್ಯರ್ಥದ ಗುರಿಯ ಜೊತೆಗೆ ಹೆಚ್ಚು ಜನರಿಗೆ ಲಸಿಕೆ ಸಿಗುವಂತೆ ಮಾಡೋಣ.

5) ಜನರು ಎಲ್ಲವೂ ಸರಿಯಾಗಿದೆ ಎಂಬ ನಿರ್ಧಾರಕ್ಕೆ ಬಾರದಂತೆ ಎಚ್ಚರಿಕೆ ವಹಿಸಿ. ಸರ್ವಪಕ್ಷಗಳ ಸಭೆ ನಡೆಸಿ, ಗ್ರಾಮ ಪಂಚಾಯಿತಿಯಿಂದ ಶಾಸನಸಭೆಯವರೆಗೆ ಎಲ್ಲ ಜನಪ್ರತಿನಿಧಿಗಳನ್ನು ಸಂಪರ್ಕಿಸಿ. ಸಾಮೂಹಿಕ ಜಾಗೃತಿ ಅಭಿಯಾನಗಳನ್ನು ನಡೆಸಿ. ಈ ಚಟುವಟಿಕೆಗಳಲ್ಲಿ ರಾಜ್ಯಪಾಲರು ಸಕ್ರಿಯವಾಗಿ ಪಾಲ್ಗೊಳ್ಳಬೇಕು.

ಕರ್ನಾಟಕದ 8 ನಗರಗಳಲ್ಲಿ ಕೊರೊನಾ ಕರ್ಫ್ಯೂ
ರಾಜ್ಯದ ಕೆಲ ನಗರಗಳಲ್ಲಿ ಇದೇ ಶನಿವಾರ (ಏಪ್ರಿಲ್ 10) ರಾತ್ರಿಯಿಂದ ಮುಂದಿನ 10ಗಳ ಅವಧಿಗೆ ಕೊರೊನಾ ಕರ್ಫ್ಯೂ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಸಭೆ ನಡೆದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಏಪ್ರಿಲ್ 10ರಿಂದ 20ರವರೆಗೆ ನೈಟ್​ ಕೊರೊನಾ ಕರ್ಫ್ಯೂ ಜಾರಿಯಲ್ಲಿರಲಿದೆ. ಬೆಂಗಳೂರು ನಗರ, ಮೈಸೂರು ನಗರ, ಮಂಗಳೂರು ನಗರ, ಕಲಬುರಗಿ, ಬೀದರ್, ತುಮಕೂರು, ಉಡುಪಿ ನಗರ, ಮಣಿಪಾಲ ನಗರಗಳಲ್ಲಿ ಕೊರೊನಾ ಕರ್ಫ್ಯೂ ಜಾರಿಗೆ ಬರಲಿದೆ.

(PM Narendra Modi Asks States to Follow these steps to avoid corona spread)

ಇದನ್ನೂ ಓದಿ: PM Narendra Modi Speech: ದೇಶದಲ್ಲಿ ಲಾಕ್​ಡೌನ್​ ಇಲ್ಲ; ಮೋದಿ ಸ್ಪಷ್ಟನೆ

ಇದನ್ನೂ ಓದಿ: Karnataka Covid-19 Update: ಕರ್ನಾಟಕದಲ್ಲಿ 6570 ಮಂದಿಗೆ ಕೊರೊನಾ ದೃಢ, 36 ಸಾವು